ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ವನದ ನಡುವೆ ಸಿರಿಧಾನ್ಯಗಳ ಘಮಲು

ನಂದಿ ಕ್ರಾಸ್ ತೋಟಗಾರಿಕೆ ಕ್ಷೇತ್ರದಲ್ಲಿ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯಗಳ ಮೇಳಕ್ಕೆ ಚಾಲನೆ
Last Updated 15 ಏಪ್ರಿಲ್ 2017, 5:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸದಾ ಮೌನವೇ ಮೈವೆತ್ತಂತೆ ಇರುವ ಆ ಹಸಿರು ತೋಟದೊಳಗೆ ಶುಕ್ರವಾರ ಕಲರವ ಮನೆ ಮಾಡಿತ್ತು. ಫಲ ತೂಗುವ ಮರಗಳ ನಡುವೆ ತಲೆ ಎತ್ತಿದ್ದ ಮಳಿಗೆಗಳಲ್ಲಿ ಬಗೆ ಬಗೆಯ ಘಮಲು ಮನೆ ಮಾಡಿತ್ತು. ಸಿರಿಧಾನ್ಯಗಳಿಂದ ತಯಾರಿಸಿದ ಬಗೆಬಗೆಯ ತಿಂಡಿ ತಿನಿಸುಗಳ ವಾಸನೆಯಂತೂ ಜಿಹ್ವಾ ಚಾಪಲ್ಯ ಪ್ರಿಯರ ಬಾಯಲ್ಲಿ ನೀರೂರಿಸಿತ್ತು.

ತಾಲ್ಲೂಕಿನ ನಂದಿ ಕ್ರಾಸ್‌ನಲ್ಲಿರುವ ತೋಟಗಾರಿಕೆ ಕ್ಷೇತ್ರದಲ್ಲಿ ಶುಕ್ರವಾರ ಆರಂಭಗೊಂಡ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯಗಳ ಮೇಳದಲ್ಲಿ ದಕ್ಕಿದ ಅನುಭವವಿದು. ಪ್ರದರ್ಶನ ಮತ್ತು ಮೇಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. ಮೇಳ ಏಪ್ರಿಲ್ 16ರ ವರೆಗೆ ನಡೆಯಲಿದೆ. 

ಬಗೆ ಬಗೆಯ ಬಣ್ಣದ ಹೂವುಗಳು ಹಸಿರ ಕಡುಮೋಹಿಗಳ ಮನ ಕದ್ದವು. ಗುಲಾಬಿ, ಸೇವಂತಿ ಹೂವುಗಳನ್ನು ಬಳಸಿ ನಿರ್ಮಿಸಿದ ಭೋಗನಂದೀಶ್ವರ ದೇವಾಲಯದ ಮಾದರಿಯಂತೂ ಚಿತ್ತಾಪಹಾರಿಯಾಗಿದೆ.

ನಾಜೂಕಿನ ಕುಸುರಿ ಕಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳಲ್ಲಿ ಒಡಮೂಡಿರುವ ಗಣಪತಿ, ವಿವಿಧ ಪ್ರಾಣಿ, ಪಕ್ಷಿಗಳು, ಸಂಗೀತ ವಾದ್ಯಗಳು, ಪ್ರಕೃತಿ ದೃಶ್ಯಗಳು ನೋಡುಗರ ಮನ ಸೆಳೆದವು. ಮೈಸೂರಿನ ಮರಳು ಶಿಲ್ಪ ಕಲಾವಿದೆ ಎಂ.ಎನ್.ಗೌರಿ ಅವರು ಎಂ.ಸ್ಯಾಂಡ್‌ನಲ್ಲಿ ನಿರ್ಮಿಸಿರುವ ಜಿಲ್ಲೆಯ ಹೆಮ್ಮೆಯ ಪುತ್ರ, ಪ್ರಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಶಿಲ್ಪವಂತೂ ಪ್ರದರ್ಶನದ ಮೆರುಗು ಇಮ್ಮಡಿಗೊಳಿಸುತ್ತಿದೆ.

ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆದು ಅವುಗಳ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು, ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳು, ದೊರೆಯುವ ಸಬ್ಸಿಡಿಗಳು, ನವೀನ ತಂತ್ರಜ್ಞಾನಗಳು ಹೀಗೆ ವಿವಿಧ ಬಗೆಯ ಮಾಹಿತಿಗಳನ್ನು ನೀಡಲಾಗುತ್ತಿದೆ.

ಕೃಷಿಗೆ ಅಗತ್ಯವಾದ ಎಲ್ಲ ಬಗೆಯ ಸಾಧನೆ, ಸಲಕರಣೆಗಳು, ಮಿನಿ ಟ್ರ್ಯಾಕ್ಟರ್‌ಗಳು, ಸೋಲಾರ್ ಪಂಪ್‌ಗಳು ಪ್ರದರ್ಶನದಲ್ಲಿ ಕಂಡುಬಂದವು. ವಿವಿಧ ಕಂಪೆನಿಗಳ ಪ್ರತಿನಿಧಿಗಳು ಯಂತ್ರೋಪಕರಣಗಳ ಬಳಕೆ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದ ದೃಶ್ಯಗಳು ಗೋಚರಿಸಿದವು.

ಕೆಲ ಮಳಿಗೆಗಳಲ್ಲಿ ಬಗೆ ಬಗೆಯ ಹಣ್ಣುಗಳು, ತರಕಾರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮಳೆ ನೀರು ಸಂಗ್ರಹ, ವಿವಿಧ ಮಾದರಿಯ ಬೇಸಾಯ ಪದ್ಧತಿಗಳು, ಸಮಗ್ರ ಕೃಷಿ, ಮೆಲ್ಚಾವಣಿ ತೋಟದ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ನರ್ಸರಿಗಳ ಮಳಿಗೆಗಳಲ್ಲಿ ವಿವಿಧ ಜಾತಿಯ ಗಿಡಗಳ ಮಾರಾಟ ಜೋರಾಗಿ ಕಂಡುಬಂತು.

ಆರೋಗ್ಯ ಇಲಾಖೆ ವತಿಯಿಂದ ತೆರೆದಿದ್ದ ಮಳಿಗೆಯಲ್ಲಿ ಮೇಳಕ್ಕೆ ಬಂದಿದ್ದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಜೇನು ಕೃಷಿಯ ಪ್ರಾತ್ಯಕ್ಷಿಕೆ ನೋಡಲು ಹೋದವರು ತುಪ್ಪ ಸವಿದು ಮುಂದೆ ಸಾಗುತ್ತಿದ್ದರು.

ಎಲ್ಲಿ ನೋಡಿದರೂ ಸೆಲ್ಫಿ: ತೋಟಗಾರಿಕೆಯ ಕ್ಷೇತ್ರದೊಳಗೆ ಶುಕ್ರವಾರ ಎಲ್ಲಿ ನೋಡಿದರಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ವಿಶ್ವೇಶ್ವರಯ್ಯ ಅವರ ಮರಳು ಶಿಲ್ಪ, ಹೂವುಗಳಲ್ಲಿ ಮೈದಳೆದ ದೇವಾಲಯ, ತ್ರೀಡಿ ಮಾಧ್ಯಮದಲ್ಲಿ ರಚಿಸಿದ ಚಿಟ್ಟೆಯ ರೆಕ್ಕೆಯ ಬಿತ್ತಿ ಕಲಾಕೃತಿ ಸೆಲ್ಫಿ ಪ್ರಿಯರನ್ನು ಹೆಚ್ಚೆಚ್ಚು ಸೆಳೆಯುತ್ತಿದ್ದವು.

ಈರುಳ್ಳಿ ರಫ್ತಿಗೆ ಚಾಲನೆ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ರೈತರು ಬೆಳೆದ ಗುಲಾಬಿ ಈರುಳ್ಳಿಯನ್ನು ಮಲೇಷ್ಯಾಗೆ ರಫ್ತು ಮಾಡುವ ಕಾರ್ಯಕ್ಕೆ ಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಈರುಳ್ಳಿ ಹೇರಿದ್ದ ಲಾರಿಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಉಸ್ತುವಾರಿ ಸಚಿವರಿಗೆ ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸಾಥ್ ನೀಡಿದರು.

ಬಾಯಿಯಲ್ಲಿ ನೀರೂರಿಸುವ ಖಾದ್ಯಗಳು
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಒಕ್ಕೂಟದಿಂದ ತೆರೆದಿದ್ದ ಮಳಿಗೆಗಳಲ್ಲಿ ಎಲ್ಲಿ ನೋಡಿದರೂ ಅಪರೂಪ ಎನಿಸುವಂತಹ ಸಿರಿಧಾನ್ಯಗಳ ಸಂಗ್ರಹ ಅನಾವರಣಗೊಂಡಿತ್ತು. ಜನರು ತಮ್ಮ ಶಕ್ತ್ಯಾನುಸಾರ ಸಜ್ಜೆ, ನವಣೆ, ಬರಗು, ಆರ್ಕ, ಸಾಮೆ, ಊದಲು, ರಾಗಿಯ ವಿವಿಧ ಗಾತ್ರಗಳ ಪ್ಯಾಕೆಟ್‌ಗಳನ್ನು ಖರೀದಿಸುತ್ತಿದ್ದರು.

ಮಳಿಗೆಯೊಂದರಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತಿದ್ದವು. ಊದಲು ಪಿಜ್ಜಾ, ರಾಗಿ ಕೇಕ್, ಬರಗು ಸಮೋಸಾ, ಸಾಮೆ ಅಣಬೆ ಬಿರಿಯಾನಿ, ನವಣೆ ಕಟ್ಲೆಟ್, ನವಣೆ ಬ್ರೆಡ್, ಜೋಳದ ಜೀರಾ ಲಸ್ಸಿ, ನವಣೆ ಪೊಂಗಲ್, ಹಾರಕ ಬಿಸಿಬೇಳೆಬಾತ್, ಸಾಮೆ ಪಾಯಸ, ಸಜ್ಜೆ ರೊಟ್ಟಿ, ಸಾಮೆ ಚೌಚೌ ಬಾತ್ ಗ್ರಾಹಕರನ್ನು ಹುಬ್ಬೇರಿಸುವಂತೆ ಮಾಡಿದವು.

*
ಫಲಪುಷ್ಪ ಪ್ರದರ್ಶನದಿಂದ ರೈತರಿಗೆ ಹೊಸ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸಲು, ಹೊಸ ಮಾಹಿತಿ ತಿಳಿಸಲು, ಹೊಸ ತಳಿಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ.
-ಡಾ.ಕೆ.ಸುಧಾಕರ್,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT