ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸರ್ಕಸ್‌: ಕೊನೆಯ ಅಂಕ?

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕಣ್ಣು ಕೋರೈಸುವ ದೀಪಗಳ ಬೆಳಕಲ್ಲಿ ಮೈಜುಮ್ಮೆನ್ನಿಸುವ ಚಮತ್ಕಾರಗಳು, ನೆಲದ ಹಂಗು ತೊರೆದಂತೆ ಉಯ್ಯಾಲೆಯನ್ನು ಜೀಕುತ್ತ ನೆಗೆಯುವ ಸಾಹಸಗಳು, ವನ್ಯಮೃಗಗಳ ಬಗೆ ಬಗೆಯ ಪ್ರದರ್ಶನ, ವಿಚಿತ್ರ ವೇಷಗಳ ವಿದೂಷಕರಿಂದ ಹಾಸ್ಯದ ಹೊನಲು – ಸರ್ಕಸ್‌ ಎಂದಕೂಡಲೆ ನೆನಪಾಗುವ ಕೆಲವು ಚಿತ್ರಗಳಿವು.
ದೊಡ್ಡ ಡೇರೆಯ ಕೆಳಗೆ ನಡೆಯುವ ‘ಸರ್ಕಸ್‌’ ಎಂಬ ಈ ಅದ್ಭುತಲೋಕ ವೀಕ್ಷಿಸಲು ಮುತ್ತಿಕೊಂಡ ನೋಡುಗರು; ಅವರಲ್ಲಿ ಹೆಚ್ಚಿನವರು ಚಿಣ್ಣರು. ಇವೆಲ್ಲ ಎರಡು ಮೂರು ದಶಕಗಳ ಹಿಂದಿನ ದೃಶ್ಯಗಳು. ಈ ಸರ್ಕಸ್‌ ಜಗತ್ತು ಈಗ ಕೊನೆಯ ಅಂಕದ ಕಡೆಗೆ ಸಾಗುತ್ತಿದೆ. ಅದರಲ್ಲೂ ಭಾರತೀಯ ಸರ್ಕಸ್‌ ಬದುಕಲು ಏದುಸಿರುಬಿಡುತ್ತಿದೆ.

ಶತಮಾನ ಮೀರಿದ ಇತಿಹಾಸ
ನೂರಾರು ವರ್ಷಗಳಿಂದ ಬೇರೆ ಬೇರೆ ರೂಪಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಸರ್ಕಸ್‌ ಭಾರತದಲ್ಲಿ ದೊಡ್ಡ ಡೇರೆಯ ಕೆಳಗೆ ತೆರೆದುಕೊಂಡಿದ್ದು 1880ರಲ್ಲಿ. ಇದಕ್ಕೊಂದು ಕಾರಣವೂ ಇದೆ.

ಮುಂಬೈ ನಗರದಲ್ಲಿ ಇಟಲಿಯ ಸರ್ಕಸ್‌ ಕಂಪೆನಿಯೊಂದು 1878ರ ಸಮಯದಲ್ಲಿ ಡೇರೆ ಹಾಕಿ ಪ್ರದರ್ಶನಕ್ಕೆ ಅಣಿಯಾಗಿತ್ತು. ಆಗ ಕುದುರೆಗಳೇ ಸರ್ಕಸ್‌ನ ಮುಖ್ಯ ಆಕರ್ಷಣೆ. ಕಂಪೆನಿಯ ಮುಖ್ಯಸ್ಥ ವಿಲಿಯಂ ಚಿರ್ನಿ ಕುದುರೆಯ ಮೇಲೆ ಕುಳಿತು ಹಲವಾರು ಚಮತ್ಕಾರಗಳನ್ನು ಪ್ರದರ್ಶಿಸಿದ. ಪ್ರೇಕ್ಷಕರು ಉಸಿರು ಬಿಗಿಹಿಡಿದು ಕುಳಿತುಕೊಳ್ಳುವಂತೆ ಮಾಡಿದ್ದ ಆ ಪ್ರದರ್ಶನದ ನಂತರ ಚಿರ್ನಿ – ‘ತನ್ನ ಪ್ರದರ್ಶನವನ್ನು ಸರಿಗಟ್ಟುವವರು ಯಾರಾದರೂ ಇದ್ದಾರೆಯೇ?’ ಎಂಬ ಸವಾಲು ಎಸೆದ. ‘ಆರು ತಿಂಗಳು ಅವಕಾಶ ಕೊಡುವೆ. ತಾನು ಮಾಡಿದ ಕಸರತ್ತುಗಳನ್ನು ಮಾಡಿ ತೋರಿಸಲು ಸಾಧ್ಯವೇ?’ ಎಂದು ಕೆಣಕಿದ.

ಚಿರ್ನಿ ಪ್ರತಿಕ್ರಿಯೆಯ ನಿರೀಕ್ಷೆ ಮಾಡಿರಲಿಲ್ಲವೆಂದು ಅನ್ನಿಸುತ್ತದೆ. ಆತನನ್ನು ವಿಚಲಿತಗೊಳಿಸುವಂತೆ ಪ್ರೇಕ್ಷಕರ ನಡುವೆ ಕುಳಿತು ಪ್ರದರ್ಶನ ವೀಕ್ಷಿಸುತ್ತಿದ್ದ ಕಟ್ಟುಮಸ್ತಾದ, ಎತ್ತರದ ನಿಲುವಿನ ವ್ಯಕ್ತಿಯೊಬ್ಬ ಚಂಗನೆ ಅಂಗಳಕ್ಕೆ ಜಿಗಿದು ಬಂದ. ಸವಾಲು ಸ್ವೀಕರಿಸಿದ. ಆತ ಕುದುರೆಯೇರಿ ಮಾಡಿದ ಚಮತ್ಕಾರಗಳು ಚಿರ್ನಿಯನ್ನು ಸರಿಗಟ್ಟುವಂತಿತ್ತು. ಈ ಆಕಸ್ಮಿಕವನ್ನು ನೋಡಿ ಬೆರಗಾಗಿಹೋದ ಚಿರ್ನಿ, ಭಾರತೀಯ ಸಾಹಸಿಯನ್ನು ಮೆಚ್ಚಿದ. ನಗದು ಬಹುಮಾನದ ಜೊತೆಗೆ ಅಚ್ಚುಮೆಚ್ಚಿನ ಕುದುರೆಯನ್ನು ಆತನಿಗೆ ಬಹುಮಾನವಾಗಿ ನೀಡಿದ. ಆತನೇ ವಿಷ್ಣುಪಂತ್‌ ವಿನಾಯಕ ಛತ್ರೆ. ಭಾರತದ ಮೊದಲ ಸರ್ಕಸ್‌ ಕಂಪನಿ ‘ಛತ್ರೇಸ್‌ ನ್ಯೂ ಇಂಡಿಯಾ ಸರ್ಕಸ್‌’ ಅನ್ನು ಸ್ಥಾಪಿಸಿ, ದೇಶದುದ್ದಕ್ಕೂ ಅಪ್ರತಿಮ ಚಮತ್ಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚಿಗೆ ಸಂಪಾದಿಸಿದರು ಈ ಛತ್ರೆ.

ಕೊಲ್ಲಾಪುರದ ಕುರುಂದವಾಡ ರಾಜನ ಅಶ್ವಪಡೆಯಲ್ಲಿ ಛತ್ರೆ ಕಾರ್ಯನಿರ್ವಹಿಸುತ್ತಿದ್ದರು. ನಂತರ, ತಾವೇ ಒಂದು ಸರ್ಕಸ್‌ ಕಂಪೆನಿ ಶುರು ಮಾಡಿದರು. ಆತನದು ಭಾರತದ ಮೊದಲ ಸರ್ಕಸ್‌ ಕಂಪೆನಿ. ಅನೇಕ ರಾಜ ಸಂಸ್ಥಾನಗಳು ಸರ್ಕಸ್‌ ಕಲೆಯನ್ನು ಬೆಂಬಲಿಸಿದ್ದರಿಂದ, ಇನ್ನಷ್ಟು ಕಂಪೆನಿಗಳು ಹುಟ್ಟಿದವು.

ಮೃಗ–ಮನುಷ್ಯರ ಸಹನಡಿಗೆ
ಮನುಷ್ಯರ ಕಸರತ್ತು ಹಾಗೂ ಕುದುರೆ ಮೇಲೆ ಕುಳಿತ ಮಾಡುವ ಸಾಹಸ ಚಮತ್ಕಾರಗಳೇ ಮೊದಲಿಗೆ ಸರ್ಕಸ್‌ನ ಆಕರ್ಷಣೆಗಳಾಗಿದ್ದವು. ವನ್ಯಮೃಗಗಳನ್ನು ಪ್ರದರ್ಶಿಸುವ ಪರಿಪಾಠ 19ನೇ ಶತಮಾನದ ಕೊನೆ ಕೊನೆಗೆ ಪ್ರಾರಂಭಗೊಂಡಿತು. 20ನೇ ಶತಮಾನದ ಆರಂಭದಲ್ಲಿ ಪ್ರಾಣಿಗಳನ್ನು ಪಳಗಿಸಿ, ಅವುಗಳ ಆಟಗಳಿಂದ ವೀಕ್ಷಕರನ್ನು ರಂಜಿಸುವ ಪರಿಪಾಠ ಶುರುವಾಯಿತು.

ಹುಲಿ ಮೇಲೆ ಕುರಿಸವಾರಿ, ಹುಲಿಯ ಬಾಯಲ್ಲಿ ಮನುಷ್ಯ ತಲೆ ಇಡುವುದು. ಸಿಂಹ–ಹುಲಿ ನಡುವೆ ಮೇಕೆ ನಿಲ್ಲುವುದು, ಆನೆಗಳ ಕಸರತ್ತು, ಪಕ್ಷಿಗಳ ಜಿಗಿದಾಟ, ಇತ್ಯಾದಿಗಳು ಸೇರ್ಪಡೆಯಾದ ಸರ್ಕಸ್‌ ಪ್ರದರ್ಶನದಲ್ಲಿ ನಂತರದ ದಿನಗಳಲ್ಲಿ ಪ್ರಾಣಿಗಳೇ ಪ್ರಮುಖ ಆಕರ್ಷಣೆಯಾಗಿದವು.

ಕಾಡು ಹಾಗೂ ಸಾಕುಪ್ರಾಣಿಗಳ ಆಟಗಳೊಂದಿಗೆ ಸರ್ಕಸ್‌ನಲ್ಲಿ ಮಾನವ ಸಾಹಸ ಪ್ರದರ್ಶನಕ್ಕೆ ರಂಗೇರಿದ್ದು ಕೇರಳದ ಪೈಲ್ವಾನರ ಮೂಲಕ. ತಲ್ಲಿಚೆರಿಯ ವ್ಯಾಯಾಮ ಶಿಕ್ಷಕ ಹಾಗೂ ಗರಡಿಯಲ್ಲಿ ತಾಲೀಮು ಮಾಡಿದ್ದ ಕೀಲಾರಿ ಕುಂಞ ಕಣ್ಣನ್ ಇದಕ್ಕೆ ಕಾರಣ. ಇವರು ಮನುಷ್ಯರ ಸ್ನಾಯುಶಕ್ತಿಯನ್ನು ಹೊಸ ಆಟಗಳನ್ನಾಗಿ ಆವಿಷ್ಕರಿಸಿದರು. ಹೆಣ್ಣು–ಗಂಡು ಭೇದವಿಲ್ಲದೆ ಮಾಡಬಹುದಾದ ಈ ಚಮತ್ಕಾರಗಳು ದೇಶದ ಬಹುತೇಕ ಎಲ್ಲ ಸರ್ಕಸ್‌ ಕಂಪೆನಿಗಳಲ್ಲಿ ಅವಿಭಾಜ್ಯ ಭಾಗವಾದವು. ಇದರಿಂದಾಗಿ, ಆವರೆಗೆ ಮಹಾರಾಷ್ಟ್ರೀಯರೇ ಹೆಚ್ಚಾಗಿದ್ದ ಭಾರತೀಯ ಸರ್ಕಸ್‌ ಕಂಪನಿಗಳಲ್ಲಿ, ಕೇರಳದ ಯುವಕ–ಯುವತಿಯರು ಹೆಚ್ಚಾದರು.
ಹಗ್ಗಗಳ ಮೇಲೆ ನಡೆದಾಟ, ಕುದುರೆ ಬೆನ್ನಿನ ಮೇಲಿನ ಚಮತ್ಕಾರ, ಗ್ಲೋಬ್‌ನಲ್ಲಿ ಸೈಕಲ್‌ ಮೋಟರ್‌ ಸಾಹಸ, ಉಯ್ಯಾಲೆಗಳ ಮೇಲೆ ಸ್ನಾಯು ಶಕ್ತಿ ಪ್ರದರ್ಶನ – ಹೀಗೆ ವೀಕ್ಷಕರು ಉಸಿರು ಬಿಗಿಹಿಡಿಯುವಂತಹ ಸಾಹಸಗಳನ್ನು ಪ್ರದರ್ಶಿಸುತ್ತಿದ್ದ ತಲ್ಲಿಚೇರಿಯ ಬಡ ಯುವಕ–ಯುವತಿಯರು ಸರ್ಕಸ್‌ ಕಂಪೆನಿಗಳನ್ನು ಸೇರಿಕೊಂಡರು. ವಿದೇಶಿ ಕಂಪನಿಗಳಲ್ಲಿ ಪ್ರಾಮುಖ್ಯತೆ ಗಳಿಸಿಕೊಂಡಿದ್ದು ಈ ಕಲಾವಿದರ ಹೆಗ್ಗಳಿಕೆ.

ಮನರಂಜನೆಗೆ ನಾಟಕ–ಚಲನಚಿತ್ರಗಳಿದ್ದ ಕಾಲಘಟ್ಟದಲ್ಲಿ ಸರ್ಕಸ್‌ ಕೂಡ ಮುಂಚೂಣಿಗೆ ಬಂತು. ಉದ್ಯಮಿಗಳು ಬಂಡವಾಳ ಹೂಡಿದ್ದರಿಂದಾಗಿ ಸರ್ಕಸ್‌ ಕಂಪೆನಿಗಳ ಸಂಖ್ಯೆ ಹೆಚ್ಚಿತು. ಕೇರಳದ ಕಲಾವಿದರಲ್ಲಿ ಅನೇಕರು ಕಂಪೆನಿಗಳ ಒಡೆಯರಾದರು. ಅಂದಾಜು 300–400 ಕಂಪೆನಿಗಳು ದೇಶದುದ್ದಕ್ಕೂ ಸಂಚರಿಸಿ ಸರ್ಕಸ್‌ಗೆ ಜನಪ್ರಿಯತೆ ಹೆಚ್ಚಿಸಿದವು.

ಜನಪ್ರಿಯತೆಯ ಜೊತೆಜೊತೆಗೆ...
ಭಾರತ ಮಾತ್ರವಲ್ಲದೆ ಸಿಂಗಪುರ, ಮಲೇಷ್ಯಾ, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ವಿದೇಶಿ ಕಂಪೆನಿಗಳಿಗೂ ಭಾರತೀಯ ಸರ್ಕಸ್‌ ಕಂಪೆನಿಗಳು ಸರಿಸಾಟಿಯಾಗಿ ನಿಂತವು. ಅನೇಕ ಕಂಪೆನಿಗಳು ವಿದೇಶಗಳಲ್ಲೇ ಹತ್ತಾರು ವರ್ಷ ಮೊಕ್ಕಾಂ ಹೂಡಿದ್ದೂ ಇದೆ.

‘ಕಮಲಾ ತ್ರಿರಿಂಗ್‌ ಸರ್ಕಸ್‌’ ಏಷ್ಯಾದಲ್ಲಿಯೇ ದೊಡ್ಡ ಕಂಪೆನಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ‘ರೋಮನ್‌ ಸರ್ಕಸ್‌’, ‘ಗ್ರೇಡ್‌ ಇಂಡಿಯನ್‌ ಸರ್ಕಸ್‌’, ‘ಜೆಮಿನಿ ಸರ್ಕಸ್‌’, ‘ಪ್ರಭಾತ್‌ ಸರ್ಕಸ್‌’, ‘ರ್‍ಯಾಂಬೋ ಸರ್ಕಸ್‌’ – ಹೀಗೆ ಅನೇಕ ಕಂಪೆನಿಗಳು ಯಶಸ್ವಿಯ ತುತ್ತತುದಿ ತಲುಪಿದ್ದವು. ಪ್ರಾಣಿಗಳನ್ನು ಖರೀದಿಸಲು, ಅವುಗಳಿಗೆ ತರಬೇತಿ ನೀಡಲು ಪ್ರತ್ಯೇಕ ವಿಭಾಗಗಳೇ ಕಂಪೆನಿಗಳಲ್ಲಿ ಇದ್ದವು.

ಮನರಂಜನಾ ಮಾಧ್ಯಮವಾಗಿದ್ದ ಸರ್ಕಸ್‌ಗೆ ಹಣ ಹೂಡಿದ ಉದ್ಯಮದಾರರು ಕಲಾವಿದರು–ಪ್ರಾಣಿಗಳನ್ನು ಚೆನ್ನಾಗಿ ದುಡಿಸಿಕೊಂಡರಾದರೂ ಅವರಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸುವಲ್ಲಿ ಮಾತ್ರ ಹಿಂದೇಟು ಹೊಡೆದರು. ಬಡ ಕುಟುಂಬಗಳಿಂದ ಬಂದ ಕಲಾವಿದರಿಗೆ ಹೊತ್ತಿನ ಊಟದ ಅನಿವಾರ್ಯತೆ ಇತ್ತು. ಆಡಳಿತ ವರ್ಗಗಳಿಂದ ನೇಮಕವಾದ ಮ್ಯಾನೇಜರುಗಳ ಶೋಷಣೆ ಹೆಚ್ಚಾಗಿದ್ದರಿಂದ, 1960ರ ದಶಕದಲ್ಲಿ ಕಲಾವಿದರಲ್ಲಿ ಉತ್ಸಾಹ ಕುಗ್ಗುತ್ತಾಹೋಯಿತು. ಕಡಿಮೆ ಸಂಬಳ, ಪ್ರೋತ್ಸಾಹ ಕೊರತೆ, ಆಭದ್ರತೆಗಳಿಂದಾಗಿ ಕಲಾವಿದರು ಸರ್ಕಸ್‌ಗೆ ಬರುವುದು ಕಡಿಮೆ ಆಯಿತು. ಕಲಾವಿದರ ಕೊರತೆ ಒಂದೆಡೆಯಾದರೆ, ಹೊಸ ಆಟಗಳಿಗೆ ಯತ್ನಿಸದೇ ಪ್ರದರ್ಶನದಲ್ಲಿ ‘ಏಕತಾನತೆ’ ಉಂಟಾಯಿತು. ಇದೇ ಸಂದರ್ಭದಲ್ಲಿ ಸರ್ಕಸ್‌ ಅನ್ನು ‘ಟೂರಿಂಗ್‌ ಬಿಜಿನೆಸ್‌’ ಎಂದು ಸರ್ಕಾರ ನಿರ್ಧರಿಸಿದ್ದರಿಂದ, ದೊಡ್ಡ ಮೊತ್ತದ ಮನರಂಜನಾ ತೆರಿಗೆಯನ್ನು ಕಂಪೆನಿಗಳು ತುಂಬುವುದು ಅನಿವಾರ್ಯವಾಯಿತು.

ಸರ್ಕಸ್‌ ಪ್ರದರ್ಶನವಿರಲಿ ಇಲ್ಲದಿರಲಿ, ಕಲಾವಿದರು–ಸಿಬ್ಬಂದಿ ಹಾಗೂ ಪ್ರಾಣಿಗಳ ಹೊಟ್ಟೆ ತುಂಬಬೇಕು. ಮಾಂಸಾಹಾರಿ ಪ್ರಾಣಿಗಳಿಗೆ ಆಹಾರ ಖರೀದಿ ಮಾಡಬಹುದಾಗಿದ್ದರೂ ಆನೆ, ಒಂಟೆ, ಕುದುರೆಗಳಿಗೆ ಮೇವು ಒದಗಿಸುವುದು ಕಷ್ಟವಾಯಿತು.

ಭಾರತದಲ್ಲಿ ಸರ್ಕಸ್‌ಗಳಿಗೆ ಎಲ್ಲೂ ಕಾಯಂ ಮೈದಾನಗಳಿಲ್ಲ. ರಷ್ಯಾ, ಜರ್ಮನಿ, ಫ್ರಾನ್‌್ಸಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅಲ್ಲಿ ಶಾಶ್ವತ ಸರ್ಕಸ್‌ ಮೈದಾನಗಳಿವೆ. ಭಾರತದ ಯಾವುದೇ ನಗರ–ಪಟ್ಟಣಗಳಲ್ಲಿ ಪರವಾನಗಿ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ನೀರು–ವಿದ್ಯುತ್‌ ಪಡೆಯುವುದು ಇನ್ನೂ ಕಷ್ಟ. ಇಂತಹ ಹತ್ತು ಕಷ್ಟ ಕೋಟಲೆಗಳ ನಡುವೆ ಸರ್ಕಸ್‌ ಮುನ್ನಡೆಸುವುದು ಸಣ್ಣ ಪ್ರಮಾಣದ ಕಂಪನಿಗಳಿಗೆ ತುಂಬಾ ತ್ರಾಸವಾಯಿತು.

ಅಪಘಾತಗಳು ಸರ್ಕಸ್‌ ಕಂಪೆನಿಗಳಿಗೆ ದೊಡ್ಡ ಹೊಡೆತಕೊಟ್ಟವು. ಅಗ್ನಿ ಆಕಸ್ಮಿಕ, ಸಮುದ್ರದಲ್ಲಿ ಕಂಪೆನಿಗಳು ಮುಳುಗಿ ಹೋಗಿದ್ದು, ಪ್ರಾಣಿಗಳ ಹುಚ್ಚಾಟದಿಂದ ಕಲಾವಿದರ ಸಾವು, ಗ್ಯಾಲರಿ ಕುಸಿತ – ಇವೆಲ್ಲವುಗಳಿಂದ ಭಾರತೀಯ ಸರ್ಕಸ್‌ಲೋಕ ಹಿನ್ನಡೆ ಅನುಭವಿಸಿತು. ಸರ್ಕಸ್‌ ಕಂಪೆನಿಗಳಿಗೆ ಕೆಲವು ನಗರಗಳಲ್ಲಿ ನಿಷೇಧವನ್ನು ಹೇರಲಾಯಿತು. ನಗರದ ನಡುವೆ ಮೈದಾನಗಳನ್ನು ಸರ್ಕಸ್‌ಗೆ ನಿರಾಕರಿಸಲಾಯಿತು. ಹೀಗೆ ಆದಾಯ ಬರಬಹುದಾದ ಸಾಧ್ಯತೆಗಳನ್ನು ಮುಚ್ಚಿಹಾಕಿದ್ದು ಸರ್ಕಸ್‌ಗೆ ಇನ್ನೊಂದು ದೊಡ್ಡ ಪೆಟ್ಟು.

ಭಾರತದಲ್ಲಿ 1990ರಲ್ಲಿ 300ರಷ್ಟಿದ್ದ ಸರ್ಕಸ್‌ ಕಂಪೆನಿಗಳ ಸಂಖ್ಯೆ ಈಗ 25–30ಕ್ಕೆ ಇಳಿದಿದೆ. ಇದಕ್ಕೆ ಕಾರಣಗಳು ಹತ್ತಾರು. ಪ್ರಾಣಿಗಳನ್ನು ಹಿಂಸಿಸಲಾಗುತ್ತದೆ ಎಂಬ ‘ಪ್ರಾಣಿದಯಾ ಸಂಘ’ದ ದೂರಿನಂತೆ, ನ್ಯಾಯಾಲಯ ಸರ್ಕಸ್‌ನಲ್ಲಿ ವನ್ಯಪ್ರಾಣಿಗಳ ಬಳಕೆಯನ್ನು ನಿಷೇಧಿಸಿತು.

ಸಣ್ಣ ಪುಟ್ಟ ಕಂಪನಿಯಾದರೂ ನಿತ್ಯದ ನಿರ್ವಹಣೆಗಾಗಿ 50–75 ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದ್ದರಿಂದ ಅನೇಕ ಕಂಪೆನಿಗಳು ಅನಿವಾರ್ಯವಾಗಿ ಮುಚ್ಚಿಹೋದವು. ಅಳಿದುಳಿದ ಕಂಪನಿಗಳಿಗೆ ಪಟ್ಟಣ–ನಗರಗಳಲ್ಲಿ ಸೂಕ್ತ ಮೈದಾನಗಳು ಸಿಗುತ್ತಿಲ್ಲ. ಎಳೆಯ ವಯಸ್ಸಿನಿಂದಲೇ ಕಲಾವಿದರನ್ನು ಸಾಹಸಗಳಿಗೆ ಸರ್ಕಸ್‌ನಲ್ಲಿ ಸಿದ್ಧಗೊಳಿಸುವುದು ಹಿಂದಿನಿಂದಲೂ ಇದ್ದ ರೂಢಿ. ಆದರೆ ನ್ಯಾಯಾಲಯ 18ರ ಒಳಗಿದ್ದ ಬಾಲಕ ಬಾಲಕಿಯರನ್ನು ಸರ್ಕಸ್‌ ಪ್ರದರ್ಶನಕ್ಕೆ ಉಪಯೋಗಿಸಬಾರದೆಂದು ನೀಡಿರುವ ಆದೇಶ ಕೂಡ ಸರ್ಕಸ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ.

ದೊರೆತೀತೆ ಮರುಜೀವ?
ಭಾರತೀಯ ಸರ್ಕಸ್‌ ಬಸವಳಿದಿದ್ದರೂ ಅದಕ್ಕೆ ಮರುಜೀವ ತುಂಬುವುದು ಅಸಾಧ್ಯವೇನೂ ಅಲ್ಲ. ಇದಕ್ಕೆ ‘ಭಾರತೀಯ ಸರ್ಕಸ್‌ ಉದ್ಯೋಗಿಗಳ ಒಕ್ಕೂಟ’ದ ಅಧ್ಯಕ್ಷರಾದ ಸಿ.ಸಿ. ಅಶೋಕ್‌ ಕುಮಾರ್‌ ಕೆಲವು ಪರಿಹಾರೋಪಾಯಗಳನ್ನು ನೀಡುತ್ತಾರೆ. ‘ಸರ್ಕಸ್‌ಗೆ ಇರುವ ಉದ್ಯಮದ ಹಣೆಪಟ್ಟಿಯನ್ನು ತೆಗೆದುಹಾಕಿ, ಅದನ್ನು ಪ್ರದರ್ಶನ ಕಲೆ ಎಂದು ಪರಿಗಣಿಸಬೇಕು. ಇದರೊಂದಿಗೆ ಈ ಕಲೆಗೆ ಕಾನೂನು ಬೆಂಬಲವೂ ಮುಖ್ಯ’ ಎನ್ನುವುದು ಅವರ ಅಭಿಪ್ರಾಯ.

ಪ್ರಸ್ತುತ ಕೇರಳದಲ್ಲಿ ನಿವೃತ್ತ ಹಾಗೂ ಅಪಘಾತಕ್ಕೆ ಒಳಗಾದ ಸರ್ಕಸ್‌ ಕಲಾವಿದರಿಗೆ ಪಿಂಚಣಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಸರ್ಕಸ್‌ ಕಲಾವಿದರ ಹಿತರಕ್ಷಣೆಗೆ ವ್ಯಾಪಕ ಕಾರ್ಯಕ್ರಮ ಜಾರಿಗೆ ತರಬೇಕು ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಯುವಕ–ಯುವತಿಯರನ್ನು ತಯಾರು ಮಾಡಬೇಕೆನ್ನುವುದು ಅಶೋಕ್ ಅವರ ಆಗ್ರಹ.

ಕಲಾವಿದರು– ತರಬೇತಿದಾರರಿಗೆ ಆರ್ಥಿಕ ಭದ್ರತೆ ದೊರೆತರೆ ಭಾರತದಲ್ಲಿ ಇನ್ನಷ್ಟು ಕಾಲ ಸರ್ಕಸ್‌ ಅನ್ನು ಜೀವಂತವಾಗಿಡಲು ಸಾಧ್ಯ ಎಂಬುದು ಸರ್ಕಸ್‌ನೊಂದಿಗೆ ಹೆಜ್ಜೆ ಹಾಕುತ್ತಿರುವ ಹಲವರ ಅಭಿಮತ.

ಒಂಟಿಚಕ್ರದ ಸೈಕಲ್‌ ಮೇಲೆ ಚಮತ್ಕಾರ ನಡೆಸುತ್ತಾ ನೋಡುಗರ ಪ್ರಶಂಸೆ ಪಡೆದಿದ್ದ ಬಾಲಕಿ ಪಿ.ಕೆ. ವನಜಾ ಈಗ ತನ್ನ ಗಂಡನೊಂದಿಗೆ (ಆತ ಕೂಡ ಸರ್ಕಸ್‌ ಕಲಾವಿದ) ಸಣ್ಣ ಕಂಪೆನಿಯನ್ನು ನಡೆಸುತ್ತಿದ್ದಾರೆ. ಅವರು ಹೇಳುವಂತೆ – ‘ದೊಡ್ಡ ಡೇರೆಯೊಳಕ್ಕೆ ಜನರನ್ನು ಸೆಳೆಯಲು ಪ್ರೇಕ್ಷಕರಿಗೆ ಒಳ್ಳೆಯ ಸೌಲಭ್ಯ ನೀಡುವುದು ಅಗತ್ಯ. ಚಮತ್ಕಾರಗಳಲ್ಲಿ (ಆಟಗಳು) ಹೊಸತನ, ಜಿಮ್ನಾಟಿಕ್ಸ್‌, ಜುಗ್ಗಲಿಂಗ್‌,  ಏರೋಬಾಟಿಕ್ಸ್‌, ಟ್ರಿಪಾಬ್‌, ತಂತಿಗಳ ಮೇಲೆ ವಿಶೇಷ ಕಸರತ್ತು, ಬೆಂಕಿಯೊಡನೆ ಸರಸದಾಟ, ಇತ್ಯಾದಿಗಳ ಪ್ರದರ್ಶನ ಇರಬೇಕು’ ಎನ್ನುತ್ತಾರೆ.

ಈಗೀಗ ಭಾರತೀಯ ಸರ್ಕಸ್‌ ಕಂಪೆನಿಗಳಲ್ಲಿ ರಷ್ಯಾ, ಕೀನ್ಯಾ, ಇಥಿಯೋಪಿಯಾ, ಮಂಗೋಲಿಯಾ ಮೂಲದ ಕಲಾವಿದರೇ ಮುಖ್ಯ ಆಕರ್ಷಣೆ. ಇವರಿಗೆ ಭಾರತೀಯ ಕಲಾವಿದರಿಗಿಂತ ಸಂಬಳವೂ ಹೆಚ್ಚು. ಇದಕ್ಕೆ ಇವರು ಕಲಿತಿರುವ ಹೊಸ ಹೊಸ ಆಟಗಳು ಪ್ರಮುಖ ಕಾರಣ.

ಬೇರೆ ದೇಶಗಳಲ್ಲೂ ಸರ್ಕಸ್‌ಗಳಲ್ಲಿ ಪ್ರಾಣಿಗಳ ಬಳಕೆಗೆ ನಿಷೇಧ ಹೇರಿದ್ದರಿಂದ, ಅಲ್ಲಿನ ಕಲಾವಿದರು ಜನರನ್ನು ಸೆಳೆಯಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಸುಶ್ರಾವ್ಯ ವಾದ್ಯಗೋಷ್ಠಿಯ ಬಳಕೆ ಅಂಥ ದಾರಿಗಳಲ್ಲೊಂದು. ಜಾದೂಗಾರರ ಸೇರ್ಪಡೆ ಮತ್ತೊಂದು ಆಕರ್ಷಣೆ. ಕೆನಡಾದ ಸರ್ಕಸ್‌ ಕಂಪೆನಿಯೊಂದು ಸರ್ಕಸ್‌, ಸಂಗೀತ–ಮ್ಯಾಜಿಕ್‌ ಸೇರಿಸಿದ ವಿಶಿಷ್ಟ ಪ್ರದರ್ಶನಗಳನ್ನು 1990ರ ದಶಕದಲ್ಲೇ ಪ್ರಾರಂಭಿಸಿ ಯಶ ಸಾಧಿಸಿದ್ದು ಇದಕ್ಕೊಂದು ನಿದರ್ಶನ.

ಸರ್ಕಸ್‌ ಕಲೆ ರಂಗಭೂಮಿ, ನೃತ್ಯ, ಜಾದೂ–ಸಂಗೀತದೊಂದಿಗೆ ಮರುಜೀವ ಪಡೆಯಲು ಪ್ರಯತ್ನಿಸಬಹುದಾಗಿದೆ. ‘ರಾಷ್ಟ್ರೀಯ ನಾಟಕ ಶಾಲೆ’ಯ ಸಹಯೋಗದಲ್ಲಿ ಸರ್ಕಸ್‌ ಜೋಕರ್‌ಗಳು ಹಾಗೂ ರಂಗ ಕಲಾವಿದರು ರೂಪಿಸಿದ ವಿಶಿಷ್ಟ ಪ್ರದರ್ಶನವೊಂದು ಇತ್ತೀಚೆಗೆ ನೋಡುಗರ ಗಮನ ಸೆಳೆದಿದೆ. ಇತ್ತೀಚೆಗೆ ಒಂದೆರಡು ಸರ್ಕಸ್‌ ಕಂಪೆನಿಗಳು ಹವಾನಿಯಂತ್ರಿತ ಡೇರೆ, ಅತ್ಯಾಧುನಿಕ ದೀಪ–ಧ್ವನಿ ವ್ಯವಸ್ಥೆ,  ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್‌ ಮೂಲಕ ಯುವ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಭಾರತೀಯ ಸರ್ಕಸ್‌ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT