ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸು ಬಯಸದಿದ್ದರೂ ನಿರಂತರ ಉದ್ರಿಕ್ತತೆ!

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಚರ್ಚೆಗೆ ಬರುತ್ತಿವೆ. ಆ ಸಮಸ್ಯೆಗಳಿಗೆ ಚಿಕಿತ್ಸೆಯ ಆಯ್ಕೆಗಳೂ ಈಗ ಹೆಚ್ಚಿವೆ. ಆದಾಗ್ಯೂ ಕೆಲವು ಲೈಂಗಿಕ ಸಮಸ್ಯೆಗಳು ಮಾತ್ರ ನಿಗೂಢವಾಗಿಯೇ ಉಳಿದಿರುತ್ತವೆ. ಸಮಸ್ಯೆ ಬಗ್ಗೆ ಅರಿವಿನ ಕೊರತೆ ಹಾಗೂ ಸಂಕೋಚದ ಮನೋಭಾವ ಇದಕ್ಕೆ ಕಾರಣ.  ಈ ಮನೋಭಾವ ಲಭ್ಯವಿರುವ ಚಿಕಿತ್ಸೆಗಳ ಕುರಿತೂ ತಿಳಿವಳಿಕೆ ಮೂಡದಂತೆ ತಡೆಯುತ್ತದೆ. ಕಾಲ ಸರಿದಂತೆ  ಸಮಸ್ಯೆಗಳು ಜಟಿಲವಾಗುತ್ತಾ ಸಾಗುತ್ತವೆ. ಅಂಥ ಕೆಲವು ಸಮಸ್ಯೆಗಳ ಪೈಕಿ ‘ಪರ್ಸಿಸ್ಟೆಂಟ್ ಜೆನಿಟಲ್ ಅರೌಸಲ್ ಡಿಸಾರ್ಡರ್’ (ನಿರಂತರ ಲೈಂಗಿಕ ಉದ್ರಿಕ್ತತೆ ಸಮಸ್ಯೆ – ಪಿಜಿಎಡಿ) ಕೂಡ ಒಂದು.

ವ್ಯಕ್ತಿಯು ನಿರಂತರವಾಗಿ ಲೈಂಗಿಕ ಉದ್ರಿಕ್ತ ಸ್ಥಿತಿಯಲ್ಲಿರುವುದೇ ‘ಪಿಜಿಎಡಿ’. ಮಹಿಳೆಯರಿಗೆ ಈ  ಉದ್ರಿಕ್ತ ಅನುಭವದ ದೈಹಿಕ ಸೂಚನೆಗಳು ಸಿಗುತ್ತವೆ. ಲೈಂಗಿಕತೆ ಕುರಿತು ಯಾವುದೇ ಆಲೋಚನೆ ಮಾಡದೇ ಇದ್ದರೂ ಜನನಾಂಗ ಹಿಗ್ಗುವ  ಸೂಚನೆಯೊಂದಿಗೆ ಲೈಂಗಿಕ ಉದ್ರಿಕ್ತತೆ ಅನುಭವಕ್ಕೆ ಬರುತ್ತದೆ. ಕೆಲವು ರೀತಿಯ ಬಟ್ಟೆಗಳನ್ನು ಧರಿಸುವುದು ಜನನಾಂಗದ ಉದ್ರಿಕ್ತತೆಗೆ ಕಾರಣವಾಗಬಲ್ಲದು.

‘ಪಿಜಿಎಡಿ’ ಲಕ್ಷಣಗಳೇನು?

ಈ ಸಮಸ್ಯೆಗೆ ಒಳಗಾಗಿರುವವರು ನಿರಂತರ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರೆ. ಅದು ದಿನಕ್ಕೆ ಹನ್ನೆರಡಕ್ಕಿಂತಲೂ ಹೆಚ್ಚು ಬಾರಿ ಆಗಬಹುದು. ಇನ್ನೂ ಕೆಲವರು  ಸ್ವಯಂ ಉತ್ತೇಜಕ ವಿಧಾನ ಅನುಸರಿಸುವ ಮೂಲಕ ಉದ್ರಿಕ್ತತೆಯನ್ನು ಪರಿಹರಿಸಿಕೊಳ್ಳಲು ಮುಂದಾಗುತ್ತಾರೆ.  ಆದರೆ ಈ ಪರಿಹಾರ ಹೆಚ್ಚು ಸಮಯ ಉಳಿಯುವುದಿಲ್ಲ. ಉದ್ರಿಕ್ತತೆಯು ಕೆಲವೇ ಗಂಟೆಗಳಲ್ಲಿ,  ನಿಮಿಷಗಳಲ್ಲಿ ಅಥವಾ ಸೆಕೆಂಡುಗಳಲ್ಲೇ ಮರುಕಳಿಸಬಹುದು. ಇದು ದಿನಗಟ್ಟಲೆ, ವಾರಗಟ್ಟಲೆ ಅಥವಾ ತಿಂಗಳಾನುಗಟ್ಟಲೆ  ಉಳಿದುಬಿಡಬಹುದು.

ಈ ಸಮಸ್ಯೆ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದೇ?

ಪದೇ ಪದೇ ಸಂಭೋಗಿಸುವುದು ಅಥವಾ ಸಂಭೋಗಿಸುವ ಬಯಕೆ ಬರುವುದು ಅಸಹಜವೇನಲ್ಲ. ಆದರೆ ಮಹಿಳೆಯರಿಗೆ ಇದು ಸುಖಕರ ವಿಷಯವಲ್ಲ. ಈ ಪ್ರಕ್ರಿಯೆ ಅವರನ್ನು ದುರ್ಬಲಗೊಳಿಸುತ್ತದೆ. ನಿದ್ದೆಯಿಲ್ಲದಂತೆ, ಕೆಲಸದಲ್ಲಿ ಏಕಾಗ್ರತೆ ಸಾಧಿಸದಂತೆ ತಡೆಯುತ್ತದೆ.

ಕೆಲವು ಮಹಿಳೆಯರಿಗೆ ಬಾಲ್ಯದಿಂದಲೂ ಈ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಿಗೆ ಗರ್ಭಾವಸ್ಥೆ ಸಮಯದಲ್ಲಿ ಅಥವಾ ಋತುಬಂಧದ ನಂತರ ಕಾಣಿಸಿಕೊಳ್ಳುತ್ತದೆ. ಈ ಪರಿಸ್ಥಿತಿ ಎದುರಿಸುತ್ತಿರುವ ಎಷ್ಟೋ ಮಂದಿ, ಸಮಸ್ಯೆಯನ್ನು ಹೇಳಿಕೊಳ್ಳಲಾರದೆ ಸಂಕೋಚದಿಂದ, ಎಷ್ಟೋ ವರ್ಷಗಳ ಕಾಲ ಕಾದು ನಂತರ ಚಿಕಿತ್ಸೆ ಪಡೆದುಕೊಂಡಿರುವ ಉದಾಹರಣೆಗಳಿವೆ.

ಸಮಸ್ಯೆಗೆ ಕಾರಣ ಹಾಗೂ ಚಿಕಿತ್ಸೆ

ಸಮಸ್ಯೆಗೆ ನಿರ್ದಿಷ್ಟ ಕಾರಣವೆಂದೇನಿಲ್ಲ. ಅಸಮರ್ಪಕ ಅಥವಾ ಹಾನಿಗೊಳಗಾದ ಸಂವೇದನಾ ನರಗಳಿಂದ ಈ ರೀತಿ ಆಗಬಹುದು. ಕೆಲವು ಒತ್ತಡನಿವಾರಕ ಔಷಧಗಳು ಹಾಗೂ ಚಾಂಟಿಕ್ಸ್ (ನಿಕೊಟಿನ್ ಚಟ ನಿವಾರ ಔಷಧ) ನಂಥ ಔಷಧೋಪಚಾರದಿಂದ ಈ ಸಮಸ್ಯೆಯಿಂದ ಬಳಲುತ್ತಿರುವವರು ಸಂಪೂರ್ಣ ಯಶಸ್ಸು ಕಂಡಿರುವ ಉದಾಹರಣೆಗಳೂ ಇವೆ.

ಕೆಲವರು ಸಮಸ್ಯೆಯೊಂದಿಗೇ ಬದುಕು ಮುಂದೂಡುತ್ತಿರುತ್ತಾರೆ. ಅದರೊಂದಿಗೇ ಹೊಂದಿಕೊಂಡು ಸಾಗುತ್ತಾರೆ. ಆದರೆ ಇಂಥ ನಿಗೂಢ ಸಮಸ್ಯೆ ಬೆಳಕಿಗೆ ಬಂದಿರುವುದು, ಇದಕ್ಕೆ ಒಂದು ಹೆಸರಿರುವುದೇ ಸಮಾಧಾನಕರ ವಿಷಯ.

ಇದೀಗ ಇದೇ ಸಮಸ್ಯೆಯನ್ನೇ ಹೋಲುವ ಪರಿಸ್ಥಿತಿಯ ಕಡೆ ಗಮನಹರಿಸೋಣ.

ಅದೇ ನಿರಂತರ ನಿಮಿರುವಿಕೆ ಸಮಸ್ಯೆ. ನೋವಿನಿಂದ ಕೂಡಿದ ನಿಮಿರುವಿಕೆಯ ಅಂಗಾಂಶಗಳ ಹಿಗ್ಗುವಿಕೆ ನಾಲ್ಕು ಗಂಟೆಗೂ ಅಧಿಕ ಕಾಲ ಇರುವುದು ಈ ಸಮಸ್ಯೆಯ ಮೂಲ ಲಕ್ಷಣಗಳಲ್ಲೊಂದು. ಈ ಸಮಸ್ಯೆಗೆ ಪ್ರಮುಖ ಕಾರಣ, ರಕ್ತವು ಜನನಾಂಗದಲ್ಲಿ ಕೂಡಿಕೊಂಡು ಮತ್ತೆ ದೇಹದ ಇನ್ನಿತರ ಭಾಗಗಳಿಗೆ ಸಂಚಲನಗೊಳ್ಳದೇ ಇದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲೂ ಇದೇ ರೀತಿಯ  ಜನನಾಂಗದ ಉದ್ರಿಕ್ತ ಮನೋಭಾವ ಉಂಟಾದರೂ, ಪುರುಷರಲ್ಲಿ ಇದು ಹೆಚ್ಚು ಹಾಗೂ ಸಾಮಾನ್ಯ ಸಂಗತಿ. ಈ ಸಮಸ್ಯೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಭಿನ್ನ ಚಿಕಿತ್ಸೆಗಳಿರುತ್ತವೆ.

ನಿರಂತರ ನಿಮಿರುವಿಕೆ ಸಮಸ್ಯೆಗೆ ಕಾರಣವೇನಿರಬಹುದು?

ಈ ಸಮಸ್ಯೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಜೊತೆಗೆ ಕೆಲವು ಔಷಧಗಳಿಂದ, ಕಾಯಿಲೆಗಳಿಂದ ಅಥವಾ ಕೆಲವು ಪರಿಸ್ಥಿತಿಗಳಿಂದಲೂ  ಉಂಟಾಗಬಹುದು. ನಿಮಿರು ದೌರ್ಬಲ್ಯಕ್ಕೆ ತೆಗೆದುಕೊಳ್ಳುವ ಔಷಧಗಳು ಈ ಸಮಸ್ಯೆಯ ಸಂಭವನೀಯ ಅಡ್ಡಪರಿಣಾಮಗಳಾಗುತ್ತವೆ.

ಖಿನ್ನತೆ ನಿವಾರಕ ಹಾಗೂ ಕೊಕೇನ್‌ನಂಥ ಕೆಲವು ಔಷಧಗಳ ಅಡ್ಡಪರಿಣಾಮಗಳೂ ಈ ಸಮಸ್ಯೆಯ ಸಾಧ್ಯತೆಗಳು. ‘ಸಿಕಲ್ ಸೆಲ್ ಅನಿಮಿಯಾ’ ಇರುವ ಪುರುಷರಲ್ಲಿ ನಿರಂತರ ನಿಮಿರುವಿಕೆ ಸಮಸ್ಯೆ ಬರುವ ಸಾಧ್ಯತೆ 40% ಇದೆ ಎಂದು ಅಂದಾಜಿಸಲಾಗಿದೆ. (ಮೂಲ: ಕ್ಲೆವಿಲಾಂಡ್ ಕ್ಲಿನಿಕ್). ವೃಷಣ ಕ್ಯಾನ್ಸರ್ ಅಥವಾ ಇನ್ನಿತರ ಹಾನಿಯಾಗಿದ್ದರೂ ನಿರಂತರ ನಿಮಿರುವಿಕೆ ಬರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ.

ತೊಡಕುಗಳು ಹಾಗೂ ಚಿಕಿತ್ಸೆಯ ದಾರಿ ಪುರುಷರಲ್ಲಿ ಈ ರೀತಿ ಜನನೇಂದ್ರಿಯದಲ್ಲಿ ಒಂದೇ ಕಡೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಕೂಡಿಕೊಂಡು, ಸಂಚಲನಗೊಳ್ಳದೇ ಇದ್ದರೆ ತುರ್ತು ಚಿಕಿತ್ಸೆ ಅತಿ ಅಗತ್ಯವಾಗಿರುತ್ತದೆ. ಇದರಿಂದ ರಕ್ತ ನಾಳಗಳಿಗೆ ತೊಂದರೆಯುಂಟಾಗಬಹುದು. ಜೊತೆಗೆ ಕಾರ್ಯನಿರ್ವಹಣೆಯೂ ನಿಂತು ಹೋಗಬಹುದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದ ಸಮಯದಲ್ಲಿ ಗ್ಯಾಂಗ್ರೀನ್ ಹಂತಕ್ಕೂ ತಲುಪಬಹುದು.

ಚಿಕಿತ್ಸೆಯ ಆಯ್ಕೆಗಳೇನು?

ಎಷ್ಟು ಬೇಗ ಈ ಸಮಸ್ಯೆಯ ಲಕ್ಷಣಗಳನ್ನು ಕಂಡುಕೊಳ್ಳುತ್ತೇವೋ ಅಷ್ಟು ಬೇಗ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಗುತ್ತದೆ. ರಕ್ತಕಟ್ಟುವಿಕೆಯನ್ನು ಸರಾಗಗೊಳಿಸುವ ಇಂಜೆಕ್ಷನ್‌ಗಳು ಈಗ ಲಭ್ಯವಿದ್ದು, ಇದರಿಂದ ಮರು ರಕ್ತಸಂಚಲನಗೊಳಿಸಲು ಸಾಧ್ಯವಿದೆ.

ಒಂದು ಸಮಯ, ರೋಗಿಗೆ ನಾಲ್ಕು ಗಂಟೆಗೂ ಹೆಚ್ಚಿನ ಅವಧಿ ನಿಮಿರುವಿಕೆ ಇದ್ದರೆ, ಆತನಲ್ಲಿ ಶಸ್ತ್ರಚಿಕಿತ್ಸೆಯ ಮಾರ್ಗದಿಂದ ರಕ್ತವನ್ನು ಮರುಸಂಚಲನಗೊಳಿಸಬಹುದು. ಇದಲ್ಲದೇ ಸೂಜಿಯ ಮೂಲಕ ಶಿಶ್ನದಿಂದ ರಕ್ತವನ್ನು ಹೊರಗೆಳೆಯುವ ಚಿಕಿತ್ಸೆಯೂ ಲಭ್ಯವಿದೆ. ಆದರೆ ಜನನೇಂದ್ರಿಯ  ಉದ್ರಿಕ್ತಗೊಳ್ಳುವುದು ಮಹಿಳೆಯರಲ್ಲಿ ತುರ್ತು ಸಮಸ್ಯೆ ಎಂದೆನಿಸಿಕೊಳ್ಳದೇ ಇದ್ದರೂ ನೋವುಭರಿತವಾಗಿರುವುದಂತೂ ಹೌದು. ಇದಕ್ಕೆ ಐಸ್‌ಪ್ಯಾಕ್‌ಗಳು, ಉರಿಶಮನದ ಔಷಧಗಳಂಥ ಚಿಕಿತ್ಸೆಗಳಿದ್ದು, ಇವು ಜನನಾಂಗದ ಉರಿಯೂತ ಶಮನಗೊಳಿಸುವಲ್ಲಿ ಸಹಕಾರಿ.

ಮುಂದುವರೆಯುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT