ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಕೆರಳಿಸಿದ ವಾಲಿ ಭಂಡಾರ

Last Updated 16 ಏಪ್ರಿಲ್ 2017, 9:44 IST
ಅಕ್ಷರ ಗಾತ್ರ

ಗಂಗಾವತಿ: ರಾಮಾಯಣದ ಕಾಲದ ಸಾಕಷ್ಟು ಘಟನಾವಳಿಗಳೊಂದಿಗೆ ಥಳುಕು ಹಾಕಿಕೊಂಡಿರುವ ತಾಲ್ಲೂಕಿನ ಪೌರಾಣಿಕ ಹಾಗೂ ಧಾರ್ಮಿಕ  ಶ್ರದ್ಧಾ ಕೇಂದ್ರ ಆನೆಗೊಂದಿಯಲ್ಲಿ ವಾಲಿಯ ಭಂಡಾರವಿದೆ ಎಂದು ಹೇಳಲಾಗುತ್ತಿದೆ. ಅದನ್ನು ಪುಷ್ಟೀಕರಿಸುವಂಥ ಗುಹೆಯ ದ್ವಾರವೊಂದು ಇಲ್ಲಿದೆ. ಆದರೆ, ನಿಧಿ ಬಗ್ಗೆ ಇದುವರೆಗೆ ಹರಡಿರುವುದೆಲ್ಲಾ ಬರೀ ಅಂತೆ ಕಂತೆಗಳ ಗಾಳಿ ಸುದ್ದಿ. ನಿಧಿಯ ವಿಷಯ ಪಕ್ಕಕ್ಕಿಟ್ಟು ಯೋಚಿಸಿದರೆ ಇದು ಇತಿಹಾಸಕಾರರಿಗೆ ಒಳ್ಳೆಯ ಅಧ್ಯಯನ ವಸ್ತುವಾಗಬಹುದು ಎನ್ನುತ್ತಾರೆ ಸ್ಥಳೀಯರು.

ಎಲ್ಲಿದೆ?: ವಿರುಪಾಪುರಗಡ್ಡೆಗೆ ಆನೆಗೊಂದಿ ಮೂಲಕ ಹೋಗುವ ಮಾರ್ಗ ಮಧ್ಯೆ ಬರುವ ಕಲ್ಲು ಬಂಡೆಗಳ ಮಧ್ಯೆ  ವಾಲಿ ಭಂಡಾರವಿದೆ. ಈ ಹೇಳಿಕೆಗೆ ಸಾಕ್ಷಿ ಎಂಬಂತೆ ದೊಡ್ಡದಾದ ಬೆಟ್ಟದ ಕಲ್ಲಿನ ಮಧ್ಯೆ ಒಬ್ಬ ಮನುಷ್ಯ ನುಸುಳಿಕೊಂಡು ಹೊಗುವಷ್ಟು ದಾರಿ ಯಿದೆ.   ಆದರೆ ಆ ಸೀಳಿಗೆ ಮತ್ತೊಂದು ಬಂಡೆಗಲ್ಲನ್ನು ಇಟ್ಟು ಭದ್ರ ವಾಗಿ ಯಾರು ಒಳಕ್ಕೆ ಹೋಗದಂತೆ ಮುಚ್ಚಲಾಗಿದೆ.

ಗವಿಯನ್ನು ಮುಚ್ಚಿದ ಬಂಡೆಗಲ್ಲಿನ ಪಕ್ಕವೇ ಮತ್ತೊಂದು ಬಂಡೆಯಲ್ಲಿ ಕೋತಿಗಳ ಚಿತ್ರಗಳ ಸಮೇತ ಕೆಲವು ಸಂಕೇತಗಳನ್ನು ಬಿಡಿಸಲಾಗಿದೆ. ಇದು ಗವಿಯೊಳಗಿರುವ ನಿಧಿಯ ಬಗ್ಗೆ ವಿವರಣೆ ನೀಡುತ್ತದೆ. ಆದರೆ ಇದೆಲ್ಲಾ ಸರಿಯಾದ ಅಧ್ಯಯನದಿಂದಷ್ಟೇ ಖಚಿತಪಡಿಸಬಹುದು ಎನ್ನುತ್ತಾರೆ ಪ್ರವಾಸಿಗ ರಾಜೇಶ ನಾರಬಂಡಿ.ಈ ಗುಹೆಯಿಂದ ಪಂಪಾ ಸರೋವರದಲ್ಲಿರುವ ಶಬರಿ ಗುಹೆಗೂ, ಪುರಾತನ ಲಕ್ಷ್ಮೀ ದೇವಸ್ಥಾನ, ಆನೆ ಗೊಂದಿ ಗ್ರಾಮ ದೇವತೆ ಶ್ರೀರಂಗ ನಾಥನ ದೇಗುಲಕ್ಕೆ ಹಾಗೂ ಮೇಗೋಟೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ರಹಸ್ಯ ದಾರಿಗಳಿವೆ ಎಂಬ ಕತೆಗಳೂ ಪ್ರಚಲಿತದಲ್ಲಿವೆ.

’ಸಂಶೋಧನಾ ಅಧ್ಯಯನ ಮಾತ್ರ ರಾಮಾಯಣ ಕಾಲದ ನಿಧಿಯ ಖಚಿತತೆ ನೀಡಬಲ್ಲದು. ಗವಿ ಒಳಗಿನ ನಿಧಿಯ ಬಗ್ಗೆ ಸ್ಥಳೀಯರಿಗೆ ಬಲವಾದ ನಂಬಿಗೆ ಇದೆ. ತರೇಹವಾರಿ ಕತೆ ಪ್ರಚಲಿತದಲ್ಲಿವೆ’ ಎಂದು ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ  ಡಾ.ಕೆ.ಬಿ. ಗೌಡಪ್ಪನವರ್. ಆಂಜನೇಯ ಜನಿಸಿದ ತಾಣ, ಶಬರಿಗುಹೆ, ವಾಲಿ ಸುಗ್ರೀವರ ಕದನ ಸ್ಥಳ, ವಾಲಿ ಕೋಟೆ, ಸೀತೆ ಸೆರಗು, ಸೀತೆ ಹುಡುಕಾಟದ ಸಮಯ ದಲ್ಲಿ ರಾಮ-ಲಕ್ಷ್ಮಣರು ಭೇಟಿ ನೀಡಿದ ಸ್ಥಳ, ಹೀಗೆ ಹತ್ತಾರು ಕುರುಹುಗಳ ಜತೆ ಸ್ಥಳೀಯರ ನಂಬಿಕೆ, ಭಾವನೆಗಳು ಬೆಸೆದು ಕೊಂಡಿವೆ.  ಈ ಸಾಲಿಗೆ ಈಗ ವಾಲಿ ಭಂಡಾರ ಸೇರಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT