ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಡುಗಾಡು ಸಿದ್ಧರಿಗೆ 180 ಮನೆ ನಿರ್ಮಾಣ’

Last Updated 15 ಏಪ್ರಿಲ್ 2017, 9:17 IST
ಅಕ್ಷರ ಗಾತ್ರ


ಹೊಳಲ್ಕೆರೆ: ‘ರಾಮಗಿರಿಯಲ್ಲಿ ಸುಡುಗಾಡು ಸಿದ್ಧರಿಗೆ 180 ಮನೆಗಳನ್ನು ನಿರ್ಮಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.ತಾಲ್ಲೂಕಿನ ರಾಮಗಿರಿಯ ಸುಡುಗಾಡು ಸಿದ್ಧರ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ಗ್ರಾಮ ವಾಸ್ತವ್ಯ ಸಂದರ್ಭ ಅವರು ಮಾತನಾಡಿದರು.

‘ನಾಲ್ಕು ಎಕರೆ ಜಾಗದಲ್ಲಿ ತಲಾ₹ 3.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಬಡಾವಣೆ ನಿರ್ಮಿಸಿದ್ದು, ಎಲ್ಲಾ ಮೂಲಸೌಕರ್ಯ ಒದಗಿಸಲಾಗುವುದು. ರಸ್ತೆ, ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು, ಶಾಲೆ, ಸಮುದಾಯ ಭವನ ನಿರ್ಮಿಸಲಾಗುವುದು. ಪ್ರತಿ ಮನೆಗೂ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ಮಳೆಗಾಲ ಆರಂಭವಾದ ನಂತರ ಮನೆಗಳನ್ನು ನಿರ್ಮಿಸಲಾಗುವುದು’ ಎಂದರು.

‘ನಾನು ಸಚಿವನಾದ ಮೇಲೆ ಏಳು ಜಿಲ್ಲೆಗಳ ಆದಿವಾಸಿಗಳ ಹಾಡಿಗಳಲ್ಲಿ ತಂಗಿದ್ದು ಅವರ ಕಷ್ಟ ಅರಿತಿದ್ದೇನೆ. ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಅವರಿಗೆ ಪಡಿತರ, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಹೊಳಲ್ಕೆರೆ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಶಾಸಕ, ಸಚಿವನಾಗಿದ್ದು ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ರಸ್ತೆ, ಸಮುದಾಯ ಭವನಗಳು, ಆಸ್ಪತ್ರೆ, ಶಾಲಾ ಕಾಲೇಜುಗಳನ್ನು ನಿರ್ಮಿಸಲಾಗಿದೆ’ ಎಂದರು.

₹ 35 ಕೋಟಿ ವೆಚ್ಚದ ಕಾಮಗಾರಿಗೆ  ಇಂದು ಚಾಲನೆ:  ಏ.15ರಂದು ರಾಮಗಿರಿಯಲ್ಲಿ ಅಂಬೇಡ್ಕರ್ ಭವನ, ಕಾಳಿಕಾಂಬ ಸಮುದಾಯ ಭವನ, ವಿರಕ್ತ ಮಠದ ಸಮುದಾಯಭವನ, ದೇವಾಂಗ ಸಮುದಾಯ ಭವನ, ಯಾದವ ಸಮುದಾಯ ಭವನ, ವಾಲ್ಮೀಕಿ ಭವನ, ಮಡಿವಾಳ ಸಮುದಾಯ ಭವನ, ಗುಂಡೇರಿ ರಸ್ತೆ ಅಭಿವೃದ್ಧಿ, ಗೊಲ್ಲರ ಹಟ್ಟಿ, ಆಚಾರ್ ಬೀದಿ, ಕುಂಬಾರ ಬೀದಿ, ಪರಿಶಿಷ್ಟರ ಕಾಲೊನಿ, ಕೊರಚರಹಟ್ಟಿ ಕಾಲೊನಿಯಲ್ಲಿ ಸಿಸಿ ರಸ್ತೆ,  ಓವರ್ ಹೆಡ್ ಟ್ಯಾಂಕ್, ಕಣಿವೆಹಳ್ಳಿ ಮಾರ್ಗದ ರಸ್ತೆ, ತಾಳಿಕಟ್ಟೆ ರಸ್ತೆ, ಸೇತುವೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಆಸ್ಪತ್ರೆ ಕಟ್ಟಡ, ಬಸ್ ನಿಲ್ದಾಣ, ಸಂತೆ ಮೈದಾನ, ಬಸಾಪುರ ಗೇಟ್ ರಸ್ತೆ ವಿಸ್ತರಣೆ, ಶಾಲಾ ಕೊಠಡಿ, ದಾಸಿಕಟ್ಟೆಯಲ್ಲಿ ಸಿ.ಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೂಮಿ ಪೂಜೆ ನೆರವೇರಿಸುವರು.

ಸಚಿವರು ರಾಮಗಿರಿ ಗ್ರಾಮ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT