ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮನಮೂನೆ ನವನವೀನ ‘ಕಾಸಿನಸರ’

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಕೃಷ್ಣವೇಣಿ ಪ್ರಸಾದ್ ಮುಳಿಯ

*

ಆಭರಣಕ್ಕೂ ಮಹಿಳೆಗೂ ಅವಿನಾಭಾವ ಸಂಬಂಧ. ಬಳೆ, ರಸ, ಓಲೆ ಇವೆಲ್ಲವೂ ಮಹಿಳೆಯ ಅಂದವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅಜ್ಜಿ–ಅಮ್ಮನ ಕಾಲದಿಂದಲೂ ಹೆಣ್ಣುಮಕ್ಕಳಿಗೆ ಕಾಸಿನಸರದ ಮೇಲೆ ಒಲವು ಜಾಸ್ತಿ. ‘ಕಾಸಿನಸರದ ಕಾಲ ಮುಗಿಯಿತು’ ಎಂದು ಕೆಲವರು ಭಾವಿಸಿರುವ ಸಂದರ್ಭದಲ್ಲೇ, ಅದು ಮತ್ತೆ ಹೊಸರೂಪದಲ್ಲಿ ರೂಪು ತಳೆದಿದೆ.

‘ಕಾಸಿನಸರ’ ಏನಿದು? ಇದಕ್ಕೆ ಯಾಕೆ ಈ ಹೆಸರು ಬಂತು?

ಕಾಸು ಎಂದರೆ ಹಣ. ಹಿಂದೆ ಚಿನ್ನ ಹಾಗೂ ಬೆಳ್ಳಿಯ ಪಾವಲಿಗಳನ್ನು ವ್ಯವಹಾರಕ್ಕೆ ಬಳಸುತ್ತಿದ್ದರು. ಇಂದು ಚಿನ್ನ–ಬೆಳ್ಳಿ ಆಭರಣವಾಗುತ್ತಿದೆ. ಹಿಂದಿನಿಂದಲೂ ಕಾಸಿನಸರದ ಮೇಲೆ ಹಿರೀಕರಿಗೇನೋ ವಿಶೇಷ ಅನುಬಂಧ. ಪಾವಲಿ (ಕಾಸು) ಇದ್ದರೆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿ, ಮನೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಅವರದ್ದು. ಲಕ್ಷ್ಮಿಯ ಚಿತ್ರ ಇರುವ ಪಾವಲಿ ಧರಿಸಿದರೆ ಆ ದೇವತೆ ನಮ್ಮಲ್ಲಿ ಸದಾ ನೆಲೆಸುತ್ತಾಳೆ ಎಂದು ಹೆಂಗೆಳೆಯರು ತಮ್ಮ ತಾಳಿಯ ಜೊತೆ ಲಕ್ಷ್ಮಿ ಬಿಲ್ಲೆಯನ್ನೂ ಧರಿಸುತ್ತಾರೆ. ಹೀಗೆ ಒಂದಷ್ಟು ಕಾಸುಗಳು ಸೇರಿಕೊಂಡು ಸರವಾಗಿ, ಆಭರಣವಾಗಿ ಹೆಣ್ಣುಮಕ್ಕಳ ಕೊರಳನ್ನು ಅಲಂಕರಿಸುತ್ತವೆ.

ಇಂದು ಕಾಸಿನಸರ ಆಧುನಿಕತೆಗೆ ತಕ್ಕಂತೆ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ. ಜೊತೆಗೆ ವಿನ್ಯಾಸವೂ ಕೂಡ ಬದಲಾಗಿದೆ. ಕಾಸಿನಸರದ ರೂಪಾಂತರ ಹೆಣ್ಣುಮಕ್ಕಳ ಅಭಿರುಚಿ ಬದಲಾವಣೆಯ ದ್ಯೋತಕ ಆಗಿರುವಂತೆಯೇ, ಆಭರಣ ವಿನ್ಯಾಸ ಕ್ಷೇತ್ರದಲ್ಲಿನ ಬದಲಾವಣೆಗಳಿಗೂ ಕನ್ನಡಿ ಹಿಡಿಯುವಂತಿದೆ. 

ಪದಕದ ಕಾಸಿನಸರದ ನೆಕ್ಲೇಸ್

ಕಾಸಿನಸರವನ್ನು ಕೊರಳಿಗೆ ಅಪ್ಪುವಂತೆ ಸಣ್ಣದಾಗಿ ನೆಕ್ಲೇಸ್ ರೂಪದಲ್ಲಿ ಹಾಕಬಹುದು. ಹಾಗೆ ಹಾಕುವಾಗ ಅದರ ಮಧ್ಯದಲ್ಲಿ ‘ಪೊಲ್ಕಿ’ ವಿನ್ಯಾಸದಲ್ಲಿ ಹರಳುಗಳನ್ನು ಹೊಂದಿದ – ಹೂವಿನ ಅಥವಾ ನವಿಲಿನ ವಿನ್ಯಾಸದ ಪದಕವನ್ನು ನೆಕ್ಲೇಸ್‌ನ ಮಧ್ಯಭಾಗದಲ್ಲಿ ಅಳವಡಿಸಿದ ವಿನ್ಯಾಸವಿದ್ದರೆ ಅದು ಈ ಕಾಲಕ್ಕೆ ಹೆಚ್ಚು ಹೊಂದುತ್ತದೆ. ಇದು ಅಬ್ಬರದ ವಿನ್ಯಾಸ, ಇದರಲ್ಲಿ ನೆಕ್ಲೇಸಿನ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಮುತ್ತುಗಳನ್ನು ಅಳವಡಿಸಲಾಗುತ್ತದೆ. ಈ ಮುತ್ತುಗಳೇ ಇದಕ್ಕೆ ಮೆರುಗು. ಎಮರಾಲ್ಡ್  ರೂಬಿಯ ದೊಡ್ಡ ಹರಳುಗಳ ಮೂಲಕ ಆಭರಣ ಆಧುನಿಕ ಪ್ರಭೆಯನ್ನು ಪಡೆದುಕೊಂಡಿದೆ.

*

ಪುಟ್ಟ ಕಾಸಿನ ನೆಕ್ಲೇಸ್

ಈ ಸರದಲ್ಲಿ ಸಾಕಷ್ಟು ಚಿನ್ನವೇನೂ ಇರುವುದಿಲ್ಲ. ಆದರೂ ಕಾಸುಗಳು ಎದ್ದು ಕಾಣುತ್ತವೆ. ಭಾರವಿಲ್ಲದಿದ್ದರೂ ಇದರ ವಿನ್ಯಾಸ ಸೊಗಸಾಗಿದೆ. ರೂಬಿ ಹರಳು ಇದೆ, ಅದು ಸಾಂಪ್ರದಾಯಿಕವಾಗಿದೆ. ಕಿವಿಯೋಲೆ ಚಿಕ್ಕದಾಗಿದೆ, ಕಾಸಿನ ಡಿಸೈನ್ ಚೂಪಾಗಿದೆ. ಮಕ್ಕಳಿಗೂ ಮಹಿಳೆಯರಿಗೂ ಹಿರಿಯರಿಗೂ ಇದು ಹೊಂದುತ್ತದೆ. ಇಂದಿನ ಫ್ಯಾಶನ್ ಯುಗಕ್ಕೆ ಈ ವಿನ್ಯಾಸ ಹೇಳಿ ಮಾಡಿಸಿದಂತಿದೆ.

*

ಸರಳ ರೂಬಿ ಕಾಸಿನ ನೆಕ್ಲೇಸ್

ಇದು ಸ್ವಲ್ಪ ಉದ್ದ ಹಾಗೂ ವಿಭಿನ್ನವಾದ ಕಾಸು. ಲಕ್ಷ್ಮಿಯ ಚಿತ್ರಣದೊಂದಿಗೆ ಚಿಗುರಿದ ಎಲೆ ಬಳ್ಳಿ ಇರುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ತುದಿಯಲ್ಲಿ ಹೂವಿರುವಂತೆ ರೂಬಿಯನ್ನು ಕೂರಿಸಲಾಗಿದೆ. ಇದು ಹೊಳಪಿನಿಂದ ಕೂಡಿದ್ದು, ಚೈನಿನಲ್ಲಿ ಭದ್ರವಾಗಿ ಹಣೆಯಲಾಗಿದೆ. ಯಾವುದೇ ವಿನ್ಯಾಸ ಆಗಲಿ ಅಲೈನ್‌ಮೆಂಟ್ ಸಮರ್ಪಕವಾಗಿ ಇರಬೇಕು. ಎಲ್ಲಿ ಹರಳು ಕೂರಿಸಲಾಗಿದೆಯೋ ಅದಕ್ಕೆ ಸರಿಯಾದ ಜಾಗದಲ್ಲೇ ಚಿತ್ರಣಗಳು ಪ್ರಾರಂಭವಾಗಬೇಕು. ಆಗ ಆಭರಣ ತನ್ನ ಕಳೆಯನ್ನು ಹೆಚ್ಚಿಸಿಕೊಳ್ಳುತ್ತದೆ.

*

ಕಾಸಿನ ಬಂಚ್ ನೆಕ್ಲೇಸ್

ಕಾಸಿನಸರದ ನೆಕ್ಲೇಸ್‌ಗೆ ಯಾವ ವಿನ್ಯಾಸದ ಸರ ಜೊತೆಯಾದರೂ ಅದು ಹೊಸ ರೂಪ ತಾಳುತ್ತದೆ. ಆದರೆ ಆ ಹೊಂದಿಕೆ ಹೇಗಿದ್ದರೆ ಚೆನ್ನ? ಪೊಲ್ಕಿ ವಿನ್ಯಾಸ, ತ್ರಿಕೋನ, ರೌಂಡ್ ಹರಳುಗಳನ್ನು ಅಳವಡಿಸಿದ ಹೂವಿನ ವಿನ್ಯಾಸವನ್ನು ಇದರೊಂದಿಗೆ ಜೋಡಿಸಿದಾಗ ಅದರ ಸೊಗಸೇ ಬೇರೆ. ಇದರೊಂದಿಗೆ ಚಿನ್ನದ ಗುಂಡುಗಳನ್ನು ನೆಕ್ಲೇಸ್‌ನಲ್ಲಿ ಬಳಸಿದಾಗ ಕಾಣುವ  ನೋಟ ರಮಣೀಯ. ಇದು ಕೊರಳಿಗೆ ಹಿತ, ಚುಚ್ಚುವುದಿಲ್ಲ. ಚಪ್ಪಟ್ಟೆಯಾಗಿದ್ದಾಗ ಅದು ಕುತ್ತಿಗೆಯಲ್ಲಿ ಚೆನ್ನಾಗಿ ಕೂತು, ಆಭರಣ ವಿನ್ಯಾಸ ಕಣ್ಣಿಗೆ ನೆಟ್ಟಂತೆ ಕಾಣುತ್ತದೆ.

*

ಲಕ್ಷ್ಮಿ ಹೂವಿನ ಕಾಸಿನ ನೆಕ್ಲೇಸ್

ಇದು ಬಹಳ ಅಪರೂಪದ ಸರ. ಇದರಲ್ಲಿ ಒಂದು ಲೈನ್ ಚಿಕ್ಕದಾದ ಅನ್‌ಕಟ್ ದಪ್ಪರೂಬಿಯನ್ನು ಹುದುಗಿಸಿ ಅಳವಡಿಸಲಾಗಿದೆ. ಇದು ಕ್ಲೋಸ್ ಸೆಟ್ಟಿಂಗ್‌ನಲ್ಲಿದೆ. ಇದರ ತುದಿಯಲ್ಲಿನ ಗುಂಡು ನಕ್ಲೇಸ್‌ಗೆ ಶೋಭೆ ತಂದಿದೆ. ಗುಂಡುಗಳಿಂದ ಆಭರಣದ ಸೌಂದರ್ಯ ಹೆಚ್ಚುತ್ತದೆ. ಅನಂತರ, ಹೂವಿನ ವಿನ್ಯಾಸ ಒಂದೇ ಲೈನ್‌ನಲ್ಲಿ ಒಂದರ ಮೇಲೆ ಒಂದು ಕುಳಿತಂತೆ ಇದ್ದಾಗ ಅದರ ನೋಟ ಅದ್ಭುತ. ಅದರ ಕೆಳಗೆ ಪುನಾ ಗುಂಡಗಿನ ರೂಬಿ ವಿನ್ಯಾಸವನ್ನು ಸರಪಳಿಯಂತೆ ಹೆಣೆದಿದ್ದು, ಇದು ಕುತ್ತಿಗೆಗೆ ಹೊಂದಿಕೊಂಡು ಕುಳಿತುಕೊಳ್ಳಲು ಸಹಕರಿಸುತ್ತದೆ. ಅಲ್ಲಿಂದ ಕೆಳಗೆ ಲಕ್ಷ್ಮಿ ಚಿತ್ರಣದ ಕಾಸು. ಇದು ಅಗ್ರಸ್ಥಾನ ಪಡೆದಿದೆ. ವಿನ್ಯಾಸಕಾರರು ಒಂದಕ್ಕೊಂದು ಹೊಂದುವಂತೆ – ಲಕ್ಷ್ಮಿ ಹೂವು, ಲಕ್ಷ್ಮಿ ಎಲೆ, ಹೀಗೆ ಸಮೃದ್ಧಿಯ ಸಂಕೇತಗಳನ್ನು ಅಳವಡಿಸಿ ಆಭರಣವನ್ನು ವಿನ್ಯಾಸಗೊಳಿಸಿದ್ದಾರೆ.

ಕಾಸಿನ ಸರದ ಸೊಂಟದಪಟ್ಟಿ ಬಹು ಸೊಗಸಾಗಿರುತ್ತದೆ. ಕಾಸಿನ ನೆಕ್ಲೇಸ್‌ನಲ್ಲಿ ಯಾವ ವಿನ್ಯಾಸದ ಕಾಸು ಇದೆಯೋ ಅದೇ ವಿನ್ಯಾಸದ ಕಿವಿಯೋಲೆಯನ್ನು ಮಾಡಿಸಬಹುದು. ಕಿವಿಹಾಲೆ ದಪ್ಪವಾಗಿದ್ದರೆ ದೊಡ್ಡ ಎರಡು ಅಥವಾ ನಾಲ್ಕು ಕಾಸನ್ನು ಹೊಂದಿದ ಓಲೆ ಧರಿಸಿ.  ಆಭರಣದ ಶೋಭೆ ಅದನ್ನು ಧರಿಸುವ ರೀತಿಯಲ್ಲಿದೆ. ಕಿವಿಯ ತೂತು ಚಿಕ್ಕದಾಗಿರುವವರು ಸಪೂರವಾದ ದಂಡೆ ಮಾಡಿಸಿಕೊಂಡರೆ – ಉತ್ತಮ ಓಲೆ ತೊಡುವ ಮೊದಲು ಹಿಂಬದಿಯ ತಿರುಗಣೆಯನ್ನು ಮೊದಲು ಕಿವಿಯ ತೂತಿನಿಂದ ಮುಂಬದಿಗೆ ಬರುವಂತೆ ಹಾಕಿ, ಅನಂತರ ಮುಂಬದಿ ಭಾಗವನ್ನು ಸಿಲುಕಿಸಿ, ನಿಧಾನವಾಗಿ ತಿರುಗಿಸಿ. ಆಗ ಮಕ್ಕಳಿಗೆ ನೋವಾಗುವುದಿಲ್ಲ!

ಕಿವಿಯಲ್ಲಿ ಕಿವಿಯೋಲೆ ಹಿತವಾಗಿರಬೇಕು. ಆಗ ತೊಡಲು ಇಷ್ಟವಾಗುತ್ತದೆ. ಆಭರಣವೂ ಅಷ್ಟೇ, ಕುತ್ತಿಗೆಗೆ ಹಿತವಾಗಿ ಕುಳಿತಿರುವಂತೆ ನೋಡಿಕೊಳ್ಳಬೇಕು. ಕುತ್ತಿಗೆಯ ಹಿಂಬದಿಗೆ ಆದಷ್ಟು ರಿಂಗ್ ಚೈನ್ ಬಳಸಿದರೆ, ಅದು ಚುಚ್ಚುವುದಿಲ್ಲ, ಹಿಂಬದಿ ಚೈನ್ ರೌಂಡ್ ಆಗಿರಬೇಕು. ಅಗಲದ್ದು ಹಾಕಿದಾಗ ಚೆನ್ನಾಗಿ ಕೂರುವುದಿಲ್ಲ.
 

**

ಖಡಾ ನೆಕ್ಲೇಸ್‌ನಲ್ಲಿ ಕಾಸು

‘ಖಡಾ ನೆಕ್ಲೇಸ್’ ಕುತ್ತಿಗೆಯಲ್ಲಿ ಅಲ್ಲಾಡದಂತೆ ನಿಲ್ಲುವ ಸರ. ಭಾರವಾದ, ಗಟ್ಟಿಯಾದ ಪಟ್ಟಿಯಂತೆ ನಿಲ್ಲುವ ಸರಕ್ಕೆ ಕಾಸನ್ನು ಕೆಳಭಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಿದಾಗ ಅದರ ಅಂದವೇ ಬೇರೆ!

ಕಾಸಿನಸರವನ್ನು ನೆಕ್ಲೇಸ್ ರೂಪದಲ್ಲಿ ಬಳಸಬಹುದು. ಸೊಂಟದ ಪಟ್ಟಿಯಾಗಿ ಬಳಸಬಹುದು. ಕಾಸಿನಲ್ಲಿ ವಿಧವಿಧ ರೂಪವಿದೆ. ತೆಳ್ಳಗೆ ಭಾರವಿಲ್ಲದ ಕಾಸು, ಕಾಸಿನ ಕೆಳಗೆ ‘ವಿ’ ಶೇಪ್ ಹೊಂದಿದ್ದು ಚೂಪಾಗಿರುವುದು, ದುಂಡಾದ, ಓವೆಲ್ ಆಕಾರದ ಕಾಸು – ಹೀಗೆ ವಿವಿಧ ಆಕಾರದಲ್ಲಿ ಲಕ್ಷ್ಮಿಯ ಚಿತ್ರಣವನ್ನು ಹೊಂದಿದ್ದು, ಅವರವರಿಗೆ ಇಷ್ಟವಾದ ರೀತಿಯಲ್ಲಿ ತೊಡಬಹುದು.

ಕಾಸಿನ ಸರದಲ್ಲೇ ಮದುಮಗಳ ಶೃಂಗಾರವೂ ಮಾಡಬಹುದು. ನೆಕ್ಲೇಸ್, ಲಾಂಗ್ ಚೈನ್ ಹೀಗೆ ಒಂದೊಂದಾಗಿ ಕುತ್ತಿಗೆಯಲ್ಲಿ ಒಂದರ ಮೇಲೊಂದು ಭಾರದಂತೆ ತೊಡಿಸಿ ಸಿಂಗರಿಸಿದಾಗ ಮದುಮಗಳು ವಿಭಿನ್ನವಾಗಿ ಶೋಭಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT