ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳಿಗೂ ಅರೆಕಾಸಿನ ಮಜ್ಜಿಗೆ

Last Updated 14 ಏಪ್ರಿಲ್ 2017, 11:34 IST
ಅಕ್ಷರ ಗಾತ್ರ

ಚಿತ್ರ: ಚಕ್ರವರ್ತಿ

ನಿರ್ಮಾಪಕ: ಸಿದ್ಧಾಂತ್‌
ನಿರ್ದೇಶಕ: ಚಿಂತನ್‌ ಎ. ವಿ.
ತಾರಾಗಣ: ದರ್ಶನ್‌, ದೀಪಾ ಸನ್ನಿಧಿ, ದಿನಕರ್‌ ತೂಗುದೀಪ

ಬೆಂಕಿಯ ಕೆನ್ನಾಲಿಗೆಯೊಳಗಿನಿಂದ ಜಿಗಿದು ಬರುವ ನಾಯಕ, ಸಮುದ್ರದ ಮೇಲೊಂದು ಗುಂಡಿನ ಚಕಮಕಿ, ಆಮೇಲೆ ನೈಟ್‌ಕ್ಲಬ್‌ನಲ್ಲೊಂದು ಇಂಟ್ರೊಡಕ್ಷನ್‌ ಸಾಂಗ್‌...

ಒಂದು ಕಮರ್ಷಿಯಲ್‌ ಸಿನಿಮಾದ ಆರಂಭದಲ್ಲಿ ಜನರನ್ನು ಸೆಳೆಯಲು ಇರಬೇಕು ಎನ್ನಲಾಗುವ ಎಲ್ಲ ಅಂಶಗಳೂ ‘ಚಕ್ರವರ್ತಿ’ಯಲ್ಲಿವೆ. ಆದರೆ ತಮ್ಮ ಹಳೆಯ ಅನೇಕ ಸಿನಿಮಾಗಳ ಹಾಗೆ ದರ್ಶನ್‌ ಇಲ್ಲಿ ನೆಟ್‌ ಬನಿಯನ್‌ ತೊಟ್ಟು ಗುದ್ದಾಡುವುದಿಲ್ಲ. ಲಾಂಗ್‌ ಹಿಡಿದುಕೊಂಡು ರೌಡಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆಯುವುದಿಲ್ಲ. ಅದರ ಬದಲಾಗಿ ಮೈಕೊಳೆ ಮಾಡಿಕೊಳ್ಳದೆ ಕೋಟ್‌ ತೊಟ್ಟುಕೊಂಡೇ ಕಾಳಗ ಮಾಡುತ್ತಾರೆ.

ಬೆಂಗಳೂರಿನ ರೌಡಿಯನ್ನು ಅಂತರರಾಷ್ಟ್ರೀಯ ಭೂಗತ ಜಗತ್ತಿನ ಚಕ್ರವರ್ತಿಯನ್ನಾಗಿಸಲು ನಿರ್ದೇಶಕರು ಹೆಣಗಿದ್ದಾರೆ. ಆದರೆ ಈ ಬದಲಾವಣೆ ದರ್ಶನ್‌ ಇಮೇಜ್‌ಗಾಗಲಿ, ಅವರ ಅಭಿಮಾನಿಗಳಿಗಾಗಿ ಹೆಚ್ಚಿನದೇನನ್ನೂ ನೀಡದೆ ನಿರಾಸೆ ಹುಟ್ಟಿಸುತ್ತದೆ. ಎಲ್ಲವರ್ಗದ ಪ್ರೇಕ್ಷಕರನ್ನು ಸೆಳೆಯುವುದಿರಲಿ, ಅಭಿಮಾನಿಗಳ ಹೊಟ್ಟೆಗೂ ಅರೆಕಾಸಿನ ಮಜ್ಜಿಗೆಯನ್ನಷ್ಟೇ ಹನಿಸಲು ಶಕ್ತರಾಗಿದ್ದಾರೆ ನಿರ್ದೇಶಕ ಚಿಂತನ್‌.

ಅಪ್ಪನಿಂದ ಬೈಸಿಕೊಂಡು ಮಡಿಕೇರಿಯಿಂದ ‘ಏನಾದ್ರೂ ಸಾಧಿಸಲು’ ಬೆಂಗಳೂರಿಗೆ ಬರುವ ಶಂಕರ್‌ (ದರ್ಶನ್‌) ಜತೆ, ಅವನನ್ನು ಪ್ರೇಮಿಸುವ ಶಾಂತಿಯೂ (ದೀಪಾ ಸನ್ನಿಧಿ) ಬರುತ್ತಾಳೆ. ಅಲ್ಲಿಯೇ ಅವರ ವಿವಾಹವೂ ಆಗುತ್ತದೆ. ಆಗ ಬೆಂಗಳೂರನ್ನು ಮಹಾರಾಜ (ದಿನಕರ್‌ ತೂಗುದೀಪ) ತನ್ನ ಹಿಡಿತಕ್ಕೆ ತೆಗೆದುಕೊಂಡು ಆಳುತ್ತಿರುತ್ತಾನೆ. ಅವನಿಗೆ ರಾಜಕೀಯ ಬೆಂಬಲವಿರುವುದಷ್ಟೇ ಅಲ್ಲ, ತಾನೂ ರಾಜಕೀಯವಾಗಿ ಬೆಳೆಯಲು ಯೋಜನೆ ರೂಪಿಸಿಕೊಂಡಿರುತ್ತಾನೆ. ಅನ್ಯಾಯವನ್ನು ಸಹಿಸದ ಶಂಕರ್‌ ಅವನನ್ನು ಎದುರು ಹಾಕಿಕೊಳ್ಳುತ್ತಾನೆ. ಅಂಥದ್ದೊಂದು ಸಂದರ್ಭಕ್ಕಾಗಿಯೇ ಕಾದಿದ್ದವನಂತೆ ಭೂಗತ ಜಗತ್ತನ್ನು ಪ್ರವೇಶಿಸಿಯೂ ಬಿಡುತ್ತಾನೆ.

ಎಂಬತ್ತರ ದಶಕದ ಕೊನೆಯಲ್ಲಿ ಬೆಂಗಳೂರಲ್ಲಿ ಶುರುವಾಗುವ ಈ ಭೂಗತ ಜಗತ್ತಿನ ಕಥೆ ದ್ವಿತೀಯಾರ್ಧದಲ್ಲಿ ಮಲೇಷ್ಯಾಕ್ಕೂ ವಿಸ್ತರಿಸಿಕೊಳ್ಳುತ್ತದೆ. ಗಿಡದಿಂದ ಹೂವು ಬಿಡಿಸಿದಷ್ಟೇ ಸಲೀಸಾಗಿ ಎದುರಾಳಿಗಳನ್ನು ಚೆಂಡಾಡಬಲ್ಲ ನಾಯಕ, ಶತ್ರುಗಳ ಭದ್ರಕೋಟೆಯೊಳಗೆ ನುಗ್ಗಿ ಅವರಿಗೆ ಚೆಳ್ಳೆಹಣ್ಣು ತಿನ್ನಿಸಿ ಮಣ್ಣುಮುಕ್ಕಿಸಬಲ್ಲ ಚಾಣಾಕ್ಷ ಎಂಬಂತೆ ಬಿಂಬಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅವನ ಯಾವ ಕಾರ್ಯತಂತ್ರಗಳೂ ರೋಚಕಭಾವವನ್ನು ಹುಟ್ಟಿಸಲು ಹೀನಾಯವಾಗಿ ಸೋಲುತ್ತವೆ. ಒಂದು ಷಡ್ಯಂತ್ರ ಮಾಡಿ, ‘ಅದನ್ನು ಹೇಗೆ ಮಾಡಿದೆ’ ಎಂದು ವಿವರಿಸುತ್ತಾ ಕೂಡುವುದು ನೋಡುಗರ ತಾಳ್ಮೆಯನ್ನು ಪರೀಕ್ಷಿಸುತ್ತದೆ.

‘ಮೈಂಡ್‌ ಗೇಮ್‌’ ಸಿನಿಮಾಕ್ಕೆ ಬೇಕಾದ ಚುರುಕುತನವಾಗಲಿ, ಭೂಗತಜಗತ್ತಿನ ನಿಗೂಢತೆಯಾಗಲಿ ಇಲ್ಲದ ಚಿತ್ರಕಥೆ ಮೊದಲಿನಿಂದ ಕೊನೆಯವರೆಗೂ ಒಂದೇ ಹದದಲ್ಲಿ ತೆವಳುತ್ತದೆ.

ಚಿತ್ರವಿಡೀ ಅಕ್ರಮ ಚಟುವಟಿಕೆ, ರಕ್ತಪಾತಗಳನ್ನು ಮಾಡುವ ನಾಯಕನಿಗೆ ಕೊನೆಯಲ್ಲಿ ದೇಶಪ್ರೇಮಿಯ ಮಾಸಲು ಬಣ್ಣ ಬಳಿಯುವ ಗಿಮಿಕ್‌ ಅನ್ನೂ ಮಾಡಲಾಗಿದೆ. ಮುಸ್ಲಿಂ ಉಗ್ರಗಾಮಿಗಳು ದೇಶದ ಮೇಲೆ ಬಾಂಬ್‌ ಹಾಕಲು ಯೋಜಿಸಿದಾಗ ಅವರನ್ನು ಸದೆಬಡಿಯುವುದಷ್ಟೇ ದೇಶಪ್ರೇಮ ಎಂದು ನಿರ್ದೇಶಕರು ತಿಳಿದುಕೊಂಡಿರುವಂತಿದೆ. ಇದೇ ಭ್ರಮೆಯಲ್ಲಿ ‘ಜನಗಣಮನ’ದೊಟ್ಟಿಗೇ ‘ವಂದೇ ಮಾತರಂ’ ಗೀತೆಯನ್ನೂ ಬಳಸಿಕೊಂಡು ದೇಶಭಕ್ತಿ ಮೆರೆದಿದ್ದಾರೆ. ಬೆಟ್ಟಿಂಗ್‌, ಅಕ್ರಮ ತೈಲ ದಂಧೆ, ಅಕ್ರಮ ಶಸ್ತ್ರಾಸ್ತ್ರಗಳ ಸಾಗಣೆ ಎಲ್ಲವೂ ದೇಶದ್ರೋಹವೇ ಎಂಬುದು ಅವರ ಅರಿವಿಗೆ ಬಂದಿರದಿರುವುದು ಬಾಲಿಶತನವನ್ನು ತೋರಿಸುತ್ತದೆ.

ದಿನಕರ್‌ ತೂಗುದೀಪ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಖಳನಟನಾಗಿ ನಟಿಸಿದ್ದಾರೆ. ಸಿನಿಮಾದೊಳಗೆ ಮಾತ್ರವಲ್ಲ, ಸಿನಿಮಾಕ್ಕೂ ಅವರು ನಿಜವಾದ ವಿಲನ್‌. ದರ್ಶನ್‌ ತಮ್ಮ ಎಂದಿನ ಲಯವನ್ನು ಮೀರದೇ ನಟಿಸಿದ್ದಾರೆ. ದೀಪಾ ಸನ್ನಿಧಿ ದ್ವಿತೀಯಾರ್ಧದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಮಂಗಳೂರು ಭಾಷೆಯನ್ನು ಅಸಡ್ಡಾಳವಾಗಿ ಆಡುವ ಕುಮಾರ್‌ ಬಂಗಾರಪ್ಪ ಕೆಲವು ದೃಶ್ಯಗಳಲ್ಲಿ ವಿದೂಷಕನಂತೆ ಕಾಣುತ್ತಾರೆ. ಸಿನಿಮಾದಲ್ಲಿ ಹಾಸ್ಯವಿಲ್ಲ. ಆದರೆ ಹಲವು ಗಂಭೀರ ದೃಶ್ಯಗಳು ಹಾಸ್ಯಾಸ್ಪದವಾಗಿ ಆ ಕೊರತೆಯನ್ನು ಕೊಂಚಮಟ್ಟಿಗೆ ಕಮ್ಮಿ ಮಾಡುತ್ತವೆ.

ಶರತ್‌, ಲೋಹಿತಾಶ್ವ, ಶಿವಧ್ವಜ್‌, ಆದಿತ್ಯ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ಒಂದೂವರೆ ಡೈಲಾಗ್‌ ಹೇಳಿಹೋಗುವ ಸಾಧುಕೋಕಿಲ ಸಿನಿಮಾದಲ್ಲಿದ್ದಾರೆಂದು ನೆನಪಿಟ್ಟುಕೊಳ್ಳುವುದೇ ಕಷ್ಟ.

ಅರ್ಜುನ್‌ ಜನ್ಯ ಸಂಯೋಜನೆಯ ಒಂದು ಹಾಡು ಗುನುಗಿಕೊಳ್ಳುವ ಹಾಗಿದೆ. ಚಂದ್ರಶೇಖರ್‌ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸ್ಕ್ರಿಪ್ಟ್‌ನಲ್ಲಿನ ಜಾಳುತನವನ್ನು ನೀಗಿಸಲಾಗದೇ ಸಂಕಲನಕಾರ ಕೆ.ಎಂ. ಪ್ರಕಾಶ್‌ ಅವರೂ ಕೈಚೆಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT