ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಸುತ್ತಲೂ ಶಿಶುವಿಹಾರ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮರ ಕಡಿದು ಆ ಜಾಗದಲ್ಲಿ ಕಟ್ಟಡ ಕಟ್ಟುವ ಬದಲು ಮರವನ್ನು ಹಾಗೆಯೇ ಉಳಿಸಿಕೊಂಡು ಅದರ ಸುತ್ತಲೂ ಫ್ಯೂಜಿ ಶಿಶುವಿಹಾರವನ್ನು ನಿರ್ಮಿಸಿದ್ದಾರೆ.  ಇದೊಂದು ಪ್ರವಾಸಿಗರ ಆಕರ್ಷಣೆಯೂ ಆಗಿದೆ.

ಇಂತಹ ಸುಂದರವಾದ ಶಿಶುವಿಹಾರ ಜಪಾನಿನ ರಾಜಧಾನಿ ಟೋಕಿಯೊದಿಂದ ಪಶ್ಚಿಮಕ್ಕೆ 40 ಕಿ.ಮೀ ದೂರದಲ್ಲಿರುವ ತಾಚಿಕಾವಾದಲ್ಲಿದೆ. ದೇಶದ ಅತಿ ದೊಡ್ಡ ಶಿಶುವಿಹಾರಗಳಲ್ಲಿ ಇದೂ ಒಂದು. ಎರಡರಿಂದ ಆರು ವರ್ಷದವರೆಗಿನ ಮಕ್ಕಳಿಗೆ ಇಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕೊಡಲಾಗುತ್ತದೆ.

ಅತಿ ದುಬಾರಿ ಎನಿಸುವ ಶುಲ್ಕವನ್ನು ಆಡಳಿತ ಮಂಡಳಿ ಪಡೆಯುತ್ತಿದ್ದರೂ ಶಿಶುವಿಹಾರ ನಿಸರ್ಗದ ನಡುವಿನಲ್ಲಿದೆ. ಒಳಗೆ ಸಾಕಷ್ಟು ಗಾಳಿ, ಬೆಳಕು ಬೀಳುತ್ತದೆ ಎಂದು ಪೋಷಕರು ಇದನ್ನೇ ಆರಿಸಿಕೊಳ್ಳುತ್ತಾರೆ. 1.80 ಲಕ್ಷ ಜನಸಂಖ್ಯೆಯಿರುವ ತಾಚಿಕಾವಾದಲ್ಲಿ ಶಿಶುವಿಹಾರಗಳಿಗೆ ತುಂಬಾ ಬೇಡಿಕೆಯಿದೆ.

2007ರಲ್ಲಿ ನಿರ್ಮಾಣವಾದ ಕಟ್ಟಡವಿದು. 50 ವರ್ಷಗಳ ಹಿಂದೆ ಬೀಸಿದ ಬಿರುಗಾಳಿಗೆ ಇಲ್ಲಿದ್ದ ಬೃಹತ್ ಜೆಲ್‍ಕೋವಾ ಮರ ಮುರಿದುಹೋಯಿತು. ನಂತರ ಅದೇ ಸ್ಥಳದಲ್ಲಿ ಮೂರು ಬೆಳೆದವು. ಈ ಮರವನ್ನು ಮಧ್ಯಭಾಗದಲ್ಲಿರಿಸಿ ಅದರ ಸುತ್ತಲೂ ಅಂಡಾಕೃತಿಯಲ್ಲಿ ಕಟ್ಟಡವನ್ನು ಸಿದ್ಧಗೊಳಿಸಲಾಗಿದೆ.

ಇದರಲ್ಲಿ ಮೂರು ಅಂತಸ್ತುಗಳಿವೆ. ಮೇಲ್ಚಾವಣಿಯನ್ನೂ ದಾಟಿ ಮರದ ಕೊಂಬೆಗಳು ಕಟ್ಟಡದ ಮೇಲೆ ವಿಶಾಲವಾದ ನೆರಳು ಹಾಸಿವೆ. ಹೀಗಾಗಿ ಬೇಸಿಗೆಯಲ್ಲಿ ಒಳಗೆ ತುಂಬ ತಂಪು. ಚಳಿಗಾಲದಲ್ಲಿ ಮಾತ್ರ ಗೋಡೆಗಳಿಗೆ ಕರ್ಟನ್ ಮುಚ್ಚಿ ಒಳಗೆ ಬಿಸಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಕಟ್ಟಡದ ಕೇಂದ್ರದಲ್ಲಿರುವ ಮರ 25 ಮೀಟರ್ ಎತ್ತರವಾಗಿದೆ. 15 ಮೀಟರ್ ವಿಸ್ತಾರಕ್ಕೆ ಕೊಂಬೆಗಳು ಹರಡಿದೆ. 43 ಶಿಕ್ಷಕರು, 630 ವಿದ್ಯಾರ್ಥಿಗಳಿದ್ದಾರೆ. ಬುದ್ಧನಿಗೆ ಜ್ಞಾನೋದಯವಾದದ್ದು ಬೋಧಿವೃಕ್ಷದ ಕೆಳಗೆ, ಇಲ್ಲಿ ಕಲಿತರೆ ಶೀಘ್ರ  ಜ್ಞಾನಿಗಳಾಗುತ್ತೀರಿ ಎಂದು ಶಿಕ್ಷಕರು ಮಕ್ಕಳಿಗೆ ಕಥೆ ಹೇಳುತ್ತಾರೆ.

ಕಟ್ಟಡದ ಚಾವಣಿಗಳು ಕಡಿಮೆ ಎತ್ತರಕ್ಕೆ ಸೀಮಿತವಾಗಿವೆ. ಮೇಲ್ಚಾಣಿಯ ತನಕ ಅಳೆದರೆ 12 ಮೀಟರ್ ಎತ್ತರವಾಗುತ್ತದೆ. ಪೀಠೋಪಕರಣಗಳ ಬಳಕೆ ಕಡಿಮೆ. ಕೆಲವೊಮ್ಮೆ ಮರದ ಕೊಂಬೆಗಳೇ ಪೀಠಗಳಾಗುತ್ತವೆ. ತರಗತಿ ಕೋಣೆಗಳು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಒಂದು ಮೀಟರ್ ತನಕ ಎತ್ತರವಿವೆ. ಮಕ್ಕಳಿಗೆ ಒಳಗೆ ಹೋಗಲು ಸಲೀಸು. ಶಿಕ್ಷಕರು ನುಸುಳಿಕೊಂಡೇ ಹೋಗಬೇಕು ಅಷ್ಟೆ.

ಕೊಠಡಿಗಳ ಒಳಗಿರುವ ಸ್ಥಳಾವಕಾಶ 600ರಿಂದ 1500 ಮಿ.ಮೀ ಮಾತ್ರ. ಮೇಲ್ಚಾವಣಿಗೆ ಹೋದರೆ 500 ಮಕ್ಕಳಿಗೆ ಆಡಲು ಸಾಧ್ಯವಾಗುವಷ್ಟು ವಿಶಾಲವಾದ ಸ್ಥಳವಿದೆ. ವಿವಿಧ ಆಟಿಕೆಗಳು ಅಲ್ಲಿವೆ. ಸಭೆ ಸಮಾರಂಭಗಳು ಇಲ್ಲಿ ಮರದ ಕೊಂಬೆಗಳ ನೆರಳಿನಲ್ಲಿ ನಡೆಯುವುದು ವಾಡಿಕೆ. ಮಕ್ಕಳಿಗೆ ಊಟ, ಉಪಾಹಾರಗಳೂ ಒಳಗೆ ತಯಾರಾಗುತ್ತವೆ. ಸಾಕಷ್ಟು ಸುರಕ್ಷತೆಯೂ ಇದೆ. ಕಲಿಕೆಯ ಉಪಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT