ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಿಸುವ ಹುನ್ನಾರ: ಆತಂಕ

Last Updated 15 ಏಪ್ರಿಲ್ 2017, 6:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಂವಿಧಾನ ಶಿಲ್ಪಿ’ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರ 126ನೇ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿ ಇರುವ ಅಂಬೇಡ್ಕರ್‌ ಕಂಚಿನ ಪ್ರತಿಮೆಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಸಮತಾ ಸೇನೆ, ಎಬಿವಿಪಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ಸಂವಿಧಾನಕ್ಕೆ ಧಕ್ಕೆ: ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ದೇಶದಲ್ಲಿ ಇಂದು ಅಂಬೇಡ್ಕರ್‌ ಅವರ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟುಮಾಡುವ ಘಟನೆಗಳು ನಡೆಯುತ್ತಿವೆ. ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರಗಳು ನಡೆದಿದ್ದು, ಈ ಬಗ್ಗೆ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್‌ ಮುಧೋಳ, ಕಾಂಗ್ರೆಸ್‌ ವೈದ್ಯಕೀಯ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಮಹೇಶ್‌ ನಾಲವಾಡ, ದಶರಥ ವಾಲಿ, ಜಕ್ಕಪ್ಪನವರ, ಮೋಹನ ಹಿರೇಮನಿ ಇದ್ದರು.

ಪಂಚಕ್ಷೇತ್ರಗಳ ಅಭಿವೃದ್ಧಿ: ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಅವರು ಹುಟ್ಟಿದ ಸ್ಥಳ, ಕಲಿತ ಶಾಲೆ, ವಾಸಿಸಿದ ಮನೆ ಮತ್ತು ಅಂತ್ಯಹೊಂದಿದ ಸ್ಥಳಗಳನ್ನು ಒಳಗೊಂಡಂತೆ ಪಂಚಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.

ಅಂಬೇಡ್ಕರ್‌ ವಿಚಾರಧಾರೆಗಳನ್ನು ದೇಶದ ಪ್ರತಿ ಹಳ್ಳಿ, ಹಳ್ಳಿಗಳಿಗೆ, ಗಲ್ಲಿ, ಗಲ್ಲಿಗಳಿಗೆ ತಲುಪಿಸುವ ಕಾರ್ಯ ಪ್ರಧಾನಿ ಮೋದಿ ಅವರ ಆಶಯದಂತೆ ಒಂದು ವರ್ಷದಿಂದ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಡಿ.ಕೆ.ಚವ್ಹಾಣ, ಸದಸ್ಯರಾದ ಶಿವಾನಂದ ಮುತ್ತಣ್ಣವರ, ಲಕ್ಷ್ಮಿ ಉಪ್ಪಾರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾ.ನಾಗರಾಜ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ ಉಪಸ್ಥಿತರಿದ್ದರು.

ವಿಶೇಷ ಪ್ರಾರ್ಥನೆ: ಬೆಂಗಳೂರಿನ ಗ್ಲೋಬಲ್‌ ವೇ ಆಫ್‌ ಲೈಫ್‌ ಮೆಡಿಟೇಷನ್‌ನ ಬಂಥೆ ಮಾತ ಮೈತ್ರಿ ಅವರು ಅಂಬೇಡ್ಕರ್‌ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪೊಲೀಸ್‌ ಕಮಿಷನರ್‌ ಪಾಂಡುರಂಗ ಠಾಣೆ, ಸಮತಾಸೈನಿಕ ದಳದ ಉತ್ತರ ಕರ್ನಾಟಕ ಅಧ್ಯಕ್ಷ ಪೀತಾಂಬರಪ್ಪ ಬೀಳಾರ, ಬಿಎಸ್‌ಪಿಯ ಪ್ರೇಮನಾಥ ಚಿಕ್ಕತುಂಬಳ, ಜೆಡಿಯು ಮುಖಂಡ ಎಚ್‌.ಸೋಮಶೇಖರ, ಎಬಿವಿಪಿ ರಾಜ್ಯ ಸಹ ಸಂಚಾಲಕ ವೆಂಕಟೇಶ, ಅಖಿಲ ಭಾರತ ಬಂಜಾರ ಸೇವಾ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಗುರುನಾಥ ಉಳ್ಳಿಕಾಶಿ ಅವರು  ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಮೆರವಣಿಗೆ: ಬಿಜೆಪಿ ಎಸ್‌.ಸಿ.ಮೋರ್ಚಾ ಮತ್ತು ಮಹಿಳಾ ಮೋರ್ಚಾ ವತಿಯಿಂದ ಇಲ್ಲಿನ ದುರ್ಗದ ಬೈಲ್‌ನಿಂದ ಅಂಬೇಡ್ಕರ್‌ ವೃತ್ತದ ವರೆಗೆ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನಡೆಯಿತು.ದಲಿತ ಸಂಘಟನೆಗಳ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಅಂಬೇಡ್ಕರ್‌ ವೃತ್ತದವರೆಗೆ ಬೈಕ್‌ ರ್‍ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT