ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರು: ಗಂಭೀರವಾಗಿ ಪರಿಗಣಿಸಿ

Last Updated 16 ಏಪ್ರಿಲ್ 2017, 8:57 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ವಿವಿಧೆಡೆ ತಲೆ ದೂರಿದ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಬೇಡಿಕೆ ಮಂಡಿಸಿದರು.ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸೋಮನಾಥ ಮತ್ತು ದಿಗಂಬರ ಮಾತನಾಡಿ, ಜಲ ನಿರ್ಮಲ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಆದರೂ ಜನರಿಗೆ ಮಾತ್ರ ನೀರು ಸಿಗುತ್ತಿಲ್ಲ ಎಂದು ದೂರಿದರು.

ಜಮಗಿ ಬಳಿ ಕೆಲ ತಾಂಡಾಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ನೆಪದಲ್ಲಿ ₹1 ಕೋಟಿ ಖರ್ಚು ಮಾಡಲಾಗಿದೆ. ಆದರೆ ಅದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ರೀತಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ತಾಲ್ಲೂಕಿನ ಸಂತಪುರ, ಜೊನ್ನೆಕೇರಿ, ನಂದ್ಯಾಳ, ಬಸನಾಳ, ಮಸ್ಕಲ್ ತಾಂಡಾ, ಎಕಲಾರ ತಾಂಡಾ, ಕಿರುಗುಣವಾಡಿ, ನಂದಿ ಬಿಜಲಗಾಂವ್, ಚಿಕ್ಲಿ (ಯು) ಸೇರಿದಂತೆ 40 ಊರುಗಳಲ್ಲಿನ ಕೊಳವೆ ಮತ್ತು ತೆರೆದ ಬಾವಿ ಬತ್ತಿ ಹೋಗಿವೆ. ತೀರಾ ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸಲು ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ ಹೇಳಿದರು.

ಸಮಸ್ಯೆ ಇರುವ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಮಾಹಿತಿ ನೀಡಿದರೆ ಅಂತಹ ಕಡೆಗಳಲ್ಲೂ ಪರಿಹರಿಸಲಾಗುವುದು. ಕೆಲ ಕಡೆ ಖಾಸಗಿ ನೀರಿನ ಮೂಲ ಗುರುತಿಸಲಾಗಿದೆ. ಅವರಿಗೆ ಹಣ ಕೊಟ್ಟು ನೀರು ಖರೀದಿಸಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಈ ವರ್ಷ ಶಾಲೆ ಆರಂಭ ಮುನ್ನವೇ ಖಾಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಜೂನ್‌ ತಿಂಗಳಲ್ಲೇ ಅತಿಥಿ ಶಿಕ್ಷಕರನ್ನು ತುಂಬಿಕೊಳ್ಳಬೇಕು ಎಂದು ಸದಸ್ಯರು ಬೇಡಿಕೆ ಮಂಡಿಸಿದರು. ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ಇದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಈ  ವರ್ಷ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶಾಂತಿಯುತವಾಗಿ ನಡೆದಿವೆ. ಫಲಿತಾಂಶ ಕೂಡ ಚೆನ್ನಾಗಿ ಬರಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಪೂಜಾರಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನೆಹರೂ ಪಾಟೀಲ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಿವಕುಮಾರ ಮೇತ್ರೆ, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT