ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಚರಿಯ ಒಂದು ಪುಟ್ಟಭಾಗ ಗಣಿತದ ಅಭ್ಯಾಸಕ್ಕೆ ಮೀಸಲಿರಲಿ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೇಸಿಗೆ ರಜೆ ಶುರುವಾಗುವುದು ಯಾವಾಗ? ಏಪ್ರಿಲ್‌ ಮೊದಲ ವಾರದಿಂದ ಎನ್ನುವುದು ಉತ್ತರ. ಶಾಲೆಗಳು ಪುನರ್‌ ಆರಂಭವಾಗುವುದು ಯಾವಾಗ? ಜೂನ್‌ ಆರಂಭದಲ್ಲಿ. ಈ ಪ್ರಶ್ನೋತ್ತರದಲ್ಲಿ ಎಷ್ಟೊಂದು ಅಂಕಿಗಳು ಅಡಗಿವೆ, ಗಮನಿಸಿದ್ದೀರಾ? ಏಪ್ರಿಲ್‌, ಜೂನ್‌, ಋತು, ವರ್ಷ – ಇವೆಲ್ಲದರ ಹಿನ್ನೆಲೆಯಲ್ಲೂ ಅಂಕಿಸಂಖ್ಯೆಗಳಿವೆ. ಸುಮ್ಮನೆ ಗಮನಿಸಿನೋಡಿ – ನಮ್ಮ ದೈನಿಕದ ಬಹುತೇಕ ಸಂಗತಿಗಳಲ್ಲಿ ಈ ಸಂಖ್ಯಾವಿನೋದವಿದೆ.

ಬೇರೆ ಸಂಗತಿಗಳ ವಿಷಯ ಬಿಡಿ, ನಮ್ಮ ದಿನಚರಿಯೊಂದಿಗೆ ತಳಕು ಹಾಕಿಕೊಂಡ ಇಪ್ಪತ್ತನಾಲ್ಕು ತಾಸುಗಳಲ್ಲೂ ಒಂದು ಲೆಕ್ಕವಿದೆ. ಹೀಗೆ, ನಮ್ಮ ಬದುಕಿನಲ್ಲಿ ಸಂಖ್ಯೆಗಳು ಹಾಗೂ ಲೆಕ್ಕ ಹಾಸುಹೊಕ್ಕಾಗಿದ್ದರೂ ‘ಗಣಿತ’ ಎಂದಾಕ್ಷಣ ನಮ್ಮಲ್ಲಿ ಅನೇಕರ ಮುಖದ ಮೇಲೊಂದು ಬೇಸರದ ಗೆರೆ ಇಣುಕುತ್ತದೆ.

ಗಣಿತದ ಬಗ್ಗೆ ನಮ್ಮಲ್ಲಿ ಕೆಲವು ಜನಪ್ರಿಯ ನಂಬಿಕೆಗಳಿವೆ: ಗಣಿತ ಎನ್ನುವುದು ಕಬ್ಬಿಣದ ಕಡಲೆ, ಗಣಿತ ಕಲಿಯುವುದು ತ್ರಾಸದಾಯಕ, ಗಣಿತ ಎಲ್ಲರ ತಲೆಗೂ ಹತ್ತುವುದಿಲ್ಲ... ಹೀಗೆ ಗಣಿತದ ಕುರಿತ ಪೂರ್ವಗ್ರಹಗಳು ಒಂದೆರಡಲ್ಲ. ಇದಕ್ಕೆ ತಕ್ಕನಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಮ್ಯಾಥೆಮ್ಯಾಟಿಕ್ಸ್‌ನಲ್ಲಿ ಡುಂಕಿ ಹೊಡೆಯುವವರ ಸಂಖ್ಯೆಯೂ ದೊಡ್ಡದಿದೆ.

ಭಾಷೆಗಳನ್ನು ಹಾಗೂ ಸಮಾಜ ವಿಜ್ಞಾನವನ್ನು ಸುಲಭವಾಗಿ ಕಲಿತು ಬಿಡುವ ಮಕ್ಕಳು ವಿಜ್ಞಾನ ಮತ್ತು ಗಣಿತವನ್ನು ಅಭ್ಯಾಸ ಮಾಡಲು ತುಸು ಕಷ್ಟ ಪಡುತ್ತಾರೆ. ಬಹುಶಃ ಗಣಿತದ ಕಲಿಕೆಗೆ ಸಂಬಂಧಿಸಿದ ನಮ್ಮ ತಳಹದಿ ಅಥವಾ ಪೂರ್ವಸಿದ್ಧತೆ ಸರಿಯಾಗಿಲ್ಲದಿರುವುದೇ ಈ ವೈಫಲ್ಯಕ್ಕೆ ಕಾರಣ ಇರಬಹುದು.

ಅಂತೆಯೇ ಗಣಿತವನ್ನು ಒಂದು ಜಡಶಾಸ್ತ್ರ ಎನ್ನುವಂತೆ ನಾವು ಭಾವಿಸಿರುವುದೂ ಅದರ ಬಗ್ಗೆ ಅನಾಸಕ್ತಿ ಹೊಂದಲು ಕಾರಣವಾಗಿರಬಹುದು. ಕೊಂಚ ತಾಳ್ಮೆಯಿಂದ ತೊಡಗಿಕೊಂಡಲ್ಲಿ ಈ ಲೆಕ್ಕಾಚಾರದ ಕಲಿಕೆ ನಮಗೆ ಆಪ್ತವಾಗಬಲ್ಲದು ಎನ್ನುವುದು ಬಲ್ಲವರ ಅನಿಸಿಕೆ.

ಮೋಜಿನ ರೂಪದಲ್ಲಿ ಗಣಿತವನ್ನು ಕಲಿಯುವುದು, ಕಲಿಸುವುದು ಇಂದಿನ ಅಗತ್ಯ. ಕಲಿಕೆಯ ಪ್ರಕ್ರಿಯೆ ಉಲ್ಲಾಸಕರ ಆಗಿರುವಂತೆ ನೋಡಿಕೊಂಡರೆ ಗಣಿತದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬಹುದು.

ಈಗ ಶಾಲಾಕಾಲೇಜುಗಳ ಪರೀಕ್ಷೆಗಳು ಮುಗಿದಿವೆ. ಬೇಸಿಗೆ ರಜೆ ಆರಂಭವಾಗಿದೆ. ಒಂದರ್ಥದಲ್ಲಿ ಮಕ್ಕಳ ಪಾಲಿಗಿದು, ಮೋಜು–ಮಜಾದ ಸಮಯ. ಪ್ರವಾಸ, ಅಜ್ಜಿ ಮನೆ, ಬೇಸಿಗೆ ಶಿಬಿರಗಳು... ಹೀಗೆ ರಜೆ ಕಳೆಯಲು ವೇಳಾಪಟ್ಟಿ ಮೊದಲೇ ತಯಾರಾಗಿರುತ್ತದೆ. ಆದರೆ, ಈ ರಜೆಯಲ್ಲಿ ಸ್ವಲ್ಪವೇ ಸಮಯವನ್ನು ಗಣಿತದ ಅಭ್ಯಾಸಕ್ಕಾಗಿ ಮೀಸಲಿಟ್ಟರೆ, ಮುಂದಿನ ಶಾಲಾ ದಿನಗಳಲ್ಲಿ ಗಣಿತದ ಸಮಸ್ಯೆಗಳನ್ನು ಸರಳವಾಗಿ ಬಿಡಿಸಬಹುದೇನೋ ಎಂಬುದು ನನ್ನ ಅಭಿಮತ.

‘ಗಣಿತವು ಓದಿ ಕಲಿಯುವ ವಿಷಯವಲ್ಲ. ಹೆಚ್ಚು ಹೆಚ್ಚು ಗಣಿತದ ಸಮಸ್ಯೆಗಳನ್ನು ಬಿಡಿಸಿದಷ್ಟೂ ನೀವು ಅದರಲ್ಲಿ ಪರಿಣತಿಯನ್ನು ಸಾಧಿಸುತ್ತೀರಿ’ – ಇವು ಹಿಂದೆ ನಮ್ಮ ಗಣಿತ ಶಿಕ್ಷಕರು ಹೇಳುತ್ತಿದ್ದ ಮಾತುಗಳು. ಈ ಕಾಲಕ್ಕೂ ಗಣಿತದ ಸೂತ್ರಗಳೇನೂ ಬದಲಾಗಿಲ್ಲ. ಈಗಲೂ ಗಣಿತ ಕಲಿಯಬೇಕೆಂದರೆ – ಸಮಸ್ಯೆಗಳನ್ನು ಮತ್ತೆ ಮತ್ತೆ ಬಿಡಿಸಿಯೇ ಅರಿಯಬೇಕು. ಹಾಗಾಗಿ ನಮ್ಮ ಕಾಲದ ಮೇಷ್ಟರುಗಳು ಹೇಳಿದ ಕಿವಿಮಾತು, ಈ ಕಾಲದ ಮಕ್ಕಳಿಗೂ ಅನುಕರಣೀಯ.

ಸಾಮಾನ್ಯವಾಗಿ ಮಕ್ಕಳು ಪಠ್ಯಪುಸ್ತಕವೊಂದನ್ನು ಹಿಡಿದುಕೊಂಡು ಓದಿಕೊಳ್ಳಲು ಕೂರುವುದು ರೂಢಿ. ಆದರೆ, ಗಣಿತ ಎಂದರೆ ಪುಸ್ತಕ ಹಿಡಿದರಷ್ಟೇ ಸಾಲದು; ಅಭ್ಯಾಸ ಪುಸ್ತಕ ಹಾಗೂ ಲೇಖನಿ ಜೊತೆಗಿರಲೇಬೇಕು. ಬೇರೆ ವಿಷಯಗಳಂತೆ ಸುಮ್ಮನೆ ಓದುತ್ತಾ ಹೋದರೆ ಗಣಿತವನ್ನು ಕಲಿಯುವುದು ಕಷ್ಟ ಸಾಧ್ಯ. ಹೆಚ್ಚು ಹೆಚ್ಚು ಲೆಕ್ಕಗಳನ್ನು ಮಾಡಬೇಕು. ವಿವಿಧ ನಮೂನೆಯ ಸಮಸ್ಯೆಗಳನ್ನು ಬಿಡಿಸಬೇಕು. ಮುಖ್ಯ ಸೂತ್ರಗಳನ್ನು ಅನೇಕ ಬಾರಿ ಬರೆದು ಮನನ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ವಿಷಯದಲ್ಲಿ ಹಿಡಿತ ಬರುತ್ತದೆ.

ಗಣಿತದ ಸಮಸ್ಯೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಬಿಡಿಸಲು ‘ಮಗ್ಗಿಗಳು’ (ಮಲ್ಟಿಪ್ಲಿಕೇಶನ್ ಟೇಬಲ್) ಬಹಳ ಮುಖ್ಯ. ಎರಡರಿಂದ ಇಪ್ಪತ್ತರವರೆಗಿನ ಮಗ್ಗಿಯನ್ನು ತಪ್ಪಿಲ್ಲದಂತೆ ಹೇಳಲು ಕಲಿಯಬೇಕು. ಇದರಿಂದ ಗಣಿತದ ಬಹುತೇಕ ಸಮಸ್ಯೆಗಳನ್ನು ವೇಗವಾಗಿ ಹಾಗೂ ತಪ್ಪಿಲ್ಲದಂತೆ ಬಿಡಿಸುವುದು ಸಾಧ್ಯ. ಈ ಮಗ್ಗಿ, ನಿತ್ಯಜೀವನದ ವ್ಯವಹಾರ ಜ್ಞಾನಕ್ಕೂ ಅತ್ಯವಶ್ಯ. ಹಾಗಾಗಿಯೇ ಇಂದಿಗೂ ಕೆಲ ಹಿರಿಯರು ಓದುವ ಮಕ್ಕಳನ್ನು ಕಂಡಕೂಡಲೇ ಹತ್ತಿರ ಕರೆದು ಮಗ್ಗಿ ಹೇಳಲು ಹೇಳುತ್ತಾರೆ.

ಗಣಿತದ ಕೆಲವು ಮುಖ್ಯ ಸೂತ್ರಗಳನ್ನು ಪಟ್ಟಿ ಮಾಡಿ, ದಿನವೂ ಒಮ್ಮೆ ಅವುಗಳನ್ನು ಬರೆಯುವ ಅಭ್ಯಾಸವೂ ಉತ್ತಮ. ಸೂತ್ರಗಳನ್ನು ಚೆನ್ನಾಗಿ ಮನನ ಮಾಡಿಕೊಂಡರೆ, ಅದನ್ನು ಆಧರಿಸಿ ಮಾಡುವ ಎಲ್ಲಾ ಲೆಕ್ಕಗಳನ್ನೂ ಸುಲಭವಾಗಿ ಕಲಿಯಲು ಸಾಧ್ಯ. ಆದ್ದರಿಂದ ಈ ರಜೆಯಲ್ಲಿ ದಿನವೂ ಕಡಿಮೆಯೆಂದರೆ, ಮೂವತ್ತು ನಿಮಿಷಗಳಷ್ಟು ಸಮಯವನ್ನು ಗಣಿತದ ಮುಖ್ಯ ಅಂಶಗಳ ಪುನರಾವರ್ತನೆಗೆಂದು ಮೀಸಲಿಡಿ.

ಅದಕ್ಕೆಂದೇ ಪ್ರತ್ಯೇಕವಾದ ಪುಸ್ತಕವನ್ನು ಇಟ್ಟು, ದಿನವೂ ಒಂದು ಪುಟದ ಮೂಲೆಯಲ್ಲಿ ಅಂದಿನ ದಿನಾಂಕವನ್ನು ಬರೆದು – ಅದರಲ್ಲಿ ಒಮ್ಮೆ ಎರಡರಿಂದ ಇಪ್ಪತ್ತರವರೆಗಿನ ಮಗ್ಗಿಗಳು (ಮಲ್ಟಿಪ್ಲಿಕೇಶನ್ ಟೇಬಲ್), ಒಂದರಿಂದ ಇಪ್ಪತ್ತರವರೆಗಿನ ವರ್ಗಗಳು, ವರ್ಗಮೂಲಗಳು (ಸ್ಕ್ವೇರ್ ಮತ್ತು ಸ್ಕ್ವೇರ್ ರೂಟ್) ಹಾಗೂ ಗಣಿತದ ಆಧಾರಭೂತವಾದ ಮುಖ್ಯ ಸೂತ್ರಗಳನ್ನು ಬರೆಯಿರಿ.

ಪ್ರಾಥಮಿಕ ತರಗತಿಗಳಲ್ಲಿ ಓದುತ್ತಿರುವ ಮಕ್ಕಳು ಒಂದಿಷ್ಟು ಸಂಕಲನ, ವ್ಯವಕಲನ, ಗುಣಾಕಾರ ಹಾಗೂ ಭಾಗಾಕಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ರಜೆಯಲ್ಲಿ ಅಭ್ಯಾಸ ಮಾಡಬಹುದು. ಮಾಧ್ಯಮಿಕ ಹಾಗೂ ಪ್ರೌಢಶಾಲಾ ಮಕ್ಕಳು ದಿನವೂ ಗಣಿತದ ಮುಖ್ಯ ಸೂತ್ರಗಳು ಮತ್ತು ಮಗ್ಗಿಯನ್ನು ಬರೆಯುವುದು ಸೂಕ್ತ. ಈ ಅಭ್ಯಾಸವನ್ನು ರೂಢಿಸಿಕೊಂಡರೆ ಮುಂಬರುವ ದಿನಗಳಲ್ಲಿ ಗಣಿತವನ್ನು ಕಬ್ಬಿಣದ ಕಡಲೆ ಎನ್ನುವ ಭಾವನೆ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT