ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯ ಸೂರಜ್‌ ಕರ್ಕೆರಾ

ಭಾರತ ಹಾಕಿಯಲ್ಲಿ ಹೊಸ ತಾರೆ
Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಗೋಡೆಯಂತೆ ನಿಂತು ಎದುರಾಳಿಗಳ ಗೋಲು ಗಳಿಕೆಯ ಅವಕಾಶಗಳನ್ನು ವಿಫಲಗೊಳಿಸಬಲ್ಲ ಪ್ರತಿಭಾನ್ವಿತ ಗೋಲ್‌ಕೀಪರ್‌ ಸೂರಜ್‌ ಕರ್ಕೆರಾ.
ಎಳವೆಯಲ್ಲೆ ಹಾಕಿ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಮಹಾದಾಸೆ ಹೊತ್ತಿದ್ದ ಸೂರಜ್‌ ಅವರು ಬದ್ಧತೆ ಹಾಗೂ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡು ಸಾಗಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡ ಆಟಗಾರ.

ಹಾಕಿ ಇಂಡಿಯಾ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌, ನೆಹರು ಚಾಂಪಿಯನ್‌ ಕಾಲೇಜು ಹಾಕಿ ಟೂರ್ನಿ, ಹಾಕಿ ಇಂಡಿಯಾ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ ಹೀಗೆ ಅನೇಕ ದೇಶಿ ಟೂರ್ನಿಗಳಲ್ಲಿ ಮಿಂಚಿದ್ದ ಇವರು 2015ರಲ್ಲಿ ನೆದರ್ಲೆಂಡ್ಸ್‌ನಲ್ಲಿ ನಡೆದಿದ್ದ ವೊಲ್ವೊ ಆರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲೂ ದಿಟ್ಟ ಆಟ ಆಡಿ ಹಾಕಿ ಲೋಕದಲ್ಲಿ ಛಾಪು ಒತ್ತಿದ್ದಾರೆ.

ಬಳಿಕ ಇಂಗ್ಲೆಂಡ್‌ ಪ್ರವಾಸಕ್ಕೂ ಆಯ್ಕೆಯಾಗಿದ್ದ ಸೂರಜ್‌, ಹೋದ ವರ್ಷ ನಡೆದಿದ್ದ ಏಷ್ಯಾ ಕಪ್‌ ಮತ್ತು  ಸ್ಪೇನ್‌ನ ವಲೆನ್ಸಿಯಾದಲ್ಲಿ ಜರುಗಿದ್ದ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲೂ ಮಿಂಚಿದ್ದರು.

ಹೀಗೆ ಹಂತ ಹಂತವಾಗಿ ಆಟದಲ್ಲಿ ನೈಪುಣ್ಯ ಸಾಧಿಸಿರುವ ಸೂರಜ್‌ 21ರ ಹರೆಯದಲ್ಲೇ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಸ್ಥಾನ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

*ನಿಮ್ಮಲ್ಲಿ ಹಾಕಿ ಪ್ರೀತಿ ಚಿಗುರೊಡೆದಿದ್ದು ಹೇಗೆ?
ಎಳವೆಯಲ್ಲಿ ಫುಟ್‌ಬಾಲ್‌ ನನ್ನ ಮೆಚ್ಚಿನ ಆಟ ಆಗಿತ್ತು.  ಆದರೆ ನಾನು ಓದುತ್ತಿದ್ದ ಶಾಲೆಯಲ್ಲಿ ಹಾಕಿಯನ್ನೇ ಹೆಚ್ಚಾಗಿ ಆಡುತ್ತಿದ್ದರು. ಮೊದಲು   ಮನರಂಜನೆಗೆಂದು ಹಾಕಿ ಆಡುತ್ತಿದ್ದೆ. ಚಿಲ್ಡ್ರನ್‌ ಅಕಾಡೆಮಿಗೆ ಸೇರಿದ ಬಳಿಕ ಈ ಕ್ರೀಡೆಯೆಡೆಗಿನ ಆಕರ್ಷಣೆ ಹೆಚ್ಚಾಯಿತು. ರಿಜ್ವಿ ಕಾಲೇಜಿಗೆ ಸೇರಿದ ನಂತರ ಹಾಕಿಯನ್ನು  ಗಂಭೀರವಾಗಿ ಪರಿಗಣಿಸಿ ಈ ಆಟದ ಪಾಠಗಳನ್ನು ಕಲಿತೆ. ಇದರ ಫಲವಾಗಿ 2014ರಲ್ಲಿ ಮುಂಬೈ ಜೂನಿಯರ್‌ ತಂಡದಲ್ಲಿ ಸ್ಥಾನ ಸಿಕ್ಕಿತು. ಮರು ವರ್ಷವೇ (2015) ರಾಷ್ಟ್ರೀಯ ಜೂನಿಯರ್ ತಂಡಕ್ಕೂ ಅಡಿ ಇಟ್ಟೆ.

*ಮುಂಚೂಣಿ ಆಟಗಾರನಾಗಿದ್ದ ನೀವು ಗೋಲ್‌ಕೀಪರ್‌ ಆಗಿ ರೂಪು ಗೊಂಡ ಬಗ್ಗೆ ಹೇಳಿ?
ಆರಂಭದ ದಿನಗಳಲ್ಲಿ ಮುಂಚೂಣಿ ವಿಭಾಗದಲ್ಲಿ ಆಡುತ್ತಿದ್ದೆ. ಎತ್ತರವಾಗಿದ್ದೇನೆ ಎಂಬ ಕಾರಣಕ್ಕೆ ಶಾಲಾ ತಂಡದ ಕೋಚ್‌, ಗೋಲ್‌ ಕೀಪರ್‌ ಆಗಿ ಆಡುವಂತೆ ಸೂಚಿಸಿದರು. ಆರಂಭದಲ್ಲಿ  ಗೋಲ್‌ಕೀಪಿಂಗ್‌ ಮಾಡುವುದು ಕಿಂಚಿತ್ತೂ ಇಷ್ಟವಿರಲಿಲ್ಲ. ತಂಡದ ಗೆಲುವಿನಲ್ಲಿ ಇತರ ಆಟಗಾರರಿಗಿಂತಲೂ ಗೋಲ್‌ಕೀಪರ್‌ನ ಪಾತ್ರ ಮಹತ್ವದ್ದು ಎಂಬುದು ಕ್ರಮೇಣ ಅರಿವಿಗೆ ಬಂತು. ನಂತರ ಈ ವಿಭಾಗದಲ್ಲೇ ನೈಪುಣ್ಯ ಸಾಧಿಸುತ್ತಿದ್ದೇನೆ.

* ಮೊದಲ ಬಾರಿಗೆ ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಸ್ಥಾನ ಗಳಿಸಿದ್ದೀರಿ. ಹೇಗನಿಸುತ್ತಿದೆ?
ಸಹಜವಾಗಿಯೇ ಖುಷಿಯಾಗಿದೆ. ನನ್ನೊಳಗಿನ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಅತ್ಯುತ್ತಮ ಅವಕಾಶ ಎಂದು ಭಾವಿಸಿದ್ದೇನೆ. ಇದನ್ನು ಸದುಪಯೋಗಪಡಿಸಿಕೊಂಡು ಕೋಚ್‌ ಹಾಗೂ ಆಯ್ಕೆ ಸಮಿತಿ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

*ಇಷ್ಟು ಬೇಗ ಸೀನಿಯರ್‌ ತಂಡದಲ್ಲಿ ಸ್ಥಾನ ಸಿಗಬಹುದು ಅಂದುಕೊಂಡಿದ್ದಿರಾ?
ಖಂಡಿತವಾಗಿಯೂ ಇಲ್ಲ. ಇದು ಅನಿರೀಕ್ಷಿತ ಅವಕಾಶ. ಅಜ್ಲಾನ್‌ ಷಾ ಕಪ್‌ಗೆ ಪ್ರಕಟಿಸಲಾಗಿರುವ ಸೀನಿಯರ್‌ ತಂಡದಲ್ಲಿ ಸ್ಥಾನ ಸಿಕ್ಕಿರುವ ವಿಷಯ ಕೇಳಿ ಅಚ್ಚರಿಯ ಜೊತೆಗೆ ಅತೀವ ಸಂತಸವೂ ಆಗಿತ್ತು. ಏಕೆಂದರೆ  ಮೊದಲ ಬಾರಿಗೆ ಸೀನಿಯರ್‌ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದೆ.  ಜೂನಿಯರ್‌ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ಈ ಅವಕಾಶ ಒಲಿದಿದೆ ಎಂದು ಭಾವಿಸಿದ್ದೇನೆ.

*ನಿಮ್ಮ ಮುಂದಿರುವ ಸವಾಲುಗಳೇನು?
ಪಿ.ಆರ್‌. ಶ್ರೀಜೇಶ್‌, ಎಸ್‌.ವಿ. ಸುನಿಲ್‌, ವಿ.ಆರ್‌. ರಘುನಾಥ್‌, ಸರ್ದಾರ್‌ ಸಿಂಗ್‌ ಅವರಂತಹ ದಿಗ್ಗಜರ ಜೊತೆ ಆಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಅದೃಷ್ಟ. ಇದನ್ನು ಚೆನ್ನಾಗಿ ಬಳಸಿಕೊಂಡು ಸೀನಿಯರ್‌ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಬೇಕು. ಹೀಗಾಗಿ ಪ್ರತಿ ಪಂದ್ಯವನ್ನೂ ಸವಾಲಾಗಿ ಸ್ವೀಕರಿಸುತ್ತೇನೆ.

* ಕರ್ನಾಟಕದ ನಂಟಿನ ಬಗ್ಗೆ ಹೇಳಿ?
ಅಪ್ಪ ಹರಿಶ್ಚಂದ್ರ ಕರ್ಕೆರಾ ಮತ್ತು ಅಮ್ಮ ಆಶಾಲತಾ ಅವರು ಉಡುಪಿ ಜಿಲ್ಲೆಯವರು. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಮುಂಬೈನಲ್ಲೆ. ಬಿಡುವಾದಾಗಲೆಲ್ಲಾ ಉಡುಪಿಗೆ ಬರುತ್ತಿರುತ್ತೇನೆ. ಇಲ್ಲಿನ ಪರಿಸರ ಮನಸ್ಸಿಗೆ ಮುದ ನೀಡುತ್ತದೆ.

*ಜೂನಿಯರ್‌ ಏಷ್ಯಾಕಪ್‌ನಲ್ಲಿ ನಿಮ್ಮಿಂದ ಅಮೋಘ ಸಾಮರ್ಥ್ಯ ಮೂಡಿಬಂದಿತ್ತು. ಅದರ ಬಗ್ಗೆ ಹೇಳಿ?
2015ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ  ಏಷ್ಯಾಕಪ್‌ ಟೂರ್ನಿ ನನ್ನ ಪಾಲಿಗೆ ಸ್ಮರಣೀಯವಾದುದು. ಆ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ  ತುಂಬಾ ಚೆನ್ನಾಗಿ ಆಡಿದ್ದೆ.  ಆ ಟೂರ್ನಿ ನನ್ನ ವೃತ್ತಿಬದುಕಿಗೆ ಮಹತ್ವದ ತಿರುವು ನೀಡಿತ್ತು ಎಂದರೆ ತಪ್ಪಾಗಲಾರದು.

*ಹಾಕಿ ಇಂಡಿಯಾ ಲೀಗ್‌ನಲ್ಲೂ ಆಡಿದ್ದೀರಿ. ಆ ಅನುಭವ ಹೇಗಿತ್ತು?
ಹಾಕಿ ಇಂಡಿಯಾ ಲೀಗ್‌ನಲ್ಲಿ ಆಡಿದ್ದು ನಿಜಕ್ಕೂ ವಿಶೇಷ ಅನುಭವ. ವಿಶ್ವದ  ಘಟಾನುಘಟಿ ಆಟಗಾರರನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ಈ ಲೀಗ್‌ನಿಂದ ಸಿಕ್ಕಿದೆ. ಜೊತೆಗೆ ಅವರ ಜೊತೆ ಕುಳಿತು ಊಟ ಮಾಡುವ, ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಳ್ಳುವ ಸೌಭಾಗ್ಯವೂ ದೊರಕಿದೆ. 

*ಹಾಕಿ ಲೀಗ್‌ನಿಂದ ನೀವು ಕಲಿತಿದ್ದೇನು?
ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌, ಜರ್ಮನಿ ಸೇರಿದಂತೆ ಇತರ ದೇಶಗಳ ಆಟಗಾರರು ತಂಡದಲ್ಲಿದ್ದು  ಅವರು ಅನೇಕ ಕೌಶಲಗಳನ್ನು ಹೇಳಿ ಕೊಡುತ್ತಾರೆ. ಅವರ ಅಭ್ಯಾಸ ಕ್ರಮ, ಎದುರಾಳಿಗಳನ್ನು ಹಣಿಯಲು ಹೆಣೆಯುವ ಯೋಜನೆ ಹೀಗೆ ಅನೇಕ ಮಹತ್ವದ ವಿಷಯಗಳನ್ನು  ಲೀಗ್‌ನಿಂದ ಕಲಿತಿದ್ದೇನೆ. ಈ ಲೀಗ್‌ ನನ್ನಂತಹ ಯುವ ಆಟಗಾರರಿಗೆ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಅತ್ಯುತ್ತಮ ವೇದಿಕೆ.

*ತರಬೇತಿ ಶಿಬಿರದ ವೇಳೆ ಶ್ರೀಜೇಶ್‌ ಅವರು ಯಾವ ಬಗೆಯ ಸಲಹೆಗಳನ್ನು ನೀಡುತ್ತಾರೆ?
ಶ್ರೀಜೇಶ್‌ ಅವರು ಹಾಕಿ ಲೋಕ ಕಂಡ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಒಬ್ಬರು. ಅವರ ಆಟವನ್ನು ನೋಡುತ್ತಾ ಬೆಳೆದವರ ಸಾಲಿನಲ್ಲಿ ನಾನೂ  ಒಬ್ಬ. ರೋಚಕ ಘಟ್ಟದಲ್ಲಿ ಹೇಗೆ ಒತ್ತಡ ಮೀರಿ ನಿಲ್ಲಬೇಕು. ಶೂಟೌಟ್‌ ಸಂದರ್ಭದಲ್ಲಿ ಗೋಲ್‌ಕೀಪರ್‌ನ ಮನಸ್ಥಿತಿ ಹೇಗಿರಬೇಕು. ಹೀಗೆ  ಅನೇಕ ಸಲಹೆ ಮತ್ತು  ನೂತನ ಕೌಶಲಗಳನ್ನು  ಹೇಳಿಕೊಟ್ಟಿದ್ದಾರೆ.

*ಸೀನಿಯರ್‌ ತಂಡಕ್ಕೆ ಆಯ್ಕೆಯಾದ ಬಳಿಕ ಕೋಚ್‌ ರೋಲಂಟ್‌ ಓಲ್ಟಮಸ್‌ ಅವರನ್ನು ಭೇಟಿ ಮಾಡಿ ಮಾತನಾಡಿದಿರಾ?
ತಂಡಕ್ಕೆ ಆಯ್ಕೆಯಾದ ವಿಷಯ ತಿಳಿದ ಬಳಿಕ ಓಲ್ಟಮಸ್‌ ಅವರನ್ನು ಭೇಟಿಯಾಗಿದ್ದೆ. ಅವರು  ಅಭಿನಂದನೆ ಹೇಳಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

*ನಿಮ್ಮ ಕೋಚ್‌ಗಳ ಬಗ್ಗೆ ಹೇಳಿ?
ಎಳವೆಯಲ್ಲಿ ನನ್ನ ಪ್ರತಿಭೆಗೆ ಸಾಣೆ ಹಿಡಿದವರು ಮೇಜ್‌ಬಾನ್‌ ಪಟೇಲ್‌. ಕಾಲೇಜು ದಿನಗಳಲ್ಲಿ  ಕಾನ್‌ರಾಯ್‌ ರೆಮೆಡಿಯೊಸ್‌ ಮತ್ತು ಎಡ್ಗರ್‌ ಮಸ್ಕರೆನ್ಹಾಸ್‌ ಅವರು ಅಗತ್ಯ ಮಾರ್ಗದರ್ಶನ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT