ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕವಾಗಿ ಮೇವು ಪೂರೈಸಲು ಸದಸ್ಯರ ಆಗ್ರಹ

Last Updated 14 ಏಪ್ರಿಲ್ 2017, 8:43 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಬರಗಾಲದಲ್ಲಿ ರಾಸುಗಳಿಗೆ ಸಮರ್ಪಕವಾಗಿ ಮೇವು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸಿದರು.

ಮೇವು ಕೇಂದ್ರಗಳಲ್ಲಿ ಸಮರ್ಪಕವಾಗಿ ಮೇವು ವಿತರಣೆಯಾಗುತ್ತಿಲ್ಲ. ಅರಸೀಕೆರೆ ತಾಲ್ಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇವು ದಾಸ್ತಾನು ಮಾಡಲಾಗುತ್ತದೆ. ಆದರೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ಮೇವು ಖಾಲಿಯಾದ ಕೆಲ ದಿನಗಳ ಬಳಿಕ ಮೇವು ತರಿಸುವುದು ಹೇಗೆ ಸರಿ? ಅದುವರೆಗೆ ಜಾನುವಾರುಗಳಿಗೆ ರೈತರು ಎಲ್ಲಿಂದ ಮೇವು ತರಬೇಕು ಎಂದು ಸದಸ್ಯರಾದ ಎಚ್‌.ಎಂ.ಜಯರಾಂ, ಭೈರೇಗೌಡ, ಕೆ.ಬಿ.ರಾಮಕೃಷ್ಣೇಗೌಡ ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ ಆರು ಮೇವು ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ 152.49 ಟನ್‌ ವಿತರಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಡಾ.ಸೋಮಶೇಖರ್‌  ಉತ್ತರಿಸಿದರು.

ಕಾರೆಕೆರೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ದಾಖಲಾಗದಿದ್ದರೂ ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಸದಸ್ಯೆಯರಾದ ರತ್ನಮ್ಮ, ಎಚ್.ಎಸ್‌.ಶ್ಯಾಮಲಾ ಅಧಿಕಾರಿಗಳ ಗಮನಕ್ಕೆ ತಂದರು.

ಹಿರೀಸಾವೆಯಲ್ಲಿ ಕಿರು ನೀರುಸರಬರಾಜು ಟ್ಯಾಂಕ್‌ ನಿರ್ಮಿಸಲಾಗಿದ್ದು, 7 ತಿಂಗಳಿನಿಂದ ಸೋರುತ್ತಿದೆ. ನೀರು ಪೋಲಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಎಂ.ಆರ್‌.ವಾಸು, ಶ್ಯಾಮಲಾ ಆಗ್ರಹಿಸಿದರು.

ನುಗ್ಗೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಸಂಜೆ ನಂತರ ವೈದ್ಯರು ಇರುವುದಿಲ್ಲ. ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ರೋಗಿಗಳ ಗತಿ ಏನು? ಕೂಡಲೇ ವೈದ್ಯರನ್ನು ನೇಮಿಸಬೇಕು. 108 ಆಂಬ್ಯುಲೆನ್ಸ್‌ ಸೌಕರ್ಯ ಒದಗಿಸಬೇಕು ಎಂದು ಜಯರಾಂ ಒತ್ತಾಯಿಸಿದರು.

ನುಗ್ಗೇಹಳ್ಳಿ, ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್ ಸವಲತ್ತು  ಒದಗಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಮಹದೇವಪ್ರಸಾದ್ ಹೇಳಿದರು. ಸದಸ್ಯ ಎಲ್‌.ಜಿ.ಗಿರೀಶ್‌ ಮಾತನಾಡಿ, ಎಂ.ಶಿವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಿ.ಹೊನ್ನೇನಹಳ್ಳಿಯಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಪಿಯು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನನುಕೂಲವಾಯಿತು ಎಂದು ದೂರಿದರು.

ಸದ್ಯದಲ್ಲಿ ವಿದ್ಯುತ್‌ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಸೆಸ್ಕ್‌ ಅಧಿಕಾರಿ ಹೇಳಿದರು. ಅದ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಉಪಾಧ್ಯಕ್ಷ ಹೊನ್ನೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಿ.ಮಂಜೇಗೌಡ, ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ಸುದರ್ಶನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT