ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯರ ಸ್ಪಂದನ

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮನ ಮುಟ್ಟಿದ ಮಾತು

‘ರಾಗದಾಚೆಗಿನ ಭಾವಯಾನ’ – ಕಿಶೋರಿ ಅಮೋಣಕರ್ ಕುರಿತ ಶ್ರೀಮತಿದೇವಿಯವರು ಬರೆದ ಭಾವನೆಗಳ ಮಾತು (ಏ. 9) ಮನ ತಟ್ಟಿತು. ಅವರ ಸಂಗೀತದ ಯಾತ್ರೆಯ ಝಲಕ್‌ಗಳನ್ನು ಸವಿದ ನಮಗೆ ಅವರ ಸಾವು ಮನಸ್ಸಿಗೆ ಬೇಸರವೆನಿಸಿತು. ‘ಧ್ವನಿ ವಜ್ರದಷ್ಟು ಹರಿತ ಹಾಗೂ ಶಕ್ತಿಯುತ, ಹೂವಿನಷ್ಟು ಮೃದುವೂ ಹೌದು’ ಎನ್ನುವ ಮಾತು ಕಿಶೋರಿ ಅವರ ಕಂಠಕ್ಕೆ ಒಪ್ಪುವ ಬಣ್ಣನೆ.
–ತೇಜಸ್ವಿ ಎಸ್.ವಿ., ದಾವಣಗೆರೆ

***
ಮಾರ್ಮಿಕ ‘ಪಾಲು’

ಆಲೂರು ದೊಡ್ಡನಿಂಗಪ್ಪನವರ ‘ಪಾಲು’ ಕಥೆ (ಏ. 2) ಮಾರ್ಮಿಕವಾಗಿದೆ. ದೇಶದಲ್ಲಿ ಆಹಾರಪದ್ಧತಿ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಕಥೆಗಾರರು ಒಂದು ಊರು–ಕೇರಿ, ಸಮುದಾಯದ ಕಥೆ ಹೇಳುತ್ತಲೇ ವರ್ತಮಾನಕ್ಕೆ ಪ್ರತಿಕ್ರಿಯಿಸಿರುವುದು ಸೊಗಸಾಗಿದೆ. ‘ಭಾವಸೇತು’ ಸ್ಥಿರಶೀರ್ಷಿಕೆಯಡಿ ಪ್ರಕಟಗೊಳ್ಳುವ ಬರಹಗಳು ನಮ್ಮ ಭಾವಲೋಕವನ್ನು ಕಲಕುವಂತಿವೆ.
–ಚೆನ್ನವೀರ ನಾಲ್ವಾಡ, ಚಿಕ್ಕೇನಕೊಪ್ಪ, ಕೊಪ್ಪಳ ಜಿಲ್ಲೆ

***
ಅರಿವಿನ ಹಣತೆ

ಅತ್ಯುತ್ತಮ ವಿಡಂಬನಾ ಸಾಹಿತ್ಯ ಸೃಷ್ಟಿಸಿದ್ದ ಎಚ್.ಎಲ್. ಕೇಶವಮೂರ್ತಿಯವರ ಕುರಿತ ನಾಗತಿಹಳ್ಳಿ ಚಂದ್ರಶೇಖರ್ ಅವರ ಶ್ರದ್ಧಾಂಜಲಿ ಬರಹ ಅರ್ಥಪೂರ್ಣ. ಅವರು ಹೇಳಿರುವಂತೆ ‘ರೈತ–ದಲಿತ ಸಮುದಾಯಗಳ ಸಾಕವ್ವ’ ಆಗುವುದರ ಜೊತೆಜೊತೆಗೆ, ಕಳೆದ ನಾಲ್ಕು ದಶಕಗಳಿಮದ ಮಂಡ್ಯ ಸೀಮೆಯಲ್ಲಿ ನಡೆಯುತ್ತಿದ್ದ ಜನಪರವಾದ ಎಲ್ಲಾ ಬಗೆಯ ಚಳವಳಿಗಳಲ್ಲೂ ಕೇಶವಮೂರ್ತಿ ಕ್ರಿಯಾಶೀಲರಾಗಿದ್ದರು. ಜನಸಮುದಾಯಗಳು ತಂತಮ್ಮ ಜಾತಿ–ಧರ್ಮ–ದೇವರುಗಳ ಸೀಮಿತವಾದ ಎಲ್ಲೆಗಳಿಂದ ಹೊರಬಂದು ಒಂದಾಗಿ ಬಾಳಬೇಕೆಂಬ ಅರಿವನ್ನು ಮೂಡಿಸುತ್ತಿದ್ದರು. ಅಬ್ಬರದ ದನಿಯಿಲ್ಲದ, ಗಂಭೀರವಾದ ನಡೆನುಡಿಯ ಅವರು ತಮ್ಮ ಬರಹ , ಮಾತು ಮತ್ತು ಕ್ರಿಯೆಗಳಿಂದ ಹಚ್ಚಿದ ಅರಿವಿನ ಹಣತೆಯು ಜನಮನದಲ್ಲಿ ಎಂದೆಂದಿಗೂ ಬೆಳಗುತ್ತಿರಲೆಂದು ಬಯಸುತ್ತೇನೆ.
–ಸಿ.ಪಿ. ನಾಗರಾಜ, ಬೆಂಗಳೂರು

***
ಎರಡು ಸ್ಪಂದನ

‘ಇದೀಗ ಟ್ರೀ ಟೈಮ್’ ಲೇಖನವನ್ನು (ಲೇ: ಸುಮನಾ ರಾಯ್ / ನರೇಂದ್ರ ಪೈ, ಏ. 2) ಗೌರಿ ಸಿದ್ಧಿ ಮೆಚ್ಚಿಕೊಂಡಿದ್ದಾರೆ. ಸರಿ. ಆದರೆ ‘ಸ್ತ್ರೀ’ಯರೆಲ್ಲ ‘ಟ್ರೀ’ಗಳಾಗಬಯಸಿದರೆ, ‘ಅಪ್ಪಿಕೋ ಚಳವಳಿ’ ಎಲ್ಲೆಡೆ ಜೋರಾಗಬಹುದಲ್ಲವೆ? (ಜನಪದದಲ್ಲೂ ಇದೇ ಆಶಯ: ‘ಮಣ್ಣಿನ ಮೇಲೆ ಮರವಾಗಿ ಹುಟ್ಟಿದರೆ, ದಾರಿಕಾರರಿಗೆ ನೆರಳಾದೆ!’).

ಇನ್ನು ‘ಎಚ್ಚೆಲ್ಕೆ’ ಬಗೆಗಿನ ಲೇಖನದಲ್ಲಿ ನಾಗತಿಹಳ್ಳಿ ಹೇಳುತ್ತಾರೆ: ‘ಆದರ್ಶಗಳಿಗೆ ಸಾವಿಲ್ಲ’. ವಯಸ್ಸಾದಂತೆ, ಇಂಥ ಮಾತುಗಳಲ್ಲಿ ನನಗೆ ನಂಬಿಕೆ ಕುಸಿಯುತ್ತಿದೆ!
–ಸಿಪಿಕೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT