ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಾಡ್ತಾ ಆಟ, ಮಾಡ್ ಮಾಡ್ತ ಕೆಲಸ!

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಗೀತಾ ಎಂದಿಗಿಂತಲೂ ಅಂದು ಹೆಚ್ಚು ಬಿಜಿಯಾಗಿದ್ದಳು. ಮರುದಿನ ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿದ್ದವು. ಆ ಕೆಲಸದ ಒತ್ತಡದಲ್ಲೇ – ‘ಮಗಳೇ, ಇಲ್ಲಿರುವ ಲೋಟವನ್ನು ಎತ್ತಿ ಅಡುಗೆ ಮನೆಯಲ್ಲಿಟ್ಟು ಬಾ’ ಎಂದಳು. ಮನೆಗೆ ಬಂದಿದ್ದ ನೆಂಟರೊಬ್ಬರಿಗೆ ಗೀತಾಳ ಮಾತು ಸರಿಬರಲಿಲ್ಲ. ‘ಚಿಕ್ಕ ಮಗು ಕೈಯಲ್ಲಿ ಕೆಲಸ ಮಾಡಿಸೋದಾ? ನಾನೇ ಎತ್ತಿಡುವೆ ಬಿಡು’ ಎಂದು ಹುಡುಗಿಯನ್ನು ಆಡಲು ಕಳುಹಿಸಿದರು.

***
ಸುಮತಿ ಆಂಟಿ ಕೆಲಸದಲ್ಲಿ ಚುರುಕು. ಒಂದು ದಿನ ಅವರಿಗೆ ಸಿಕ್ಕಾಪಟ್ಟೆ ಜ್ವರ ಬಂದು ಮಲಗಬೇಕಾಯಿತು. ಅವರು ತಮ್ಮ ಹದಿನಾಲ್ಕು  ವರ್ಷದ ಮಗನನ್ನು ಕರೆದು, ಅಡುಗೆ ಬಿಸಿ ಮಾಡಲು ಹೇಳಿದರು. ಆಗ, ಮನೆಗೆ ಬಂದಿದ್ದ ನಂಟರೊಬ್ಬರು ತಕ್ಷಣ ಪ್ರತಿಕ್ರಿಯಿಸಿದರು – ‘ಗಂಡುಮಕ್ಕಳ ಹತ್ರ ಅಡುಗೆ ಮನೆ ಕೆಲಸ ಮಾಡಿಸೋದಾ?’

***
ಮೇಲಿನ ಉದಾಹರಣೆಗಳು ಯಾರ ಮನೆಯಲ್ಲಾದರೂ ಕಾಣಸಿಗುವಂತಹ ದೃಶ್ಯಗಳು. ‘ಮಕ್ಕಳಿಗೇನು ತಿಳಿಯುತ್ತೆ? ಆಡುವ ವಯಸ್ಸು’, ‘ದೊಡ್ಡವರಾದ ಮೇಲೆ ಮಾಡೋದ್ ಇದ್ದೇ  ಇದೆ, ಈಗ ಆರಾಮಾಗಿರ್ಲಿ ಬಿಡಿ’, ‘ಕೆಲ್ಸದೋಳು ಇರೋದ್ಯಾಕೆ?’, ‘ಮಕ್ಕಳು ಅವರವರ ಕೆಲಸ ಜವಾಬ್ದಾರಿಯಿಂದ ಮಾಡ್ಕೊಂಡ್ರೆ ಸಾಕು, ನಮ್ಮ ಕೆಲಸ ಮಾಡಿಕೊಡೋದೇನು ಬೇಕಿಲ್ಲ...’  –ಇವೆಲ್ಲ ಎಲ್ಲೆಡೆಯೂ ಕೇಳಿಸುವ ಪ್ರತಿಕ್ರಿಯೆಗಳು. ಇವೆಲ್ಲಾ ಮೇಲ್ನೋಟಕ್ಕೆ ಸರಿ ಅನ್ನಿಸಿದರೂ, ಮನೆಕೆಲಸಗಳಿಂದ ಮಕ್ಕಳನ್ನು ದೂರವುಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಪೋಷಕರು ಕೇಳಿಕೊಳ್ಳಬೇಕಾಗಿದೆ.

ಮಕ್ಕಳ ಬಗ್ಗೆ ಪೋಷಕರಿಗೆ ಪ್ರೀತಿ ಇರುವುದು ಸಹಜ. ಆದರೆ, ಮಕ್ಕಳು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಹಾಗೂ ಕೆಲಸವನ್ನು ಹಂಚಿಕೊಂಡು ಮಾಡುವ ಹಿನ್ನೆಲೆಯಲ್ಲಿ ಅವರನ್ನು ಮನೆಗೆಲಸದಲ್ಲಿ ಭಾಗಿಗಳನ್ನಾಗಿಸಿಕೊಳ್ಳುವುದು ಅಗತ್ಯ. ಈ ಕೆಲಸಗಳ ಹಂಚಿಕೆ ಮಕ್ಕಳಲ್ಲಿ ಜವಾಬ್ದಾರಿಯ ಪ್ರಜ್ಞೆ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಜವಾಬ್ದಾರಿಯ ಅರಿವು

ಜವಾಬ್ದಾರಿ ಎನ್ನುವುದು ಹಾಲುಹಲ್ಲು ಹೋಗಿ ಮೂಡುವ ಶಾಶ್ವತ ಹಲ್ಲುಗಳಂತೆ, ವಯಸ್ಸಿನ ಜೊತೆ ಬರುವಂಥ ಮೌಲ್ಯವಲ್ಲ. ಅದು ನೆಟ್ಟು ನೀರೆರೆದು ಬೆಳೆಸುವ ಗಿಡದಂತೆ. ಮನೆಯಲ್ಲಿ ಮಕ್ಕಳು ತಮಗೆ ಸೇರಿದ ವಸ್ತುಗಳನ್ನು ಜತನ ಮಾಡುವುದರಲ್ಲಿ, ಓದಿನಲ್ಲಿ, ದಿನಚರಿಯ ನಿರ್ವಹಣೆಯಲ್ಲಿ, ವಹಿಸಿದ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಜವಾಬ್ದಾರಿಯನ್ನು ನಿರೀಕ್ಷಿಸುತ್ತೇವೆ. ಮುಂದೆ ವಯಸ್ಕರ ಹಂತಕ್ಕೆ ಬಂದಾಗ ಹಣಕಾಸು, ಕೌಟುಂಬಿಕ ನಿರ್ವಹಣೆ, ವೃತ್ತಿ, ಚಾರಿತ್ರ್ಯ ಮುಂತಾದ ಎಲ್ಲ ಆಯಾಮಗಳಲ್ಲೂ ಜವಾಬ್ದಾರಿ ಬೇಕೇಬೇಕು. ಹಾಗಿದ್ದಲ್ಲಿ ಅದನ್ನು ಸಕಾಲದಲ್ಲಿ ಕಲಿಸುವುದು ಪೋಷಕರಾದ ನಮ್ಮ ಜವಾಬ್ದಾರಿಯಲ್ಲವೇ?

ಮಗು ಸೂಚನೆಗಳನ್ನು ಪಾಲಿಸಲು ಶುರುಮಾಡುವ  ಹಂತದಲ್ಲೇ ಈ ಪ್ರಕ್ರಿಯೆ ಆರಂಭವಾಗಬೇಕು. ಪಾಲಕರು ಮಕ್ಕಳಿಗೆ ಮಾದರಿಯಾಗಿರುವುದು ಇದಕ್ಕೆ ಅತ್ಯಗತ್ಯ. ದೊಡ್ಡವರು ತಾವು ಮಾಡುವ ಕೆಲಸಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಬೇಕು ಹಾಗೂ ಹೊರೆಯಂತೆ ಭಾವಿಸದೆ ಕೆಲಸವನ್ನು ಪೂರ್ತಿಗೊಳಿಸಿದಾಗ ಸಿಗುವ ತೃಪ್ತಿಯನ್ನು ಅನುಭವಿಸಲು ಕಲಿಸಬೇಕಿದೆ. ಮಕ್ಕಳಿಗೆ ಅವರ ಕೈಯಿಂದಾಗುವ ಸಣ್ಣಪುಟ್ಟ ಕೆಲಸಗಳನ್ನು ಹೇಳಿದರೆ ಖುಷಿಯಿಂದಲೇ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಸಿಗುವ ಮೆಚ್ಚುಗೆ–ಪ್ರೋತ್ಸಾಹ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಉದಾಹರಣೆಗೆ, ಅಡುಗೆ ಮಾಡುವ ಸಂದರ್ಭದಲ್ಲಿ ತರಕಾರಿಯನ್ನು ಇದ್ದಲ್ಲಿಂದ ತೆಗೆದುಕೊಡುವಂತೆ ಮಕ್ಕಳನ್ನು ಕೇಳಬಹುದು, ಕಾರ್/ಬೈಕ್ ತೊಳೆಯುವಾಗ ಅವರ ಕೈಗೂ ಒಂದು ಬಟ್ಟೆ ಕೊಟ್ಟು ಆ ಚಟುವಟಿಕೆಯನ್ನು ಆನಂದಿಸುವಂತೆ ಮಾಡಬಹುದು. ಹೀಗಾದಾಗ ಮುಂದೆ ದೊಡ್ಡವರಾದ ಮೇಲೆ ‘ಇಂತಹ ಕೆಲಸಗಳು ಹೊರೆ’ ಎಂಬ ಭಾವನೆ ಅವರಿಗೆ ಬರುವುದಿಲ್ಲ.

ಕೆಲಸದ ಬಗ್ಗೆ ಗೌರವ

ನಮ್ಮ ಸಮಾಜದಲ್ಲಿ ದಿನನಿತ್ಯದ  ಮಾಡುವ  ಕೆಲಸಗಳಿಗೂ, ಆರ್ಥಿಕ–ಸಾಮಾಜಿಕ ಅಂತಸ್ತಿಗೂ ನಂಟು ಕಲ್ಪಿಸುವುದು ರೂಢಿಯಲ್ಲಿದೆ. ದೈನಂದಿನ ಒತ್ತಡದ ಕಾರಣದಿಂದಾಗಿ ಕೆಲಸದವರನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾದರೂ, ಎಲ್ಲೋ ಒಂದು ಕಡೆ ಮಕ್ಕಳಲ್ಲಿ ಕೆಲವು ಕೆಲಸಗಳು ಕೆಲಸದವರಿಗಾಗಿಯೇ ಇರುವುದು, ಆ ಕೆಲಸಗಳನ್ನು ನಾವು ಮಾಡಿದರೆ ಅಂತಸ್ತಿಗೆ ಕುಂದು ಎಂಬ ಸಂದೇಶ ತಲುಪಬಾರದು. ಅನೇಕ ವೇಳೆ ನಮಗೆ ಗೊತ್ತಿಲ್ಲದಂತೆಯೇ ನಮ್ಮ ಮಾತುಗಳು ನಿರ್ದಿಷ್ಟ ಸಂಗತಿಯ ಬಗ್ಗೆ ಮಕ್ಕಳಲ್ಲಿ ಪೂರ್ವಗ್ರಹ ಉಂಟುಮಾಡಬಹುದು. ಮಕ್ಕಳ ಹತ್ತಿರ ಅವರ ಊಟದ ತಟ್ಟೆ ತೊಳೆಸುವುದು, ತಮ್ಮ ಕೋಣೆ ಸ್ವಚ್ಛವಾಗಿ ಇರಿಸಿಕೊಳ್ಳುವುದನ್ನು ಪಾಲಕರು ರೂಢಿ ಮಾಡಿಸಬೇಕು.

ನೆರವಿನ ಅವಶ್ಯಕತೆ

ಶಾಲಾ ಸಮಯದಲ್ಲಿ ಮಕ್ಕಳೊಂದಿಗೆ ಅವರ ಸ್ಕೂಲ್ ಬ್ಯಾಗ್ ಹಿಡಿದುಕೊಂಡು, ಸ್ಕೂಲ್ ಬಸ್‌ಗಾಗಿ ಕಾಯುತ್ತಾ ನಿಂತಿರುವ ಪೋಷಕರ ಗುಂಪುಗಳನ್ನು ನಗರಗಳ ರಸ್ತೆಗಳಲ್ಲಿ ಕಾಣಬಹುದು. ಅಷ್ಟೇನೂ ಭಾರವಿಲ್ಲದ ಆ ಬ್ಯಾಗ್ ಮಗು ಸುಲಭವಾಗಿ ಹೊತ್ತುಕೊಳ್ಳಬಲ್ಲದು. ಹಾಗೆಯೇ 6–7 ವರ್ಷದ ಹುಡುಗ ತನ್ನ ಶೂ ಲೇಸ್ ತಾನೇ ಕಟ್ಟಿಕೊಳ್ಳಬಲ್ಲ. ಐದು ವರ್ಷದ ಹುಡುಗಿ ನೀರಿನ ಬಾಟಲಿ ತಾನೇ ತುಂಬಿಸಿಕೊಳ್ಳಬಲ್ಲಳು. ‘ನಮ್ಮ ಹತ್ತಿರ ಸಮಯ ಇದೆ’ ಎಂಬ ಕಾರಣಕ್ಕೆ ನಾವೇ ಈ ಎಲ್ಲ ಕೆಲಸ ಮಾಡಿಕೊಡುತ್ತಾ ಹೋದರೆ, ‘ನಮಗೆ ಬೇಕಾದ್ದನ್ನು ಇನ್ನೊಬ್ಬರು ಮಾಡಿಕೊಟ್ಟರೆ ತಪ್ಪೇನಿಲ್ಲ’ ಎಂಬ ಸೂಕ್ಷ್ಮ ಸಂದೇಶ ಮಕ್ಕಳಿಗೆ ರವಾನೆಯಾಗಬಹುದು.

ಇದರಿಂದ ಜವಾಬ್ದಾರಿ ಪ್ರಜ್ಞೆ ಬೆಳೆಯುವುದಕ್ಕೆ ಅಡ್ಡಿಯಾಗುತ್ತದೆ. ತಮ್ಮ ಕೆಲಸಗಳನ್ನು ಮಕ್ಕಳೇ ಮಾಡಿಕೊಳ್ಳಲು ಪ್ರೋತ್ಸಾಹಿಸಿದರೆ ಅವರ ಸ್ವತಂತ್ರ ವ್ಯಕ್ತಿತ್ವದ ಬೆಳವಣಿಗೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ, ಜೊತೆಗೆ ನಮಗೂ ಕೆಲಸ ಹಗುರಾಗುತ್ತದೆ.

ಮಕ್ಕಳಿಗೆ ಕೆಲಸ ವಹಿಸುವಾಗ ಒಂದು ಸಂಗತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ವಹಿಸುವ ಕೆಲಸವನ್ನು ಮಾಡುವ ಸಾಮರ್ಥ್ಯ ಮತ್ತು ಕೌಶಲ್ಯಕ್ಕೆ ಅವರಿಗಿದೆಯೇ ಎನ್ನುವ ಸಂಗತಿಯದು. ಆ ಕೆಲಸ ಅಪಾಯಕಾರಿಯಲ್ಲ ಎಂಬುದನ್ನೂ ಖಾತ್ರಿಪಡಿಸಿಕೊಳ್ಳಬೇಕು. ಕೆಲವು ಕೆಲಸಗಳಿಗೆ ಮೇಲ್ವಿಚಾರಣೆ ಬೇಕಾಗಬಹುದು.

ಬಳಸುವ ವಸ್ತುಗಳು ಮಕ್ಕಳಿಗೆ ಸುಲಭವಾಗಿ ಸಿಗುವಂತೆ ಇರಬೇಕು. ಉದಾಹರಣೆಗೆ, ಬಚ್ಚಲು ಮನೆಯಲ್ಲಿ ಸೋಪು, ಬ್ರಷ್–ಪೇಸ್ಟ್  ಮಕ್ಕಳ ಕೈಗೆ ಎಟುಕುವಂತಿರಬೇಕು. ಹಗುರವಾದ ಚಿಕ್ಕ ಸ್ಟೂಲ್ ಮಾಡಿಕೊಟ್ಟರೆ, ಮಕ್ಕಳು ತಮ್ಮ ಆಟಿಕೆಗಳನ್ನು ತಾವೇ ತೆಗೆದುಕೊಳ್ಳುವ, ಎತ್ತಿಡುವ ಜವಾಬ್ದಾರಿಯನ್ನು ಅವರಿಗೆ ವಹಿಸಬಹುದು.

ವೈಫಲ್ಯದ ಹೆದರಿಕೆ

ಕೆಲವೊಮ್ಮೆ ಮಕ್ಕಳು ಪೋಷಕರ ಮಾತು ಕೇಳದೆ ಹಟ ಮಾಡುತ್ತವೆ. ಯಾವುದೋ ಸಂದರ್ಭದಲ್ಲಿ, ಕೊಟ್ಟ ಕೆಲಸ ಸರಿಯಾಗಿ ಮಾಡದ ಕಾರಣಕ್ಕಾಗಿ ಸಿಕ್ಕ ಅತಿ ಬೈಗುಳ, ನಿಂದನೆ ಮಕ್ಕಳಲ್ಲಿ ಮೈಗಳ್ಳತನಕ್ಕೆ ಕಾರಣವಾಗಬಹುದು ಎನ್ನುವುದನ್ನು ನಾವು ಮರೆಯಬಾರದು. ಮಕ್ಕಳು ತಪ್ಪಿನಿಂದಲೇ ಪಾಠ ಕಲಿಯುವುದು ತಾನೇ? ಮಾಡಿದಷ್ಟು ಕೆಲಸಕ್ಕೆ ಪ್ರಶಂಸೆ ನೀಡುವಂತೆಯೇ – ಕೆಲಸ ಪೂರ್ಣ ಮಾಡದಿರುವುದಕ್ಕೆ ಸ್ಪಷ್ಟ ಕಾರಣ ಕೇಳಿ ತಿಳಿದುಕೊಳ್ಳುವುದೂ ಅಗತ್ಯ. ಸಂದರ್ಭದ ಮಿತಿಯಲ್ಲಿ ಹೇಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಕೆಲಸದ ನಿರ್ವಹಣೆ ಸಾಧ್ಯವಿತ್ತು ಎಂದು ತಿಳಿಸಿಕೊಡುವುದು ಅವರಲ್ಲಿ ಆತ್ಮವಿಶ್ವಾಸ ತುಂಬಲು ಸಹಕಾರಿ.

ಕೆಲಸ ವಹಿಸಿಕೊಡುವಾಗ ಅದರ ಅಗತ್ಯ ಮತ್ತು ಪರಿಣಾಮಗಳ ಬಗ್ಗೆ ಹೇಳಿರಬೇಕು. ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ಎನ್ನುವುದನ್ನು ಸರಳ ಮತ್ತು ಸ್ಪಷ್ಟವಾದ ಚಿಕ್ಕ ವಾಕ್ಯಗಳಲ್ಲಿ ತಿಳಿಸಿದರೆ, ಮಕ್ಕಳು ಅದನ್ನು ಸರಿಯಾಗಿ ಮಾಡುವ ಸಾಧ್ಯತೆ ಹೆಚ್ಚು. ಚಟುವಟಿಕೆಗಳ ಮೂಲಕ ಮಕ್ಕಳ ಕೌಶಲ್ಯದ ಬೆಳವಣಿಗೆಗೆ ಪ್ರಯತ್ನಿಸಬಹುದು.

ಇದರಿಂದಾಗಿ ಮಕ್ಕಳ ಜವಾಬ್ದಾರಿ ಪ್ರಜ್ಞೆಯಷ್ಟೇ ಅಲ್ಲದೇ – ಸಹಕಾರ, ಹೊಂದಾಣಿಕೆಯ ಮನೋಧರ್ಮ ಒಳಗೊಂಡ ಪರಿಪೂರ್ಣ ವ್ಯಕ್ತಿತ್ವದ ರೂಪುಗೊಳ್ಳುವಿಕೆ ಸಾಧ್ಯ. ಹಾಗೆಯೇ, ಮಾಡುವ ಕೆಲಸಕ್ಕೆ ಹೆಣ್ಣು–ಗಂಡೆಂಬ ಹಣೆಪಟ್ಟಿ ಕಟ್ಟುವುದಂತೂ ಯಾವುದೇ ಸಂದರ್ಭದಲ್ಲಿ ಕೂಡದು.

*

ಆರು ವರ್ಷದೊಳಗಿನ ಮಕ್ಕಳು ಮಾಡಬಲ್ಲ ಕೆಲವು ಕೆಲಸಗಳ ಪಟ್ಟಿ ಇಲ್ಲಿದೆ. (ಪತಿ ಮಗುವಿನ ಕೌಶಲ್ಯದ  ಬೆಳವಣಿಗೆ ಬೇರೆ ಬೇರೆ ಇರುತ್ತದೆ. ಇಲ್ಲಿ ಸರಾಸರಿ ಸಾಮರ್ಥ್ಯದ ಮಗುವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.)

1–2 ವರ್ಷದ ಮಕ್ಕಳು

* ತಮ್ಮ ತಟ್ಟೆಯನ್ನು ಗುರುತಿಸಿ, ಚಪಾತಿ ಅಥವಾ ಇನ್ನಿತರ ಘನ ರೂಪದ ತಿಂಡಿಗಳನ್ನು ಬಡಿಸಿಕೊಳ್ಳಬಹುದು.
* ಸ್ನಾನಕ್ಕೆ ತನ್ನ ಟವೆಲ್ ತಂದುಕೊಳ್ಳುವುದು, ಕೊಳಕು ಬಟ್ಟೆ ನಿರ್ದಿಷ್ಟ ಜಾಗದಲ್ಲಿ ಹಾಕುವುದು.
* ಹೊರ ಹೋಗುವಾಗ ತನ್ನ ಶೂ ಗುರುತಿಸಿ ಜೋಡಿಸಿಕೊಳ್ಳುವುದು
* ಸಾಕ್ಸ್ ಬಿಚ್ಚಿಕೊಳ್ಳುವುದು.
* ಆಟದ ಸಾಮಾನು ಮರಳಿ ಬುಟ್ಟಿಗೆ ತುಂಬುವುದು.

*
2ರಿಂದ 3 ವರ್ಷದ ಮಕ್ಕಳು

* ಊಟಕ್ಕೆ ಲೋಟಗಳನ್ನು ಇಡುವುದು. 
* ಊಟದ ಪ್ಲೇಟ್ ಪಾತ್ರೆ ತೊಳೆಯುವ ಜಾಗದಲ್ಲಿ ಇರಿಸುವುದು.
* ಚಪ್ಪಲಿ/ ಲೇಸ್ ರಹಿತ ಶೂ ಧರಿಸುವುದು.
* ಗಿಡಕ್ಕೆ ನೀರು ಹಾಕುವುದು.

*

4ರಿಂದ 5 ವರ್ಷದ ಮಕ್ಕಳು

* ಬೆಳಿಗ್ಗೆ, ಸಂಜೆ ಹಲ್ಲು ಬ್ರಷ್ ಮಾಡುವುದು (ರಾತ್ರಿ ಹಲ್ಲಿನ ರಕ್ಷಣೆಯ ದೃಷ್ಟಿಯಿಂದ ದೊಡ್ಡವರ ಮೇಲ್ವಿಚಾರಣೆ ಬೇಕು).
* ತಮ್ಮ ಸೈಕಲ್, ಆಟಿಕೆಗಳ ಸ್ವಚ್ಛತೆ ನೋಡಿಕೊಳ್ಳುವುದು.
* ಕಿರಿಯ ಸಹೋದರ / ಸಹೋದರಿಯರ ಪಾಲನೆಯಲ್ಲಿ ಸಣ್ಣ ಪುಟ್ಟ ಸಹಾಯ ಮಾಡುವುದು.
* ಪೀಠೋಪಕರಣಗಳನ್ನು ಓರಣವಾಗಿರಿಸುವುದು.
* ಕರವಸ್ತ್ರ ಮಡಚಿ ಇಟ್ಟುಕೊಳ್ಳುವುದು
* ಪೇಪರ್ ಚೂರುಗಳಂತಹ ದೊಡ್ಡ ಕಸ ತೆಗೆಯುವುದು.

*
5 ರಿಂದ 6 ವರ್ಷದ ಮಕ್ಕಳು

* ನೀರಿನ ಬಾಟಲಿ ತುಂಬಿಕೊಳ್ಳುವುದು, ಸ್ಕೂಲ್ ಬ್ಯಾಗ್ ಜೋಡಿಸಿಕೊಳ್ಳುವುದು.
* ಊಟಕ್ಕೆ ತಟ್ಟೆ, ಲೋಟ , ಉಪ್ಪಿನ ಡಬ್ಬಿ ಮುಂತಾದವುಗಳನ್ನು ಜೋಡಿಸುವುದು.
* ಆಟದ ನಂತರ ಕೈಕಾಲು ತೊಳೆದುಕೊಳ್ಳುವುದು.
* ಚಿಕ್ಕ ಚಿಕ್ಕ ಬಟ್ಟೆಗಳನ್ನು ಮಡಚುವುದು.
* ನೀರಿನ ಲೋಟಗಳನ್ನು ತೊಳೆದಿಡುವುದು.

*

3 ರಿಂದ 4 ವರ್ಷದ ಮಕ್ಕಳು

* ಹೂವು ಕೊಯ್ಯುವುದು.
* ತರಕಾರಿಗಳನ್ನು ಬೇರ್ಪಡಿಸುವುದು.
* ಊಟದ ನಂತರ ಕೈ–ಬಾಯಿ ತೊಳೆದುಕೊಳ್ಳುವುದು.
* ರೆಡಿ ಮಾಡಿ ಇಟ್ಟ ತಿಂಡಿ ಡಬ್ಬಿ, ನೀರಿನ ಬಾಟಲಿ ಬ್ಯಾಗಿಗೆ ತುಂಬಿಕೊಳ್ಳುವುದು.
* ಕಥೆ  ಪುಸ್ತಕ, ಚಟುವಟಿಕೆಗಳ ಸಾಮಗ್ರಿಗಳನ್ನು ತನ್ನ ಕಪಾಟಿನಲ್ಲಿ ಇಟ್ಟುಕೊಳ್ಳುವುದು .
* ಸ್ವಂತವಾಗಿ ಚಡ್ಡಿ ಧರಿಸುವುದು.
* ಸಣ್ಣ ಪ್ರಮಾಣದಲ್ಲಿ ಚೆಲ್ಲಿದ ನೀರು ಒರೆಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT