ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದಲೇ ಶೋಷಿತರ ಅಭಿವೃದ್ಧಿ

Last Updated 15 ಏಪ್ರಿಲ್ 2017, 7:30 IST
ಅಕ್ಷರ ಗಾತ್ರ

ಹಾವೇರಿ: ‘ಇಂದು ತತ್ವ ಸಿದ್ಧಾಂತಗಳನ್ನು ಹೇಳುವವರಿದ್ದಾರೆ, ಆದರೆ, ಕೇಳುವವರೇ ಇಲ್ಲದಂತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ದಲಿತ ಒಕ್ಕೂಟಗಳ ಸಹಯೋಗದಲ್ಲಿ ಇಲ್ಲಿನ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಶುಕ್ರವಾರ ನಡೆದ ‘ಡಾ.ಬಾಬು ಜಗಜೀವನರಾಂ  110ನೇ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ 125ನೇ ಜನ್ಮ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ ಇಬ್ಬರು ಮಹಾನ್‌ ವ್ಯಕ್ತಿಗಳ ಜನ್ಮದಿನಾಚರಣೆಗೆ ಜನರೇ ಇಲ್ಲದಿರುವುದು ಬೇಸರದ ಸಂಗತಿ. ಅವರಿಬ್ಬರ ಶ್ರಮದ ಫಲ ಬೇಕಾಗಿದೆ. ಆದರೆ, ಸ್ಮರಣೆ ತತ್ವ ಸಿದ್ಧಾಂತದ ಅನುಸರಣೆ ವಿರಳವಾಗುತ್ತಿದೆ’ ಎಂದರು.

‘ರಾಜ್ಯದ ಎಲ್ಲ ಶೋಷಿತ ಸಮುದಾಯದ ಜನರಿಗೆ ವರ್ಷದೊಳಗೆ ನಿವೇಶನ ಹಾಗೂ ವಸತಿ ಕಲ್ಪಿಸಲು ನಮ್ಮ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.
‘ರಾಜ್ಯ ಸರ್ಕಾರವು ಶೇ 24.1ರಷ್ಟು ಅನುದಾನವನ್ನು ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿಯೇ ಮೀಸಲಿಟ್ಟಿದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಶೋಷಿತ ಸಮುದಾಯಗಳ 84 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದೆ’ ಎಂದರು.

ರಾಜ್ಯ ಅಪ್ನಾ ದೇಶ್ ಅಸೋಶಿಯೇಷನ್‌ ಉಪಾಧ್ಯಕ್ಷ ಡಾ.ಆರ್‌.ಎನ್‌.ರಾಜಾನಾಯ್ಕ ಮಾತನಾಡಿ, ‘ಶೋಷಿತ ಸಮುದಾಯಗಳಿಗೆ ಮುಖ್ಯವಾಗಿ ಶಿಕ್ಷಣ ಹಾಗೂ ರಾಜಕೀಯದಲ್ಲಿ ಹೆಚ್ಚು ಮೀಸಲಾತಿ ಬೇಕಾಗಿದೆ. ಆದರೆ, ಶಿಕ್ಷಣದ ಖಾಸಗೀಕರಣದಿಂದ ಶೋಷಿತ ಸಮುದಾಯಗಳ ಮೀಸಲಾತಿ ಕಡಿತಗೊಳಿಸಲಾಗುತ್ತಿದೆ. ರಾಜಕೀಯದಲ್ಲಿನ ಮೀಸಲಾತಿಯೂ ನಿಧಾನಗತಿಯಲ್ಲಿ ಕಡಿಮೆಆಗುತ್ತದೆ’ ಎಂದರು.

‘ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ವಿಚಾರಧಾರೆಯನ್ನು ನೇಣುಗಂಬಕ್ಕೆ ಏರಿಸಲಾಗುತ್ತಿದೆ. ಆದರೆ, ಅವರು ಇಡೀ ವಿಶ್ವಕ್ಕೆ ಮಾದರಿ ಎಂಬುದನ್ನು ಮರೆಯುವಂತಿಲ್ಲ. ಸರ್ಕಾರವು ಹಲವು ಯೋಜನೆಗಳ ಬದಲಾಗಿ, ಶಿಕ್ಷಣ ನೀಡುವ ಮೂಲಕ ಶೋಷಿತರ ಅಭಿವೃದ್ಧಿ ಮಾಡಬೇಕು’ ಎಂದರು.
‘ದೇಶದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇದೆ’ ಎಂದ ಅವರು, ‘ಇಂದು ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಸಾಧಿಸಬೇಕಾಗಿದೆ’ ಎಂದರು.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಹನುಮಂತಪ್ಪ ಸಂಜೀವಣ್ಣನವರ ಮಾತನಾಡಿ, ‘ಅಂಬೇಡ್ಕರ್ ಮತ್ತು ಬಾಬುಜಗಜೀವನರಾಂ ಶೋಷಿತರನ್ನು ಸಮಾನತೆಯಿಂದ ಕಾಣುವಂತೆ ಮಾಡಲು ಶ್ರಮಿಸಿದ ಮಹಾನ್‌ ವ್ಯಕ್ತಿಗಳು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮತಾಜಬಿ ತಡಸ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಕಾಶ ಬನ್ನಿಕೋಡ, ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಉಪಾಧ್ಯಕ್ಷ ಇರ್ಫಾನ್‌ ಪಠಾಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಉಪಾಧ್ಯಕ್ಷೆ ನಾಗಮ್ಮ ಬಂಕಾ ಪುರ, ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಮತ್ತಿತರರು ಇದ್ದರು.

ಕಾಂಗ್ರೆಸ್‌ ಸೇವಾದಳ: ಹಾವೇರಿಯ ಬಸವೇಶ್ವರ ನಗರ ‘ಸಿ’ ಬ್ಲಾಕ್‌ನಲ್ಲಿ ಕಾಂಗ್ರೆಸ್‌ ಸೇವಾದಳದ ನಗರ ಮಹಿಳಾ ಘಟಕದಿಂದ ‘ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ’ ಶುಕ್ರವಾರ ಆಚರಿಸಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ್‌ ಕೆ.ಎಸ್.ಹೊಸಮನಿ, ಮುರುಗೇಶ ಕುಮಾರ್ ಹಿರೇಮಠ, ಕುಂಟೆ ವಕೀಲರು ಹಾಗೂ ಪಲ್ಲೇದ ಅವರನ್ನು ಸನ್ಮಾನಿಸಲಾಯಿತು. ಶಹರ ಘಟಕದ ಅಧ್ಯಕ್ಷೆ ಪುಷ್ಪಲತಾ ಚಕ್ರಸಾಲಿ, ಯುವ ಸಂಘಟಕ ಹನುಮಂತಪ್ಪ ಉತ್ತರಕರ, ಗಣೇಶ ಹೊಸಮನಿ, ಸಂತು ಪ್ರಮೋದ, ಪ್ರಜ್ವಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT