ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ವಜನಿಕ ಒಳಿತಿನ ಕೆಲಸವೇ ದೇಶಪ್ರೇಮ’

Last Updated 16 ಏಪ್ರಿಲ್ 2017, 10:20 IST
ಅಕ್ಷರ ಗಾತ್ರ

ಧಾರವಾಡ: ‘ರಾಷ್ಟ್ರಗೀತೆ ಹಾಡಿ, ರಾಷ್ಟ್ರಧ್ವಜ ಹಾರಿಸುವುದು ದೇಶಪ್ರಮೇವೇ ಆದರೂ ಅದೇ ಎಲ್ಲವೂ ಅಲ್ಲ. ಸಾರ್ವಜನಿಕ ಒಳಿತಿಗಾಗಿ ನೈತಿಕವಾಗಿ ಮತ್ತು ಮನಃಪೂರ್ವಕವಾಗಿ ಕೆಲಸ ಮಾಡುವುದೂ ದೇಶಪ್ರೇಮದ ದ್ಯೋತಕ’ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮೋಹನಶಾಂತನ ಗೌಡರ ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧೀ ಭವನದಲ್ಲಿ ಶನಿವಾರ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ 67ನೇ ಘಟಿಕೋತ್ಸವದ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.
‘ಪರಿಣಾಮಕಾರಿಯಾಗಿ ಹಾಗೂ ಪ್ರಮಾಣಿಕವಾದ ಆಡಳಿತ ನೀಡಬೇಕಾದ ಅಗತ್ಯವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಸಹಕಾರದೊಂದಿಗೆ ಆಡಳಿತ ನಡೆಸಬೇಕು. ಅದು ದೃಢವಾಗಿ, ಪ್ರಬಲವಾಗಿ ಹಾಗೂ ಸಹಿಷ್ಣುವಾಗಿ ಇರುವಂತೆ ನೋಡಿಕೊಳ್ಳಬೇಕು. ಹೀಗಾದಲ್ಲಿ ನಮ್ಮ ಕೆಲಸ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಮಾಡುತ್ತದೆ’ ಎಂದರು.

‘ದೇಶದಲ್ಲಿ ಇಂದು ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೇ ಭಾರತದ ಭವಿಷ್ಯವಾಗಿರುವುದರಿಂದ ಇಂದಿನ ಹೇರಳ ಅವಕಾಶಗಳ ಪಾಲುದಾರರೂ ಅವರೇ ಆಗಿದ್ದಾರೆ. ಹೀಗಾಗಿ ಅವರೆಲ್ಲರೂ ವಿಭಿನ್ನ ರೀತಿಯ ಆಸಕ್ತಿಗಳನ್ನು ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯ’ ಎಂದರು.

‘ಇಂದಿನ ಭಾರತ ಅವಕಾಶಗಳ ಆಗರವಾಗಿದೆ. ಮೂರು ದಶಕಗಳ ಹಿಂದೆ ಯುವ ಪದವೀಧರರು ಸೇವಾ ಭದ್ರತೆಯ ದೃಷ್ಟಿಯಿಂದ ಸರ್ಕಾರಿ ಉದ್ಯೋಗವನ್ನು ಅತ್ಯುತ್ತಮ ವೃತ್ತಿ ಆಯ್ಕೆ ಎಂದು ಭಾವಿಸಿದ್ದರು. ಈಗ ಸರ್ಕಾರದ ಹೊರತಾಗಿಯೂ ಹೇರಳ ಅವಕಾಶಗಳಿವೆ. ಖಾಸಗಿ ಕಂಪೆನಿಗಳು ಪ್ರತಿಭಾವಂತರನ್ನು ಕೈಬೀಸಿ ಕರೆಯುತ್ತಿವೆ. ವೃತ್ತಿಪರ ಕ್ಷೇತ್ರಗಳಲ್ಲಿ ಸ್ವಂತ ಉದ್ಯೋಗಗಳಿಗೂ ಅವಕಾಶಗಳು ವಿಫುಲವಾಗಿವೆ. ಹೊಸ ಉದ್ಯಮ ಪ್ರಾರಂಭಿಸುವವರಿಗೂ ಅವಕಾಶದ ಬಾಗಿಲು ತೆರೆದಿವೆ. ವಿದೇಶಿ ಕಂಪೆನಿಗಳು ಭಾರತದಲ್ಲಿ ಬಂಡವಾಳ ಹೂಡುತ್ತಿರುವುದು ನಮ್ಮ ಸಾಮರ್ಥ್ಯ ಹೆಚ್ಚುತ್ತಿರುವ ಸೂಚನೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಗುಣಮಟ್ಟದ ಪದವೀಧರರನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದೆ. ಇದಕ್ಕಾಗಿ ಧರ್ಮ, ಮಾನವ ಹಕ್ಕುಗಳು ಹಾಗೂ ಸಮಾಜೋ ಆರ್ಥಿಕ ನ್ಯಾಯಕ್ಕೆ ಸಂಬಂಧಿಸಿದ ಅಂತರ್ಗತ ಪ್ರಜಾಪ್ರಭುತ್ವದ ಅವಶ್ಯಕತೆ ಇದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ದೊರೆಯುತ್ತಿರುವ ಜ್ಞಾನಕ್ಕೂ ಹಾಗೂ ಪ್ರಚಲಿತ ವಿಷಯಗಳಿಗೆ ದೊಡ್ಡ ಅಂತರವಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ವಿವಿಧ ಅಧ್ಯಯನ ವಿಷಯಗಳ ಪಠ್ಯಕ್ರಮಗಳನ್ನು ಇಂದಿನ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಪಡಿಸಬೇಕಾದ ಅಗತ್ಯವಿದೆ’ ಎಂದರು.

‘ಇದರೊಂದಿಗೆ ಯುವಕರಿಗೆ ವೈಜ್ಞಾನಿಕ ಹಾಗೂ ನಾಗರಿಕತೆಯ ಸನಾತನ ಮೌಲ್ಯಗಳ ಗುಣವಿಚಾರಗಳನ್ನು ಪರಿಣಾಕಾರಿಯಾಗಿ ಭೋಧಿಸುವ ಅಗತ್ಯವಿದೆ. ಆಧುನಿಕ ಭಾರತದ ಶಿಕ್ಷಕರು ನಮ್ಮ ಉದಾತ್ತ ಮೌಲ್ಯಗಳತ್ತ ಪುನಃ ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ನ್ಯಾಯಮೂರ್ತಿ ಮೋಹನ ಶಾಂತನಗೌಡರ ಹೇಳಿದರು.
ಪಿಎಚ್‌ಡಿ, ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.  ಉನ್ನತ ಶಿಕ್ಷಣ ಸಚಿವ ಹಾಗೂ ಸಹ ಕುಲಾಧಿಪತಿಯೂ ಆಗಿರುವ ಬಸವರಾಜ ರಾಯರಡ್ಡಿ, ಕುಲಪತಿ ಪ್ರೊ. ಪ್ರಮೋದ ಗಾಯಿ, ಆಡಳಿತ ವಿಭಾಗದ ಕುಲಸಚಿವ ಡಾ. ಎಂ.ಎನ್‌.ಜೋಶಿ, ಮೌಲ್ಯಮಾಪನ ಕುಲಸಚಿವ ಡಾ. ಎನ್‌.ವೈ.ಮಟ್ಟಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT