ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲೇ ನೀರಿಗೆ ತತ್ವಾರ

ಕೆರೆ, ಕಟ್ಟೆಗಳಲ್ಲಿಯೂ ನೀರಿಲ್ಲ, ಮಧ್ಯರಾತ್ರಿಯವರೆಗೂ ಜಲಕ್ಕೆ ಕಾಯಬೇಕು
Last Updated 14 ಏಪ್ರಿಲ್ 2017, 8:48 IST
ಅಕ್ಷರ ಗಾತ್ರ

ಸಕಲೇಶಪುರ: ಎತ್ತಿನಹೊಳೆ ತಿರುವು ಯೋಜನೆ ಮೂಲಕ ಬಯಲು ಸೀಮೆ ಬಾಯಾರಿಕೆ ಇಂಗಿಸುವ ಮಲೆನಾಡಿನಲ್ಲಿಯೇ ಈ ಬಾರಿ ಕುಡಿಯುವ ನೀರಿಲ್ಲದೆ ಬಹುತೇಕ ಗ್ರಾಮಗಳ ಜನರು ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.

ವಿವಿಧ ಅಭಿವೃದ್ಧಿ ಯೋಜನೆಗಳಿಂದ ದಟ್ಟ ಮಳೆ ಕಾಡುಗಳು ಹಂತ ಹಂತವಾಗಿ ನಾಶವಾಗುತ್ತಿವೆ. ಇದರ ಪರಿಣಾಮವಾಗಿ ಮಲೆನಾಡಿನ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿ ಆತಂಕ ಉಂಟು ಮಾಡಿದೆ. ಅಂತರ್ಜಲ ಮಟ್ಟ ಕುಸಿದು  ಶೇ. 60ರಷ್ಟು ತೆರೆದ ಬಾವಿಗಳು, ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿಹೋಗಿವೆ.

ಹೇಮಾವತಿ ನದಿಯನ್ನು ಬಂದು ಸೇರುವ ಜಪಾವತಿ, ಬೆಣಚಿನಹಳ್ಳ, ಕಿರುಹಳ್ಳ ಸೇರಿದಂತೆ ಬಹುತೇಕ ಹಳ್ಳಗಳು ಸಂಪೂರ್ಣವಾಗಿ ಒಣಗಿವೆ. ಕೆರೆ, ಕಟ್ಟೆಗಳಲ್ಲಿಯೂ  ನೀರಿಲ್ಲ. ಸಣ್ಣ, ಸಣ್ಣ ಒಡ್ಡುಗಳು ಬತ್ತಿ ಹೋಗಿವೆ.

ಹಾನುಬಾಳು, ಯಸಳೂರು, ಹೆತ್ತೂರು ಹಾಗೂ ಕಸಬಾ ಹೋಬಳಿಗಳಿಗಿಂತಲೂ ಬೆಳಗೋಡು ಹೋಬಳಿ ವ್ಯಾಪ್ತಿಯ ಸುಮಾರು 30 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದರ್ಬಾರ್‌ಪೇಟೆ ಗ್ರಾಮದಲ್ಲಿ ಸುಮಾರು 80 ಮನೆಗಳಿವೆ. ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗೆ ಎರಡು ಕೊಳವೆ ಬಾವಿಗಳಿಂದ 8 ಸಿಸ್ಟನ್‌ಗಳಿಗೆ ನೀರು ಹರಿಸಿ ಸರಬರಾಜು ಮಾಡುವ ವ್ಯವಸ್ಥೆ ಇದೆ.

ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಎರಡು ದಿನಕ್ಕೊಮ್ಮೆ ಸಿಸ್ಟನ್‌ಗಳಿಗೆ ನೀರು ಹರಿಸಲಾಗುತ್ತಿದೆ. ರಾತ್ರಿ 11, 12 ಗಂಟೆ ವರೆಗೂ ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ಪಂಚಾಯಿತಿ ವತಿಯಿಂದ ಮತ್ತೊಂದು ಕೊಳವೆ ಬಾವಿ ತೆಗೆಯಲಾಗಿದೆ. ಆದರೆ ಅಲ್ಲಿಂದ ಇನ್ನೂ ನೀರು ಸರಬರಾಜು ವ್ಯವಸ್ಥೆ ಆಗಿಲ್ಲ’ ಎನ್ನುತ್ತಾರೆ ಗ್ರಾಮದ ಜಗದೀಶ್‌.

‘ರಾಮನಗರ ಹಾಗೂ ಅರಸು ನಗರ ಗ್ರಾಮ ಸೇರಿ ಸುಮಾರು 100ಕ್ಕೂ ಹೆಚ್ಚು ಮನೆಗಳಿವೆ. ಆದರೆ ಇಲ್ಲಿಗೆ ಪ್ರತ್ಯೇಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 2 ಕಿ.ಮೀ ದೂರದ ಕುಂಬಾರಗಟ್ಟೆ ಕಿರು ನೀರು ಸರಬರಾಜು ಯೋಜನೆಯಿಂದಲೇ ಈ ಗ್ರಾಮಗಳಿಗೆ ನೀರು ಸರಬರಾಜು ಆಗಬೇಕು.

ಅಲ್ಲಿಯೂ ಸಹ ನೀರಿನ ಕೊರತೆ ಉಂಟಾಗಿರುವುದರಿಂದ ಎರಡು, ಮೂರು ದಿನಗಳಿಗೊಮ್ಮೆ ಕಡಿಮೆ ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕಾದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೀಲಕಂಠ ತಿಳಿಸಿದರು.

ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಾಲ್‌, ಅಚ್ಚನಹಳ್ಳಿ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸಮೀಪದಲ್ಲಿಯೇ ಸ್ವಜಲಧಾರೆ ಇದ್ದರೂ ಅನುದಾನದ ಕೊರತೆಯಿಂದಾಗಿ ಅಲ್ಲಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ.
-ಜಾನೇಕೆರೆ ಆರ್‌. ಪರಮೇಶ್‌

ಟ್ಯಾಂಕರ್‌ ಮೂಲಕ ನೀರು
ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಆನೇಮಹಲ್‌ ಗ್ರಾಮದ ಅಡ್ಡನಗುಡ್ಡೆ ಬಡಾವಣೆಯಲ್ಲಿ ಸುಮಾರು 60 ಮನೆಗಳಿದ್ದು, ನೀರಿನ ವ್ಯವಸ್ಥೆ ಇಲ್ಲ.

ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಿಗೆರೆ, ಕಲ್ಲುಗುಡ್ಡ, ಹೆನ್ನಲಿ, ಗೌಡ್ರುಬೈಲು, ಕ್ಯಾನಹಳ್ಳಿ ಕಾಲೋನಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಸಮಸ್ಯೆ ಇರುವ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲಾಗಿದ್ದು, ಶೀಘ್ರದಲ್ಲಿ ಪಂಪ್‌ ಅಳವಡಿಸಿ ನೀರು ಸರಬರಾಜು ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುಪ್ರದೀಪ್ತ ಯಜಮಾನ್‌ ಹೇಳುತ್ತಾರೆ.

ಬತ್ತಿ ಹೋದ 129 ಕೊಳವೆ ಬಾವಿ: ತಾಲ್ಲೂಕಿನಲ್ಲಿ ಒಟ್ಟು 1015 ಕೊಳವೆ ಬಾವಿ ಪೈಕಿ 129 ಬಾವಿಗಳು  ಸಂಪೂರ್ಣ ಹಾಳಾಗಿವೆ. ಸುಮಾರು 500 ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

621 ತೆರೆದ ಬಾವಿಗಳ ಪೈಕಿ 400 ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ 88 ತೆರೆದ ಬಾವಿಗಳ ದುರಸ್ತಿ ಆಗಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT