ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಕಳೆದರೂ ಉಪಯೋಗಕ್ಕೆ ಬಾರದ ಘಟಕ

Last Updated 16 ಏಪ್ರಿಲ್ 2017, 5:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ವರ್ಷ ಕಳೆದರೂ ಅದು ಈವರೆಗೆ ಕಾರ್ಯಾರಂಭ ಮಾಡಿಲ್ಲ. ₹ 7.10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಘಟಕದ ಸ್ಥಿತಿ ಸದ್ಯ ಹಾಳು ಬಿದ್ದ ಮನೆಯಂತಾಗಿದೆ.ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ 2015–16ನೇ ಸಾಲಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ಶುದ್ಧ ನೀರಿನ ಘಟಕಗಳ ಅಳವಡಿಸುವ ಯೋಜನೆಯಡಿ ಈ ಕಾಮಗಾರಿ ನಡೆಸಲಾಗಿದೆ. ಈ ಘಟಕ ನಿರ್ಮಾಣ ಕಾರ್ಯವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಫಾಂಟಸ್‌ ಎಂಬ ಕಂಪೆನಿಗೆ ವಹಿಸಿತ್ತು.

ಏಕೆ ವಿಳಂಬ?: ಫಾಂಟಸ್ ಕಂಪೆನಿ ಘಟಕವನ್ನು ಕಳೆದ ವರ್ಷದ ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳಿಸಿದೆ. ಆದರೆ ಘಟಕದ ಮೇಲೆ ಹಾದು ಹೋಗಿರುವ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವ ಕಾರ್ಯ ವಿಳಂಬವಾದ ಕಾರಣ ಘಟಕ ಕಾರ್ಯಾರಂಭ ಮಾಡದೆ ದೂಳು ತಿನ್ನುತ್ತಿದೆ. ಶುದ್ಧ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಗ್ರಾಮಸ್ಥರು ನಮಗೆ ನೀರು ಸಿಗುವುದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

‘ಘಟಕ ನಿರ್ಮಾಣಕ್ಕೆ ತೋರಿಸಿದ ಜಾಗದ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿದ್ದವು. ಅದಕ್ಕಾಗಿ ಆ ಜಾಗ ಸೂಕ್ತವಲ್ಲ ಎಂದು ನಾವು ಹೇಳಿದರೂ ಪಂಚಾಯಿತಿಯವರು ತಂತಿಗಳನ್ನು ಸ್ಥಳಾಂತರಿಸಿ ಕೊಡುತ್ತೇವೆ, ಅಲ್ಲೇ ಘಟಕ ನಿರ್ಮಿಸಿ ಎಂದು ತಿಳಿಸಿದರು. ಗುತ್ತಿಗೆದಾರರು ಕೆಲಸ ಮಾಡಿ ಮುಗಿಸಿದ್ದಾರೆ. ಆದರೆ ಪಂಚಾಯಿತಿಯವರು ತಂತಿ ಸ್ಥಳಾಂತರಿಸಲು ಮತ್ತು ನೀರಿನ ಸಂಪರ್ಕ ಕಲ್ಪಿಸಿಕೊಡಲು ವಿಳಂಬ ಮಾಡಿದ ಕಾರಣಕ್ಕೆ ಘಟಕವನ್ನು ಆರಂಭಿಸಲು ಆಗಿಲ್ಲ’ ಎಂದು ಕೆಆರ್‌ಐಡಿಎಲ್‌ ಚಿಕ್ಕಬಳ್ಳಾಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಡಿ.ಪುಟ್ಟಯ್ಯ ತಿಳಿಸಿದರು.

‘ಘಟಕಕ್ಕೆ ಚಾಲನೆ ನೀಡಿ, ಸಮಸ್ಯೆಗಳಿದ್ದರೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಬಳಿಕ ಅದನ್ನು ಪಂಚಾಯಿತಿಯವರಿಗೆ ಹಸ್ತಾಂತರಿಸಲಾಗುತ್ತದೆ. ಘಟಕ ಕಾರ್ಯಾರಂಭ ಮಾಡಿದ ದಿನದಿಂದ ಒಂದು ವರ್ಷ ಅದರ ಮೇಲುಸ್ತುವಾರಿಯನ್ನು ಒಪ್ಪಂದದಂತೆ ಗುತ್ತಿಗೆದಾರ ಕಂಪೆನಿ ನೋಡಿಕೊಳ್ಳುತ್ತದೆ. ಈ ಅವಧಿಯಲ್ಲಿ ಯಂತ್ರೋಪಕರಣಗಳಲ್ಲಿ ತೊಂದರೆ ಕಂಡುಬಂದರೆ ಉಚಿತವಾಗಿ ರಿಪೇರಿ ಮಾಡಿಕೊಡುತ್ತದೆ’ ಎಂದರು.

‘ತಂತಿ ಸ್ಥಳಾಂತರಕ್ಕೆ ಬೆಸ್ಕಾಂಗೆ ಅರ್ಜಿ ಸಲ್ಲಿಸಿ ಅನೇಕ ಬಾರಿ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಹಲವಾರು ತಿಂಗಳುಗಳ ಬಳಿಕ ಇತ್ತೀಚೆಗೆ ಸ್ಥಳಾಂತರ ಕಾರ್ಯ ಮಾಡಿಸಿದ್ದೇವೆ’ ಎಂದು ಆವಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣಪ್ಪ ಹೇಳಿದರು.

‘ಘಟಕದ ಬಾಗಿಲ ಗಾಜು ಒಡೆದು ಹೋಗಿದೆ. ಇನ್ನೂ ಕೆಲ ಉಪಕರಣಗಳನ್ನು ಅಳವಡಿಸುವ ಕೆಲಸ ಬಾಕಿ ಇದೆ. ಒಂದು ವಾರದೊಳಗೆ ಘಟಕವನ್ನು ಆರಂಭಿಸಲು ಉದ್ದೇಶಿಸಿದ್ದೇವೆ. ಅದು ನಮಗೆ ಹಸ್ತಾಂತರವಾದ ಬಳಿಕವಷ್ಟೇ ಆ ಘಟಕಕ್ಕೆ ಎಷ್ಟು ವೆಚ್ಚವಾಗಿದೆ. ಷರತ್ತುಗಳೇನು ಎನ್ನುವುದು ನಮಗೆ ತಿಳಿಯಲಿದೆ’ ಎಂದು ತಿಳಿಸಿದರು.

‘ನಮ್ಮ ಕಡೆಯಿಂದ ಆಗಬೇಕಾದ ಕೆಲಸಗಳನ್ನೆಲ್ಲ ನಾವು ಮಾಡಿ ಮುಗಿಸಿದ್ದೇವೆ. ಬಂದು ನೀರಿನ ಘಟಕ ಶುರು ಮಾಡುವಂತೆ ಒಂದು ವಾರದಿಂದ ಕರೆದರೂ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರ ಬರುತ್ತಿಲ್ಲ. ಈಗಾಗಲೇ ಕೆಆರ್‌ಐಡಿಎಲ್‌ ಎಇಇ ಜತೆ ಮಾತನಾಡಿದ್ದೇನೆ. ಗುತ್ತಿಗೆದಾರರನ್ನು ಸಂಪರ್ಕಿಸಲು ಮೂರು ದಿನಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎಂ.ಸಿ.ವೆಂಕಟೇಶ್ ಹೇಳಿದರು.

ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಆವಲಗುರ್ಕಿಯಲ್ಲಿ ಇತ್ತೀಚೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಆದಷ್ಟು ಬೇಗ ಈ ಘಟಕಕ್ಕೆ ಚಾಲನೆ ನೀಡಿ, ಕುಡಿಯುವ ನೀರಿನ ಹಾಹಾಕಾರವನ್ನಾದರೂ ತಪ್ಪಿಸಲಿ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT