ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಾರಾಟ ಮಂಡಳಿಗೆ ಕುಮಾರ್ ಆಯ್ಕೆ

Last Updated 14 ಏಪ್ರಿಲ್ 2017, 8:56 IST
ಅಕ್ಷರ ಗಾತ್ರ

ರಾಮನಗರ: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಒಂದು ಸದಸ್ಯತ್ವ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವಿನ ವಾಕ್‌ ಸಮರಕ್ಕೆ ಕಾರಣವಾಯಿತು. ಕಡೆಗೆ ಚನ್ನಪಟ್ಟಣ ಎಪಿಎಂಸಿ ಅಧ್ಯಕ್ಷ ಕಾಂಗ್ರೆಸ್‌ ಬೆಂಬಲಿತ ಎಂ.ಡಿ. ಕುಮಾರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಎಪಿಎಂಸಿ ಆವರಣದಲ್ಲಿರುವ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಚುನಾವಣೆ ನಿಗದಿಯಾಗಿತ್ತು. ರಾಮನಗರ ಜಿಲ್ಲೆಯ ವ್ಯಾಪ್ತಿಯ ಮೂರು ಎಪಿಎಂಸಿಗಳ ಅಧ್ಯಕ್ಷರ ಪೈಕಿ ಒಬ್ಬರನ್ನು ಆರಿಸಿ ರಾಜ್ಯ ಸಮಿತಿಗೆ ಕಳುಹಿಸಬೇಕಿತ್ತು.

ಅದರಂತೆ ಚನ್ನಪಟ್ಟಣ ಎಪಿಎಂಸಿಯ ಅಧ್ಯಕ್ಷ ಎಂ.ಡಿ. ಕುಮಾರ್ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಕನಕಪುರ ಎಪಿಎಂಸಿ ಅಧ್ಯಕ್ಷ ಡಿ.ಸಿ. ರವಿ ಸೂಚಕರಾಗಿ ಬೆಂಬಲಿಸಿದರು. ಜೆಡಿಎಸ್ ಬೆಂಬಲಿತರಾದ ಎಚ್‌. ಪುಟ್ಟರಾಮಯ್ಯ ಅವರು ಸಹ ನಾಮಪತ್ರ ಸಲ್ಲಿಸಿದ್ದರು.

ಅಭ್ಯರ್ಥಿಗಳ ಪರವಾಗಿ ಸೂಚಕರು ಬೆಂಬಲ ಸೂಚಿಸಿ ನಾಮಪತ್ರ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿತ್ತು. ಅದರಂತೆ ಕುಮಾರ್ ಅವರಿಗೆ ರವಿ ಸೂಚಕರಾದರು. ಅವರ ಎದುರಾಗಿ ಪುಟ್ಟರಾಮಯ್ಯ ನಾಮಪತ್ರ ಸಲ್ಲಿಸಿದ್ದರು. ‘ನಾಮಪತ್ರದಲ್ಲಿ ಸೂಚಕರ ಕಾಲಂ ಇಲ್ಲ. ಹೀಗಾಗಿ ಅದರ ಅಗತ್ಯವೂ ಇಲ್ಲ’ ಎಂದು ಅವರು ವಾದಿಸಿದರು.

ಸ್ಥಳದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್‌ ಹಾಗೂ ಬೆಂಬಲಿಗರು ‘ನಿಯಮಾನುಸಾರ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯು ನಾಮಪತ್ರ ಸಲ್ಲಿಸದೇ ಇರುವುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು. ಕುಮಾರ್ ಅವರನ್ನು ಅವಿರೋಧ ಆಯ್ಕೆಯನ್ನಾಗಿ ಘೋಷಿಸಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಇನ್ನೊಂದು ಬಣದವರು ಒಪ್ಪದ ಕಾರಣ ಗೊಂದಲ ಉಂಟಾಗಿತ್ತು. ಕಡೆಗೆ ಮತದಾನ ನಡೆದು ಎರಡು ಮತ ಪಡೆದ ಕುಮಾರ್ ಅವರನ್ನು ಚುನಾವಣಾ ಅಧಿಕಾರಿಯಾದ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಮ್ಮದ್ ಸತ್ತಾರ್‌ ವಿಜಯಿ ಎಂದು ಘೋಷಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಎಪಿಎಂಸಿ ಆವರಣಕ್ಕೆ ಧಾವಿಸಿದ ಸಿ.ಪಿ. ರಾಜೇಶ್‌ ಚುನಾವಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಯಾವುದೇ ಪ್ರಕಟಣೆ ನೀಡದೇ ಗೌಪ್ಯವಾಗಿ ಚುನಾವಣೆಗೆ ಮುಂದಾಗಿರುವುದು ಸರಿಯಲ್ಲ’ ಎಂದು ದೂರಿದರು. ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಎಪಿಎಂಸಿಗೆ ಭೇಟಿ ನೀಡಿ ವಿಜೇತರನ್ನು ಅಭಿನಂದಿಸಿದರು.

*
ಸೂಚಕರ ವಿಚಾರದಲ್ಲಿ ನಿಯಮಾವಳಿ ಪ್ರಕಾರ ನಡೆದುಕೊಳ್ಳಲಾಗಿದೆ. ಕಡೆಗೆ ಇಬ್ಬರೂ ಅಭ್ಯರ್ಥಿಗಳ ಒಪ್ಪಿಗೆ ಮೇರೆಗೆ ಮತದಾನ ನಡೆದು ಕುಮಾರ್ ಅವರು ಆಯ್ಕೆಯಾದರು.
-ಮಹಮ್ಮದ್ ಸತ್ತಾರ್‌, ಚುನಾವಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT