ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ತೆರವು ಕಾರ್ಯಾಚರಣೆ; ದಾಖಲೆ ಇಲ್ಲದೆ ಮರಳಿದ ಸಿಬ್ಬಂದಿ

Last Updated 16 ಏಪ್ರಿಲ್ 2017, 6:35 IST
ಅಕ್ಷರ ಗಾತ್ರ

ಕೊಣನೂರು: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿ ದ್ದಾರೆ ಎಂದು ಆರೋಪ ಬಂದ ಬಳಿಕ ಅದನ್ನು ತೆರವುಗೊಳಿಸಲು ಪೊಲೀಸರ ಜತೆ ತೆರಳಿದ್ದ ಅಧಿಕಾರಿಗಳ ತಂಡ ಸೂಕ್ತ ದಾಖಲೆ ಇಲ್ಲದೆ ತೆರವು ಕಾರ್ಯಾಚರಣೆ ಕೈ ಬಿಟ್ಟು ಮರಳಿದ ಘಟನೆ ಗಂಗೂರು ಗ್ರಾಮದಲ್ಲಿ ಶನಿವಾರ ನಡೆಯಿತು.

ರಾಮನಾಥಪುರ ಹೋಬಳಿಯ ಗಂಗೂರು ಗ್ರಾಮದ ನಿವಾಸಿ ವಿಜಯಕುಮಾರ್ ಎಂಬವರು ಸರ್ವೆ ನಂ.183ರ ಸರ್ಕಾರಿ ಜಾಗವನ್ನು ನಿವೇಶನವಾಗಿ ಖಾತೆ ಮಾಡಿಸಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ. ಅದನ್ನು ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಪಿಡಿಒ ಮನವಿ ಮಾಡಿದ್ದರು. ಈ ಕಾರಣದಿಂದ ತಹಶೀಲ್ದಾರ್ ಪ್ರಸನ್ನಮೂರ್ತಿ, ತಾ.ಪಂ. ಇಒ ಲೀಲಾವತಿ, ಸಿಪಿಐ ಶಿವರಾಜ್ ಆರ್.ಮುದೋಳ್ ಅವರು ಪೊಲೀಸರೊಂದಿಗೆ ಬಂದಿದ್ದರು. ಜೆಸಿಬಿ ಯಂತ್ರವನ್ನೂ ತರಿಸಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಜೆಡಿಎಸ್ ಮುಖಂಡ ಎಚ್.ಎಸ್. ಶಂಕರ್, 40 ವರ್ಷಗಳಿಂದ ವಿಜಯಕುಮಾರ್ ಈ ಜಾಗದಲ್ಲಿ ವಾಸಿಸುತ್ತಿದ್ದು, ಅವರ ತಂದೆಯ ಕಾಲದಲ್ಲಿಯೇ ಪಂಚಾಯಿತಿ ಯಿಂದ ಖಾತೆ ಮಾಡಲಾಗಿದೆ. ಪಂಚಾಯಿತಿ ವತಿಯಿಂದಲೇ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅನುಮತಿ ದೊರೆತಿದೆ. ಇದು ಹೇಗೆ ಅಕ್ರಮವಾಗುತ್ತದೆ. ಅಕ್ರಮವಾಗಿ ಕಟ್ಟಿಕೊಂಡಿರುವುದಕ್ಕೆ ಸೂಕ್ತ ದಾಖಲೆ ಒದಗಿಸಿ, ತೆರವುಗೊಳಿಸಲು ಆದೇಶವಿದ್ದರೆ ನೀಡಿ ಎಂದು ಹೇಳಿದರು.

ಈ ಸಂಬಂಧ ಈಗಾಗಲೇ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೋಗಲಾಗಿದೆ. ಈ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದರೆ ತೆರವುಗೊಳಿಸಲು ನಮ್ಮ ಅಭ್ಯಂತರವಿಲ್ಲ, ಆದರೆ ವಿನಾಕಾರಣ ಕುಟುಂಬವನ್ನು ಒಕ್ಕಲೆಬ್ಬಿಸಲು ಹೊರಟರೆ ಧರಣಿ ನಡೆಸಲಾಗುವುದು ಎಂದರು.ಅಕ್ರಮವಾಗಿ ಮನೆ ಕಟ್ಟಿಕೊಂಡಿ ರುವುದಕ್ಕೆ ಪುರಾವೆ ಒದಗಿಸಲು ಗ್ರಾಮ ಪಂಚಾಯಿತಿ ಪಿಡಿಒ ವಿಫಲರಾದರು. ದಾಖಲೆ ಲಭ್ಯವಿಲ್ಲದ ಕಾರಣ ತೆರವು ಕಾರ್ಯಾಚರಣೆ ಕೈ ಬಿಡುವುದಾಗಿ ತಾ.ಪಂ. ಇಒ ತಿಳಿಸಿದರು.

ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಸಿಪಿಐ ಶಿವರಾಜ್ ಆರ್.ಮುದೋಳ್, ದಾಖಲೆ ಇಲ್ಲದೆ ತರಾತುರಿಯಲ್ಲಿ ಪೊಲೀಸರನ್ನು ಕರೆಸಿ ಇಲಾಖೆಯ ಸಮಯವನ್ನು ಹಾಳುಮಾಡಿದ್ದೀರಿ ಎಂದು ಪಿಡಿಒ ವಿರುದ್ಧ ಹರಿ ಹಾಯ್ದರು.ತೆರವು ಕಾರ್ಯಾಚರಣೆಗೆ ಭದ್ರತೆ ಒದಗಿಸಲು ಹಾಸನದಿಂದ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT