ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲ್ಸ್‌ಟಾಯ್ ಮ್ಯೂಸಿಯಮ್ಮಿನಲ್ಲಿ

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಡೋನಲ್ಡ್ ಬಾರ್ಥೆಲ್ಮ್ ಬರಹದ ಅನುವಾದ

**
ವು ಟಾಲ್‌ಸ್ಟಾಯ್ ಮ್ಯೂಸಿಯಮ್ಮಿನಲ್ಲಿ ಕುಳಿತು ಅತ್ತುಬಿಟ್ಟೆವು. ನಮ್ಮ ಕಣ್ಣುಗಳಿಂದ ಹೊರಬಂದವು ಕಾಗದದ ಟೇಪುಗಳು. ನಮ್ಮ ದೃಷ್ಟಿ ಚಿತ್ರಗಳತ್ತ ಸಾಗಿತು. ಚಿತ್ರಗಳು ಗೋಡೆಯ ಮೇಲೆ ತುಂಬ ಎತ್ತರದಲ್ಲಿದ್ದವು. ನಾವು ಆ ಚಿತ್ರಗಳನ್ನು ಕೊನೆಯ ಪಕ್ಷ ಐದು ಇಂಚುಗಳಷ್ಟಾದರೂ ಕೆಳಗಿಳಿಸಬೇಕೆಂದು ಡೈರೆಕ್ಟರರಿಗೆ ಹೇಳಿದೆವು. ಅವರು ಅಷ್ಟೇನೂ ಸಂತೋಷಪಟ್ಟವರಂತೆ ಕಾಣದಿದ್ದರೂ ನೋಡೋಣ ಎಂದರು. ಟಾಲ್ಸ್‌ಟಾಯ್ ಮ್ಯೂಸಿಯಮ್ಮಿನ ಆಸ್ತಿಯಲ್ಲಿ ಕೌಂಟ್ ಲಿಯೊ ಟಾಲ್ಸ್‌ಟಾಯಿಯ ಸುಮಾರು ಮೂವತ್ತು ಸಾವಿರ ಚಿತ್ರಗಳು ಸೇರಿವೆ.

ಆ ಚಿತ್ರಗಳನ್ನು ಕೆಳಗಿಳಿಸಿದ ಮೇಲೆ ನಾವು ಮತ್ತೆ ಟಾಲ್ಸ್‌ಟಾಯ್ ಮ್ಯೂಸಿಯಮ್ಮಿಗೆ ಹೋದೆವು. ಒಬ್ಬ ಮನುಷ್ಯನ ಮುಖವನ್ನು ದೀರ್ಘವಾಗಿ ತುಂಬಾ ದೀರ್ಘ ಕಾಲ – ನೋಡಲಾಗದೆಂದು ನನಗನ್ನಿಸುತ್ತದೆ. ಅನೇಕಾನೇಕ ಮನುಷ್ಯ ಭಾವನೆಗಳನ್ನು ಒಳಗಿನಿಂದಲೇ ಗ್ರಹಿಸಬಹುದು.

(ಟಾಲ್‌ಸ್ಟಾಯಿಯ ಕೋಟು)

ರಷ್ಯನ್‌ನಲ್ಲಿ ಟಾಲ್ಸ್‌ಟಾಯ್ ಅಂದರೆ ‘ಕೊಬ್ಬು’ ಎಂದರ್ಥ. ಅವನ ಅಜ್ಜ ತನ್ನ ಬಟ್ಟೆಗಳನ್ನು ಹಾಲೆಂಡಿಗೆ ಕಳಿಸುತ್ತಿದ್ದ, ಒಗೆಯುವುದಕ್ಕೆ. ಅವನ ತಾಯಿಗೆ ಯಾವುದೇ ಕೆಟ್ಟ ಮಾತೂ ಗೊತ್ತಿರಲಿಲ್ಲ. ಹುಡುಗನಾಗಿದ್ದಾಗ ಟಾಲ್ಸ್‌ಟಾಯ್ ಹುಲುಸಾಗಿ ಬೆಳೆಯಲೆಂದೇ ತನ್ನ ಹುಬ್ಬುಗಳನ್ನು ಶೇವ್ ಮಾಡುತ್ತಿದ್ದುದುಂಟು. 1847ರಲ್ಲಿ ಅವನಿಗೆ ಮೊಟ್ಟಮೊದಲು ಗೊನೋರಿಯಾ ಸೋಕಿತು. ಒಮ್ಮೆ ಕರಡಿಯೊಂದು ಅವನ ಮುಖವನ್ನು ಕಚ್ಚಿದ್ದುಂಟು. 1885ರಲ್ಲಿ ಸಸ್ಯಾಹಾರಿಯಾದ. ಜನರು ತನ್ನನ್ನು ಗಮನಿಸಲೆಂದೇ ಆಗಾಗ ಹಿಂದಕ್ಕೆ ಬಾಗಿ ನಮಿಸುತ್ತಿದ್ದ.

ನಾನು ಟಾಲ್ಸ್‌ಟಾಯ್ ಮ್ಯೂಸಿಯಮ್ಮಿನಲ್ಲಿ ಒಂದು ಸ್ಯಾಂಡ್‌ವಿಚ್ ತಿನ್ನುತ್ತಿದ್ದೆ. ಟಾಲ್ಸ್‌ಟಾಯ್ ಮ್ಯೂಸಿಯಮ್ ಕಟ್ಟಲಾಗಿರುವುದು ಕಲ್ಲಿನಿಂದ – ಕುಶಲತೆಯಿಂದ ಕೆತ್ತಿದ ಅನೇಕ ಕಲ್ಲುಗಳಿಂದ. ರಸ್ತೆಯಿಂದ ನೋಡಿದರೆ ಅದು ಕಾಣಿಸುವುದು ಒಂದರ ಮೇಲೊಂದಿಟ್ಟ ಮೂರು ಪೆಟ್ಟಿಗೆಗಳ ಹಾಗೆ – ಮೊದಲನೆಯ, ಎರಡನೆಯ ಮತ್ತು ಮೂರನೆಯ ಹಂತಗಳು. ಗಾತ್ರದಲ್ಲಿ ಕ್ರಮೇಣ ಹೆಚ್ಚುತ್ತಾ ಹೋಗುವ ಹಂತಗಳು. ಉದಾಹರಣೆಗೆ ಮೊದಲ ಹಂತ ಷೂಬಾಕ್ಸಿನ ಸೈಜು, ಎರಡನೆಯ ಹಂತ ವಿಸ್ಕಿಯ ಒಂದು ಪೆಟ್ಟಿಗೆಯ ಸೈಜು, ಮೂರನೆಯದು ಹೊಸ ಓವರ್‌ಕೋಟಿರುವ ಪೆಟ್ಟಿಗೆಯ ಸೈಜು. ಅಚ್ಚರಿ ಹುಟ್ಟಿಸುವಂತಿರುವ ಮೂರನೆಯ ಹಂತದ ಚಾಚು ತೊಲೆಯ ಬಗ್ಗೆ ಸಾಕಷ್ಟು ಹೇಳಲಾಗಿದೆ. ಅಲ್ಲಿರುವ ಗಾಜಿನ ನೆಲ ನಮ್ಮನ್ನು ನೇರವಾಗಿ ನೋಡುವಂತೆ ಮಾಡುವುದಲ್ಲದೆ ನಮಗೆ ‘ತೇಲುತ್ತಿರುವ’ ಅನುಭವವನ್ನು ಕೂಡ ಉಂಟುಮಾಡುತ್ತದೆ. ಬೀದಿಯಿಂದ ನೋಡಿದಾಗ ಇಡೀ ಕಟ್ಟಡ ನಮ್ಮ ಮೇಲೆ ಬಿದ್ದುಬಿಡುವಂತೆ ಭಾಸವಾಗುವುದುಂಟು. ಆರ್ಕಿಟೆಕ್ಟುಗಳ ಪ್ರಕಾರ ಹೀಗೆ ಬಿದ್ದುಬಿಡುವಂತಿರುವುದಕ್ಕೂ ಟಾಲ್ಸ್‌ಟಾಯಿಯ ನೈತಿಕ ಅಧಿಕಾರಕ್ಕೂ ಸಂಬಂಧವಿದೆ.

ಬೇಸ್‌ಮೆಂಟಿನಲ್ಲಿ ಟಾಲ್‌ಸ್ಟಾಯ್ ಮ್ಯೂಸಿಯಮ್ಮಿನ ಬಡಗಿಗಳು ಪೆಟ್ಟಿಗೆಗಳಿಂದ ಕೌಂಟಿ ಲಿಯೊ ಟಾಲ್ಸ್‌ಟಾಯಿಯ ಹೊಸ ಚಿತ್ರಗಳನ್ನು ಹೊರಗೆ ಸುರಿಯುತ್ತಾರೆ. ಭಾರಿ ಭಾರಿ ಪೆಟ್ಟಿಗೆಗಳ ಮೇಲೆ ಜಾಗ್ರತೆ ಎಂದು ಬರೆಯಲಾಗಿದೆ ಕೆಂಪು ಮಸಿಯಲ್ಲಿ... 

(ಅನಾಹುತ ನಡೆದ ಸ್ಥಳ -ಬಾಣದ ಗುರುತು ಟಾಲ್‌ಸ್ಟಾಯ್‌ಯನ್ನು ಸೂಚಿಸುತ್ತದೆ)

ಟಾಲ್ಸ್‌ಟಾಯ್ ಮ್ಯೂಸಿಯಮ್ಮಿನಲ್ಲಿರುವ ಗಾರ್ಡುಗಳು ಅಚ್ಚ ಬಿಳಿಯ, ಶುಭ್ರವಾದ ಕಂತೆ ಕಂತೆ ಹ್ಯಾಂಡ್‌ಕರ್ಚೀಫುಗಳಿರುವ ಬಕೀಟುಗಳನ್ನು ಹೊತ್ತು ತರುತ್ತಾರೆ. ಟಾಲ್ಸ್‌ಟಾಯ್ ಮ್ಯೂಸಿಯಮ್ಮು ಬೇರೆ ಯಾವುದೇ ಮ್ಯೂಸಿಯಮ್ಮಿಗಿಂತ ಹೆಚ್ಚಾಗಿ ಅಳಿಸುತ್ತದೆ.  ಟಾಲ್‌ಸ್ಟಾಯಿಯ ಒಂದು ಕೃತಿಯ ಬರೀ ಶೀರ್ಷಿಕೆ ಕೂಡ ತನ್ನ ಪ್ರೀತಿಯ ಭಾರದಿಂದಾಗಿ ಅಳುವಂತೆ ಮಾಡುತ್ತದೆ. ಉದಾಹರಣೆಗೆ ‘ಯಾರು ಯಾರಿಗೆ ಬರೆಯುವುದನ್ನು ಕಲಿಸಬೇಕು – ನಾವು ರೈತ ಮಕ್ಕಳಿಗೋ ರೈತ ಮಕ್ಕಳು ನಮಗೋ?’ ಎಂಬ ಶೀರ್ಷಿಕೆಯ ಲೇಖನ.  ಅನೇಕ ಮಂದಿ ಈ ಲೇಖನದ ಎದುರಿಗೆ ಅಳುತ್ತಾ ನಿಂತುಬಿಡುತ್ತಾರೆ. ರೂಮು ರೂಮುಗಳಲ್ಲಿರುವ ಬಗೆಬಗೆಯ ಭಾವಚಿತ್ರಗಳಲ್ಲಿ ಟಾಲ್ಸ್‌ಟಾಯಿಯ ಕಣ್ಣುಗಳಿಗೆ ಸೆರೆಸಿಕ್ಕವರು ಕೂಡ ಈ ಅನುಭವದಿಂದ ಪಾರಾಗುವರೆಂದು ಹೇಳುವಂತಿಲ್ಲ. ಅದು ಹೇಗೆಂದರೆ ಸಣ್ಣದೊಂದು ಅಪರಾಧ ಮಾಡಿದ ಮೇಲೆ ನಾಲ್ಕು ಬಾಗಿಲುಗಳಲ್ಲೂ ನಿಂತು ನಿಮ್ಮನ್ನು ನೋಡುತ್ತಿರುವ ನಿಮ್ಮ ತಂದೆಗೆ ಸಿಕ್ಕಿಬಿದ್ದಂತೆ ಎನ್ನುತ್ತಾರೆ ಮಂದಿ.

ಟಾಲ್ಸ್‌ಟಾಯ್ ಮ್ಯೂಸಿಯಂನಲ್ಲಿ ನಾನೊಂದು ಕತೆ ಓದುತ್ತಿದ್ದೆ. ಈ ಕತೆಯಲ್ಲಿ ಒಬ್ಬ ಬಿಷಪ್ ಹಡಗಿನಲ್ಲಿ ಪ್ರಯಾಣಿಸುತ್ತಿರುತ್ತಾನೆ. ಅವನ ಸಹ ಪ್ರಯಾಣಿಕರಲ್ಲಿ ಒಬ್ಬ ಮೂವರು ಸನ್ಯಾಸಿಗಳಿರುವ ಒಂದು ದ್ವೀಪದ ಬಗ್ಗೆ ಹೇಳುತ್ತಾನೆ. ಬಿಷಪ್ಪನಿಗೆ ತಕ್ಷಣ ಆ ಸನ್ಯಾಸಿಗಳನ್ನು ನೋಡಿ ಮಾತಾಡಿಸುವ ಆಸೆ. ಅವನು ಆ ದ್ವೀಪದ ಬಳಿ ಲಂಗರು ಹಾಕುವಂತೆ ಹಡಗಿನ ಕ್ಯಾಪ್ಟನ್ನಿನ ಮನವೊಲಿಸುತ್ತಾನೆ. ಒಂದು ಸಣ್ಣ ದೋಣಿಯಲ್ಲಿ ತೀರವನ್ನು ಮುಟ್ಟುತ್ತಾನೆ. ಆ ಸನ್ಯಾಸಿಗಳ ಜೊತೆ ಮಾತಾಡುತ್ತಾನೆ. ಸನ್ಯಾಸಿಗಳು ಅವನಿಗೆ ತಮ್ಮ ದೈವಪೂಜಾ ವಿಧಾನವನ್ನು ವಿವರಿಸುತ್ತಾರೆ. ಅವರು ಮಾಡುವ ಪ್ರಾರ್ಥನೆ ‘ನಾವು ಮೂವರು, ನಾವು ಮೂವರು, ನಮ್ಮ ಮೇಲಿರಲಿ ನಿನ್ನ ಕರುಣೆ’ ಎಂದು ಸಾಗುತ್ತದೆ. ಬಿಷಪ್ಪನಿಗೆ ಅದು ತಪ್ಪು ತಪ್ಪಾಗಿ ಹಾಡುತ್ತಿರುವ ಪ್ರಾರ್ಥನೆ ಎನ್ನಿಸುತ್ತದೆ. ಆಗ ಅವನು ಆ ಸನ್ಯಾಸಿಗಳಿಗೆ ದೇವರ ಪ್ರಾರ್ಥನೆಯನ್ನು ಕಲಿಸಿಕೊಡಲು ಮುಂದಾಗುತ್ತಾನೆ. ಸನ್ಯಾಸಿಗಳು ದೇವರ ಪ್ರಾರ್ಥನೆಯನ್ನು ಕಲಿಯುವುದು ತುಂಬಾ ತುಂಬಾ ಕಷ್ಟಪಟ್ಟು. ಅವರು ಅದನ್ನು ಕಲಿಯುವ ಹೊತ್ತಿಗೆ ರಾತ್ರಿಯಾಗಿಬಿಡುತ್ತದೆ.

(ಹುಲಿಯ ಬೇಟೆ, ಸೈಬೀರಿಯಾ)

ಸನ್ಯಾಸಿಗಳಿಗೆ ಅವರ ದೇವರ ಪೂಜೆಯಲ್ಲಿ ನೆರವಾದೆನಲ್ಲ ಎಂದು ಹಿಗ್ಗುತ್ತ ಹಡಗಿಗೆ ಹಿಂತಿರುಗುತ್ತಾನೆ, ಬಿಷಪ್. ಹಡಗು ಯಾನವನ್ನು ಮುಂದುವರೆಸುತ್ತದೆ. ಬಿಷಪ್ ಒಬ್ಬನೇ ಕುಳಿತು ಆ ದಿನದ ಅನುಭವಗಳನ್ನು ಮೆಲುಕುಹಾಕುತ್ತಾನೆ. ಅವನಿಗೆ ಹಡಗಿನ ಹಿಂದೆ, ಆಕಾಶದಲ್ಲಿ ಒಂದು ಬೆಳಕು ಕಾಣಿಸುತ್ತದೆ. ಅದು ಮೂವರು ಸನ್ಯಾಸಿಗಳು ಪರಸ್ಪರರ ಕೈ ಹಿಡಿದುಕೊಂಡು ತಮ್ಮ ಹೆಜ್ಜೆಗಳನ್ನು ಒಂದಿಷ್ಟೂ ಕದಲಿಸದೆ ನೀರಿನ ಮೇಲೆ ತೇಲುತ್ತಾ ಹೊಮ್ಮಿಸಿದ ಬೆಳಕು. ಅವರು ‘ನಾವು ಮರೆತುಹೋದೆವು ದೈವಸೇವಕ, ನಾವು ಮರೆತುಹೋದೆವು ನೀವು ಕಲಿಸಿದ್ದನ್ನು’ ಎಂದು ಹೇಳುತ್ತ ಹಡಗಿನ ಬಳಿಸಾರುತ್ತಾರೆ. ಬಿಷಪ್ಪನನ್ನು ಮತ್ತೆ ಹೇಳಿಕೊಡುವಂತೆ ಕೇಳಿಕೊಳ್ಳುತ್ತಾರೆ. ಬಿಷಪ್ ತನ್ನ ಎದೆಯ ಮೇಲೆ ಶಿಲುಬೆಯಾಕಾರದಲ್ಲಿ ಕೈಯಾಡಿಸಿಕೊಳ್ಳುತ್ತಾನೆ. ಆಮೇಲೆ ಅವರ ಪ್ರಾರ್ಥನೆಯೂ ದೇವರನ್ನು ತಲಪುವುದೆಂದು ಹೇಳುತ್ತಾನೆ. ‘ನಿಮಗೆ ಕಲಿಸುವವರು ನಾವಲ್ಲ. ಪಾಪಿಗಳಾದ ನಮಗೇ ನೀವು ಪ್ರಾರ್ಥಿಸಬೇಕು!’ ಬಿಷಪ್ ಡೆಕ್ಕಿಗೆ ನಮಿಸುತ್ತಾನೆ. ಸನ್ಯಾಸಿಗಳು ಪರಸ್ಪರ ಕೈ ಹಿಡಿದುಕೊಂಡು ಸಮುದ್ರದ ಮೇಲೆಯೇ ತಮ್ಮ ದ್ವೀಪಕ್ಕೆ ಹಾರಿಹೋಗುತ್ತಾರೆ.

ಇದು ತೀರ ಸರಳ ಶೈಲಿಯಲ್ಲಿ ಬರೆಯಲಾಗಿರುವ ಕತೆ. ಇದರ ಹುಟ್ಟು ಒಂದು ಜಾನಪದ ಕತೆಯಲಿದೆಯೆಂದು ಹೇಳಲಾಗುತ್ತದೆ. ಸೇಂಟ್ ಅಗಸ್ಟೀನ್‌ನಲ್ಲಿ ಇದರದೊಂದು ರೂಪ ಸಿಕ್ಕುತ್ತದೆ. ನಾನು ಈ ಕತೆಯನ್ನು ಓದಿ ನಂಬಲಾಗದಷ್ಟು ನಿರಾಶೆಗೆ ತುತ್ತಾದೆ. ಅದರ ಸೌಂದರ್ಯಕ್ಕೆ, ದೂರಕ್ಕೆ ಮರುಳಾಗಿ.
ಟಾಲ್‌ಸ್ಟಾಯ್ ಮ್ಯೂಸಿಯಮ್ಮಿನಲ್ಲಿ ಭಾನುವಾರದ 741 ಪ್ರೇಕ್ಷಕರಿಗೂ ನಿರಾಶೆ ಕವಿಯಿತು. ಮ್ಯೂಸಿಯಮ್ಮು ‘ಮನುಷ್ಯರೇಕೆ ತಮ್ಮನ್ನು ತಾವು ಮಂಕುಗೊಳಿಸಿಕೊಳ್ಳುತ್ತಾರೆ?’ ಎಂಬ ಪಠ್ಯವನ್ನು ಕುರಿತು ಒಂದು ಉಪನ್ಯಾಸ ಸರಣಿಯನ್ನು ಏರ್ಪಡಿಸಿತ್ತು. ಉಪನ್ಯಾಸಕರ ಮಾತುಗಾರಿಕೆ ವೀಕ್ಷಕರನ್ನು ಇನ್ನಷ್ಟು ನಿರಾಶೆಗೊಳಿಸಿತು. ಬಹುಶಃ ಆ ಭಾಷಣಕಾರರೇ ಸರಿಯೇನೋ.

(ಯುವಕ ಟಾಲ್‌ಸ್ಟಾಯ್)

ಜನರು ಟರ್ಗೆನೆವ್, ನೆಕ್ರಾಸೊವ್ ಮತ್ತು ಫೆತ್‌ರ ಪುಟ್ಟ ಪುಟ್ಟ ಚಿತ್ರಗಳತ್ತ ದಿಟ್ಟಿಸಿದರು. ಅವುಗಳು ಹಾಗೂ ಇತರ ಸಣ್ಣ ಸಣ್ಣ ಚಿತ್ರಗಳು ಕೌಂಟ್ ಲಿಯೊ ಟಾಲ್ಸ್‌ಟಾಯಿಯ ಭಾರೀ ಭಾರೀ ಚಿತ್ರಗಳ ಜೊತೆ ತೂಗುಬಿದ್ದಿದ್ದವು.

ಪ್ಲಾಜಾದಲ್ಲಿ, ದುಷ್ಟ ಸಂಗೀತಗಾರನೊಬ್ಬ ಮರದ ತುತ್ತೂರಿಯೊಂದನ್ನು ಊದುತ್ತಿದ್ದರೆ ಇಬ್ಬರು ಮಕ್ಕಳು ಅವನನ್ನೇ ನೋಡುತ್ತಿದ್ದರು.

ನಾವು ಲೇಖಕನ ಪ್ರಕಟಿತ ಕೃತಿಗಳ 6,40,086 ಪುಟಗಳನ್ನು (ಜ್ಯೂಬಿಲಿ ಆವೃತ್ತಿ) ಪರಾಂಬರಿಸಿದೆವು. ಕೆಲವರಿಗೆ ಅವನು ಹೊರಟುಹೋಗಬೇಕೆನಿಸಿದರೆ, ಇತರರಿಗೆ ಅವನು ನಮ್ಮ ಜೊತೆ ಇದ್ದಾನಲ್ಲ ಎಂದು ಸಂತೋಷ. ಒಬ್ಬ ‘ಇವನೇ ನನಗಿರುವ ಸ್ಫೂರ್ತಿಯ ಸೆಲೆ, ನನ್ನ ಜೀವನಪರ್ಯಂತ’ ಎಂದು ಹೇಳಿದ.

ನಾನು ಏನು ಹೇಳಬೇಕೆಂದು ತೀರ್ಮಾನಿಸಿಲ್ಲ. ಇಲ್ಲಿ ‘ಹಳ್ಳಿಗಾಡಿನಲ್ಲೊಂದು ಬೇಸಿಗೆ’ ಎಂಬ ರೂಮಿನಲ್ಲಿ ನಿಂತಿರುವಾಗ ನನ್ನ ಕಣ್ಣುಗಳ ಮೇಲೆ ಹಲವು ಮಂಜುಗಳು ಹಾದುಹೋಗಿವೆ. ಆದರೂ ‘ಒಬ್ಬ ಜಮೀನುದಾರನ ಬೆಳಗು’ ಎಂಬ ರೂಮಿಗೆ ದಾಪುಗಾಲು ಹಾಕಬೇಕೆನಿಸುತ್ತದೆ. ಬಹುಶಃ ಅಲ್ಲಿ ನನಗೆ ಜೀವಕಳೆ ತುಂಬುವಂಥದ್ದೇನೋ ಉಂಟಾಗಬಹುದು.

(ಮ್ಯೂಸಿಯಂ ಪ್ಲಾಜಾ– ಅದ್ಭುತವಾದ ತಲೆಯ ಜೊತೆ)

***

ಟಿಪ್ಪಣಿಗಳು:

1. ‘ಅನ್ನಾ–ವ್ರಾನ್‌ಸ್ಕಿ ಪೆವಿಲಿಯನ್’ – ಅನ್ನಾ, ವ್ರಾನ್‌ಸ್ಕಿ ‘ಅನ್ನಾ ಕರೇನಿನಾ’ ಕಾದಂಬರಿಯ ಪ್ರೇಮಿಗಳು
2. ‘ಹಳ್ಳಿಗಾಡಿನಲ್ಲೊಂದು ಬೇಸಿಗೆ’ (Summer in the Country), ‘ಒಬ್ಬ ಜಮೀನುದಾರನ ಬೆಳಗು’ (A Landlord’s Morning) – ಇವು ಟಾಲ್ಸ್‌ಟಾಯಿಯ ಪ್ರಸಿದ್ಧ ಕತೆಗಳು

***

ಲೇಖಕರ ಪರಿಚಯ

ಅಮೆರಿಕದ ಪ್ರಸಿದ್ಧ ಕತೆಗಾರ ಡೋನಲ್ಡ್ ಬಾರ್ತೆಲ್ಮ್ (1931–1989) ಹೆಮಿಂಗ್ವೇ ನಂತರ ಸಣ್ಣಕತೆಯ ಪ್ರಕಾರವನ್ನು ತನ್ನ ಅಪೂರ್ವ ಪ್ರಯೋಗಗಳಿಂದ ಪ್ರಭಾವಿಸಿದವನು.

ಈ ಪ್ರಯೋಗಗಳು ಸಣ್ಣಕತೆಯ ಸಾಧ್ಯತೆಗಳನ್ನು ಹಿಗ್ಗಿಸಿದ್ದಷ್ಟೇ ಅಲ್ಲ, ಆಧುನಿಕ ಮನುಷ್ಯನ ಆಶೋತ್ತರಗಳನ್ನು, ಆತಂಕಗಳನ್ನು, ಕನಸುಗಳನ್ನು, ವಾಸ್ತವವನ್ನೇ ಚೀರಿ ಹೇಳಬಲ್ಲ ಸ್ವಪ್ನಸದೃಶ ರೂಪಕಗಳ ಮೂಲಕ ಸೃಷ್ಟಿಸಿದವನು.

ಎಂಟು ಕಥಾ ಸಂಕಲನಗಳಲ್ಲದೆ, ಎರಡು ಕಾದಂಬರಿಗಳನ್ನೂ ಬರೆದ ಈತ ತಾನು ನಿಧನನಾಗುವವರೆಗೂ ‘ಹ್ಯೂಸ್ಟನ್ ವಿಶ್ವವಿದ್ಯಾಲಯ’ದಲ್ಲಿ ಸೃಜನಶೀಲ ಸಾಹಿತ್ಯವನ್ನು ಬೋಧಿಸಿದವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT