ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಬುದ್ಧಿವಂತಿಕೆ ನಿಯಂತ್ರಿಸಲಿವೆ ಯಂತ್ರಗಳು’

Last Updated 16 ಏಪ್ರಿಲ್ 2017, 6:24 IST
ಅಕ್ಷರ ಗಾತ್ರ

ಮೈಸೂರು: ಅತಿ ಶೀಘ್ರವೇ ಯಂತ್ರಗಳು ಮಾನವ ಬುದ್ಧಿಮತ್ತೆಯನ್ನು ಮೀರಿ ನಿಲ್ಲಲಿವೆ ಎಂದು ಇಂಗ್ಲೆಂಡಿನ ಬ್ರ್ಯಾಡ್‌ಫೋರ್ಡ್‌ ವಿ.ವಿ ಮಾಹಿತಿ ಎಂಜಿನಿಯರಿಂಗ್‌ ಹಾಗೂ ಮಾಹಿತಿ ಪ್ರಾಧ್ಯಾಪಕ ಹಸನ್‌ ಉಗೈಲ್‌ ಅಭಿಪ್ರಾಯಪಟ್ಟರು.ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ ವಿಜ್ಞಾನ ವಿಭಾಗವು ಸೆನೆಟ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಹಾಗೂ 3ನೇ ವಿಶ್ವಯುದ್ಧ: ಮಾನವ– ಯಂತ್ರದ ಸೆಣಸಾಟ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ ಕುರಿತು 1956ರಿಂದಲೇ  ಸಾಕಷ್ಟು ಚಿಂತನೆಗಳು ನಡೆದಿವೆ. ಆದರೆ, ಈಗಿನ 10 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಸಾಕಷ್ಟು ಸುಧಾರಿತ ಅಭಿವೃದ್ಧಿ­ಕಾರ್ಯಗಳಾಗಿವೆ. ಕೃತಕ ಬುದ್ಧಿಮತ್ತೆಯ ಇಂದಿನ ಬೆಳವಣಿಗೆಯನ್ನು ಗಮನಿಸಿದರೆ ಕೆಲವೇ ಕಾಲದಲ್ಲಿ ಮಾನವನ ಬುದ್ಧಿಮತ್ತೆಯು ಇದರ ಮುಂದೆ ಮಂಕಾಗಲಿದೆ ಎಂದರು.
ಸ್ಮರಣೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಮೀರಿಸಲು ಮನುಷ್ಯನಿಗೆ ಸಾಧ್ಯವೇ ಇಲ್ಲ. ಏಕೆಂದರೆ, ಮಾನವನ ಮಿದುಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಷ್ಟು ವಿಕಸನ ಆಗಿಲ್ಲ. ಹಾಗಾಗಿ, ಸದ್ಯಕ್ಕೆ ಕೃತಕ ಬುದ್ಧಿಮತ್ತೆಯು ಲೆಕ್ಕಾಚಾರ, ಮುಖ ಗುರುತಿಸುವಿಕೆ, ಅಪರಾಧ ಪತ್ತೆ ಕಾರ್ಯದಲ್ಲಿ ಸಾಕಷ್ಟು ಉತ್ತಮ ಸಹಾಯ ಮಾಡುತ್ತಿದೆ. ಮುಂದೆ ಇದು ಉತ್ಕೃಷ್ಟ ಮಟ್ಟಕ್ಕೆ ತಲುಪಲಿದೆ ಎಂದು ತಿಳಿಸಿದರು.

ಮಾನವಕುಲಕ್ಕೂ ಅಪಾಯ: ಕೃತಕ ಬುದ್ಧಿಮತ್ತೆಯು ಮಾನವ ಕುಲಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಈ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಮುಂಬರುವ ದಿನಗಳಲ್ಲಿ 3ನೇ ವಿಶ್ವಯುದ್ಧ ನಡೆದಿದ್ದೇ ಆದಲ್ಲಿ, ರಣರಂಗದಲ್ಲಿ ಸೈನಿಕರ ಬದಲಿಗೆ ರೊಬೊಟ್‌ಗಳು ಸೆಣಸಲಿವೆ. ಯುದ್ಧದಲ್ಲಿ ಅಣುಬಾಂಬ್‌ಗಳ ಬಳಕೆಯಾದಲ್ಲಿ, ಈ ಬಾಂಬ್‌ಗಳನ್ನು ಕೃತಕ ಬುದ್ಧಿಮತ್ತೆ ನಿಯಂತ್ರಿಸುವ ಮಟ್ಟಕ್ಕೆ ಹೋದರೆ, ಅದರಿಂದ ಖಂಡಿತವಾಗಿಯೂ ಅಪಾಯ ಆಗುತ್ತದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕೃತಕ ಬುದ್ಧಿಮತ್ತೆಯ ವಶಕ್ಕೆ ನೀಡ ಬಾರದು ಎಂದು ಸಲಹೆ ನೀಡಿದರು.

ಸದ್ಯಕ್ಕೆ ಕೃತಕ ಬುದ್ಧಿಮತ್ತೆ ಹಾಗೂ ರೊಬೊಟ್ ಅಭಿವೃದ್ಧಿ ಹೊಂದುವ ಹಂತದಲ್ಲೇ ಇದೆ. ಆದರೆ, ಆ ಹಂತವು ಅಭಿವೃದ್ಧಿ ಹೊಂದಿದ ಹಂತಕ್ಕೆ ಬಹು ಹತ್ತಿರವಾಗಿದೆ. ಇನ್ನು ಕೆಲವು ದಶಕಗಳಲ್ಲಿ ಕೃತಕ ಬುದ್ಧಿಮತ್ತೆಯು ಪರಿಪೂರ್ಣ­ಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.ಮೈಸೂರು ವಿ.ವಿ ಕುಲಪತಿ ಪ್ರೊ.ದಯಾನಂದ ಮಾನೆ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್‌ ಪ್ರೊ.ಟಿ.ಕೆ.­ಉಮೇಶ್‌ ಅಧ್ಯಕ್ಷತೆ ವಹಿಸಿ ದ್ದರು. ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಸಿ.ಆರ್‌.ಜನಾರ್ದನ, ಕಂಪ್ಯೂಟರ್‌ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಡಿ.ಎಸ್‌.ಗುರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT