ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃ ಭಾಷೆ ಶಿಕ್ಷಣ: ಸಂವಿಧಾನ ತಿದ್ದುಪಡಿಗೆ ಆಗ್ರಹ

Last Updated 16 ಏಪ್ರಿಲ್ 2017, 5:20 IST
ಅಕ್ಷರ ಗಾತ್ರ

ಟಿ.ತಾರೇಗೌಡ ವೇದಿಕೆ (ಶಿರಾ): ‘ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರುವಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಕನ್ನಡ ಸಾಹಿತ್ಯ ಪರಿಷತ್‌, ಕನ್ನಡಪರ ಸಂಘಟನೆಗಳು ಹಾಗೂ ರಾಜ್ಯ ಸರ್ಕಾರ ಒತ್ತಾಯಿಸಬೇಕು. ಈ ನಿಟ್ಟಿನಲ್ಲಿ ಬೇರೆ ಬೇರೆ ರಾಜ್ಯಗಳ ಸಹಕಾರವನ್ನು ರಾಜ್ಯ ಸರ್ಕಾರ ಪಡೆಯಬೇಕು’ ಎಂದು ಶಿರಾ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಮಾಲಿಮದ್ದಣ್ಣ  ಒತ್ತಾಯಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು. ‘ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಾತ್ರವೇ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಉಳಿಯಲಿವೆ. ಮಾನವಿಕ ವಿಷಯಗಳಲ್ಲಿ ಕನ್ನಡ ಬಳಕೆ ಸಾಕಷ್ಟು ಆಗಿದೆ. ಆದರೆ, ವೈದ್ಯಕೀಯ, ತಂತ್ರಜ್ಞಾನ, ಸಾಫ್ಟ್‌ವೇರ್‌ ಜ್ಞಾನದ ವಿಷಯಗಳಲ್ಲಿ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದರ ಗಂಭೀರ ಚಿಂತನೆ ನಡೆಯಬೇಕು’ ಎಂದು ಪ್ರತಿಪಾದಿಸಿದರು.
‘ವಿಶ್ವವಿದ್ಯಾಲಯ ಮಟ್ಟದ ಪಠ್ಯಗಳು ಕನ್ನಡದಲ್ಲಿ ದೊರಕಬೇಕು. ವಿಜ್ಞಾನ ವಿಷಯದಲ್ಲಿ ಕನ್ನಡ ಮಾಧ್ಯಮದ ಪುಸ್ತಕಗಳು ಎಷ್ಟು ಬಂದಿವೆ. ಗುಣಮಟ್ಟ ಹೇಗಿದೆ ಎಂಬುದನ್ನು ಸಾಹಿತ್ಯ ಪರಿಷತ್‌ ಗಮನಿಸಬೇಕು’ ಎಂದು ಹೇಳಿದರು.

ತಾಲ್ಲೂಕಿನಲ್ಲಿರುವ ಕಗ್ಗದಪದ, ಕರಗದ ಕುಣಿತ, ಕಿನ್ನರಜೋಗಿ ಮೇಳ, ಗೊರವರ ಕುಣಿತ, ಎತ್ತಪ್ಪನಕಟ್ಟು, ಕಟ್ಟೆ ಮನೆಗಳ ಪಂಚಾಯಿತಿ, ಕೊಂತಪೂಜೆ ಜುಂಜಪ್ಪ, ಮಾಗೋಡು ರಂಗನಾಥ ಆಚರಣೆಗಳನ್ನು ನೆನಪು ಮಾಡಿಕೊಂಡ ಸಮ್ಮೇಳನಾಧ್ಯಕ್ಷರು, ‘ಇವುಗಳ ಬಗ್ಗೆ ಸಮಗ್ರ ಕ್ಷೇತ್ರ ಅಧ್ಯಯನ ನಡೆಯಬೇಕು’ ಎಂದು ಹೇಳಿದರು.
‘ಶಾಲಾ–ಕಾಲೇಜು, ಸಾರ್ವಜನಿಕ ಗ್ರಂಥಾಲಯಗಳಲ್ಲಿ ತಾಲ್ಲೂಕಿನ ಸಾಹಿತಿಗಳ ಕೃತಿಗಳು ದೊರೆಯುವಂತಾಗಬೇಕು’ ಎಂದರು.

‘ಶಿರಾ ಸೀಮೆಗೆ ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಿ, ಬರಡು ನೆಲದಲ್ಲಿ ಹಸಿರು ಚಿಮ್ಮಿಸುವ ಕೆಲಸವಾಗಬೇಕು’ ಎಂದು  ಸಲಹೆ ನೀಡಿದರು.ಪ್ರೊ.ಮಾಲಿಮದ್ದಣ್ಣ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಬಿ.ಎನ್‌. ಚಂದ್ರಪ್ಪ,‘ಹಣದಾಸೆಗೆ ಜಿಲ್ಲೆಯ ಜನರು ಭೂಮಿ ಮಾರಾಟ ಮಾಡಬೇಡಿ. ನಮಗೆಲ್ಲ ಭೂಮಿ ತಾಯಿ ಇದ್ದಂತೆ.  ತಾಯಿಯನ್ನು ಮಾರಾಟ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ‘ಸಾಹಿತಿಗಳು, ಚಿಂತಕರು, ಪ್ರಗತಿಪರರು  ರಾಜ್ಯವನ್ನು ಬರದ ದವಡೆಯಿಂದ ಪಾರು ಮಾಡಲು ಪರಿಹಾರ ಸೂಚಿಸಬೇಕು’ ಎಂದು ಮನವಿ ಮಾಡಿದರು.ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ‘ಶಿರಾ ತಾಲ್ಲೂಕಿನಲ್ಲಿ ಬರವಿದೆ. ಆದರೆ, ಸಾಹಿತ್ಯಕ್ಕೆ ಬರವಿಲ್ಲ. ತಾಲ್ಲೂಕಿನ ಇತಿಹಾಸದ ಬಗ್ಗೆ ರಚನೆಯಾಗಿರುವ ಕೃತಿಗಳು ರಾಜ್ಯದ ಬೇರಾವ ತಾಲ್ಲೂಕಿನಲ್ಲೂ ಆಗಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಂದೀಶ್ವರ, ಡಾ.ಟಿ.ಆರ್. ಅನಂತರಾಮು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಿರಿಜ ಶ್ರೀರಂಗಯಾದವ್, ರಾಮಕೃಷ್ಣ ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ: ಪಟ್ಟಣದ ಗವಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಯಚಂದ್ರ ಚಾಲನೆ ನೀಡಿದರು. ವೀರಗಾಸೆ, ಡೊಳ್ಳು ಕುಣಿತ, ಗೊರವರ ಕುಣಿತ, ಪಟ ಕುಣಿತ, ಗಾರುಡಿ ಗೊಂಬೆ, ಪೂಜಾ ಕುಣಿತ, ಸೋಮನ ಕುಣಿತ, ತಮಟೆ ವಾದ್ಯ, ನಾಸಿಕ್‌ ಡೋಲು, ಹುಲಿವೇಷ, ಕಂಸಾಳೆ, ಕೋಲಾಟ ತಂಡಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.ಭಗವಾನ್‌ ವೃತ್ತ, ಹಳೆ ಆಸ್ಪತ್ರೆ ವೃತ್ತ, ಮಧುಗಿರಿ ರಸ್ತೆ ಮೂಲಕ ಮೆರವಣಿಗೆ ಕ್ರೀಡಾಂಗಣ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT