ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣಿನ ಮಾಯೆಗೆ ಬಲಿಯಾದ, ಕಿಟಕಿ ಹಾರಿದ...

Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಶಂಕರ ಎಸ್‌. ಭಟ್‌
ತುಮಕೂರು ಜಿಲ್ಲೆಯ ಗ್ರಾಮವೊಂದರ ಹುಡುಗ ಆನಂದ. ಬಡತನದಲ್ಲಿಯೇ ಹಾಗೂ ಹೀಗೂ ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ. ಕುಟುಂಬ ನಿರ್ವಹಣೆಗಾಗಿ ಕೆಲಸ ಹುಡುಕಿಕೊಂಡು ಅಲೆದಾಡುತ್ತಿದ್ದ ಅವನಿಗೆ ಕೊನೆಗೂ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಭದ್ರತಾ ಸೇವಕನ ಕೆಲಸ ಸಿಕ್ಕಿತು. ಆತನನ್ನು ಪ್ರತಿಷ್ಠಿತ ಕಾಲೇಜೊಂದರ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಭದ್ರತಾ ಸೇವಕನಾಗಿ  ನಿಯೋಜಿಸಲಾಯಿತು.

ಕಷ್ಟಪಟ್ಟು ಉದ್ಯೋಗ ಗಿಟ್ಟಿಸಿಕೊಂಡಿದ್ದ ಆನಂದನ ಆನಂದಕ್ಕೆ ಪಾರವೇ ಇರಲಿಲ್ಲ. ಅಷ್ಟು ದಿನಗಳವರೆಗೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದವನ ಕೈಗೆ ಅಷ್ಟಿಷ್ಟು ಸಂಪಾದನೆ ದುಡ್ಡು ಬರತೊಡಗಿತು. ನೋಡಲು ಮುದ್ದು ಮುಗ್ಧಮುಖ. ಜೊತೆಗೆ ಏರುತ್ತಿರುವ ಯೌವನ, ಕೈಗೆ ಒಂದಿಷ್ಟು ದುಡ್ಡು... ಈಗ ರಂಗುರಂಗಿನ ಕನಸು ಕಾಣುವ ಕಾಲ ಬಂದಿತು ಆನಂದನಿಗೆ. ಸಾಲದು ಎಂಬುದಕ್ಕೆ ಆತನಿಗೆ ಕೆಲಸ ಸಿಕ್ಕಿದ್ದು ಲಲನಾಮಣಿಯರು ಇದ್ದ ವಸತಿಗೃಹದ ಗೇಟನ್ನು ಕಾಯುವ ಕೆಲಸ. ಕೇಳಬೇಕೇ ಇನ್ನು...?

ಅನ್ಯರು ವಸತಿಗೃಹ ಪ್ರವೇಶಿಸದಂತೆ ಸುರಕ್ಷಿತವಾಗಿ ಕಾಯುವ ಕೆಲಸವಾದರೂ ಕಣ್ಣುಗಳು ಮಾತ್ರ ಆಗಾಗ್ಗೆ ವಸತಿಗೃಹದ ಒಳಗೂ ಗುರಿ ತಪ್ಪಿ ಹೋಗಿ
ಬಿಡುತ್ತಿದ್ದವು. ಅದೇನು ವಿಧಿಯೋ... ​ಸ್ನಾತಕೋತ್ತರ ವಿದ್ಯಾರ್ಥಿನಿಯಾದ ವನಿತಾಳಿಗೆ ಈ ಮುಗ್ಧ ಸ್ವಭಾವದ ಆನಂದ ತುಂಬಾ ಇಷ್ಟವಾಗಿಬಿಟ್ಟ. ಆಗೀಗ ಏನೇನೋ ನೆಪ ಮಾಡಿಕೊಂಡು ಆನಂದನ ಬಳಿ ಮಾತನಾಡಲು ಶುರುವಿಟ್ಟುಕೊಂಡಳು ವನಿತಾ.

ಮೊದಮೊದಲು ಅವಳ ಬಳಿ ಮಾತನಾಡಲು ಮುಜುಗರಪಟ್ಟುಕೊಳ್ಳುತ್ತಿದ್ದ ಆನಂದನಿಗೆ ಆಕೆಯ ಮಾತಿನ ಶೈಲಿ, ಭಾವಭಂಗಿಗಳೆಲ್ಲಾ ಇಷ್ಟವಾಗತೊಡಗಿದವು. ಆನಂದನ ಜೊತೆಗೇ ಹೆಚ್ಚುಹೆಚ್ಚು ಇರಬಯಸಿದ ವನಿತಾ ತನಗೆ ಅಗತ್ಯವಿದ್ದ (ಇಲ್ಲದೇ ಇದ್ದರು ಕೂಡ!) ಸಾಮಾನುಗಳನ್ನು ಆನಂದನಿಂದಲೇ ತರಿಸಿಕೊಳ್ಳಲು ಶುರುವಿಟ್ಟುಕೊಂಡಳು. ಅವನು ತಂದುಕೊಡುತ್ತಿದ್ದ ಸಾಮಾನುಗಳನ್ನು ಅವನಿಂದಲೇ ತನ್ನ ರೂಮಿನಲ್ಲಿ ಇರಿಸಿಕೊಳ್ಳತೊಡಗಿದಳು.

ಹೀಗೆ ಇಬ್ಬರ ಒಡನಾಟ ಹೆಚ್ಚಾಯಿತು. ಇಬ್ಬರೂ ಹತ್ತಿರವಾಗತೊಡಗಿದರು. ವನಿತಾಳ ಕೊಠಡಿಗೆ ಆನಂದ ಹೋಗಿಬರುವುದು ಹೆಚ್ಚಾಯಿತು. ಅದಕ್ಕೆ ವನಿತಾಳೇ ಏನೇನೋ ನೆಪಮಾಡಿಕೊಂಡು ಅನುವು ಕೂಡ ಮಾಡಿಕೊಟ್ಟಳು. ಕೆಲವೊಮ್ಮೆ ಆನಂದನೇ ಕುಂಟುನೆಪದಲ್ಲಿ ಅವಳ ಕೋಣೆಗೆ ಹೋಗಿ ಬರತೊಡಗಿದ. ಅವರು ಒಡ್ಡುತ್ತಿದ್ದ ನೆಪಗಳು ಎಷ್ಟು ಚೆನ್ನಾಗಿದ್ದವು ಎಂದರೆ, ಅಕ್ಕಪಕ್ಕದ ಕೋಣೆಯಲ್ಲಿ ಇದ್ದವರಿಗೂ ಇವರ ಬಗ್ಗೆ ಸಂದೇಹ ಮೂಡಲಿಲ್ಲ. ಆನಂದ ಕೂಡ ಎಲ್ಲರ ಬಳಿ ಸಭ್ಯತೆಯಿಂದ ನಡೆದುಕೊಳ್ಳುತ್ತಿದ್ದ ಕಾರಣ, ಅವನ ಮೇಲೂ ಯಾರಿಗೂ ಸಂಶಯ ಬರಲಿಲ್ಲ.

ಈ ರೀತಿಯಾಗಿ ಯೌವನದ ಅಮಲಿನಲ್ಲಿ ತೇಲಿದ ಇಬ್ಬರ ಹುಚ್ಚು ಮನಸ್ಸು  ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಯಿತು. ಆನಂದನನ್ನು ನಡುರಾತ್ರಿಯವರೆಗೂ ತನ್ನ ಕೊಠಡಿಯಲ್ಲಿಯೇ ಉಳಿಸಿಕೊಳ್ಳತೊಡಗಿದಳು ವನಿತಾ. ಈಗಿನ ಹಾಗೆ ಆಗ ವಿದ್ಯಾರ್ಥಿನಿಯರ ವಸತಿಗೃಹಗಳಲ್ಲಿ ಎಲ್ಲೆಡೆ ಸಿ.ಸಿ.ಟಿ.ವಿ ಕೂಡ ಇಲ್ಲದ್ದರಿಂದ ಇವರಿಬ್ಬರ ಚಟುವಟಿಕೆಗಳು ಯಾರೊಬ್ಬರ ಗಮನಕ್ಕೂ ಬರಲಿಲ್ಲ.

ಆದರೆ ‘ಬೆಕ್ಕು ಕದ್ದುಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗದೆ ಇರುತ್ತದೆಯೇ?’ ಎನ್ನುವಂತೆ ಇವರ ಕಳ್ಳಾಟ ಅತಿಯಾದಾಗ ಅಕ್ಕಪಕ್ಕದವರಿಗೆ ಸಂದೇಹ ಬರತೊಡಗಿತು. ಇವರಿಬ್ಬರಿಗೂ ಗೊತ್ತಾಗದಂತೆ  ಕೆಲ ವಿದ್ಯಾರ್ಥಿನಿಯರು  ‘ತನಿಖೆ’ ಶುರುವಿಟ್ಟುಕೊಂಡರು. ವನಿತಾಳ ಕೊಠಡಿಯ ಒಳಗೆ ಹೋಗುತ್ತಿದ್ದ ಆನಂದ ಹೊರಕ್ಕೆ ಬರುವುದು ಮಾತ್ರ  ಅವರಿಗೆ ಕಾಣಿಸಲಿಲ್ಲ.

ಅವರ ಸಂದೇಹ ನಿಜವಾಗಿತ್ತು. ತಡ ಮಾಡಲಿಲ್ಲ. ಕೂಡಲೇ ಈ ಸುದ್ದಿಯನ್ನು ಕಾಲೇಜಿನ ಆಡಳಿತ ಮಂಡಳಿಯ ಕಿವಿಗೆ ಮುಟ್ಟಿಸಿದರು. ಇವರನ್ನು ‘ರೆಡ್‌ಹ್ಯಾಂಡ್‌’ ಆಗಿ ಹಿಡಿಯಬೇಕು ಎಂದು ಆಡಳಿತ ಮಂಡಳಿ ನಿರ್ಧರಿಸಿತು. ಅದರಂತೆ ಇವರಿಬ್ಬರಿಗೂ ತಿಳಿಯದಂತೆ ಗುಪ್ತವಾಗಿ ಯೋಜನೆ ರೂಪಿಸಲಾಯಿತು.

ಒಂದು ರಾತ್ರಿ ಆನಂದ ಎಂದಿನಂತೆ ಎರಡನೆಯ ಮಹಡಿಯಲ್ಲಿ ಇದ್ದ ವನಿತಾಳ ಕೋಣೆಯ ಬಾಗಿಲು ತೆರೆದು ಒಳಗೆ ಹೋದ. ಪೂರ್ವನಿಯೋಜನೆಯಂತೆ ವಿದ್ಯಾರ್ಥಿನಿಯರು ಈತ ಬರುವುದನ್ನೇ ಹೊಂಚುಹಾಕುತ್ತಾ ಕುಳಿತಿದ್ದರು. ಯಾವಾಗ ಈತ ವನಿತಾಳ ಕೋಣೆಯ ಒಳಗೆ ಹೋದನೋ ಹೊರಗಿನಿಂದ ಚಿಲಕವನ್ನು ಭದ್ರವಾಗಿ ಹಾಕಿದರು. ಹೊರಗಡೆ ವಿದ್ಯಾರ್ಥಿನಿಯರ ದಂಡು ಸೇರಿಬಿಟ್ಟಿತು.

ಆನಂದ ಮತ್ತು ವನಿತಾರ ಪಾಡು ಹೇಳತೀರದು. ಇಬ್ಬರಿಗೂ ಉಸಿರೇ ಬಾಯಿಗೆ ಬಂದಂತಾಯಿತು.  ಯಾವ ರೀತಿಯಲ್ಲೂ ಬಚಾವಾಗಲು ಆಸ್ಪದವೇ ಇರಲಿಲ್ಲ. ಸಿಕ್ಕಿಬಿದ್ದರೆ ಆನಂದ ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ ಆಗಿತ್ತು. ವನಿತಾಳ ಮಾನ ಹರಾಜು ಆಗುವುದೂ ಅಷ್ಟೇ ದಿಟವಾಗಿತ್ತು.

ಆನಂದನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ‘ಚತುರೆ’ ವನಿತಾ, ತನ್ನ ಚತುರ ಬುದ್ಧಿಯನ್ನು ಆ ಕ್ಷಣದಲ್ಲೂ ಉಪಯೋಗಿಸಿಬಿಟ್ಟಳು. ಕ್ಷಣಿಕ ಸುಖಕ್ಕಾಗಿ ಮಾತ್ರ ಆನಂದನನ್ನು ಬಯಸಿದ್ದ ಆಕೆ ಅವನಿಗೆ ಏನಾದರೂ ಪರವಾಗಿಲ್ಲ, ತಾನೊಬ್ಬಳು ಬಚಾವಾದರೆ ಸಾಕು ಎಂದುಕೊಂಡಳು. ಒಂದೇ ಸಮನೆ ಜೋರಾಗಿ ‘ಕಳ್ಳ... ಕಳ್ಳ... ಕಾಪಾಡಿ... ಕಾಪಾಡಿ...’ ಎಂದು ಕೂಗಿಬಿಟ್ಟಳು!

ಇಬ್ಬರೂ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದ ಆನಂದನಿಗೆ ಅರೆಕ್ಷಣ ದಿಕ್ಕೇ ತೋಚದಾಯಿತು. ವನಿತಾ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದುಕೊಂಡು ಆಕೆಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಅವನಿಗೆ ಅವಳ ವರ್ತನೆಯಿಂದ ಆಕಾಶವೇ ಕಳಚಿಬಿದ್ದಂತಾಯಿತು.

ಅತ್ತ, ವನಿತಾ ಕೂಗಿಕೊಂಡಿದ್ದರಿಂದ ವಸತಿಗೃಹದಲ್ಲಿ ಕಳ್ಳ ಪ್ರವೇಶ ಮಾಡಿದ್ದಾನೆ ಎಂದುಕೊಂಡು, ಎಲ್ಲರೂ ಬೆಚ್ಚಿಬಿದ್ದು ಓಡಿಬಂದರು. ನಿಜ ಗೊತ್ತಿದ್ದವರು ಕೂಡ ಆ ಕ್ಷಣದಲ್ಲಿ ಬಾಯಿ ಬಿಡಲಿಲ್ಲ.

ಯುವಕನೊಬ್ಬ ದಿನವೂ ಈ ರೀತಿ ಯುವತಿಯೊಬ್ಬಳ ಕೋಣೆಗೆ ಹೋಗುತ್ತಿದ್ದಾನೆ ಎಂದು ಎಲ್ಲರಿಗೂ ತಿಳಿದರೆ ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅರಿತ ಕಾಲೇಜಿನ ಆಡಳಿತ ಮಂಡಳಿಯವರು ಕೂಡ ಕಳ್ಳನೇ ಪ್ರವೇಶ ಮಾಡಿದ್ದಾನೆ ಎಂಬಂತೆ ಮಾತನಾಡಿದರು. ‘ಕಳ್ಳ’ನನ್ನು ಹಿಡಿಯಬೇಕು ಎಂದುಕೊಂಡು ವನಿತಾಳ ಕೋಣೆಯ ಬಾಗಿಲನ್ನು ಒಡೆಯುವ ಪ್ರಯತ್ನ ನಡೆಯಿತು.

ಬಾಗಿಲು ಒಡೆದು ಎಲ್ಲರೂ ಒಳಗೆ ಬಂದರೆ ತನ್ನ ಕಥೆ ಮುಗಿದಂತೆಯೇ ಎಂದು ಅರಿತ ಆನಂದ, ಹಿಂದುಮುಂದು ಯೋಚಿಸದೆ ಸೀದಾ ಅಲ್ಲಿದ್ದ ಕಿಟಕಿಯ ಸರಳುಗಳನ್ನು ಬಗ್ಗಿಸಿ ಎರಡನೆಯ ಮಹಡಿಯಿಂದ ಕೆಳಕ್ಕೆ ಜಿಗಿದೇ ಬಿಟ್ಟ...! ಅಷ್ಟೇ...

ಅವನು ಎದ್ದಾಗ ಆಸ್ಪತ್ರೆಯಲ್ಲಿ ಇದ್ದ. ಶರೀರದ ಹಲವು ಎಲುಬುಗಳು ಮುರಿದುಹೋಗಿದ್ದವು. ಸುಮಾರು  3–4 ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ತಿಂಗಳುಗಳ ನಂತರ ಚೇತರಿಸಿಕೊಂಡ ಮೇಲೆ ನನ್ನ ಕಚೇರಿಗೆ ಬಂದಿದ್ದ. ಏಕೆಂದರೆ ಅವನ ವಿರುದ್ಧ ಪೊಲೀಸರು ಕಳ್ಳತನದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ತನ್ನನ್ನು ಬಂಧಿಸುವ ಸಾಧ್ಯತೆ ಇದ್ದ ಕಾರಣ ನಿರೀಕ್ಷಣಾ ಜಾಮೀನು ಕೊಡಿಸುವಂತೆ ಆನಂದ ನನ್ನನ್ನು ಕೋರಿದ.
***
ನಡೆದ ಘಟನೆಗಳನ್ನು ಅವನಿಂದ ಕೇಳಿ ತಿಳಿದುಕೊಂಡೆ. ಅವನ ವಿರುದ್ಧ ಪೊಲೀಸರು ದಾಖಲಿಸಿದ್ದ ದೋಷಾರೋಪ ಪಟ್ಟಿಯನ್ನು ನಾನು ಪರಿಶೀಲಿಸಿದೆ. ಅದರಲ್ಲಿ ಕೇವಲ ಕಳ್ಳತನದ ಆರೋಪ ಇದ್ದುದರಿಂದ ಸಮಾಧಾನ ಪಟ್ಟುಕೊಂಡು, ನಿರೀಕ್ಷಣಾ ಜಾಮೀನನ್ನು ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದೆ. ಕೋರ್ಟ್‌ ನನ್ನ ವಾದವನ್ನು ಆಲಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಹೀಗಾಗಿ ಸದ್ಯ ಆತ ಬಂಧನದ ಭೀತಿಯಿಂದ ಮುಕ್ತವಾದ.

ಈಗ ಏನಿದ್ದರೂ ಅವನನ್ನು ನಿರಪರಾಧಿ ಎಂದು ನಾನು ಸಾಬೀತು ಮಾಡಬೇಕಿತ್ತು. ಆದ್ದರಿಂದ ದೋಷಾರೋಪ ಪಟ್ಟಿಯನ್ನು ಚೆನ್ನಾಗಿ ಅಧ್ಯಯನ ಮಾಡಿದೆ. ಪುಣ್ಯಕ್ಕೆ ಅದರಲ್ಲಿ ‘ಆನಂದ ಮತ್ತು ವನಿತಾ ನಡುವೆ ಅಕ್ರಮ ಸಂಬಂಧ ಇತ್ತು. ಆದ್ದರಿಂದಲೇ ಅವನು ಅವಳ ಕೊಠಡಿಯೊಳಕ್ಕೆ ಹೋಗಿದ್ದ’ ಎಂಬುದಾಗಿ ಎಲ್ಲಿಯೂ ಉಲ್ಲೇಖ ಇರಲಿಲ್ಲ.

ತಮ್ಮ ಕಾಲೇಜಿನ ಘನತೆ ಹಾಗೂ ವಸತಿಗೃಹದ ಸುರಕ್ಷತೆಯ ದೃಷ್ಟಿಯಿಂದ ಯಾರೊಬ್ಬರೂ ಇವರ ಕಳ್ಳ ವ್ಯವಹಾರದ ಬಗ್ಗೆ ಬಾಯಿಬಿಟ್ಟಿರಲಿಲ್ಲವೇನೊ. ಆದರೆ ಆನಂದ, ಮಧ್ಯರಾತ್ರಿ ಎರಡನೆಯ ಮಹಡಿಯಲ್ಲಿ ಇದ್ದ ಬಗ್ಗೆ ಬೇಕಾದಷ್ಟು ಸಾಕ್ಷ್ಯಾಧಾರ ಇದ್ದುದರಿಂದ ಆ ಆರೋಪದಿಂದ ಅವನನ್ನು ಮುಕ್ತ ಮಾಡುವುದು ಕಷ್ಟ ಎನಿಸಿತು.

ಕೋರ್ಟ್‌ನಲ್ಲಿ ವಿಚಾರಣೆ ಶುರುವಾಯಿತು. ಘಟನೆಯ ಪ್ರಮುಖ ಸಾಕ್ಷಿದಾರಳು ಎಂದರೆ ವನಿತಾ. ವನಿತಾ ಏನಾದರೂ ಕೋರ್ಟ್‌ಗೆ ಬಂದು ಆನಂದನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಬಿಟ್ಟಿದ್ದರೆ ಆ ದೇವರೇ ಬಂದರೂ ಆನಂದನನ್ನು ಬಚಾವು ಮಾಡುವಂತಿರಲಿಲ್ಲವೇನೊ. ಹೀಗೆ ಆಗಿಬಿಟ್ಟರೆ ಏನು ಮಾಡುವುದು ಎಂದು ನಾನು  ಯೋಚಿಸತೊಡಗಿದೆ. ಏಕೆಂದರೆ ವನಿತಾ ಈಗಾಗಲೇ ತನ್ನ ‘ಬುದ್ಧಿ’ ತೋರಿಸಿಬಿಟ್ಟಿದ್ದಳು.

ತಾನು ಬಚಾವಾಗಲು ಆನಂದನ ವಿರುದ್ಧ ಎಂಥ ಕಠೋರ ಆರೋಪವನ್ನೂ ಮಾಡಲು ಸಿದ್ಧಳಿದ್ದಳಾಕೆ. ಆದರೆ ದೈವಲೀಲೆಯೋ ಏನೊ... ಅಷ್ಟೊತ್ತಿಗಾಗಲೇ ಆಕೆ ಅಮೆರಿಕದ ಧನವಂತನೊಬ್ಬನನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಳು. ಅದಕ್ಕಾಗಿ ಕೋರ್ಟ್‌ಗೆ ಸಾಕ್ಷಿದಾರಳಾಗಿ ಬರಲು ಒಪ್ಪಲಿಲ್ಲ.

ವನಿತಾ ಸಾಕ್ಷಿದಾರಳಾಗಿ ಬರುವುದಿಲ್ಲ ಎಂದು ಖಾತ್ರಿಯಾದ ಮೇಲೆ ನನಗೂ ಜೀವಬಂದಂತಾಯಿತು. ಪೊಲೀಸರ ಸಾಕ್ಷಿದಾರರ ಪಟ್ಟಿಯಲ್ಲಿ ಇದ್ದ ವಸತಿಗೃಹದ ವಾರ್ಡನ್‌ ಅವರಿಂದ ಹಿಡಿದು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದೆ. ಅವರಿಬ್ಬರ ಅಕ್ರಮ ಸಂಬಂಧದ ವಿಷಯ ಯಾರೊಬ್ಬರ ಬಾಯಲ್ಲೂ ಬರದಂತೆ ಸೂಕ್ಷ್ಮವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಎಲ್ಲಾ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿದ ನಂತರ, ಮಧ್ಯರಾತ್ರಿ ಆನಂದ ಎರಡನೆಯ ಮಹಡಿಯಲ್ಲಿ ಇದ್ದ ಎನ್ನುವುದಷ್ಟೇ ಸಾಬೀತಾಯಿತು. ಆದರೆ ವನಿತಾಳ ಕೋಣೆಯೊಳಕ್ಕೆ ಆತ ಹೋಗಿದ್ದ ಎನ್ನುವುದು ಸಾಬೀತು ಆಗಲಿಲ್ಲ. ಎರಡನೆಯ ಮಹಡಿಯ ಕಿಟಕಿಯಿಂದ ಕೆಳಕ್ಕೆ ಆನಂದ ಜಿಗಿದಿದ್ದನ್ನು ಕೂಡ ಪ್ರತ್ಯಕ್ಷವಾಗಿ ಯಾರೂ ಕಂಡಿರಲಿಲ್ಲ.  ವನಿತಾ ಸಾಕ್ಷಿದಾರಳಾಗಿ ಬರುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದ ನಾನು ಅದನ್ನೇ ಅಸ್ತ್ರವಾಗಿ ಬಳಸಿದೆ.

‘ಈ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿರುವ ವನಿತಾ ಅವರನ್ನು  ಬೇಕಿದ್ದರೆ ಪ್ರಾಸಿಕ್ಯೂಷನ್‌ ವಿಚಾರಣೆಗೆ ಒಳಪಡಿಸಲಿ. ಸುಮ್ಮನೇ ನನ್ನ ಕಕ್ಷಿದಾರರ ಮೇಲೆ ವೃಥಾ ಆರೋಪ ಹೊರಿಸುವುದು ಸರಿಯಲ್ಲ’ ಎಂದೆ. ಆನಂದ ಕೂಡ ತನ್ನ ಹೇಳಿಕೆಯಲ್ಲಿ ‘ವನಿತಾ ಅವರ ಕೊಠಡಿಯ ಬಳಿ ಯಾರೋ ಕೂಗಿಕೊಂಡಂತೆ ಕೇಳಿಸಿತು. ಅದಕ್ಕಾಗಿ ಓಡಿಹೋಗಿದ್ದೆ ಅಷ್ಟೆ’ ಎಂದಿದ್ದ.

ಆನಂದ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದರೂ ಆ ಬಗ್ಗೆ ಪೊಲೀಸರು ತನಿಖೆಯ ವೇಳೆ ದಾಖಲು ಮಾಡಿಕೊಂಡಿರಲಿಲ್ಲ. ಪೊಲೀಸರಿಗೆ ಏನಿದ್ದರೂ ಬೇಕಿರುವುದು ಘಟನೆ ನಡೆದ ಸ್ಥಳದಲ್ಲಿ ಆರೋಪಿ ಏನಾದರೂ ಸುಳಿವು ಬಿಟ್ಟುಹೋಗಿದ್ದಾನೆಯೇ ಎನ್ನುವುದು. ಆದರೆ ಇಲ್ಲಿ ಆನಂದ ಕಳ್ಳತನ ಮಾಡಿದ್ದಾನೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ.

ಪೊಲೀಸರ ವಿಚಾರಣೆ ವೇಳೆ ಯಾವುದೇ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡರೂ ಆ ತಪ್ಪಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೇ ಹೋದರೆ ಆರೋಪಿಯ ಹೇಳಿಕೆಗಳಿಗೆ ಕಾನೂನುಬದ್ಧ ಮಾನ್ಯತೆ ಇರುವುದಿಲ್ಲ. ಆದ್ದರಿಂದ ಮಹಡಿಯಿಂದ ಆನಂದ ಹಾರಿದ್ದು ಏಕೆ ಎಂಬ ಪ್ರಶ್ನೆ ಕೋರ್ಟ್‌ ಮುಂದೆ ಬರಲೇ ಇಲ್ಲ.

ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ‘ಆನಂದ ಅಕ್ರಮವಾಗಿ ಎರಡನೆಯ ಮಹಡಿಗೆ ಹೋಗಿರುವುದು ಸಾಬೀತಾಗಿದೆ. ಅಕ್ರಮ ಪ್ರವೇಶ ಕಾನೂನುಬಾಹಿರ. ಆದರೆ ವನಿತಾಳ ಕೋಣೆಯೊಳಕ್ಕೆ ಆತ ಹೋದ ಬಗ್ಗೆಯಾಗಲೀ, ಕಳ್ಳತನ ಮಾಡಿದ ಕುರಿತಾಗಲೀ ಸಾಕ್ಷ್ಯಾಧಾರಗಳು ಇಲ್ಲ’ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ‘ಅಕ್ರಮ ಪ್ರವೇಶ’ಕ್ಕೆ ಸಂಬಂಧಿಸಿದಂತೆ 500 ರೂಪಾಯಿ ದಂಡ ವಿಧಿಸಿದರು. ಕಳ್ಳತನದ ಆರೋಪದಿಂದ ಮುಕ್ತಗೊಳಿಸಿದರು.

ಜೈಲಿಗೆ ಹೋಗುವುದನ್ನೇನೋ ಆನಂದ ತಪ್ಪಿಸಿಕೊಂಡ ನಿಜ. ಆದರೆ ಹೆಣ್ಣಿನ ಮೋಹದ ಜಾಲಕ್ಕೆ ಒಳಗಾಗಿ ಮೂಳೆ ಮುರಿದುಕೊಂಡು ಇಂದಿಗೂ ನರಳಾಡುತ್ತಿದ್ದಾನೆ. ಆತ ಚೇತರಿಸಿಕೊಳ್ಳಲು ಇನ್ನೂ ವರ್ಷಗಳೇ ಬೇಕು. ಸಾಲದು ಎಂಬುದಕ್ಕೆ ಈಗಾಗಲೇ ಲಕ್ಷಾಂತರ ರೂಪಾಯಿಯನ್ನು ಆಸ್ಪತ್ರೆಗಾಗಿ ಖರ್ಚು ಮಾಡಿದ್ದು, ಇನ್ನೂ ಆಸ್ಪತ್ರೆಯ ಬಿಲ್‌ ಏರುತ್ತಲೇ ಇದೆ. ಅತ್ತ ವನಿತಾ ಮಾತ್ರ ತನಗೂ ಆನಂದನಿಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಗಂಡ–ಮಕ್ಕಳೊಂದಿಗೆ ಬಾಳುತ್ತಿದ್ದಾಳೆ.

ಹೆಣ್ಣು ಮಕ್ಕಳು ಆಸೆ ತೋರಿಸಿದಾಕ್ಷಣ, ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡು ಅವರ ಪಾಶದಲ್ಲಿ ಸಿಲುಕುವ ಯುವಪೀಳಿಗೆಗೆ (ಕೆಲವೊಮ್ಮೆ ವಯಸ್ಸಾದವರಿಗೂ!) ಈ ಘಟನೆ ಮಾದರಿಯಾದರೆ ಒಳಿತು...ಹೆಸರುಗಳನ್ನು ಬದಲಾಯಿಸಲಾಗಿದೆ
(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT