ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕಲ್ಪಿಸಿ

Last Updated 16 ಏಪ್ರಿಲ್ 2017, 7:57 IST
ಅಕ್ಷರ ಗಾತ್ರ

ಶಿವಮೊಗ್ಗ:  ‘ಜಿಲ್ಲೆಯ ಸರ್ಕಾರಿ ಇಲಾಖೆ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಗುತ್ತಿಗೆ ಆಧಾರದ ಮೇಲೆ ನೇಮಕ ಗೊಂಡಿರುವ ಸಫಾಯಿ ಕರ್ಮಚಾರಿ ಗಳಿಗೆ ಸೌಲಭ್ಯಗಳನ್ನು  ಕಲ್ಪಿಸಬೇಕು’ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಾದ್ಯಂತ ಎಲ್ಲ ಇಲಾಖೆಗಳಲ್ಲೂ ‘ಡಿ’ ದರ್ಜೆ ನೌಕರರಾಗಿ ನೇಮಕಗೊಂಡಿರುವ ಕರ್ಮಚಾರಿಗಳ ಪಟ್ಟಿ ಪಡೆಯಿರಿ. ಈ ಸಂಬಂಧ ಮುಂದಿನ ಸಭೆ ವೇಳೆಗೆ ಕನಿಷ್ಠ 10 ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ನಿಯಮಾನುಸಾರ ಸೌಲಭ್ಯ ನೀಡಿರಬೇಕು’ ಎಂದು  ಅಧಿಕಾರಿಗಳಿಗೆ ಸೂಚಿಸಿದರು.‘ಸಫಾಯಿ ಕರ್ಮಚಾರಿಗಳು ಕಾರ್ಯನಿರ್ವಹಿಸುವಾಗ ಸುರಕ್ಷಾ ಕವಚ, ಸ್ವಚ್ಛತಾ ಪರಿಕರ ವಿತರಿಸಬೇಕು. ಕಡ್ಡಾಯವಾಗಿ ಗುರುತಿನ ಚೀಟಿ, ಸಮವಸ್ತ್ರ ನೀಡುವುದರ ಜತೆಗೆ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದರು.

‘ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ಕೈಗವಸು ಹಾಗೂ ಬೂಟುಗಳನ್ನು ವಿತರಿಸಲಾಗಿದ್ದರೂ ಅವುಗಳನ್ನು ಬಳಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಸಂಬಂಧ ಆಯಾ ಸ್ಥಳೀಯ ಸಂಸ್ಥೆಯನ್ನೇ ಹೊಣೆ ಮಾಡಲಾಗು ವುದು’ ಎಂದು ಎಚ್ಚರಿಕೆ ನೀಡಿದರು.‘ಸುರಕ್ಷಾ ಕವಚ, ಸ್ವಚ್ಛತಾ ಪರಿಕರಗಳನ್ನು ಬಳಸುವಂತೆ ಪೌರಕಾರ್ಮಿಕರಲ್ಲಿ ಅರಿವು ಮೂಡಿಸಬೇಕು. ಜತೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಬೇಕು’ ಎಂದು ಹೇಳಿದರು.

‘ಸಫಾಯಿ ಕರ್ಮಚಾರಿಗಳೆಂದು ಗುರುತಿಸಿಗೊಂಡಿರುವವರ ಮಕ್ಕಳು ಶಾಲೆ ತೊರೆದಿದ್ದರೆ ಮುಂದಿನ ಜೂನ್ ವೇಳೆಗೆ ಅವರನ್ನು ಪುನಃ ಶಾಲೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.‘ಮಕ್ಕಳಿಗೆ ಗುಣಮಟ್ಟದ ಶಾಲೆಗಳಿಗೆ ದಾಖಲಿಸುವ ಸಂಬಂಧ ಕನಿಷ್ಠ 10 ಮಂದಿಗೆ ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ನಡೆಸದೇ  ನೇರವಾಗಿ ಆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಗುತ್ತಿಗೆ ಹಾಗೂ ಕಾಯಂ ಪೌರಕಾರ್ಮಿಕರಿಗೆ ಸಿಗಬೇಕಾದಂತಹ ವೇತನ ಮತ್ತು ಇತರೆ ಸವಲತ್ತುಗಳು ನ್ಯಾಯಯುತವಾಗಿ ಸಿಗಲು  ಕ್ರಮ ಕೈಗೊಳ್ಳಬೇಕು’ ಎಂದರು.
ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಭಾನುಪ್ರಸಾದ್, ಚಿನ್ನಯ್ಯ ಸಲಹೆ ನೀಡಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮುತ್ತುರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್. ಶಿವಕುಮಾರ್, ಮಂಗಳಾ ವೆಂ.ನಾಯಕ್‌ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT