ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳಲ್ಲಿ ನಿಯಂತ್ರಣ: ಪ್ರಜಾಪ್ರಭುತ್ವಕ್ಕೆ ಮಾರಕ

Last Updated 15 ಏಪ್ರಿಲ್ 2017, 5:22 IST
ಅಕ್ಷರ ಗಾತ್ರ

ಮೈಸೂರು:  ವಿಶ್ವವಿದ್ಯಾಲಯಗಳಲ್ಲಿ ಆಹಾರ, ಉಡುಗೆ, ಮಾತಿಗೆ ನಿಯಂತ್ರಣ ಹೇರುವ ಪ್ರಯತ್ನಗಳು ದೇಶದ ಹಲವೆಡೆ ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್‌ ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಎಸ್‌ಸಿ, ಎಸ್‌ಟಿ ವಿಶೇಷ ಘಟಕ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್‌ 126ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ‘ಭಾರತದ ಪ್ರಸ್ತುತ ಸಮಸ್ಯೆಗಳು: ಅಂಬೇಡ್ಕರ್ ಚಿಂತನೆ’ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಅರ್ಥೈಸಿಕೊಳ್ಳಲು ಈವರೆಗೂ ಸರಿಯಾದ ಪ್ರಯತ್ನಗಳು ನಡೆದಿಲ್ಲ. ಪ್ರಜಾಪ್ರಭುತ್ವದ ಭಾಗಗಳಾದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ನೆಲೆಗಳನ್ನು ನಮ್ಮಲ್ಲಿ ಪ್ರತ್ಯೇಕವಾಗಿ ಕಾಣಲಾಗಿದೆ. ಇದರಿಂದಲೇ ಭಾರತದಲ್ಲಿ ಅಸಮಾನತೆ, ಜಾತಿ, ಧರ್ಮಗಳೆಂಬ ಸಮಸ್ಯೆಗಳು ತಮ್ಮ ಮೂಲ ಗುಣಲಕ್ಷಣಗಳನ್ನು ಬದಲಿಸಿಕೊಳ್ಳದೇ ಪಿಡುಗಾಗಿಯೇ ಉಳಿದುಕೊಂಡಿವೆ’ ಎಂದು ವಿಶ್ಲೇಷಿಸಿದರು.

ಆರ್ಥಿಕ ಅಸಮಾನತೆ ಈಚಿನ ದಿನಗಳಲ್ಲಿ ಭುಗಿಲೆದ್ದಿದೆ. ಮೇಲ್ನೋಟಕ್ಕೆ ಭಾರತದ ಆರ್ಥಿಕ ಸ್ಥಿತಿಗತಿ ಸುಧಾರಿಸಿರುವಂತೆ ಕಂಡುಬಂದರೂ, ಹಣದ ಅಸಮಾನ ಹಂಚಿಕೆ ಆಗಿರುವುದು ಸ್ಪಷ್ಟವಾಗಿದೆ. ದೇಶದಲ್ಲಿರುವ ಹಣದ ಶೇ 58ಕ್ಕೂ ಹೆಚ್ಚು ಭಾಗ ಕೇವಲ ಶೇ 1ರಷ್ಟು ಜನರಲ್ಲಿ ಹಂಚಿಹೋಗಿದೆ. ಬಾಕಿ ಹಣವನ್ನು ಬೇರೆ ಬೇರೆ ವರ್ಗದ ಜನರು ಹಂಚಿಕೊಂಡಿದ್ದಾರೆ. ಹೀಗಿರುವಾಗ ಬಡವ– ಶ್ರೀಮಂತರ ನಡುವೆ ಅಸಮಾನತೆ ಹೆಚ್ಚದೇ, ಕಡಿಮೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ರಾಜಕೀಯ ವ್ಯವಸ್ಥೆಯೂ ತಪ್ಪಾಗಿ ವಿಶ್ಲೇಷಣೆಗೆ ಒಳಗಾಗಿದೆ. ರಾಜಕೀಯದ ಜತೆಗೆ ಧರ್ಮ ಬೆರೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಯಾವ ದೇಶದಲ್ಲಿ ಈ ರೀತಿ ಆಗುವುದೊ, ಆ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಸಾಧ್ಯವೇ ಇಲ್ಲ. ದೇಶದಲ್ಲಿ ರಾಜಕೀಯವನ್ನು ಧರ್ಮ|ದಿಂದ ಪ್ರತ್ಯೇಕಗೊಳಿಸಲೇಬೇಕು. ಅದರಲ್ಲೂ ಪ್ರಮುಖವಾದ ಒಂದು ಧರ್ಮ ಬೀರುತ್ತಿರುವ ಪ್ರಭಾವವನ್ನು ತಪ್ಪಿಸಲೇಬೇಕು ಎಂದು ಸಲಹೆ ನೀಡಿದರು.

ದಲಿತರ ನಾಯಕನಾಗಿದ್ದು ದುರಂತ: ಅಂಬೇಡ್ಕರ್‌ ಕೇವಲ ದಲಿತರ ಶ್ರೇಯಸ್ಸಿಗಾಗಿ ದುಡಿದಿಲ್ಲ. ಕಾರ್ಮಿಕರು, ಮಹಿಳೆಯರ ಪರವಾಗಿ ಹೋರಾಡಿದರು. ಇಂದು ಕಾರ್ಮಿಕರು ಅನುಭವಿಸುತ್ತಿರುವ ಬಹುತೇಕ ಎಲ್ಲ ಸೌಲಭ್ಯಗಳೂ ಅಂಬೇಡ್ಕರ್‌ ಹೋರಾಟದ ಶ್ರಮದಿಂದ ಆಗಿವೆ. ಆದರೆ, ಇದನ್ನು ಕಾರ್ಮಿಕರು ಇಂದು ನೆನಪಿಟ್ಟುಕೊಂಡೇ ಇಲ್ಲ.

ಮಹಿಳೆಯರಿಗೆ ಸಂಬಂಧಿಸಿದ ಅನೇಕ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು. ಮಹಿಳೆಯರೂ ಅವರನ್ನು ನೆನೆಸಿಕೊಳ್ಳುತ್ತಿಲ್ಲ. ಅಂಬೇಡ್ಕರ್‌ ಅವರನ್ನು ಇವರಿಬ್ಬರೂ ಮರೆಯುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಅವರು ವಿಷಾದಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಜೆ. ಸೋಮಶೇಖರ ಅತಿಥಿಯಾಗಿ ದ್ದರು. ಡಾ.ಬಿ.ಆರ್.ಅಂಬೇಡ್ಕರ್‌ ಪೀಠದ ಸಂದರ್ಶಕ ಪ್ರಾಧ್ಯಾಪಕ ಮೂಡ್ನಾಕೂಡು ಚಿನ್ನಸ್ವಾಮಿ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT