ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಇಡೀ ರಾಷ್ಟ್ರದ ನಾಯಕ

ನಗರದಲ್ಲಿ ಸಡಗರ ಸಂಭ್ರಮದಿಂದ ಅಂಬೇಡ್ಕರ್‌, ಬಾಬು ಜಗಜೀವನರಾಮ್‌ ಜನ್ಮದಿನ ಆಚರಣೆ
Last Updated 15 ಏಪ್ರಿಲ್ 2017, 5:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಿ.ಆರ್.ಅಂಬೇಡ್ಕರ್ ಅವರನ್ನು ದೀನ ದಲಿತರ ನಾಯಕರು ಎಂದು ಪ್ರಚಾರ ಮಾಡಲಾಗುತ್ತದೆ. ಆದರೆ ಅವರು ಇಡೀ ರಾಷ್ಟ್ರದ ನಾಯಕರು. ಅವರ ವಿಚಾರಧಾರೆ, ಆದರ್ಶ ತಿಳಿದುಕೊಂಡು ನಾವು ಪಾಲನೆ ಮಾಡಬೇಕು. ಇಲ್ಲದಿದ್ದರೆ ಅವರ ಜಯಂತಿ ಆಚರಣೆಗೆ ಅರ್ಥವಿರುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್‌ ಅವರ 126ನೇ ಮತ್ತು ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್‌ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಡುವ ಅನುದಾನವನ್ನು ಬದ್ಧತೆಯಿಂದ ಬಳಸುವ ಕೆಲಸ ಮಾಡುತ್ತಿದೆ. ಇಂದಿಗೂ ದೇಶದಲ್ಲಿ ಅವಕಾಶ ವಂಚಿತರಿಗೆ ಸರಿಯಾದ ಶಿಕ್ಷಣ, ಆರೋಗ್ಯ ಸವಲತ್ತು ದೊರೆತಿಲ್ಲ. ಆಗಲೇ ಮೀಸಲಾತಿ ತೆಗೆದುಹಾಕಬೇಕು. ಸಂವಿಧಾನವನ್ನು ಮತ್ತೆ ಬರೆಯಬೇಕು ಎನ್ನುವವರು ಈ ದೇಶದ ಬಗ್ಗೆ ಅಗಾಧ ಪ್ರೇಮ ವ್ಯಕ್ತಪಡಿಸುತ್ತಾರೆ. ಇಂತಹ ಜನರಿಗೆ ಮರಳು ಹೋಗಬೇಡಿ’ ಎಂದು ತಿಳಿಸಿದರು.

ಅಂಬೇಡ್ಕರ್‌ ಅವರ ಕುರಿತು ಮಾತನಾಡಿದ ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ನಯಾಜ್ ಅಹಮದ್, ‘ಅಂಬೇಡ್ಕರ್‌ ಅವರನ್ನು ಒಂದು ವರ್ಗದ ನಾಯಕರು ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಾಗಬಾರದು. ಅವರ ಎಲ್ಲ ವರ್ಗಗಳ ಒಳಿತಿಗೆ ಶ್ರಮಿಸಿದವರು. ಅವರ ಜಯಂತಿ ಸರ್ಕಾರಿ ಕಾರ್ಯಕ್ರಮಕ್ಕಿಂತಲೂ ಜನಮಾನಸದ ಕಾರ್ಯಕ್ರಮವಾಗಬೇಕಿದೆ’ ಎಂದು ಹೇಳಿದರು.

ಬಾಬು ಜಗಜೀವನರಾಮ್‌ ಅವರ ಕುರಿತು ಮಾತನಾಡಿದ ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿ.ರಂಗಸ್ವಾಮಿ, ‘ಬಾಲ್ಯದಲ್ಲಿಯೇ ಶಾಲೆಯಲ್ಲಿ ಜಾತಿಯತೆಯ ಕರಾಳ ಮುಖ ಪರಿಚಯ ಮಾಡಿಕೊಂಡ ಬಾಬು ಜಗಜೀವನರಾಂ ಅವರು ಅದರ ವಿರುದ್ಧ ಸೆಣಸುತ್ತಲೇ ಉನ್ನತ ವ್ಯಾಸಂಗ ಮಾಡಿದರು. 1936ರಲ್ಲಿ ರಾಜಕೀಯ ಜೀವನ ಪ್ರವೇಶಿಸಿದ ಅವರು, 1986ರ ವರೆಗೆ ಸಂಸತ್‌ ಸದಸ್ಯರಾಗಿದ್ದರು. ಆದರೆ ಅದನ್ನು ಯಾರೂ ಹೇಳುವುದಿಲ್ಲ’ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಂರ್ತಜಾತಿ ವಿವಾಹವಾದ ದಂಪತಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾ, ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಮಾಜಿ ಶಾಸಕಿ ಅನಸೂಯಮ್ಮ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ಎಚ್.ವಿ.ಗೋವಿಂದಸ್ವಾಮಿ ಇದ್ದರು.

*
ಎಲ್ಲ ರಂಗಗಳಲ್ಲಿ ಜಾತಿಯ ಅವ್ಯವಸ್ಥೆ ಇಣುಕುತ್ತಿದೆ. ಪ್ರತಿಯೊಬ್ಬರೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
-ಡಾ.ಕೆ.ಸುಧಾಕರ್,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT