ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ವಿಶ್ವಕಪ್‌ನ ಪುಳಕ...

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕ್ರೀಡೆಗಳ ಹಾಗೂ ಕ್ರೀಡಾಕೂಟಗಳ ಒಟ್ಟಾರೆ ಆಶಯವೇ ಮನುಷ್ಯನನ್ನು ಒಂದೇ ವೇದಿಕೆಯ ಮೇಲೆ ತರುವುದು. ಅಲ್ಲಿ ಜಾತಿಯ ಹಂಗಿಲ್ಲ. ದೇಶ ಹಾಗೂ ಭಾಷೆಗಳ ಗಡಿಯಿಲ್ಲ. ನಾವೆಲ್ಲರೂ ಒಂದು ಎನ್ನುವ ಭಾವವನ್ನೇ ಕ್ರೀಡೆಗಳು ಬಿತ್ತುತ್ತವೆ.

ಬದುಕಿನಲ್ಲಿ ಏರಿಳಿತಗಳು ಹೇಗೆ ಸಹಜವೋ, ಕ್ರೀಡೆಯಲ್ಲಿಯೂ ಹಾಗೆ. ವಿವಿಧ ಕ್ರೀಡೆಗಳನ್ನು ಮನುಷ್ಯನ ಬದುಕಿನ ಜೊತೆ ಹೋಲಿಸಿ ನೋಡಬಹುದು. ಉದಾಹರಣೆಗೆ ಕಬಡ್ಡಿ ಆಡುವಾಗ ರೈಡರ್ ಅನೇಕ ಸಲ ಬೀಳುತ್ತಾನೆ. ಎದುರಾಳಿ ಆಟಗಾರರು ಬೀಸುವ ಬಲೆಯೊಳಗೆ ಸಿಲುಕುತ್ತಾನೆ. ಹೊರ ಬಂದು ಮತ್ತೆ ಹೊಸ ಸಾಹಸಕ್ಕೆ ಅಣಿಯಾಗುತ್ತಾನೆ. ಅದರಂತೆಯೇ ಫುಟ್‌ಬಾಲ್‌. 

ಫುಟ್‌ಬಾಲ್‌ ಆಡುವಾಗ ಚೆಂಡು ಪುಟಿಯುತ್ತದೆ. ಅದನ್ನು ಯಾರೊ ಒದ್ದು ಇನ್ನೊಂದು ದಿಕ್ಕಿಗೆ ಕಳುಹಿಸುತ್ತಾರೆ. ಅಲ್ಲಿ ಇನ್ಯಾರೊ ಮತ್ತೊಂದು ದಿಕ್ಕಿಗೆ ಒದೆಯುತ್ತಾರೆ. ಎಷ್ಟೇ ಒದೆ ಸಿಕೊಂಡರೂ ಮತ್ತೆ ಮತ್ತೆ ಪುಟಿದೇಳುವ ಚೆಂಡು ಭರವಸೆಯ ಪ್ರತೀಕ. ಹೀಗೆ ಸುಂದರ ಬದುಕಿನ ದ್ಯೋತಕ ಎನಿಸಿರುವ ಫುಟ್‌ಬಾಲ್‌ ನಮಗೆಲ್ಲಾ ಆಪ್ತವಾಗುವುದು ಇದೇ ಕಾರಣಕ್ಕೆ.

ವಿಶ್ವದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫುಟ್‌ಬಾಲ್‌ನಲ್ಲಿ 1930ರಿಂದ ಸೀನಿಯರ್‌ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ವಿವಿಧ ವಯೋಮಿತಿಯೊಳಗಿನ ವಿಶ್ವಕಪ್‌ ಟೂರ್ನಿಗಳು ಹಿಂದೆ ಸಾಕಷ್ಟು ನಡೆದಿವೆ. 32 ವರ್ಷಗಳಿಂದ 17 ವರ್ಷದ ಒಳಗಿನವರ ವಿಶ್ವಕಪ್‌ ಕೂಡ ಜರುಗುತ್ತಿದೆ. ಈ ಟೂರ್ನಿಯಲ್ಲಿ ಭಾರತ ಒಮ್ಮೆಯೂ ಆಡುವ ಅರ್ಹತೆ ಪಡೆದುಕೊಂಡಿಲ್ಲ. ಹಾಗಂದ ಮಾತ್ರಕ್ಕೆ ಭಾರತದಲ್ಲಿ ಅಭಿಮಾನಿಗಳ ಸಂಖ್ಯೆಗೆ ಕೊರತೆ ಏನಿಲ್ಲ.

ಪಶ್ಚಿಮ ಬಂಗಾಳ, ಕೇರಳ, ಗೋವಾ, ಕರ್ನಾಟಕ, ಮಣಿಪುರ ಹೀಗೆ ಅನೇಕ ರಾಜ್ಯಗಳು ಫುಟ್‌ಬಾಲ್‌ನಲ್ಲಿ ಮುಂಚೂಣಿಯಲ್ಲಿವೆ. ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಎಲ್ಲೋ ದೂರದ ದೇಶದಲ್ಲಿ ವಿಶ್ವಕಪ್‌ ನಡೆಯುತ್ತಿದ್ದರೆ ತುಂಬಾ ಸಂಭ್ರಮದಲ್ಲಿ ಪಂದ್ಯಗಳನ್ನು ನೋಡುವವರು ನಮ್ಮಲ್ಲಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವಿಶ್ವಕಪ್‌ನ ಪಂದ್ಯಗಳನ್ನು ದೊಡ್ಡ ಪರದೆಯ ಮೇಲೆ ಸಾಮೂಹಿಕವಾಗಿ ನೋಡುವಷ್ಟರ ಮಟ್ಟಿಗೆ ಈ ಕ್ರೀಡೆಯ ಮೇಲೆ  ನಮ್ಮವರಿಗೆ ಪ್ರೀತಿ ಇದೆ.

ಇನ್ನೂ ವಿಶ್ವಕಪ್‌ನ ಪಂದ್ಯಗಳು ಭಾರತದಲ್ಲಿಯೇ ನಡೆದರೆ ಇನ್ನೆಷ್ಟು ಖುಷಿಯಾಗಲಿಕ್ಕಿಲ್ಲ? ಹೌದು, ಅಂಥ ದ್ದೊಂದು ಸಂಭ್ರಮವನ್ನು ಕಣ್ತುಂಬಿ ಕೊಳ್ಳುವ ಅವಕಾಶ  ಲಭಿಸಿದೆ. ಭಾರತದಲ್ಲಿ ಮೊದಲ ಬಾರಿಗೆ 17 ವರ್ಷದ ಒಳಗಿನವರ ವಿಶ್ವಕಪ್‌ ಆಯೋಜನೆಯಾಗಿದೆ. ಇದೇ ವರ್ಷದ ಅಕ್ಟೋಬರ್‌ 6ರಿಂದ 28ರ ವರೆಗೆ ಟೂರ್ನಿ ನಡೆಯಲಿದೆ. 24 ತಂಡಗಳು ಭಾಗವಹಿಸಲಿದ್ದು ಆರು ನಗರಗಳಲ್ಲಿ ಪಂದ್ಯಗಳು ಜರುಗಲಿವೆ.


ಬಿಡ್ ಗೆದ್ದ ಭಾರತ
ಈ ವರ್ಷದ ಜೂನಿಯರ್‌ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ರಾಷ್ಟ್ರ ಯಾವುದು ಎಂಬುದು ನಾಲ್ಕು ವರ್ಷಗಳ ಹಿಂದೆಯೇ ನಿರ್ಧಾರವಾಗಿದೆ. ಇದಕ್ಕಾಗಿ ಅನೇಕ ಪ್ರಕ್ರಿಯೆಗಳು ನಡೆದಿವೆ. ಅಂತಿಮವಾಗಿ ಅಜರ್‌ಬೈಜಾನ್‌, ಭಾರತ, ಐರ್ಲೆಂಡ್‌ ಮತ್ತು ಉಜ್ಬೇಕಿಸ್ತಾನ ರಾಷ್ಟ್ರಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಭಾರತಕ್ಕೆ ಅವಕಾಶ ಲಭಿಸಿತು.

ಫಿಫಾ ಆಯೋಜಿಸುವ ಯಾವ ಟೂರ್ನಿಗಳಿಗೂ ಭಾರತ ಹಿಂದೆ ಆತಿಥ್ಯ ವಹಿಸಿರಲಿಲ್ಲ. ಆದ್ದರಿಂದ ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಅದ್ಭುತವಾದದ್ದನ್ನು ಸಾಧಿಸಲಿ ಎನ್ನುವ ನಿರೀಕ್ಷೆಯೂ ಇಲ್ಲ. ಆದರೆ ವಿಶ್ವದ ಶ್ರೇಷ್ಠ ಟೂರ್ನಿ ಭಾರತದಲ್ಲಿ ನಡೆಯಲಿರುವುದರಿಂದ ಇಲ್ಲಿನ ಅನೇಕ ಕ್ರೀಡಾಂಗಣಗಳ ಗುಣಮಟ್ಟ ಹೆಚ್ಚಾಗುತ್ತದೆ.

ಹೊಸಬರಲ್ಲಿ ಫುಟ್‌ಬಾಲ್‌ ಬಗ್ಗೆ ಪ್ರೀತಿ ಬೆಳೆಯಲು ನೆರವಾಗುತ್ತದೆ ಎನ್ನುವ ಆಶಯವಿದೆ. ಬೈಚುಂಗ್ ಭುಟಿಯಾ, ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಸೇರಿದಂತೆ ಹೆಸರಾಂತ ಆಟಗಾರರೂ ಇದೇ ಆಸೆ ಹೊಂದಿದ್ದಾರೆ.

‘ಭಾರತದಲ್ಲಿ ಐ ಲೀಗ್ ಮತ್ತು ಇಂಡಿಯನ್‌ ಸೂಪರ್‌ ಲೀಗ್‌ ಹೀಗೆ ಹಲವು ರೀತಿಯ ಟೂರ್ನಿಗಳು ಖ್ಯಾತಿ ಹೊಂದಿವೆ. ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಆಡುವ ಅವಕಾಶ ಲಭಿಸುತ್ತಿದೆ. ಇದರಿಂದ ನಮ್ಮ ಅನುಭವದ ವಿಸ್ತಾರ ಹೆಚ್ಚಾಗುತ್ತದೆ. ಜೂನಿಯರ್ ಮಟ್ಟದಿಂದಲೇ ಫುಟ್‌ಬಾಲ್ ಬಗ್ಗೆ ಆಸಕ್ತಿ ಮೂಡಿಸಲು ಈ ಬಾರಿಯ ವಿಶ್ವಕಪ್‌ ನೆರವಾಗಲಿದೆ’ ಎಂದು ಸುನಿಲ್‌ ಚೆಟ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಟ್ಟಿಯಾಗಬೇಕಿದೆ ಬುನಾದಿ
ತಳಮಟ್ಟದಿಂದಲೇ ಬಲಿಷ್ಠ ತಂಡಗಳನ್ನು ಕಟ್ಟಬೇಕೆನ್ನುವ ಆಸೆಯಿಂದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ ಜೊತೆಗೆ ವಿವಿಧ ಕಾರ್ಪೊರೇಟ್‌ ಕಂಪೆನಿಗಳು ಪ್ರಯತ್ನ ನಡೆಸುತ್ತಿವೆ.

ಉತ್ತಮ ಪ್ರತಿಭೆಯಿದ್ದ ಆಟಗಾರನಿಗೆ ಕೌಶಲಗಳನ್ನು ಹೇಳಿಕೊಡುವ ಜೊತೆಗೆ ವಿದೇಶದಲ್ಲಿ ತರಬೇತಿ ಕೊಡಿಸಲು ಹಲವು ಕ್ಲಬ್‌ಗಳು ಪ್ರಯತ್ನಿಸುತ್ತಿವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವಷ್ಟು ಸ್ಪರ್ಧಾತ್ಮಕತೆ ಮತ್ತು ಪಾದರಸದ ವೇಗ ನಮ್ಮವರಲ್ಲಿ ಇಲ್ಲ. ಆದ್ದರಿಂದ ಐ ಲೀಗ್ ಮತ್ತು ಐಎಸ್‌ಎಲ್‌ನಂಥ ಟೂರ್ನಿಗಳು ಭಾರತದ ಮೂಲದವಾದರೂ ವಿದೇಶಿ ಆಟಗಾರರನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿಯೂ ಭಾರತ ತಂಡದವರು ಗಟ್ಟಿ ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. 16 ವರ್ಷದ ಒಳಗಿನವರ ಎಎಫ್‌ಸಿ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ನೀಡಲು ಭಾರತ ಪಡಿಪಾಟಲು ಪಡುತ್ತಿದೆ. 1985ರಲ್ಲಿ ಆರಂಭವಾದ ಈ ಟೂರ್ನಿಯಲ್ಲಿ ಭಾರತ ತಂಡ 1990ರಿಂದ ಪಾಲ್ಗೊಳ್ಳಲು ಆರಂಭಿಸಿತು.

ಆರಂಭದ ವರ್ಷದಲ್ಲಿ ಜೋರ್ಡಾನ್‌ ವಿರುದ್ಧದ ಪಂದ್ಯದಲ್ಲಿ ಮಾತ್ರ ಗೆದ್ದು ಉಳಿದ ಪಂದ್ಯಗಳಲ್ಲಿ ಪರಾಭವಗೊಂಡಿತ್ತು. 1996ರಲ್ಲಿ ಮತ್ತೆ ಎಎಫ್‌ಸಿ ಕಪ್‌ಗೆ ಅರ್ಹತೆ ಪಡೆದುಕೊಂಡಿತಾದರೂ ಪಡೆದದ್ದು ಕೊನೆಯ ಸ್ಥಾನ. ಮತ್ತೆ ಈ ಟೂರ್ನಿಯಲ್ಲಿ ಆಡಲು ಎಂಟು ವರ್ಷಗಳವರೆಗೆ ಕಾಯಬೇಕಾಯಿತು. 2002ರಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದೇ ಇದುವರೆಗಿನ ಉತ್ತಮ ಸಾಧನೆ ಎನಿಸಿದೆ.

ಏಷ್ಯಾದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಹೆಚ್ಚು ಸೌಲಭ್ಯಗಳಿವೆ. ಆದರೂ ನಮ್ಮ ತಂಡದವರು ಉಪಖಂಡದಲ್ಲಿಯೇ ಉತ್ತಮ ಸಾಮರ್ಥ್ಯ ನೀಡುತ್ತಿಲ್ಲ. 2010ರಲ್ಲಿ ಭಾರತ ತಂಡ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿತ್ತು.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಅಚ್ಚರಿ ಮೂಡಿಸಿತ್ತು. ನಂತರ ಮಾಲ್ಡೀವ್ಸ್‌ ಎದುರು ಐದು ಗೋಲುಗಳ ಅಂತರದ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ನೇಪಾಳ ಎದುರು ಗೆಲುವು ಸಾಧಿಸಿ ಫೈನಲ್ ತಲುಪಿತ್ತಾದರೂ ಪಾಕ್ ವಿರುದ್ಧವೇ ಮಣಿಯಿತು.

ಹೋದ ವರ್ಷದ ಫೆಬ್ರುವರಿಯಲ್ಲಿ ಭಾರತ ಜೂನಿಯರ್ ತಂಡದವರು ಬೋಸ್ಟನ್‌ ಎದುರು ಸೌಹಾರ್ದ ಪಂದ್ಯವಾಡಿದ್ದರು. ಆಗ 1–10 ಗೋಲುಗಳಿಂದ ಭಾರತ ಸೋತಿತ್ತು. ಹೀಗೇ ಅನೇಕ ಏಳುಬೀಳುಗಳನ್ನು ಕಂಡಿರುವ ಭಾರತ ಕೆಲ ಟೂರ್ನಿಗಳಲ್ಲಿಯೂ ಗಮನ ಸೆಳೆದಿದೆ.

ಸ್ಯಾಫ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ 2013ರಲ್ಲಿ  ಪ್ರಶಸ್ತಿ ಜಯಿಸಿದ್ದ ತಂಡ 2011 ಮತ್ತು 2015ರಲ್ಲಿ ರನ್ನರ್ಸ್‌ ಅಪ್ ಸ್ಥಾನ ಪಡೆದಿತ್ತು. ಜೂನಿಯರ್ ಮಟ್ಟದಲ್ಲಿ ಭಾರತ ಸುಧಾರಣೆಯಾಗುತ್ತಿದೆ. ಆದರೆ ಇದರ ವೇಗ ಹೆಚ್ಚಬೇಕಿದೆ.

ಮೊದಲ ಅನುಭವದ ಪುಳಕ
ಏಷ್ಯಾ ವಲಯ ಮತ್ತು ವಿವಿಧ ದೇಶಗಳ ಜೊತೆ ಸೌಹಾರ್ದ ಪಂದ್ಯಗಳನ್ನಷ್ಟೇ ಆಡಿರುವ ಭಾರತ ತಂಡ ಹೊಸ ಅನುಭವಕ್ಕೆ ತೆರೆದುಕೊಳ್ಳಲು ಸಜ್ಜಾಗುತ್ತಿದೆ. ವಿಶ್ವದ ಶ್ರೇಷ್ಠ ತಂಡಗಳು ಪಾಲ್ಗೊಳ್ಳುವ ಜೂನಿಯರ್‌ ವಿಶ್ವಕಪ್‌ನಲ್ಲಿ ಭಾಗವಹಿಸಲು ಕಾತರಿಸುತ್ತಿದೆ.

ಟೂರ್ನಿಯಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ನೈಜೀರಿಯಾ, ಫುಟ್‌ಬಾಲ್‌ ಪ್ರೀತಿಯ ಸಾಂಬಾ ನಾಡು ಬ್ರೆಜಿಲ್, ಘಾನಾ, ಮೆಕ್ಸಿಕೊ, ಫ್ರಾನ್ಸ್‌ ಮತ್ತು ಸ್ವಿಟ್ಜರ್‌ಲೆಂಡ್ ದೇಶಗಳ ಕಠಿಣ ಸವಾಲನ್ನು ಆತಿಥೇಯರು ಎದುರಿಸಬೇಕಿದೆ.

ಇದಕ್ಕಾಗಿ ಭಾರತ ತಂಡ ಈಗಾಗಲೇ ಅಭ್ಯಾಸ ಆರಂಭಿಸಿದೆ. ಜೂನಿಯರ್ ತಂಡದ ಗೋಲ್‌ಕೀಪರ್‌ಗಳಾದ ಮಣಿಪುರದ ಧೀರಜ್ ಸಿಂಗ್, ಪಂಜಾಬ್‌ನ ಪ್ರಭುಶುಖನ್‌ ಸಿಂಗ್ ಗಿಲ್, ಮಣಿಪುರದ ಮೊಹಮ್ಮದ್ ನವಾಜ್ ಮತ್ತು ಪಶ್ಚಿಮ ಬಂಗಾಳದ ತಾಮಲ್‌ ನಾಸ್ಕರ್‌ ನಡುವೆ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಯುತ್ತಿದೆ.

ಈಗಿನ ತಂಡದಲ್ಲಿ ಮಣಿಪುರ, ಪಶ್ಚಿಮ ಬಂಗಾಳ, ಮಿಜೋರಾಂ ರಾಜ್ಯಗಳ ಆಟಗಾರರೇ ಹೆಚ್ಚಿದ್ದಾರೆ. ಕರ್ನಾಟಕದ ಸಂಜೀವ್ ಸ್ಟಾಲಿನ್ ಕೂಡ ಈ ತಂಡದಲ್ಲಿದ್ದಾರೆ. ಇವರೆಲ್ಲರೂ ವಿಶ್ವಕಪ್‌ನ ಅನುಭವಕ್ಕಾಗಿ ಕಾಯುತ್ತಿದ್ದಾರೆ.

ಫೆಡರೇಷನ್‌ಗೂ ಸವಾಲು
ಭಾರತ ಸರ್ಕಾರ ಹಿಂದೆ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌, ವಿಶ್ವಕಪ್‌ ಕಬಡ್ಡಿ, ಕಾಮನ್‌ವೆಲ್ತ್‌ ಕ್ರೀಡಾಕೂಟ ಹೀಗೆ ಅನೇಕ ಟೂರ್ನಿಗಳನ್ನು ಸಂಘಟಿಸಿ ಸೈ ಎನಿಸಿಕೊಂಡಿದೆ. ಆದರೆ ಮೊದಲ ಬಾರಿಗೆ ವಿಶ್ವಕಪ್‌ ಫುಟ್‌ಬಾಲ್‌ಗೆ ಆತಿಥ್ಯ ವಹಿಸಿರುವ ಕಾರಣ ಉತ್ತಮವಾಗಿ ಸಂಘಟಿಸಬೇಕಾದ ಹೊಣೆಗಾರಿಕೆ ಫೆಡರೇಷನ್‌ ಮೇಲಿದೆ.

ವಿಶ್ವಕಪ್‌ನ ಪಂದ್ಯಗಳು ಆಯೋಜನೆಯಾಗಿರುವ ವಿವಿಧ ಕ್ರೀಡಾಂಗಣಗಳಿಗೆ ಇತ್ತೀಚೆಗೆ ಫಿಫಾ ತಂಡ ಭೇಟಿ ನೀಡಿ ಸಿದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಗುವಾಹಟಿಯ ಕ್ರೀಡಾಂಗಣವನ್ನು ಪರಿಶೀಲಿಸಿದ್ದ ಫಿಫಾದ ಅಧಿಕಾರಿ ಜೈಮಿ ಯಾರ್ಜಾ ‘ಅಸ್ಸಾಂ ಸರ್ಕಾರ ಫುಟ್‌ಬಾಲ್‌ ಟೂರ್ನಿಗೆ ನೀಡಿರುವ ಬೆಂಬಲದಿಂದ ಖುಷಿಯಾಗಿದೆ. ಇದರಿಂದ ಟೂರ್ನಿಯನ್ನು ಭಾರತ ಯಶಸ್ವಿಯಾಗಿ ಸಂಘಟಿಸುತ್ತದೆ ಎನ್ನುವ ಭರವಸೆ ಮೂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಮುಖ ಮಾಹಿತಿಗಳು
*ಟೂರ್ನಿಯಲ್ಲಿ ಒಟ್ಟು ಹೆಚ್ಚು ಬಾರಿ ಆಡಿದ ಕೀರ್ತಿ ಬ್ರೆಜಿಲ್ ಹೆಸರಿನಲ್ಲಿದೆ. ಈ ತಂಡದವರು 15 ಸಲ ಆಡಿದ್ದಾರೆ.

*ಹೆಚ್ಚು ಬಾರಿ ರನ್ನರ್ಸ್ ಅಪ್‌ ಸ್ಥಾನ ಪಡೆದ ಪಟ್ಟಿಯಲ್ಲಿ ಸ್ಪೇನ್‌ ಮತ್ತು ನೈಜೀರಿಯಾ (ತಲಾ ಮೂರು ಸಲ) ಜಂಟಿ ಅಗ್ರಸ್ಥಾನದಲ್ಲಿವೆ.

*ಸ್ಪೇನ್ ತಂಡ ಟೂರ್ನಿಯಲ್ಲಿ ಹೆಚ್ಚು ಗೋಲುಗಳ ಅಂತರದಿಂದ ಗೆಲುವು ಪಡೆದ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. 1997ರ ಟೂರ್ನಿಯಲ್ಲಿ ಈ ತಂಡದವರು ನ್ಯೂಜಿಲೆಂಡ್‌ ಎದುರು 13 ಗೋಲುಗಳ ಅಂತರದ ಜಯ ದಾಖಲಿಸಿದ್ದರು.

*ಟೂರ್ನಿಯ ಫೈನಲ್‌ನಲ್ಲಿ ಮೂರು ಗೋಲುಗಳು ಬಂದಿದ್ದು ಗರಿಷ್ಠ ದಾಖಲೆಯಾಗಿದೆ. ಘಾನಾ (1995), ಫ್ರಾನ್ಸ್‌ (2001), ಮೆಕ್ಸಿಕೊ (2005) ಮತ್ತು ನೈಜೀರಿಯಾ (2013) ಜಂಟಿಯಾಗಿ ಈ ದಾಖಲೆ ಹೊಂದಿವೆ.

*ಒಂದೇ ಟೂರ್ನಿಯಲ್ಲಿ ಒಟ್ಟು ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆ ನೈಜೀರಿಯಾ ಹೆಸರಿನಲ್ಲಿದೆ. ಈ ತಂಡದವರು 2013ರಲ್ಲಿ 26 ಗೋಲುಗಳನ್ನು ಹೊಡೆದಿದ್ದರು.

ಟೂರ್ನಿಯ ಅಂಕಿಅಂಶಗಳು
*24 ಪಾಲ್ಗೊಳ್ಳುವ ಒಟ್ಟು ತಂಡಗಳು
*05 ಸಲ ನೈಜೀರಿಯಾ  ಪ್ರಶಸ್ತಿ ಜಯಿಸಿದೆ
*75 ಬ್ರೆಜಿಲ್ ತಂಡ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದೆ.
*28 ಅಮೆರಿಕ ಹೆಚ್ಚು ಪಂದ್ಯಗಳಲ್ಲಿ ಸೋತಿದೆ
*159 ಟೂರ್ನಿಯಲ್ಲಿ ಇದುವರೆಗೂ ಬ್ರೆಜಿಲ್ ಗಳಿಸಿರುವ ಗೋಲುಗಳು
*172 ಒಂದು ಟೂರ್ನಿಯಲ್ಲಿ ದಾಖಲಾದ ಒಟ್ಟು ಗರಿಷ್ಠ ಗೋಲುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT