ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಡ್ಡಳ್ಳಿ: 19ರಂದು ಅಂತಿಮ ಸಭೆ

Last Updated 16 ಏಪ್ರಿಲ್ 2017, 6:09 IST
ಅಕ್ಷರ ಗಾತ್ರ

ಮಡಿಕೇರಿ:  ದಿಡ್ಡಳ್ಳಿ ಸಮಸ್ಯೆ ಕುರಿತು ಏಪ್ರಿಲ್‌ 19ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಂತಿಮ ಸಭೆ ನಡೆಸಿ ನಿರಾಶ್ರಿತರ ಸಮಸ್ಯೆ ಪರಿಹರಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಒಕ್ಕಲೆಬ್ಬಿಸಿದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು ಮಾತನಾಡಿದರು.

‘ದಿಡ್ಡಳ್ಳಿ ಮೀಸಲು ಅರಣ್ಯವೋ ಅಥವಾ ಕಂದಾಯ ಜಮೀನು ವ್ಯಾಪ್ತಿಗೆ ಒಳ ಪಡುವುದೋ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದು ಶೀಘ್ರವೇ ಇತ್ಯರ್ಥವಾಗಲಿದೆ. ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅಂತಿಮ ಸುತ್ತಿನ ಸಭೆ ನಡೆಸಿ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಬುಡಕಟ್ಟು ಜನರಿಗೆ ಈಗ ಎಚ್ಚರಿಕೆ ಬಂದಿದೆ. ಅವರ ಎಚ್ಚರಿಕೆಯಿಂದ ಸಂಘಟನೆಯಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅವರಿಗೆ ನ್ಯಾಯ ಕೊಡಲು ಸರ್ಕಾರ ಬದ್ಧವಿದೆ. ನಿವೇಶನ, ಮನೆ, ಭೂಮಿ ನೀಡಲು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ದಿಡ್ಡಳ್ಳಿಯ ಆಶ್ರಯ ಕಾಲೊನಿಯಲ್ಲಿ ಕಾಂಕ್ರೀಟ್‌ ರಸ್ತೆಯಾಗಿದೆ. ಆದರೆ, ಆಶ್ರಯ ಮನೆಗಳು ಬೀಳುವ ಹಂತದಲ್ಲಿವೆ. ಆದಿವಾಸಿಗಳಿಗೆ ಆಶ್ರಯ ಕಲ್ಪಿಸದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅವರ ಪಾಲಿಗೆ ಕೊಡಗಿನಲ್ಲಿ ಸತ್ತಿದೆ’ ಎಂದು ಆಕ್ರೋಶ ಭರಿತವಾಗಿ ನುಡಿದರು.

‘ಆದಿವಾಸಿಗಳ ಸ್ಥಿತಿ ಕಂಡು ನನಗೆ ಕಣ್ಣೀರು ಬರುತ್ತಿದೆ. ಮಾತಿನಿಂದ ಕೆಲಸ ಆಗುವುದಿಲ್ಲ. ನಾನು ಗೌಡರ ಮನೆಯಲ್ಲಿ ಕೆಲಸ ಮಾಡುತ್ತಲೆ ಬದುಕಿ ಬಂದಿದ್ದೇನೆ. ಹೀಗಾಗಿ, ಬಡವರ ಕಷ್ಟದ ಅರಿವಿದೆ. ಇವರಿಗೆ ನ್ಯಾಯ ಕೊಡಿಸಿಯೇ ತೀರುತ್ತೇನೆ. ಆದಿವಾಸಿಗಳೂ ಹಠ ಹಿಡಿಯದೇ ಬೇರೆಡೆ ಜಮೀನು ಲಭಿಸಿದರೆ ನಿಮ್ಮ ಮಕ್ಕಳಿಗೂ ಅನುಕೂಲವಾಗಲಿದೆ. ಕನಿಷ್ಠ ಮೂರು ಎಕರೆ ಜಮೀನು ನೀಡಿದರೆ ಬದುಕು ಕಟ್ಟಿಕೊಳ್ಳಬಹುದು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದೆ’ ಎಂದು ಭರವಸೆ ನೀಡಿದರು.

‘ದೊಡ್ಡ ದೊಡ್ಡ ಕಂಪೆನಿಗಳು ಕಾರ್ಮಿಕರ ಶ್ರಮದಿಂದ ಶ್ರೀಮಂತವಾಗಿವೆ. ಆದರೆ, ಕಾರ್ಮಿಕರಿಗೆ ಸೌಲಭ್ಯ ಕೊಡದಿರುವುದು ದುರಂತ. ದಿಡ್ಡಳ್ಳಿ ಹೋರಾಟ ಇಡೀ ರಾಜ್ಯಕ್ಕೇ ಮಾದರಿ. ರಾಜ್ಯದ ವಸತಿ ರಹಿತರ ಕಣ್ಣು ತೆರೆಸಿದ್ದು ಇದೇ ಹೋರಾಟ; ನಿಮಗೆ ನ್ಯಾಯ ಕೊಡದಿದ್ದರೆ ಸರ್ಕಾರವಿದ್ದೂ ಏನು ಪ್ರಯೋಜನ’ ಎಂದು ಕಾಗೋಡು ಪ್ರಶ್ನಿಸಿದರು.

‘ನಾಳೆಯಿಂದಲೇ ಅಧಿಕಾರಿಗಳು ಆದಿವಾಸಿಗಳಿಗೆ ಗುರುತಿನ ಪತ್ರ, ಬಿಪಿಎಲ್‌ ಕಾರ್ಡ್‌ ವಿತರಿಸಿ. ಆದಿವಾಸಿಗಳಿಗೆ ಜಿಲ್ಲೆಯಲ್ಲಿ 5 ಸಾವಿರ ಮನೆ ನಿರ್ಮಿಸಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

ಹೊಸ ಆದೇಶ:  ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅರ್ಜಿ ವಜಾಗೊಂಡವರೂ ಸರ್ಕಾರಿ ಭೂಮಿ ಪಡೆಯಲು ಅರ್ಜಿ ಸಲ್ಲಿಸಬಹುದು. ಬೇರೆಯವರ ಜಮೀನಿನಲ್ಲಿ ವಾಸ ಮಾಡುತ್ತಿದ್ದವರೂ ಹಕ್ಕುಪತ್ರ ಪಡೆಯಲು ಅವಕಾಶವಿದೆ ಎಂದರು.ದಿಡ್ಡಳ್ಳಿ ಕಂದಾಯ ಜಮೀನೇ ಆಗಿದ್ದರೆ ಮೂರು ದಿನಗಳ ಒಳಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೆ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT