ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು- ಸಕಾರಾತ್ಮಕ ಹೆಜ್ಜೆ

Last Updated 14 ಏಪ್ರಿಲ್ 2017, 19:29 IST
ಅಕ್ಷರ ಗಾತ್ರ

– ವೈ.ಜಿ. ಮುರಳೀಧರನ್
ಕೇಂದ್ರ ಸರ್ಕಾರ, ಮಾಹಿತಿ ಹಕ್ಕು ಅಧಿನಿಯಮಕ್ಕೆ ಸೇರಿಸಲು ಇಚ್ಛಿಸಿರುವ ಹೊಸ ನಿಯಮವನ್ನು ಸಿದ್ಧಗೊಳಿಸಿ, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ. ಒಂದೆರಡು ನಿಯಮಗಳನ್ನು ಹೊರತುಪಡಿಸಿದರೆ ಉಳಿದವೆಲ್ಲವೂ 2012ರಲ್ಲಿ ಮಾಡಲಿಚ್ಛಿಸಿದ್ದ ನಿಯಮಗಳೇ ಆಗಿವೆ. ಕರ್ನಾಟಕದ ನಿಯಮಗಳಿಗೆ ಹೋಲಿಸಿದರೆ, ಕೇಂದ್ರದ ನಿಯಮ ಸಾಕಷ್ಟು ಉತ್ತಮ ಅಂಶಗಳನ್ನು ಹೊಂದಿರುವುದನ್ನು ಗಮನಿಸಬೇಕು.

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ತಮ್ಮ ಅರ್ಜಿಯನ್ನು 500 ಪದಗಳಿಗೆ ಮಿತಗೊಳಿಸಬೇಕೆಂದು ಕರಡು ನಿಯಮ ಹೇಳುತ್ತದೆ. ಒಂದು ವೇಳೆ ಈ ಪದಗಳ ಮಿತಿ ಮೀರಿದರೂ, ಅರ್ಜಿಯನ್ನು ಆ ಕಾರಣಕ್ಕಾಗಿ ತಿರಸ್ಕರಿಸುವಂತಿಲ್ಲ ಎಂಬ ಅಂಶವೂ ಸೇರಿದೆ. ಇದಕ್ಕೆ ವಿರುದ್ಧವಾಗಿ ಕರ್ನಾಟಕದ ನಿಯಮದ ಪ್ರಕಾರ, ಅರ್ಜಿ 150 ಪದಗಳನ್ನು ಮೀರುವಂತಿಲ್ಲ. ಹಾಗೊಮ್ಮೆ ಪದಗಳ ಮಿತಿ ಮೀರಿದರೆ ಅರ್ಜಿಯನ್ನು ಸ್ವೀಕರಿಸಬಹುದೇ ಅಥವಾ ತಿರಸ್ಕರಿಸಬಹುದೇ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ, ಮಾಹಿತಿ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಅರ್ಜಿದಾರರು ಪಾವತಿಸಬೇಕಾದ ಅರ್ಜಿ ಶುಲ್ಕ ಮತ್ತು ಹೆಚ್ಚುವರಿ ಶುಲ್ಕದ ಬಗ್ಗೆ ಇದ್ದ ಗೊಂದಲವನ್ನು ಹೊಸ ನಿಯಮ ಸರಿಪಡಿಸಿದೆ. ಬಿಪಿಎಲ್ ಅರ್ಜಿದಾರರು ಅರ್ಜಿ ಶುಲ್ಕವನ್ನಾಗಲಿ ಅಥವಾ ಹೆಚ್ಚುವರಿ ಶುಲ್ಕವನ್ನಾಗಲಿ ಪಾವತಿಸಬೇಕಿಲ್ಲ. ಆದರೆ ರಾಜ್ಯದ ನಿಯಮದ ಪ್ರಕಾರ, ಬಿಪಿಎಲ್ ಅರ್ಜಿದಾರರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದ್ದರೂ, ಕೋರಿರುವ ಮಾಹಿತಿ 100 ಪುಟ ಮೀರಿದಲ್ಲಿ ಪ್ರತಿ ಪುಟಕ್ಕೆ ₹ 2 ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಕೇಂದ್ರದ ನಿಯಮದ ಪ್ರಕಾರ, ಕೋರಿರುವ ಮಾಹಿತಿಯನ್ನು ಕಳುಹಿಸಲು ತಗಲುವ ಅಂಚೆ ವೆಚ್ಚ ₹ 50ಕ್ಕಿಂತ ಅಧಿಕವಾದಲ್ಲಿ, ಅದನ್ನು ಅರ್ಜಿದಾರರೇ ಭರಿಸಬೇಕಿದೆ. ಫ್ಲಾಪಿ  ಡಿಸ್ಕ್‌ನ ಕಾಲ ಮುಗಿದಿದ್ದರೂ, ಕೇಂದ್ರ ಸರ್ಕಾರ ಅದಕ್ಕೆ ಹೊಂದಿಕೊಂಡಂತೆ ಕಾಣುತ್ತಿಲ್ಲ.  ಮಾಹಿತಿ ಫ್ಲಾಪಿ ಡಿಸ್ಕ್‌ನಲ್ಲಿ ಬೇಕಿದ್ದರೆ, ಅರ್ಜಿದಾರರು ₹ 50 ಪಾವತಿಸಬಹುದು ಎಂದು ಕರಡು ನಿಯಮ ಹೇಳುತ್ತದೆ.

ಉದ್ದೇಶಿತ ನಿಯಮದಲ್ಲಿ ಕೆಲವು ಉತ್ತಮ ಅಂಶಗಳಿರುವುದನ್ನು ಕಡೆಗಣಿಸುವಂತಿಲ್ಲ. ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ಯಾವುದೇ ನಿಗದಿತ ನಮೂನೆ ಬಳಸುವ ಅಗತ್ಯವಿಲ್ಲ.  ಖುದ್ದಾಗಿ ಅಥವಾ ಇ–ಮೇಲ್‌  ಮೂಲಕ ಮೇಲ್ಮನವಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಮೇಲ್ಮನವಿ ಸಲ್ಲಿಸುವ ಮುನ್ನ ಅದರ ಪ್ರತಿಯನ್ನು ಅರ್ಜಿದಾರರು ಮಾಹಿತಿ ಅಧಿಕಾರಿಗೆ ಕಳುಹಿಸಿ, ಅದಕ್ಕೆ ಸೂಕ್ತ ಪುರಾವೆಯನ್ನು ಮೇಲ್ಮನವಿ ಜೊತೆ ಲಗತ್ತಿಸಬೇಕೆಂಬ ನಿಯಮ ಸೇರಿಸಿರುವುದು ಸಮಂಜಸವಲ್ಲ. ಆಯೋಗವನ್ನು ಸಿವಿಲ್ ಕೋರ್ಟ್‌ನಂತೆ ಮಾಡುವುದು ಸರಿಯಲ್ಲ.

ಒಮ್ಮೆ ಸಲ್ಲಿಸಿದ ಮೇಲ್ಮನವಿಯನ್ನು ಹಿಂಪಡೆಯುವುದಕ್ಕೆ ಕರಡು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಕಾರಣಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮವನ್ನು ಬಳಸುತ್ತಿರುವವರಿಗೆ ಈ ನಿಯಮ ದೊಡ್ಡ ಆಘಾತವನ್ನು ಉಂಟುಮಾಡಿದೆ. ಈಗಾಗಲೇ ಮಾಹಿತಿ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಕೆಲ ಅರ್ಜಿದಾರರು ಮಾಹಿತಿ ಹಕ್ಕನ್ನು ಬಳಸುವ ಉದ್ದೇಶವೇ ಸಂದೇಹಕ್ಕೆ ಕಾರಣವಾಗಿದೆ. ಕೆಲ ಮಾಹಿತಿ ಅಧಿಕಾರಿಗಳೂ ಮಾಹಿತಿ ನೀಡುವುದರ ಬದಲು ಒಂದಿಷ್ಟು ಹಣ ಕೊಟ್ಟು, ಅರ್ಜಿದಾರರಿಂದ ‘ಮಾಹಿತಿ ದೊರೆತಿದೆ’ ಎಂದು ಬರೆಸಿಕೊಂಡು ಪ್ರಕರಣಕ್ಕೆ ಅಂತ್ಯ ಹಾಡುತ್ತಿದ್ದಾರೆ.

ಮೇಲ್ಮನವಿ  ವಿಚಾರಣೆ ನಡೆಯುವ ಸಂದರ್ಭದಲ್ಲಿ, ಅರ್ಜಿದಾರರು ಸಲ್ಲಿಸಿರುವ ‘ಮಾಹಿತಿ ದೊರೆತಿದೆ’ ಎಂಬ ದಾಖಲೆಯ ಆಧಾರದ ಮೇಲೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೊಸ ಕರಡು ನಿಯಮವನ್ನು ಸೇರಿಸಿರುವುದು ಸರಿಯಾದ ಕ್ರಮವಲ್ಲ. ಒಂದು ವೇಳೆ ಮೇಲ್ಮನವಿ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ಅರ್ಜಿದಾರರು ನಿಧನರಾದರೂ, ಪ್ರಕರಣವನ್ನು ಅಂತ್ಯಗೊಳಿಸಬಾರದು. ಕೇಳಿರುವ ಮಾಹಿತಿಯನ್ನು ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಆಯೋಗ ಆದೇಶ ಹೊರಡಿಸಬೇಕು. ಜೊತೆಗೆ, ಅರ್ಜಿದಾರರು ಕೇಳಿದ್ದ ಮಾಹಿತಿಯನ್ನು ನೀಡಲಾಗಿದೆ ಎಂದು ಮಾಹಿತಿ ಅಧಿಕಾರಿ ಹೇಳಿಕೆ ನೀಡಿದಾಗ್ಯೂ, ನೀಡಿರುವ ಮಾಹಿತಿಯ ಒಂದು ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಆಯೋಗ ತೀರ್ಪು ನೀಡಬೇಕು.

ಭಾರತದಲ್ಲಿ ಕೋರ್ಟ್ ತನ್ನ ತೀರ್ಪನ್ನು ನೀಡಿದ ನಂತರವೇ ಕಕ್ಷಿದಾರನ ನಿಜವಾದ ಸಮಸ್ಯೆ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ಮಾಹಿತಿ ಆಯೋಗ ತನ್ನ ಆದೇಶವನ್ನು ನೀಡಿದ ನಂತರವೇ ಅರ್ಜಿದಾರನ ಸಮಸ್ಯೆ ಆರಂಭವಾಗುತ್ತದೆ. ಆಯೋಗದ ಆದೇಶವನ್ನು ಜಾರಿಗೊಳಿಸದಿದ್ದಲ್ಲಿ ಅರ್ಜಿದಾರ ಮಾಡುವುದಾದರೂ ಏನು? ಸದ್ಯದ ಅಧಿನಿಯಮದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಹೊಸ ಕರಡು ನಿಯಮದ ಪ್ರಕಾರ, ಆಯೋಗ ಆದೇಶ ನೀಡಿದ ಮೂರು ತಿಂಗಳ ನಂತರವೂ ಅದನ್ನು ಜಾರಿಗೊಳಿಸದಿದ್ದಲ್ಲಿ ಅರ್ಜಿದಾರರು ನಿಗದಿತ ನಮೂನೆಯಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಆದೇಶವನ್ನು ಇಂತಿಷ್ಟು ದಿನಗಳಲ್ಲಿ ಜಾರಿಗೊಳಿಸಬೇಕೆಂದು ಆದೇಶದಲ್ಲಿ ನಮೂದಿಸದಿದ್ದಲ್ಲಿ, ಅದನ್ನು 30 ದಿನಗಳಲ್ಲಿ ಜಾರಿಗೊಳಿಸಬೇಕೆಂದು ಅರ್ಥ ಎಂದು ಕರಡು ನಿಯಮ ಹೇಳುತ್ತದೆ. ಸಂಬಂಧಪಟ್ಟವರು ಆದೇಶವನ್ನು ಜಾರಿಗೊಳಿಸದಿದ್ದಲ್ಲಿ ಆಯೋಗವು ಮಾಹಿತಿ ಹಕ್ಕು ಅಧಿನಿಯಮದ ಅನುಸಾರ ಕ್ರಮ ಕೈಗೊಳ್ಳುತ್ತದೆ.

ಅಧಿನಿಯಮ ಜಾರಿಗೆ ಬಂದ ಈ 12 ವರ್ಷಗಳಲ್ಲಿ ಅದರ ಅನುಷ್ಠಾನದಲ್ಲಿ ಅನೇಕ ತೊಂದರೆಗಳು ಕಂಡುಬಂದಿವೆ. ಅದನ್ನು ಸಾಕಷ್ಟು ವೇದಿಕೆಗಳಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಹೊಸ ನಿಯಮ ರಚಿಸುವಾಗ ಸರ್ಕಾರ ಅದರತ್ತ ಗಮನ ಹರಿಸದಿರುವುದು ಸ್ಪಷ್ಟವಾಗುತ್ತದೆ.
ಅರ್ಜಿದಾರರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಪ್ರಥಮ ಮೇಲ್ಮನವಿಗೆ ಸಂಬಂಧಿಸಿದ್ದು. ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಅದೇ ಇಲಾಖೆ ಅಥವಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಬಹುದೆಂದು ಅಧಿನಿಯಮ ಹೇಳುತ್ತದೆ. ಆದರೆ ಇದಕ್ಕೆ ಅನುಸರಿಸಬೇಕಾದ ಮಾರ್ಗ, ವಾಯ್ದೆಯಂತಹವುಗಳ ಬಗ್ಗೆ ಉಲ್ಲೇಖವಿಲ್ಲ. ಪ್ರಥಮ ಮೇಲ್ಮನವಿ ಅಧಿಕಾರಿ ವಿರುದ್ಧ ದಂಡ ವಿಧಿಸುವ ನಿಯಮವೂ ಇಲ್ಲ. ಈ ಕಾರಣದಿಂದಾಗಿ ಪ್ರಥಮ ಮೇಲ್ಮನವಿ ವ್ಯವಸ್ಥೆ ಕುಸಿದು ಬಿದ್ದಿದೆ. ಹೊಸ ನಿಯಮದಲ್ಲಿ ಇದನ್ನು ಸರಿಪಡಿಸುವುದು ಸೂಕ್ತ.

ಅರ್ಜಿ ಸಲ್ಲಿಸಿದ ಇಂತಿಷ್ಟು ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಅಂತಿಮ ಆದೇಶ ನೀಡಬೇಕೆಂಬ ನಿಯಮವನ್ನು ಸೇರಿಸುವ ಅಗತ್ಯವಿದೆ. ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿದಾರರಿಗೆ ಮಾತ್ರ ವಾಯ್ದೆ ನಿಗದಿಪಡಿಸಲಾಗಿದೆ. ಅಧಿಕಾರಿಗಳು ಮತ್ತು ಆಯುಕ್ತರಿಗೆ ಯಾಕೆ ಅನ್ವಯಿಸಬಾರದು?
ಹೊಸ ಕರಡು ನಿಯಮ ಭಾಷೆಯ ವಿಷಯದಲ್ಲಿ ದಕ್ಷಿಣದವರನ್ನು ಕೆಣಕುವ ಸಾಹಸಕ್ಕೆ ಕೈಹಾಕಿದೆ. ವಿಚಾರಣೆ ಇತ್ಯಾದಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ನಡೆಯಬೇಕೆಂದು ಹೇಳುತ್ತದೆ. ಇದರಿಂದ ದಕ್ಷಿಣದವರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಜೊತೆಗೆ ದಕ್ಷಿಣದವರ ಮೇಲೆ ಹಿಂದಿ ಹೇರುವ ಹುನ್ನಾರ ಗೋಚರಿಸುತ್ತಿದೆ.

ವಿಚಾರಣೆ ಮತ್ತು ಆದೇಶದ ಪ್ರತಿ ದಕ್ಷಿಣ ರಾಜ್ಯಗಳ ಭಾಷೆಯಲ್ಲಿ ಇರಬೇಕೆಂದು ಇದರ ಅರ್ಥವಲ್ಲ. ಅವೆಲ್ಲವೂ ಇಂಗ್ಲಿಷ್‌ನಲ್ಲಿ ಇರಬೇಕೆಂದು, ಅರ್ಜಿದಾರರು ಬಯಸಿದಾಗ ಮಾತ್ರ ಅದು ಹಿಂದಿಯಲ್ಲಿರಬೇಕೆಂದು ಕರಡು ನಿಯಮವನ್ನು ತಿದ್ದುವುದು ಉಚಿತ. 

ಲೇಖಕ ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT