ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿವೇರಿ ಪಕ್ಷಿಧಾಮದಲ್ಲಿ ನೀರವ ಮೌನ

Last Updated 16 ಏಪ್ರಿಲ್ 2017, 10:55 IST
ಅಕ್ಷರ ಗಾತ್ರ

ಮುಂಡಗೋಡ: ಕಣ್ಣು ಹಾಯಿಸಿದಷ್ಟು ದೂರ ಕಡುನೀಲಿ ಬಣ್ಣದ ನೀರು ಕಾಣಬೇಕಿದ್ದ ಪ್ರದೇಶದಲ್ಲಿ ಈಗ ನೀರವ ಮೌನ ಆವರಿಸಿದೆ.ಇದು ಅತ್ತಿವೇರಿ ಪಕ್ಷಿಧಾಮದ ಸ್ಥಿತಿ. ನೀರ ಮಧ್ಯಭಾಗದ ಗಿಡಗಂಟೆಗಳಲ್ಲಿ  ಬಣ್ಣದ ಚಿತ್ತಾರ ಮೂಡಿಸುತ್ತಿರುವಂತೆ ಕಾಣಬೇಕಿದ್ದ ಜಾಗದಲ್ಲಿ, ಬೋಳು ಬೋಳಾಗಿರುವ ಗಿಡಗಂಟೆಗಳು, ಒಣ­ಗಿದ ಭೂಮಿಯ ದರ್ಶನವಾಗುತ್ತಿದೆ.

ವಲಸೆ ಹಕ್ಕಿಗಳ ಕಲರವದ ಬದಲು, ಮುಖಕ್ಕೆ ಹೊಡೆದಂತೆ ಸುಂಯನೆ ಬೀಸುವ ಬಿಸಿ ಗಾಳಿ, ಬಿರುಕು ಬಿಟ್ಟಿರುವ ನೆಲ, ಬರಡಾಗಿರುವ ಭೂಮಿಯಲ್ಲಿ ಆಹಾರ ಹುಡುಕುತ್ತಿರುವ ಬಿಳಿ ಕೊಕ್ಕ­ರೆಗಳ ದೃಶ್ಯ ಸಾಮಾನ್ಯವಾಗಿದೆ. ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಾಗಬೇಕಿದ್ದ ಪಕ್ಷಿ­ಧಾಮ­ದಲ್ಲಿ, ಬತ್ತಿದ ಕೆರೆಯಲ್ಲಿ ಒಣಗಿದ ಗಿಡಗಳ ಕಂಡಂತಾಗುತ್ತಿದೆ.  ನಡು­ಗಡ್ಡೆಗಳು ಸದ್ಯದ ನೀರಿಗೆ  ನೆಲೆ ಕಂಡುಕೊಂಡಂತಾಗಿವೆ.

ಸತತ ಎರಡು ವರ್ಷಗಳ ಕಾಲ ತಾಲ್ಲೂ­ಕಿನಲ್ಲಿ ಆವರಿಸಿದ ಬರದ ಛಾಯೆ, ಅತ್ತಿವೇರಿ ಪಕ್ಷಿಧಾಮಕ್ಕೂ ತಟ್ಟಿದೆ. ಬರದ ಪಟ್ಟಿಗೆ ವಲಸೆ ಹಕ್ಕಿಗಳು ಸೇರ್ಪಡೆಗೊಂಡು, ತಾಲ್ಲೂಕಿಗೆ ಈ ವರ್ಷ ಬರುವು ಮುಂದೆ ಹಾಕಿದಂತಾ­ಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30ರಷ್ಟು ಪಕ್ಷಿಗಳು ಸಹ ಪಕ್ಷಿಧಾಮಕ್ಕೆ ವಲಸೆ ಬಂದಿಲ್ಲ. ಸುಮಾರು ಐದಾರು ತಿಂಗಳ ಕಾಲ ಅತ್ತಿವೇರಿ ಪಕ್ಷಿಧಾಮದಲ್ಲಿ, ದೇಶಿ ಹಾಗೂ ವಿದೇಶಿ ಹಕ್ಕಿಗಳು ವಲಸೆ ಬಂದು ಸಂತಾನಾ­ಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತಿದ್ದವು. ಆದರೆ ಬರದ ಕರಿನೆರಳಿನಿಂದ ನೀರಿಲ್ಲದೆ ಸೊರಗಿರುವ ಪಕ್ಷಿಧಾಮದ ಜಲಾಶಯದಲ್ಲಿ, ಕಳೆದ ಐದು ತಿಂಗಳ ಅವಧಿಯಲ್ಲಿ ದೇಶಿ ಹಕ್ಕಿಗಳು ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿ ಬಂದಿವೆ. ಕಳೆದ ಒಂದು ದಶಕದ ಅವಧಿಯಲ್ಲಿ, ಇದೇ ಮೊದಲ ಬಾರಿಗೆ ಪಕ್ಷಿಧಾಮ ಪಕ್ಷಿ­ಗಳಿಂದ ದೂರವಾಗಿದೆ ಎನ್ನಲಾಗುತ್ತಿದೆ.

‘ಸುಮಾರು 40–45 ರಷ್ಟು ಜಾತಿಯ ವಿದೇಶಿ ಹಕ್ಕಿಗಳು ಸಾಮಾನ್ಯವಾಗಿ ಈ ಪಕ್ಷಿಧಾಮಕ್ಕೆ ವಲಸೆ ಬರುತ್ತಿದ್ದವು. ಆದರೆ ಕಳೆದ ಅಕ್ಟೋಬರ್‌ನಿಂದ ಇಲ್ಲಿ­ಯವರೆಗೆ ಬೆರಳೆಣಿಕೆಯಷ್ಟು ಹಕ್ಕಿಗಳು ಕಾಣಿಸಿಕೊಂಡು, ತಿಂಗಳು ಮುಗಿಯು­ವದರೊಳಗೆ ಬೇರೆಡೆ ವಲಸೆ ಹೋಗಿವೆ. ಪ್ರತಿ ವರ್ಷ ಮಾರ್ಚ್‌ ಅಂತ್ಯದವರೆಗೂ ಹೆಚ್ಚಿನ ಸಂಖ್ಯೆಯಲ್ಲಿ, ಅತ್ತಿವೇರಿ ಜಲಾಶಯದಲ್ಲಿ ದೇಸಿ, ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತಿರುವುದು ಅಂಕಿ ಸಂಖ್ಯೆಗಳಿಂದ ಕಂಡುಬರುತ್ತಿದೆ. ಆದರೆ ಈ ವರ್ಷ ಮಾತ್ರ ಅದಕ್ಕೆ ಅಪವಾದ­ವೆಂಬಂತೆ, ಬಿಳಿ ಕೊಕ್ಕರೆ  ಬಿಟ್ಟರೆ ಮತ್ಯಾವ ವಲಸೆ ಹಕ್ಕಿಗಳು ಕಂಡು­ಬಂದಿಲ್ಲ’ ಎಂದು ಪಕ್ಷಿಧಾಮದ ಫಾರೆ­ಸ್ಟರ್‌ ಸಂತೋಷ ಕೂಡ್ಲಿಗಿ ಹೇಳಿದರು.

‘ವಲಸೆ ಹಕ್ಕಿಗಳಾದ, ನೀಲಿ ರೆಕ್ಕೆಯ ಬಾತು, ಇಂಡಿಯನ್‌ ಶಾಗ್‌, ಬ್ರಾಹ್ಮಿಣಿ ಶೆಲ್ಡಕ್‌, ಲಿಟ್ಲ್‌ ರಿಂಗ್ಡ್‌ ಪ್ಲೋವರ್‌, ಮಾರ್ಶ್‌ ಹ್ಯಾರಿಯರ್‌ ವ್ಯಾಗ್‌ಟೇಲ್‌, ಗಾರ್ಗನಿ, ನಾರ್ದನ್‌ ಪಿನ್‌ ಟೇಲ್‌ ಸೇರಿ­ದಂತೆ ಹಲವು ಹಕ್ಕಿಗಳು ಇಲ್ಲಿಗೆ ಬರು­ತ್ತಿದ್ದವು. ಆದರೆ  ನೀರಿಲ್ಲದ ಕಾರಣ ವಲಸೆ ಹಕ್ಕಿಗಳು ಇತ್ತ ಕಡೆ ಸಂಚಾರ ಮಾಡಿಲ್ಲ’ ಎಂದು ಪಕ್ಷಿಪ್ರಿಯ ಹರಿಹರದ ಜೆ.ಶಶಿಕಾಂತ ಹೇಳಿದರು.
ಶಾಂತೇಶ ಬೆನಕನಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT