ಚುನಾವಣಾ ಸುಧಾರಣೆ ಹೇಗೆ?

ಮಿಂಚಿ ಮರೆಯಾಗುವ ಮಾಯಾಮೃಗ!

ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ನಡೆದ ಉಪ ಚುನಾವಣೆಗಳಲ್ಲಿ ಹಣದ ಹೊಳೆ ಹರಿದ ಆರೋಪಗಳು ಕೇಳಿಬಂದಿವೆ. ಈ ಹೊತ್ತಿನಲ್ಲಿ, ಚುನಾವಣಾ ಸುಧಾರಣೆಗೆ ಕಾಲ ಪಕ್ವವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಅಗತ್ಯವಾದ ಸುಧಾರಣೆಗಳ ಒಳ – ಹೊರಗುಗಳ ಪರಾಮರ್ಶೆ...

ಮಿಂಚಿ ಮರೆಯಾಗುವ ಮಾಯಾಮೃಗ!

ಚುನಾವಣಾ ಸುಧಾರಣೆ ವಿಷಯವೆಂಬುದು ಕಾಲಕಾಲಕ್ಕೆ ಮಿಂಚಿ ಮರೆಯಾಗುವ ಮಾಯಾಮೃಗ. ರಾಜಕೀಯ ಪಕ್ಷಗಳು ಈ ವಿಷಯವನ್ನು ಹರದಾರಿ ದೂರದಲ್ಲೇ ಇರಿಸಿವೆ. ವೇದಿಕೆ ಮೇಲೆ ಮಾತನಾಡುವಾಗ ಚುನಾವಣೆ ವ್ಯವಸ್ಥೆ ಸುಧಾರಣೆ ಎಲ್ಲರಿಗೂ ಬೇಕು. ವೇದಿಕೆ ಇಳಿದ ನಂತರ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ’ ದಿಟ್ಟ ಇಚ್ಛಾಶಕ್ತಿ ಮಟಾಮಾಯ ಆಗಿಬಿಡುತ್ತದೆ.

ಜನತಂತ್ರ ವ್ಯವಸ್ಥೆಯ ತಳಪಾಯವೆನಿಸಿದ ಚುನಾವಣಾ ವ್ಯವಸ್ಥೆಯಲ್ಲಿ ತುರ್ತಾಗಿ ಆಗಬೇಕಿರುವ ಸುಧಾರಣೆಗಳ ಕುರಿತು ಏರಿದ ದನಿಗಳ ಆಗ್ರಹ ಕಾಲಕಾಲಕ್ಕೆ ಕೇಳಿಬರುವುದು ವಾಡಿಕೆ ಆಗಿ ಹೋಗಿದೆ. ಇತ್ತೀಚೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್, ನ್ಯಾಯಮೂರ್ತಿ ದೀಪಕ್ ಮಿಶ್ರ ಮೊದಲಾದ ಮಾನ್ಯರು ಹೆಚ್ಚುಕಡಿಮೆ ಒಟ್ಟಿಗೆ ಕೊರಳೆತ್ತಿದ್ದಾರೆ. ಸಂಸತ್ತಿನ ಮೇಲ್ಮನೆಯಂತೂ ಐದಾರು ತಾಸುಗಳ ಅರ್ಥಪೂರ್ಣ ಚರ್ಚೆ ನಡೆಸಿತು.

ಆಳುವ ಪಕ್ಷದ ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ಪ್ರತಿಪಕ್ಷಗಳ ತಲೆಯಾಳುಗಳಾದ ಶರದ್ ಯಾದವ್, ಸೀತಾರಾಮ ಯೆಚೂರಿ, ಗುಲಾಂ ನಬಿ ಆಜಾದ್, ಡಿ.ರಾಜಾ, ಟಿ.ಕೆ.ಎಸ್. ಇಳಂಗೋವನ್, ಸತೀಶ್ ಮಿಶ್ರಾ, ರಜನಿ ಪಾಟೀಲ್ ಸುಧಾರಣೆಗಳ ಅಗತ್ಯಕ್ಕೆ ದನಿಯಾದರು.ಚಲಾಯಿಸಿದ ಬಹುತೇಕ ಮತಗಳು ಬಿಜೆಪಿಗೇ ಬೀಳುವಂತೆ ವಿದ್ಯುನ್ಮಾನ ಮತದಾನ ಯಂತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ತಿದ್ದಿ ತಿರುಚಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಿದು. ಇತರೆ ತುರ್ತು ಸುಧಾರಣೆಗಳ ಕುರಿತು ತೀವ್ರ ಕಾಳಜಿ, ಕಳವಳಗಳು ಪ್ರಕಟವಾದವು. ತನ್ನ ಮತ ತಾನು ನೀಡಿದ ಪಕ್ಷಕ್ಕೇ ಬಿದ್ದಿದೆ ಎಂದು ಮತದಾರನಿಗೆ ಖಾತರಿ ಒದಗಿಸುವ ರಸೀದಿ ವ್ಯವಸ್ಥೆ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್) ಆಗಲೇಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ 2013ರಲ್ಲಿ ನೀಡಿದ್ದ ತೀರ್ಪಿನ ಜಾರಿ ಇನ್ನೂ ಯಾಕೆ ಆಗಿಲ್ಲವೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಕೇವಲ ಕಾಗದ ರಸೀದಿಯಿಂದ ಮಾತ್ರವೇ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಲ್ಲಿ ಮತದಾರರ ವಿಶ್ವಾಸ ದೃಢವಾಗಬಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಯಾವ ಪಕ್ಷಕ್ಕೆ ವೋಟು ನೀಡಿದೆನೆಂಬ ರಸೀದಿ ಆಗಿಂದಾಗಲೇ ಮತದಾರನಿಗೆ ಸಿಗಬೇಕು. ಮುಂಬರುವ ಗುಜರಾತ್ ಮತ್ತು ಹಿಮಾಚಲ ಚುನಾವಣೆಗಳಲ್ಲಾದರೂ ರಸೀದಿ ವ್ಯವಸ್ಥೆಯ ಸಲಕರಣೆಗಳನ್ನು ಮತದಾನ ಯಂತ್ರಗಳಿಗೆ ಜೋಡಿಸಲೇಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹ. ರಸೀದಿ ಸಲಕರಣೆಗಳ ಅಳವಡಿಕೆಗೆ ಬೇಕಿರುವ 3,100 ಕೋಟಿ ರೂಪಾಯಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಬೇಕೆಂದೂ ನ್ಯಾಯಾಲಯ ಆದೇಶಿಸಿತ್ತು.

ಈ ಸಂಬಂಧ ಆಯೋಗವು ಕೇಂದ್ರ ಸರ್ಕಾರಕ್ಕೆ 10 ನೆನಪೋಲೆಗಳನ್ನು ಬರೆದಿದೆ. ಪ್ರಧಾನಿಯವರಿಗೆ ತುರ್ತು ಸಂದೇಶ ಕಳಿಸಿದರೂ ಪ್ರಯೋಜನ ಆಗಿಲ್ಲ. ತೀರ್ಪಿನ ನಂತರ ಮೂರೂವರೆ ವರ್ಷಗಳಲ್ಲಿ ಲಭ್ಯವಾಗಿರುವ ಸಲಕರಣೆಗಳ ಸಂಖ್ಯೆ 30 ಸಾವಿರವನ್ನೂ ದಾಟಿಲ್ಲ. 16 ಲಕ್ಷ ಮತದಾನ ಯಂತ್ರಗಳಿಗೆ ಸಲಕರಣೆಗಳ ಅಳವಡಿಕೆ ಯಾವ ಕಾಲಕ್ಕೆ ಮುಗಿಯಬೇಕು ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಖಚಿತ ಉತ್ತರವಿಲ್ಲ.

2015ರಲ್ಲಿ 57 ಸಾವಿರ ರಸೀದಿ ಸಲಕರಣೆಗಳಿಗೆ ಆರ್ಡರ್ ಮಾಡಲಾಯಿತು. ಆದರೆ ಈವರೆಗೆ 33 ಸಾವಿರ ಮಾತ್ರ ತಯಾರಾಗಿವೆ. ಈ ಸಲಕರಣೆಗಳನ್ನು ಭದ್ರತೆ ಮತ್ತು ಗೋಪ್ಯತೆಯ ಕಾರಣ ಸಾರ್ವಜನಿಕ ಉದ್ದಿಮೆಗಳಿಂದ ಮಾತ್ರವೇ ತಯಾರು ಮಾಡಿಸಲಾಗುತ್ತದೆ. ಹೀಗೆ ತಯಾರು ಮಾಡುವ ಉದ್ದಿಮೆಗಳ ಸಂಖ್ಯೆ ಕೇವಲ ನಾಲ್ಕು ಎಂಬುದು ಸರ್ಕಾರದ ಸಮಜಾಯಿಷಿ.

ವಿಷದಂತೆ ಏರತೊಡಗಿರುವ ಚುನಾವಣೆ ವೆಚ್ಚವು ಹಣದ ಥೈಲಿಗಳ ಧಣಿಗಳು ಮಾತ್ರವೇ ಶಾಸನಸಭೆಗಳಿಗೆ ಆರಿಸಿಬರುವ ವಿಕಟ ಸನ್ನಿವೇಶ ಸೃಷ್ಟಿಸಿದೆ. ಮೊನ್ನೆ ಜರುಗಿದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 75 ಹೆಲಿಕಾಪ್ಟರುಗಳು, 10 ಖಾಸಗಿ ವಿಮಾನಗಳು, ಪ್ರತಿ ಪೇಟೆ ಪಟ್ಟಣದಲ್ಲಿ ತಲಾ 400 ಮೋಟಾರ್ ಸೈಕಲ್‌ಗಳು, 403 ಕ್ಷೇತ್ರಗಳಲ್ಲಿ 403 ರಥಗಳನ್ನು ಪ್ರಬಲ ಪಕ್ಷವೊಂದು ಬಳಸಿತು. ಇವುಗಳ ಜೊತೆ ಬೆಳಗಿನಿಂದ ಬೈಗಿನವರೆಗೆ ಸಮೂಹ ಮಾಧ್ಯಮಗಳೂ ಹೆಜ್ಜೆ ಹಾಕಿದ್ದವು. ಸಂಜೆಯಾಗುತ್ತಿದ್ದಂತೆ ಟಿ.ವಿ ಚಾನೆಲ್‌ಗಳಲ್ಲಿ ನಡೆಯುತ್ತಿದ್ದ ಅನುದಿನದ ಚರ್ಚೆಗಳಲ್ಲಿ ಒಂದೇ ಪಕ್ಷದ ಸಮರ್ಥನೆ. ರಾಜಕೀಯ ಪಕ್ಷಗಳ ನಡುವೆ ಸಮಾನ ಸ್ಪರ್ಧೆಯ ಕಣ ಏರ್ಪಡಲೇ ಇಲ್ಲ. ಇಂತಹ ಅಸಮಾನ ಸ್ಪರ್ಧೆಯಲ್ಲಿ ಮೀಡಿಯಾ ಕೂಡ ಬಲಾಢ್ಯ ಪಕ್ಷದೊಂದಿಗೆ ನಿಂತಿತ್ತು ಎಂಬ ದೂರು ಕೇಳಿಬಂತು.

ಚುನಾವಣಾ ವೆಚ್ಚ ಕುರಿತು ಪಾರದರ್ಶಕತೆ ಇಲ್ಲ. ಅಭ್ಯರ್ಥಿಗೆ ವೆಚ್ಚದ ಮಿತಿ ಹೇರಿ ಪಕ್ಷಕ್ಕೆ ಮೂಗುದಾರ ತೊಡಿಸದೆ ಹೋದರೆ ಅದೊಂದು ದೊಡ್ಡ ವಿಡಂಬನೆ. ದೊಡ್ಡ ಪಕ್ಷವು 70- 80 ಹೆಲಿಕಾಪ್ಟರುಗಳು, 10 ಪುಟ್ಟ ವಿಮಾನಗಳನ್ನು ಬಳಸುವುದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರ್‍ಯಾಲಿಗಳನ್ನು ನಡೆಸುವುದಕ್ಕೆ ಮಿತಿಯೇ ಇಲ್ಲ. ಈ ದೈತ್ಯ ಪಕ್ಷಗಳನ್ನು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳು ಎದುರಿಸುವ ಬಗೆ ಎಂತು? ಎಷ್ಟು ರ್‍ಯಾಲಿ, ಎಷ್ಟು ಹೆಲಿಕಾಪ್ಟರು-ವಿಮಾನ, ಎಷ್ಟು ವೆಚ್ಚ ಎಂಬ ವಿವರಗಳ ಲೆಕ್ಕವನ್ನು ಚುನಾವಣೆ ನಂತರ ಪ್ರತಿ ಪಕ್ಷವೂ ಸಂಸತ್ತಿನ ಮುಂದೆ ಮಂಡಿಸಬೇಕು. ಪಕ್ಷ ಮಾಡುವ ವೆಚ್ಚವನ್ನು ಉಮೇದುವಾರನ ಲೆಕ್ಕಕ್ಕೆ ಎಲ್ಲಿಯವರೆಗೆ ಸೇರಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಹೆಲಿಕಾಪ್ಟರ್, ವಿಮಾನಗಳು ಹೀಗೆಯೇ ಹಾರುತ್ತಿರುತ್ತವೆ. ಚುನಾವಣಾ ವೆಚ್ಚ ತಗ್ಗುವುದೇ ಇಲ್ಲ. ಪಕ್ಷ ಮಾಡುವ ವೆಚ್ಚಕ್ಕೆ ಮಿತಿಯೇ ಇಲ್ಲ. ಎಲ್ಲ ವೆಚ್ಚವನ್ನೂ ಉಮೇದುವಾರರು ಪಕ್ಷದ ಲೆಕ್ಕಕ್ಕೆ ಹಾಕಿ ಹಾಯಾಗಿರುವರೆಂಬುದು ಸಣ್ಣ ಪಕ್ಷಗಳ ದುಮ್ಮಾನ.

ಚುನಾವಣೆ ವೆಚ್ಚವನ್ನು ಸರ್ಕಾರ ಭರಿಸಬೇಕೇ ಬೇಡವೇ ಎಂಬ ಕುರಿತು ಕಾಲಕಾಲಕ್ಕೆ ನಾನಾ ಸಮಿತಿಗಳು ವರದಿ ನೀಡಿವೆ. ವೆಚ್ಚವನ್ನು ಸರ್ಕಾರವೇ ಭರಿಸುವ ಕಾಲ ಇನ್ನೂ ಸನ್ನಿಹಿತ ಆಗಿಲ್ಲ ಎಂಬುದು ಬಹುತೇಕ ವರದಿಗಳ ನಿಚ್ಚಳ ನಿಲುವು.

ರಾಜಕೀಯ ಪಕ್ಷಗಳು ತಮ್ಮ ಆಚಾರ ವ್ಯವಹಾರಗಳನ್ನು ಪಾರದರ್ಶಕವೂ ಪ್ರಾಮಾಣಿಕವೂ ಆಗಿಸುವ ತನಕ ಚುನಾವಣಾ ವೆಚ್ಚವನ್ನು ಭರಿಸುವ ಗೊಡವೆಗೆ ಸರ್ಕಾರ ಹೋಗಕೂಡದು ಎಂದು ಈ ಸಮಿತಿಗಳು ಶಿಫಾರಸು ಮಾಡಿವೆ.

ಭಾರತ ಕಾನೂನು ಆಯೋಗದ ವರದಿಗಳಂತೂ, ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯು ಈ ವೆಚ್ಚದ ಪೂರ್ಣ ಭಾರವನ್ನು ಹೊರುವಷ್ಟು ಶಕ್ತವಾಗಿಲ್ಲ ಎಂದಿವೆ. ಚುನಾವಣಾ ಪ್ರಚಾರ ಮತ್ತು ರಾಜಕೀಯ ಹಣಕಾಸು ವ್ಯವಸ್ಥೆಯಲ್ಲಿ ತೀವ್ರತರದ ಸುಧಾರಣೆಗಳು ಆಗುವ ತನಕ ಈ ವೆಚ್ಚವನ್ನು ಸರ್ಕಾರ ಭರಿಸಕೂಡದು ಎಂಬುದು ಚುನಾವಣಾ ಆಯೋಗದ ಸ್ಪಷ್ಟ ಅಭಿಪ್ರಾಯ. ರಾಜಕೀಯ ಪಕ್ಷಗಳ ಹಣಕಾಸು ಮತ್ತು ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ಕುರಿತು ದಿನೇಶ್ ಗೋಸ್ವಾಮಿ, ಇಂದ್ರಜಿತ್ ಗುಪ್ತ ಸಮಿತಿಗಳು ಹಾಗೂ ಕಾನೂನು ಆಯೋಗಗಳು ವರದಿ ನೀಡಿವೆ.

ರಾಜಕೀಯ ಪಕ್ಷಗಳು ತಮ್ಮ ಆಚಾರ ವ್ಯವಹಾರಗಳನ್ನು ಪಾರದರ್ಶಕವೂ ಪ್ರಾಮಾಣಿಕವೂ ಆಗಿಸುವ ತನಕ ಚುನಾವಣಾ ವೆಚ್ಚವನ್ನು ಭರಿಸುವ ಗೊಡವೆಗೆ ಸರ್ಕಾರ ಹೋಗಕೂಡದು ಎಂಬುದು ಈ ಸಮಿತಿಗಳ ಸ್ಥೂಲ ಶಿಫಾರಸು. ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯು ಈ ವೆಚ್ಚದ ಪೂರ್ಣ ಭಾರವನ್ನು ಹೊರುವಷ್ಟು ಶಕ್ತವಾಗಿಲ್ಲ ಎಂದು ಕಾನೂನು ಆಯೋಗಗಳು ಹೇಳಿವೆ. ಚುನಾವಣಾ ಪ್ರಚಾರ ಮತ್ತು ರಾಜಕೀಯ ಹಣಕಾಸು ವ್ಯವಸ್ಥೆಯಲ್ಲಿ ತೀವ್ರತರದ ಸುಧಾರಣೆಗಳು ಆಗುವ ತನಕ ಈ ವೆಚ್ಚವನ್ನು ಸರ್ಕಾರ ಭರಿಸಕೂಡದು ಎಂಬುದು ಚುನಾವಣಾ ಆಯೋಗದ ಸ್ಪಷ್ಟ ಅಭಿಪ್ರಾಯ.

ಧನಬಲದ ಪಾತ್ರವನ್ನು ನಿಜವಾಗಿಯೂ ಮಟ್ಟ ಹಾಕಬೇಕೆಂದಿದ್ದರೆ ಹುರಿಯಾಳುಗಳ ವೆಚ್ಚದ ಜೊತೆ ಜೊತೆಗೆ ರಾಜಕೀಯ ಪಕ್ಷಗಳ ವೆಚ್ಚಕ್ಕೆ ಮೂಗುದಾರ ತೊಡಿಸಬೇಕು. ಕಾರ್ಪೊರೇಟ್ ದೇಣಿಗೆಗಳು ನೇರವಾಗಿ ರಾಜಕೀಯ ಪಕ್ಷಗಳಿಗೆ ದೊರೆಯದಂತೆ ನಿಷೇಧ ಅಗತ್ಯ. ರಾಜ್ಯನಿಧಿಗೆ ಸಂದಾಯ ಆಗುವ ಈ ದೇಣಿಗೆಗಳನ್ನು ಚುನಾವಣಾ ಆಯೋಗ ಅಥವಾ ಇನ್ಯಾವುದೇ ಏಜೆನ್ಸಿ ನಿರ್ವಹಿಸಲಿ. ಇಂದ್ರಜಿತ್ ಗುಪ್ತ ಸಮಿತಿಯ ಶಿಫಾರಸಿನಂತೆ ಸರ್ಕಾರವೇ ಚುನಾವಣಾ ವೆಚ್ಚ ಭರಿಸಲಿ. ಮಾನ್ಯತೆ ಪಡೆದ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ನಗದು ನೀಡದೆ ವಾಹನಗಳು, ಚಾಲಕರು, ಪೆಟ್ರೋಲ್, ಡೀಸೆಲ್, ಭಿತ್ತಿಪತ್ರಗಳನ್ನು ಒದಗಿಸಲಿ. ಆಯಾ ಪಕ್ಷಗಳು ಹಿಂದಿನ ಚುನಾವಣೆಗಳಲ್ಲಿ ಗಳಿಸಿದ ಮತಗಳ ಸಂಖ್ಯೆ ಸಾಧನೆಯ ಮಾನದಂಡವಾಗಲಿ.

ಈ ಪಟ್ಟಿಗೆ ಹೆಲಿಕಾಪ್ಟರುಗಳು, ಪುಟ್ಟ ವಿಮಾನಗಳೂ ಸೇರಲಿ. ‘ಕಾಸಿಗಾಗಿ ಸುದ್ದಿ’ಯನ್ನು ಜಾಹೀರಾತೆಂದು ಪರಿಗಣಿಸಿ ಅದರ ಖರ್ಚನ್ನು ರಾಜಕೀಯ ಪಕ್ಷ ಇಲ್ಲವೇ ಅಭ್ಯರ್ಥಿಯ ಲೆಕ್ಕಕ್ಕೆ ಹಾಕಬೇಕು. ಒಂದೇ ಒಡೆತನದಲ್ಲಿ ವೃತ್ತಪತ್ರಿಕೆ, ಟಿ.ವಿ ಚಾನೆಲ್ ಹಾಗೂ ಅಂತರ್ಜಾಲ ತಾಣಗಳನ್ನು ನಡೆಸುವ ಪ್ರವೃತ್ತಿಯನ್ನು ನಿಷೇಧಿಸಬೇಕು. ಜಗತ್ತಿನ ಯಾವ ದೊಡ್ಡ ಜನತಂತ್ರ ವ್ಯವಸ್ಥೆಯಲ್ಲೂ ಇಂತಹ ಮಾಲೀಕತ್ವಕ್ಕೆ ಅವಕಾಶ ಇಲ್ಲ. ಒಂದು ಮಾಲೀಕತ್ವಕ್ಕೆ ಒಂದೇ ಮಾಧ್ಯಮ ಎಂಬ ನೀತಿಯಿಂದ ನಿರ್ದಿಷ್ಟ ಮಾಧ್ಯಮ ಸಮೂಹ ಒಂದು ಪಕ್ಷದ ಪರವಾಗಿ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಪ್ರಚಾರ ನಡೆಸುವ ಅನಾರೋಗ್ಯಕರ ಚಾಳಿಯನ್ನು ನಿಯಂತ್ರಿಸಬಹುದು. ಖಾಸಗಿ ಸುದ್ದಿ ವಾಹಿನಿಗಳಲ್ಲಿ ಎಲ್ಲ ಪಕ್ಷಗಳಿಗೂ ಕಾಲಾವಕಾಶ ಸಿಗಬೇಕು. ಪ್ರಧಾನಿಯವರ ಭಾಷಣಗಳ ಸರಣಿ ನೇರ ಪ್ರಸಾರ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ಅಳಿಸಿ ಹಾಕತೊಡಗಿದೆ.

ಬಹುಮತದ ಆಡಳಿತವೇ ಜನತಂತ್ರದ ತಿರುಳು. ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ಹಿಡಿದ ಪಕ್ಷಗಳ ಮತಗಳಿಕೆ ಶೇ 50ರ ಪ್ರಮಾಣವನ್ನು ಒಮ್ಮೆಯೂ ಮೀರಿಲ್ಲ. ಇಂದಿರಾ ಗಾಂಧಿ ಹತ್ಯೆಯ ಅನುಕಂಪದ ಅಲೆಯಲ್ಲಿ ಅವರ ಮಗ ರಾಜೀವ್‌ ಗಾಂಧಿ ಅವರಿಗೆ 405 ಸೀಟುಗಳು ಸಿಕ್ಕಾಗ ಕಾಂಗ್ರೆಸ್ ಗಳಿಸಿದ್ದ ಶೇ 48ರ ಪ್ರಮಾಣವೇ ಅತಿ ಹೆಚ್ಚಿನದು. ಚಲಾಯಿಸಿದ ಮತಗಳ ಪೈಕಿ ಶೇ 50ರಷ್ಟನ್ನಾದರೂ ಗಳಿಸುವ ಪಕ್ಷ ಅಧಿಕಾರಕ್ಕೆ ಬರಬೇಕು. ಅರ್ಧದಷ್ಟೂ ಮತಗಳನ್ನು ಗಳಿಸದೆ ಅಧಿಕಾರ ನಡೆಸುವ ವಿಕೃತಿಯನ್ನು ತಿದ್ದಲು ಪ್ರಮಾಣಾನುಸಾರ ಪ್ರಾತಿನಿಧ್ಯದ ಹೊಸ ವ್ಯವಸ್ಥೆ ಜಾರಿಗೆ ಬರಬೇಕು. ರಾಜಕೀಯ ಪಕ್ಷವೊಂದು ಶಾಸನಸಭೆಗಳಲ್ಲಿ ಪಡೆಯುವ ಸೀಟುಗಳ ಸಂಖ್ಯೆ ಆ ಪಕ್ಷವು ಗಳಿಸುವ ಒಟ್ಟು ಮತಗಳನ್ನು ಆಧರಿಸಬೇಕು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾವವನ್ನು ಪ್ರಧಾನಿ ಅತ್ಯುತ್ಸಾಹದಿಂದ ದೇಶದ ಮುಂದಿರಿಸಿದ್ದಾರೆ. 1952, 1957 ಹಾಗೂ 1962ರಲ್ಲಿ ಈ ಚುನಾವಣೆಗಳು ಏಕಕಾಲಕ್ಕೆ ಜರುಗಿದ್ದವು. ಸಂವಿಧಾನದ 356ನೆಯ ಕಲಮು ಬಳಸಿ ಕೇರಳದ ವಾಮರಂಗದ ಸರ್ಕಾರವನ್ನು ವಜಾ ಮಾಡಿದ ನಂತರ ಈ ಎರಡೂ ಚುನಾವಣೆಗಳು ಪ್ರತ್ಯೇಕಗೊಂಡವು.

ಸದಾಕಾಲ ಒಂದಲ್ಲ ಒಂದು ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯುತ್ತಲೇ ಇದ್ದರೆ ಅಭಿವೃದ್ಧಿ ಕಾರ್ಯಗಳು ಸೊರಗುತ್ತವೆ. ಚುನಾವಣೆ ರಾಜಕಾರಣದಲ್ಲೇ ಸಮಯ, ಶಕ್ತಿ ಪೋಲಾಗುತ್ತಿರುವುದನ್ನು ತಡೆಯಬೇಕು ಎಂಬುದು ಪ್ರಧಾನಿಯವರ ವಾದ.

ಏಕಕಾಲಕ್ಕೆ ಚುನಾವಣೆ ನಡೆಸುವುದು ಸಂಸದೀಯ ಮಾದರಿಯನ್ನು ಬದಿಗಿರಿಸಿ ಅಮೆರಿಕದ ಅಧ್ಯಕ್ಷೀಯ ಮಾದರಿಗೆ ಮಣೆ ಹಾಕುವುದಲ್ಲದೆ ಮತ್ತೇನೂ ಅಲ್ಲ. ಬಹುಮುಖಿ ಸಂಸ್ಕೃತಿಯ ನಮ್ಮಂತಹ ದೇಶಕ್ಕೆ ಸಂಸದೀಯ ಜನತಂತ್ರವೇ ಸರಿ ಎಂಬ ಮಾತನ್ನು ಡಾ. ಅಂಬೇಡ್ಕರ್ ಹೇಳಿದ್ದರು. ಎರಡು ಪಕ್ಷಗಳ ವ್ಯವಸ್ಥೆಗಷ್ಟೇ ಸರಿ ಹೊಂದುವ ಅಧ್ಯಕ್ಷೀಯ ಮಾದರಿಯ ಜನತಂತ್ರವನ್ನು ಹಿತ್ತಿಲ ಬಾಗಿಲಿನಿಂದ ತರುವ ಪ್ರಯತ್ನ ನಡೆದಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಇರಾದೆ ಇದ್ದರೆ ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಅವಕಾಶವಿರುವ ಸಂವಿಧಾನದಿಂದ 356ನೆಯ ಕಲಮನ್ನು ರದ್ದು ಮಾಡಬೇಕು, ಅದಕ್ಕೆ ಸಿದ್ಧರಿದ್ದೀರಾ ಎಂಬುದು ಪ್ರತಿಪಕ್ಷಗಳ ಸವಾಲು.

ಅಧಿಕಾರಕ್ಕಾಗಿ ತಾವು ಆರಿಸಿ ಬಂದ ಪಕ್ಷ ತೊರೆದು ಆಳುವ ಪಕ್ಷ ಸೇರುವ ಪಕ್ಷಾಂತರಿಗಳ ಮೇಲೆ ಯಾವುದೇ ಹತೋಟಿ ಇಲ್ಲ. ಒಂದು ಪಕ್ಷದಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿ ಆ ಪಕ್ಷ ತೊರೆದ ಕ್ಷಣವೇ ಆತನ ಸದಸ್ಯತ್ವವೂ ರದ್ದಾಗುವಂತೆ ಹತ್ತನೆಯ ಷೆಡ್ಯೂಲಿಗೆ ತಿದ್ದುಪಡಿ ತರಬೇಕು. ಇಂತಹ ಪಕ್ಷಾಂತರಿಗಳ ವಿರುದ್ಧ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳ ವಿಚಾರಣೆ ಮುಂದಿನ ಚುನಾವಣೆ ಬರುವ ತನಕ ನಾಲ್ಕೈದು ವರ್ಷಗಳ ಕಾಲ ಲಂಬಿಸುವ ವಿಪರ್ಯಾಸವಿದೆ. ಪಕ್ಷಾಂತರದ ಫಲವನ್ನು ಪೂರ್ಣವಾಗಿ ಸವಿದ ನಂತರ ತೀರ್ಪು ಬಂದರೆ ಪ್ರಯೋಜನವೇನು ಎಂಬ ಪ್ರಶ್ನೆಗಳಲ್ಲಿ ಹುರುಳಿದೆ.

ಚುನಾವಣೆಗಳು ಹಣ ಬಿತ್ತಿ ಹಣ ಬೆಳೆವ ದಂಧೆಯಾಗಿವೆ. ನೋಟು ಕೊಟ್ಟು ವೋಟು, ಅಧಿಕಾರ ಖರೀದಿಸುವ ಸಾಧನವಾಗಿ ಪರಿಣಮಿಸಿವೆ. ಚುನಾವಣಾ ಪ್ರಣಾಳಿಕೆಗಳು ಮತದಾರನಿಗೆ ಪ್ರಲೋಭನೆ ಒಡ್ಡುವ ರಾಜಕೀಯ ಪಕ್ಷಗಳ ಅಧಿಕೃತ ದಸ್ತಾವೇಜುಗಳಾಗಿಬಿಟ್ಟಿವೆ. ಸಂವಿಧಾನದ ಆಶಯಗಳು, ಸಾಮಾಜಿಕ ನ್ಯಾಯದ ಗೊತ್ತುಗುರಿಗಳಿಗೆ ಈ ಪ್ರಣಾಳಿಕೆಗಳಲ್ಲಿ ಕಡೆಯ ಸ್ಥಾನ. ಬಹುತೇಕ ಭರವಸೆಗಳನ್ನು ಕಾಗದದಲ್ಲೇ ಉಳಿಸುವ ಪ್ರವೃತ್ತಿಯನ್ನು ಪ್ರಶ್ನಿಸುವವರಿಲ್ಲ. ಗೆಲ್ಲುವುದೊಂದೇ ಗುರಿ ಎಂದು ಬಹಿರಂಗವಾಗಿ ಘೋಷಿಸುತ್ತಿರುವ ರಾಜಕೀಯ ಪಕ್ಷಗಳು ಪಾತಕಿಗಳನ್ನು ಕಣಕ್ಕಿಳಿಸಲು ಹಿಂದೆ ಮುಂದೆ ನೋಡುತ್ತಿಲ್ಲ.

ಧರ್ಮ ಮತ್ತು ಜಾತಿ ಆಧಾರಿತ ಮತಯಾಚನೆಗೆ ಅಂಕುಶ ಬೀಳುವ ಸೂಚನೆ ದೂರದಲ್ಲೂ ಕಾಣುತ್ತಿಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ರಾಜಕಾರಣದಲ್ಲಿ ಮೂರನೆಯ ಒಂದರಷ್ಟು ಮೀಸಲು ಪಾಲು ನೀಡುವ ಇಚ್ಛಾಶಕ್ತಿ ದೂರವೇ ಉಳಿದಿದೆ. ಕೇವಲ 543 ಪ್ರತಿನಿಧಿಗಳು 80 ಕೋಟಿ ಮತದಾರರನ್ನು ಪ್ರತಿನಿಧಿಸುವ ವಿಪರ್ಯಾಸವು ಕ್ಷೇತ್ರ ಮರುವಿಂಗಡಣೆಯ ತುರ್ತಿಗೆ ಕಂದೀಲು ಹಿಡಿದಿದೆ.

ನೈತಿಕ ಹಕ್ಕೆಲ್ಲಿದೆ?!
2014ರಲ್ಲಿ ಬಹುಜನ ಸಮಾಜ ಪಕ್ಷಕ್ಕೆ ದೇಶದಾದ್ಯಂತ ದೊರೆತ ಮತಗಳ ಸಂಖ್ಯೆ 2.62 ಕೋಟಿಗಿಂತ ಹೆಚ್ಚು. ದೇಶದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಪಕ್ಷಗಳ ಪೈಕಿ ಅದು ಮೂರನೆಯ ಸ್ಥಾನದಲ್ಲಿತ್ತು. ಆದರೆ ಲೋಕಸಭೆಯಲ್ಲಿ ಒಂದು ಸೀಟಿನ ಪ್ರಾತಿನಿಧ್ಯವೂ ದಕ್ಕಲಿಲ್ಲ. ಬಿಜೆಪಿಯ ಹಿರಿಯ ನಾಯಕರೊಬ್ಬರು ಬಿಎಸ್‌ಪಿಯನ್ನು ‘ಒಂದು ಸೀಟೂ ಗೆದ್ದಿಲ್ಲ ನಿಮಗೆ ಮಾತಾಡುವ ನೈತಿಕ ಹಕ್ಕೆಲ್ಲಿದೆ’ ಎಂದು ಕೇಳಿದ್ದುಂಟು.

ಪ್ರಮಾಣಾನುಸಾರ ಪ್ರಾತಿನಿಧ್ಯ
ತಮಿಳುನಾಡಿನ ಈಚಿನ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಹಿಡಿದ ಎಐಎಡಿಎಂಕೆಗೆ 1.78 ಕೋಟಿ ಮತಗಳೂ, ಸೋತು ಪ್ರತಿಪಕ್ಷದ ಸಾಲಿನಲ್ಲಿ ಕುಳಿತ ಡಿಎಂಕೆಗೆ 1.73 ಕೋಟಿ ಮತಗಳೂ ದೊರೆತಿದ್ದವು. ಸೋಲು ಗೆಲುವಿನ ನಡುವಣ ಮತಗಳ ಸಂಖ್ಯೆಯ ಅಂತರ ಕೇವಲ ಐದು ಲಕ್ಷ. ಕೇವಲ ಶೇ 1ರಷ್ಟು ಪ್ರಮಾಣದ ಅಂತರದಲ್ಲಿ ಎಐಎಡಿಎಂಕೆಯು ತನ್ನ ಎದುರಾಳಿಗಿಂತ 36 ಹೆಚ್ಚುವರಿ ಸೀಟುಗಳನ್ನು ಗೆದ್ದಿತ್ತು. ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿ ಅಳವಡಿಕೆಯಿಂದ ಇಂತಹ ಗಂಭೀರ ಲೋಪವನ್ನು ಸರಿಪಡಿಸಬಹುದಲ್ಲದೆ ರಾಜಕೀಯ ಪಕ್ಷಗಳ ಆಂತರಿಕ ಜನತಂತ್ರ ಕಾಯುವುದರ ಜೊತೆಗೆ ಚುನಾವಣಾ ಭ್ರಷ್ಟಾಚಾರ, ಹಿಂಸಾಚಾರ ನಿಯಂತ್ರಣವೂ ಸಾಧ್ಯ. ಎರಡು ದಶಕಗಳಿಂದ ಕೇವಲ ಚರ್ಚೆಗೆ ಸೀಮಿತವಾಗಿರುವ ಮಹಿಳಾ ಮೀಸಲು ತಂತಾನೇ ಜಾರಿಯಾಗುವುದು. ಹಣಬಲ ತೋಳ್ಬಲ, ಜಾತಿ, ಕೋಮು ಆಧಾರದ ಮತಯಾಚನೆಗೆ ಕಡಿವಾಣ ಬೀಳುವುದೆಂಬ ವಾದವಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

ಹಿಂಬಾಲಿಸುವಿಕೆ
ಐಪಿಸಿ ‘354ಡಿ’ ಅಡಿ ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ

12 Aug, 2017

ಮೇಷ್ಟ್ರು
ಆನಂದಲಹರಿ

ಬೆಳಗಿನ ಹೊತ್ತು ಸೂರ್ಯನ ಬೆಳಕಿರುತ್ತದೆ.  ರಾತ್ರಿಯಲ್ಲಿ ಚಂದ್ರನ ಬೆಳಕಿರುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವ ವಿದ್ಯಮಾನ. ಆದರೆ ಇದು ಸತ್ಯವಲ್ಲ; ಬೆಳಗಿನ ಬೆಳಕಿಗೂ ರಾತ್ರಿಯ...

5 Aug, 2017
ಪ್ಲೇಟೋನ ಗುಹೆ

ಪಶ್ಚಿಮದಿಂದ...
ಪ್ಲೇಟೋನ ಗುಹೆ

5 Aug, 2017
ಶೋಷಿತರು ಎಚ್ಚೆತ್ತುಕೊಳ್ಳಬೇಕು

ಅಂತರಾಳ
ಶೋಷಿತರು ಎಚ್ಚೆತ್ತುಕೊಳ್ಳಬೇಕು

29 Jul, 2017
ಬದಲಾವಣೆ ಒಳಗಿನಿಂದಲೇ ಬರಬೇಕು

ಅಂತರಾಳ
ಬದಲಾವಣೆ ಒಳಗಿನಿಂದಲೇ ಬರಬೇಕು

29 Jul, 2017