ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸದ ಪ್ರಶ್ನೆಗೆ ಗಾಂಧಿಯ ಉತ್ತರ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಾನು ಬೆಳೆದಿದ್ದು ಕಾವೇರಿಯ ಪ್ರಮುಖ ಉಪನದಿಯಾದ ಹೇಮಾವತಿಯ ತೀರದಲ್ಲಿರುವ ಗೊರೂರು ಹಳ್ಳಿಯಲ್ಲಿ. ಆ ಹಳ್ಳಿಯ ದೃಶ್ಯಗಳು ಕಣ್ಣಿಗೆ ಹಿತ ನೀಡುತ್ತವೆ. ನನ್ನ ತಂದೆ ಹಳ್ಳಿಯ ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ನಾನು ಹಳ್ಳಿಯ ಕನ್ನಡ ಮಾಧ್ಯಮ ಮಾಧ್ಯಮಿಕ ಶಾಲೆಗೆ ಬರಿಗಾಲಿನಲ್ಲಿ ನಡೆದು ಹೋಗುತ್ತಿದ್ದೆ. ಗೊರೂರಿನ ಜಾತಿ ವ್ಯವಸ್ಥೆ, ಅಲ್ಲಿನ ಪುರಾತನ ಸಂಪ್ರದಾಯಗಳು, ಸಂಸ್ಕೃತಿ, ಆ ಹಳ್ಳಿಯ ಶಾಂತ ವಾತಾವರಣದಲ್ಲಿ ಗುಪ್ತಗಾಮಿನಿಯಂತೆ ಇದ್ದ ಅಧಿಕಾರ ರಾಜಕೀಯದ ಬಗ್ಗೆ ನನಗೆ ಎಳೆ ವಯಸ್ಸಿನಲ್ಲೇ ಅರಿವು ಉಂಟಾಯಿತು.

ಲಿಂಗಾಯತರು ಮತ್ತು ನನ್ನಂತಹ ಬ್ರಾಹ್ಮಣರು ಶುದ್ಧ ಶಾಕಾಹಾರಿಗಳಾಗಿದ್ದರು (ನಾನು ಸೇನೆಗೆ ಸೇರಿದ ನಂತರ ಮಾಂಸ ಸೇವಿಸಲು ಆರಂಭಿಸಿದೆ). ಒಕ್ಕಲಿಗರಾದ ಗೌಡರು ಆಡು ಮತ್ತು ಕೋಳಿ ಮಾಂಸ, ಮೀನು ಸೇವಿಸುತ್ತಿದ್ದರು. ಅವರಲ್ಲಿನ ಕೆಲವು ಉಪಜಾತಿಗಳವರು ಹಂದಿ ಮಾಂಸ ತಿನ್ನುತ್ತಿದ್ದರು. ಬೇರೆ ಬೇರೆ ಬುಡಕಟ್ಟು ಸಮುದಾಯಗಳ ಜನ ಕಾಡು ಬೆಕ್ಕು, ಭತ್ತದ ಗದ್ದೆಗಳಲ್ಲಿ ಸಿಗುತ್ತಿದ್ದ ಅಳಿಲು, ಹೆಗ್ಗಣ, ಕಾಡುಹಂದಿಯ ಮಾಂಸ ತಿನ್ನುತ್ತಿದ್ದರು. ದಲಿತರು ಹಾಗೂ ಗೊರೂರಿನಲ್ಲಿ ಬಹುಕಾಲದಿಂದ ವಾಸವಿದ್ದ ಮುಸ್ಲಿಮರು ದನದ ಮಾಂಸ ತಿನ್ನುತ್ತಿದ್ದರು.

ದಲಿತರ ಬಳಿ ಜೀವನಕ್ಕೆ ಸಾಕಾಗುವಷ್ಟು ಮಾತ್ರ ಹಣ ಇರುತ್ತಿತ್ತು. ಅವರಲ್ಲಿನ ಬಡತನ ಅದೆಷ್ಟು ಕೆಟ್ಟದ್ದಾಗಿತ್ತು ಎಂದರೆ, ಅವರ ಬದುಕನ್ನು ಉಲ್ಲೇಖಿಸಿ ನನ್ನ ತಂದೆಯವರು ‘ಜೀವನ ಅದೆಷ್ಟು ಕ್ರೂರಿ’ ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಜೀವನದಲ್ಲಿ ಅತ್ಯಂತ ಹೆಚ್ಚು ಕಷ್ಟಪಡುವವನಿಗೆ ಅತಿ ಕನಿಷ್ಠ ಪರಿಹಾರ ಮೊತ್ತ ಸಿಗುತ್ತದೆ ಎಂದು ಟಾಲ್‌ಸ್ಟಾಯ್‌ ಆಡಿದ್ದ ಮಾತುಗಳನ್ನು ನೆನಪಿಸಿಕೊಡುತ್ತಿದ್ದರು. ಪ್ರತಿದಿನ ಕೂಲಿ ಕೆಲಸ ಮಾಡಿದ ನಂತರ ದಲಿತರು ಭೂಮಾಲೀಕನ ಬಳಿ ಬಂದು, ದಿನಗೂಲಿ ಪಡೆದು, ವ್ಯಾಪಾರಿ ಬಳಿ ಹೋಗಿ ರಾಗಿ ಖರೀದಿಸುತ್ತಾರೆ ಎಂದು ಅಪ್ಪ ಹೇಳುತ್ತಿದ್ದರು. ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ದೇವರು ಆಗಾಗ ಹಸಿರು ಸೊಪ್ಪು, ಅಣಬೆ ಹಾಗೂ ಏಡಿಗಳನ್ನು ಕರುಣಿಸುತ್ತಿದ್ದ.

ರೈತರ ಮಾರುಕಟ್ಟೆ: ಹೇಮಾವತಿ ನದಿಯ ಅಣೆಕಟ್ಟೆಯಿಂದ ಆರಂಭವಾಗುವ ಕಾಲುವೆಯೊಂದು ಗೊರೂರು ಸುತ್ತ ಸಾಗುತ್ತದೆ. ಅದು ದಲಿತ ಕಾಲೊನಿಯ ಸುತ್ತ ನೆಕ್ಲೇಸ್ ಮಾದರಿಯಲ್ಲಿ ಸುತ್ತಿಕೊಂಡಿದೆ. ಗೌಡ ಸಮುದಾಯದವರು ಮತ್ತು ಇತರರು ವಾಸಿಸುತ್ತಿದ್ದ ಪ್ರದೇಶದ ಮಾರುಕಟ್ಟೆಯಲ್ಲಿ ಮಾಂಸದ ಅಂಗಡಿಯೊಂದಿತ್ತು. ದಲಿತರ ಕಾಲೊನಿಯ ಹೊರಗೆ, ಕಾಲುವೆಯ ದಂಡೆಯಲ್ಲಿ ದನದ ಮಾಂಸದ ಅಂಗಡಿಯಿತ್ತು. ರೈತರ ವಾರದ ಸಂತೆ ನಡೆಯುವ ಸ್ಥಳದ ಬಳಿ ಹಂದಿ ಮಾಂಸದ
ಅಂಗಡಿ ಇತ್ತು.

ರೈತರು ಜಾನುವಾರುಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳುತ್ತಿದ್ದರು– ಹಾಲಿಗಾಗಿ, ಉಳುಮೆಗಾಗಿ, ಎತ್ತಿನಗಾಡಿಗೆ ಕಟ್ಟಲು ಹಾಗೂ ಇನ್ನಿತರ ಅಗತ್ಯಗಳಿಗಾಗಿ. ಆದರೆ ಕೆಲವು ಜಾನುವಾರುಗಳು ಮಾತ್ರ ಇತರ ಪ್ರಾಣಿಗಳ ರೀತಿಯಲ್ಲೇ ಗೊರೂರಿನ ಮತ್ತು ಸುತ್ತಲಿನ ಹಳ್ಳಿಗಳ ಕೆಲವರ ಊಟದ ಬಟ್ಟಲು ಸೇರುತ್ತಿದ್ದವು. ಅವುಗಳ ಚರ್ಮ ಹಾಗೂ ಎಲುಬನ್ನು ಅಲ್ಲಿನ ಶ್ರೀಮಂತ ಮುಸ್ಲಿಂ ವ್ಯಾಪಾರಿಯೊಬ್ಬರ ಘಟಕವೊಂದಕ್ಕೆ ಸಾಗಿಸಲಾಗುತ್ತಿತ್ತು. ಈ ವ್ಯಾಪಾರಿಯ ಮಾಲೀಕತ್ವದಲ್ಲಿ ಭತ್ತದ ಹೊಟ್ಟು ತೆಗೆಯುವ ಮಿಲ್ ಕೂಡ ಇತ್ತು. ನಾನು, ನನ್ನ ತಂದೆ, ಅವರ ತಂದೆಯ ನೆನಪಿನಲ್ಲಿ ಇರುವಂತೆ ನಮ್ಮ ಹಳ್ಳಿಯ ವ್ಯವಸ್ಥೆ ಹೀಗೆಯೇ ಇತ್ತು. ಇವೆಲ್ಲವೂ ಹಳ್ಳಿ ಜೀವನದ ಭಾಗವಾಗಿದ್ದವು.

ಹಳ್ಳಿಯ ವಿವಿಧ ಸಮುದಾಯಗಳ ಜನ ಸೌಹಾರ್ದದಿಂದ ಬಾಳುತ್ತಿದ್ದರು. ಕನಿಷ್ಠಪಕ್ಷ, ವಿವಿಧ ಸಮುದಾಯಗಳ ಆಹಾರ ಪದ್ಧತಿ, ಹಬ್ಬಗಳು, ಪೂಜಾಸ್ಥಳಗಳ ವಿಚಾರದಲ್ಲಂತೂ ಸೌಹಾರ್ದ ಇತ್ತು. ಹಳ್ಳಿಯ ವೈವಿಧ್ಯವು ಅಲ್ಲಿನ ನೇಕಾರ ಸಮುದಾಯ ಸಿದ್ಧಪಡಿಸುತ್ತಿದ್ದ ಬಣ್ಣಬಣ್ಣದ ವಸ್ತ್ರಗಳಂತೆ ತೋರುತ್ತಿತ್ತು.

ಮಾಂಸ ಸೇವನೆಯ ಅಭ್ಯಾಸ ಮಾಡಿಕೊಂಡವರು ‘ಅಸಂಸ್ಕೃತರು’ ಎಂದು ಸಸ್ಯಾಹಾರದ ಪರವಿದ್ದ ಶ್ರದ್ಧಾವಂತ ಬ್ರಾಹ್ಮಣರು ಮತ್ತು ಲಿಂಗಾಯತರು ನಂಬಿದ್ದರು. ಮಾಂಸ ಸೇವಿಸುವ ಮೇಲ್ಜಾತಿಗಳ ಜನ ‘ದಲಿತರು ಮತ್ತು ಬುಟಕಟ್ಟು ಜನ ಅನಾಗರಿಕರು’ ಎಂಬ ನಂಬಿಕೆಯನ್ನು ಹೃದಯದ ಆಳದಲ್ಲಿ ಬೆಳೆಸಿಕೊಂಡಿದ್ದರು. ಆದರೆ, ಬಡಾಯಿ ಕೊಚ್ಚಿಕೊಳ್ಳುವ ಮೇಲ್ಜಾತಿಗಳ ಜನರಿಗೆ ಮಾಂಸ ಸೇವಿಸದೆ ತಾವೇನು ಕಳೆದುಕೊಳ್ಳುತ್ತಿದ್ದೇವೆ ಎಂಬುದರ ಅರಿವಿಲ್ಲ ಎಂದು ದಲಿತರು ತಮ್ಮಲ್ಲೇ ಹಾಸ್ಯ ಮಾಡಿಕೊಳ್ಳುತ್ತಿದ್ದರೇನೋ.

ಆಗಿನ ಕಾಲದಲ್ಲಿ, ಅಂದರೆ 1960ರ ದಶಕದ ಆರಂಭದ ವರ್ಷಗಳಲ್ಲಿ, ದನದ ಮಾಂಸವು ಕಡಿಮೆ ಬೆಲೆಗೆ ದೊರೆಯುತ್ತಿತ್ತು. 1 ಕೆ.ಜಿ. ದನದ ಮಾಂಸ ₹ 1ಕ್ಕೆ ಸಿಗುತ್ತಿತ್ತು. ಆಗ 1 ಕೆ.ಜಿ. ಕೋಳಿ ಮಾಂಸಕ್ಕೆ ₹ 4 ಅಥವಾ ₹ 5 ನೀಡಬೇಕಿತ್ತು. ಒಂದು ಕೆ.ಜಿ. ಕುರಿ ಮಾಂಸಕ್ಕೆ ₹ 10 ನೀಡಬೇಕಿತ್ತು.

ಸೇನೆಯಲ್ಲಿದ್ದಾಗ ನಾನು ಎಲ್ಲ ಬಗೆಯ ಮಾಂಸ ಸೇವಿಸಿದ್ದೆ. ಕಮಾಂಡೊ ತರಬೇತಿ ವೇಳೆ ಹಾವುಗಳನ್ನು ಬಳಸಿ ಅಡುಗೆ ಮಾಡುವುದನ್ನೂ ಕಲಿತಿದ್ದೆ. ಆದರೆ ಯಾವತ್ತೂ ದನದ ಮಾಂಸ ತಿಂದಿರಲಿಲ್ಲ. ಅಮೆರಿಕಕ್ಕೆ ನೀಡಿದ ಒಂದು ಭೇಟಿ ನನ್ನ ಕಣ್ಣು ತೆರೆಸಿತು. ಕಸಾಯಿಖಾನೆ, ದನದ ಮಾಂಸ ಮಾರುವ ಅಂಗಡಿಗಳನ್ನು ನೋಡುವ ಹಾಗೂ ಮಾಲ್‌ಗಳಲ್ಲಿ ಮಾಂಸ ತುಂಡು ಮಾಡಿಕೊಡುವವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಅಲ್ಲಿನ ರೆಸ್ಟೊರಂಟ್‌ಗಳಲ್ಲಿ ಸಿಗುವ ವೈವಿಧ್ಯಮಯ ದನದ ಮಾಂಸವು ಊಟದಲ್ಲಿ ಅದರ ಪ್ರಾಮುಖ್ಯ ಎಷ್ಟು ಎಂಬುದನ್ನು ತಿಳಿಸಿತು. ಅಮೆರಿಕದಲ್ಲಿ ಕೆಲವು ವಾರ ಸುತ್ತಾಡಿದ ನಂತರ ನಾನು ಮಾಂಸದ ತುಂಡುಗಳನ್ನು, ಬರ್ಗರ್‌ಗಳನ್ನು ಸೇವಿಸಲು ಆರಂಭಿಸಿದೆ.

ಆಹಾರ ಪದ್ಧತಿಯ ವಿಚಾರದಲ್ಲಿ ನಾವೆಷ್ಟು ಮೂರ್ಖರು ಹಾಗೂ ಪೂರ್ವಗ್ರಹಪೀಡಿತರು ಎಂಬುದು ನನಗೆ ಅರಿವಾಯಿತು. ಮಾನವ ಕುಲದ ವಿಕಾಸದ ಸಂದರ್ಭದಲ್ಲಿ ಆಹಾರ ವಹಿಸಿದ ಪಾತ್ರ ಹಾಗೂ ಆಹಾರವು ಮನುಷ್ಯ ವಾಸಿಸುವ ಭೂಪ್ರದೇಶ, ಅಲ್ಲಿನ ವಾತಾವರಣ, ನಂಬಿಕೆಗಳು, ಧಾರ್ಮಿಕ ವ್ಯವಸ್ಥೆ, ಸಂಸ್ಕೃತಿಯನ್ನು ಆಧರಿಸಿ ನಿಂತಿರುತ್ತದೆ ಎಂಬುದು ತಿಳಿಯಿತು.

ದನದ ಮಾಂಸ ತಿನ್ನುವುದು ನನಗೆ ಖುಷಿ ಕೊಡುವ ವಿಚಾರ ಆಗಿರಲಿಲ್ಲ. ಹಾಗಾಗಿ ಅದನ್ನು ತಿನ್ನುವುದನ್ನು ಬಿಟ್ಟುಬಿಟ್ಟೆ. ದನದ ಮಾಂಸ ಸೇವನೆ ತೊರೆದಿದ್ದು ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ಅಲ್ಲ. ಒಂದು ವಿಚಿತ್ರ ಸಂವೇದನೆಯ ಕಾರಣಕ್ಕಾಗಿ.

ದನದ ಮಾಂಸ ಸೇವಿಸಿ ಅಥವಾ ಗೋಮಾಂಸ ನಿಷೇಧಿಸಿ ಎಂದು ನಾನು ಯಾರಿಗಾದರೂ ಶಿಫಾರಸು ಮಾಡಬಲ್ಲೆನಾ? ಈ ಪ್ರಶ್ನೆಗೆ ಮಹಾತ್ಮ ಗಾಂಧಿ ಅತ್ಯುತ್ತಮ ಉತ್ತರ ನೀಡಿದ್ದರು ಅನಿಸುತ್ತದೆ. ‘ಗೋಹತ್ಯೆ ಹಿಂದೂಗಳಲ್ಲಿ ನಿಷಿದ್ಧ ಎಂಬುದನ್ನು ನಾನು ಅನುಮಾನಿಸುವುದಿಲ್ಲ. ಗೋವಿನ ಸೇವೆಗೈಯುವ ಪ್ರಮಾಣವನ್ನು ನಾನು ಹಿಂದೆಯೇ ಮಾಡಿದ್ದೇನೆ. ಆದರೆ ನನ್ನ ಧರ್ಮವು ಎಲ್ಲ ಭಾರತೀಯರ ಧರ್ಮ ಆಗುವುದು ಹೇಗೆ ಸಾಧ್ಯ? ಹಾಗೆ ಮಾಡುವುದು, ಹಿಂದೂ ಅಲ್ಲದ ಭಾರತೀಯರ ಮೇಲೆ ಕಠಿಣ ಕ್ರಮ ಜರುಗಿಸಿದಂತೆ ಆಗುತ್ತದೆ’ ಎಂದು ಅವರು ಹೇಳಿದ್ದರು.

(ಲೇಖಕ ಡೆಕ್ಕನ್ ಏವಿಯೇಷನ್ ಕಂಪೆನಿಯ ಸಂಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT