ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಅರಣ್ಯ: ಒತ್ತುವರಿ ತೆರವು

Last Updated 15 ಏಪ್ರಿಲ್ 2017, 5:01 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ದೇವಮಚ್ಚಿ ರಕ್ಷಿತಾರಣ್ಯವನ್ನು ಅರಣ್ಯಾಧಿಕಾರಿ ಒಬ್ಬರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ನಿರ್ಮಿಸಿದ್ದ ಪ್ರದೇಶವನ್ನು ಕಳೆದೆರಡು ದಿನಗಳಿಂದ ಸದ್ದಿಲ್ಲದೇ ತೆರವು ಮಾಡಲಾಗುತ್ತಿದೆ.ಗುರುವಾರ ದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಶನಿವಾರ ಬೆಳಿಗ್ಗೆ ವೇಳೆಗೆ ಪೂರ್ಣಗೊಳ್ಳಲಿದೆ.

‘18.20 ಎಕರೆ ಅರಣ್ಯ ಪ್ರದೇಶ ವನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಒತ್ತುವರಿ ದಾರರೇ ತೆರವುಗೊಳಿಸುತ್ತಿದ್ದಾರೆ’ ಎಂದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿ ಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏನಿದು ಪ್ರಕರಣ?: ದೇವಮಚ್ಚಿ ಮೀಸಲು ಅರಣ್ಯದ ಸರ್ವೆ ನಂಬರ್‌ 76/1, ಅಂಕಣ 19ರ 117ನೇ ಪ್ಲಾಟ್‌ನಲ್ಲಿ 18.20 ಎಕರೆ ರಕ್ಷಿತಾ ಅರಣ್ಯ ಪ್ರದೇಶವನ್ನು ನಾಗರಹೊಳೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೂಡಕಂಡಿ ಬೆಳ್ಯಪ್ಪ ಅವರು ತಮ್ಮ ಕುಟುಂಬದ ಇತರೆ ಐದು ಮಂದಿಯ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಲ್ಲಿ 14 ಎಕರೆಯಷ್ಟು ಕಾಫಿ ತೋಟ, ಉಳಿದ 4 ಎಕರೆಯನ್ನು ಗದ್ದೆಯಾಗಿ ಪರಿವರ್ತಿಸಿಕೊಂಡಿದ್ದರು. ಈ ಒತ್ತುವರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಭು ಎಂಬುವವರು ದೂರು ಸಲ್ಲಿಸಿದ್ದರು. ನಿರಂತರ ಹೋರಾಟದ ಬಳಿಕ ಎಚ್ಚೆತ್ತುಕೊಂಡು ತೆರವು ಮಾಡಲಾಗುತ್ತಿದೆ.

ಪ್ರಭು ಅವರು  2013ರ ಮೇ 8ರಂದು ರಲ್ಲಿ ಅಂದಿನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್‌.ಶಿವಶೈಲಂ ಅವರಿಗೆ ಒತ್ತುವರಿ ಸಂಬಂಧ ಎಲ್ಲ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಅರಣ್ಯ ಇಲಾಖೆಯ ಹಿರಿಯ ಅರಣ್ಯಾಧಿಕಾರಿ ಸಿ.ವೆಂಕಟಸುಬ್ಬಯ್ಯ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು.

ವೆಂಕಟಸುಬ್ಬಯ್ಯ ಅವರು ಸ್ಥಳ ಹಾಗೂ ಕಡತ ಪರಿಶೀಲನೆ ನಡೆಸಿ ಒತ್ತುವರಿ ದೃಢಪಡಿಸಿದ್ದರು.  ಫೆಬ್ರುವರಿ 4ರಂದು ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಬೆಳ್ಯಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ ಇಲಾಖೆ ವಿಚಾರಣೆ ನಡೆಸಿ ಎಂದು ವರದಿಯಲ್ಲಿ ಶಿಫಾರಸು ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ವೆಂಕಟಸುಬ್ಬಯ್ಯ ಅವರ ವರದಿಯಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತ್ಯೇಕವಾಗಿ ಒತ್ತುವರಿ ತೆರವು ಮಾಡಿ, ನಷ್ಟಭರಿಸುವಂತೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು. ಆದರೆ, ಇದುವರೆಗೂ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿರಲಿಲ್ಲ. 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿಡ್ಡಳ್ಳಿ ಹೋರಾಟಗಾರರು ಒತ್ತುವರಿ ತೆರವು ಬಗ್ಗೆ ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ.‘ಶೇ 75ರಷ್ಟು ತೆರವು ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT