ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟಾರು ವಾಹನ ಕಾಯಿದೆ ತಿದ್ದುಪಡಿ: ರಸ್ತೆ ಸುರಕ್ಷತೆ ಹೆಚ್ಚಲಿ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವ್ಯಾಪಕ ಸುಧಾರಣಾ ಕ್ರಮಗಳನ್ನು ಒಳಗೊಂಡಿರುವ  ಮೋಟಾರು ವಾಹನ (ತಿದ್ದುಪಡಿ) ಮಸೂದೆ– 2016ಕ್ಕೆ ಲೋಕಸಭೆಯ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಕಾಯಿದೆಯಾಗಿ ಇದು ಜಾರಿಗೆ ಬರುವುದು ಖಚಿತವಾಗಿದೆ. ರಾಜ್ಯಸಭೆಯ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ.  2020ರ ಹೊತ್ತಿಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿಮೆ ಮಾಡುವ ವಿಶ್ವಸಂಸ್ಥೆಯ ಆಶಯಕ್ಕೆ ಈ ಮಸೂದೆ ಪೂರಕವಾಗಿದೆ. ರಸ್ತೆ ಅಪಘಾತಗಳಿಂದಾಗಿ ರಾಷ್ಟ್ರದಲ್ಲಿ ಪ್ರತಿವರ್ಷ 1.46 ಲಕ್ಷ  ಜನರು ಸಾಯುತ್ತಿದ್ದಾರೆ.  ಇದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರಮಾಣ. ಅದರಲ್ಲೂ ಪಾದಚಾರಿಗಳ ಸಾವಿನ ಸಂಖ್ಯೆ

ಶೇ 75ರಷ್ಟಿದೆ.  ರಸ್ತೆ ಸಂಚಾರ ಮತ್ತು ಸುರಕ್ಷತಾ ನಿಯಮ ಉಲ್ಲಂಘಿಸಿ ಅಮಾಯಕರ ಸಾವಿಗೆ ಕಾರಣವಾಗುವವರ ‘ಜೀವ ವಿರೋಧಿ’ ಕೃತ್ಯಗಳಿಗೆ ಈ ಮಸೂದೆ ಗಮನಾರ್ಹವಾಗಿ ತಡೆ ಹಾಕಲಿದೆ.ಇಂತಹ ಆಶಯದ ಕಾಯ್ದೆಯನ್ನು ಸಾರಿಗೆ ಮತ್ತು ಸಂಚಾರ ವಲಯದಲ್ಲಿ ಬಹಳ ವರ್ಷಗಳಿಂದ ಎದುರು ನೋಡಲಾಗುತ್ತಿತ್ತು.

‘ಮೋಟಾರು ವಾಹನ ಕಾಯ್ದೆ- 1988’ಕ್ಕೆ ತಿದ್ದುಪಡಿ ತರಲು ಈ  30 ವರ್ಷಗಳಲ್ಲಿ  ಇದೀಗ ಕೊನೆಗೂ ಮುಹೂರ್ತ ಕೂಡಿ ಬಂದಿರುವುದು ಒಳ್ಳೆಯ ಬೆಳವಣಿಗೆ. ದೇಶದ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಿದಂತೆ ಸುರಕ್ಷತಾ ಸಮಸ್ಯೆಯೂ ಬಿಗಡಾಯಿಸುತ್ತಲೇ ಹೋಗಿದೆ. ಆರ್ಥಿಕ ಬೆಳವಣಿಗೆ ಮತ್ತು ದಾಖಲೆ ಸಂಖ್ಯೆಯಲ್ಲಿ ರಸ್ತೆಗೆ ಇಳಿಯುತ್ತಿರುವ ವಾಹನಗಳ ದಟ್ಟಣೆಗೆ ಪೂರಕವಾಗಿ ದೇಶದಾದ್ಯಂತ ಸಾರಿಗೆ ಇಲಾಖೆಯನ್ನು ಸನ್ನದ್ಧಗೊಳಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ  (ಆರ್‌ಟಿಒ) ಭ್ರಷ್ಟಾಚಾರ  ಆಳವಾಗಿ ಬೇರುಬಿಟ್ಟಿದೆ. ಇದು ಕೂಡ ರಸ್ತೆ ಅವಘಡ ಹೆಚ್ಚಲು ಕಾರಣವಾಗಿದೆ. ಥರ್ಡ್‌ಪಾರ್ಟಿ ವಿಮೆ, ಅಪಘಾತ ಸಂದರ್ಭಗಳಲ್ಲಿ ನೆರವಿಗೆ ಧಾವಿಸುವ ಆಪತ್ಬಾಂಧವರ ರಕ್ಷಣೆ, ರಸ್ತೆ ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ಮತ್ತು ದುಬಾರಿ ದಂಡ – ಈ ಮಸೂದೆಯ ವೈಶಿಷ್ಟ್ಯ. ರಸ್ತೆ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವುದರಿಂದ ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಮನಸ್ಸು ಮಾಡಲಿದ್ದಾರೆ ಎಂದು ಆಶಿಸಬಹುದು. ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರನ್ನೇ ಪ್ರಮುಖವಾಗಿ ಗುರಿಯಾಗಿರಿಸಿಕೊಂಡು ಈ ಮಸೂದೆ ರೂಪಿಸಿರುವುದು ಸರಿಯಾದ ನಿರ್ಧಾರವಾಗಿದೆ.  ಕುಡಿದು ವಾಹನ ಚಾಲನೆ, ನಿರ್ಲಕ್ಷದಿಂದ ವಾಹನ ಚಾಲನೆ, ಅಗತ್ಯಕ್ಕಿಂತ ಹೆಚ್ಚು ಸರಕು ಹೇರುವುದು, ಸೀಟ್‌ಬೆಲ್ಟ್‌ ಮತ್ತು ಹೆಲ್ಮೆಟ್‌ ಧರಿಸದೆ ಸುರಕ್ಷತಾ ಕ್ರಮ ಉಲ್ಲಂಘಿಸುವಂತಹ ತಪ್ಪುಗಳಿಗೆ  ಗರಿಷ್ಠ ಪ್ರಮಾಣದ ದಂಡ ವಿಧಿಸುವುದು ಸ್ವಾಗತಾರ್ಹ.

ಈ ಮಸೂದೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳನ್ನು ರಾಜ್ಯ ಸರ್ಕಾರಗಳು  ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಒಂದಕ್ಕಿಂತ ಹೆಚ್ಚು ಚಾಲನಾ ಲೈಸನ್ಸ್‌ ಮತ್ತು ಕದ್ದ ವಾಹನಗಳ ನೋಂದಣಿ ತಡೆಗಟ್ಟಲು ಆಧಾರ್‌ ನೆರವು ಪಡೆಯುವುದು ಉದ್ದೇಶಿತ ಫಲ ನೀಡಲಿದೆ. ಕಳಪೆ ರಸ್ತೆ ನಿರ್ಮಿಸುವ ಗುತ್ತಿಗೆದಾರರಿಗೂ ದಂಡ ವಿಧಿಸುವುದಲ್ಲದೆ  ಥರ್ಡ್‌ ಪಾರ್ಟಿ ವಿಮೆ ಪರಿಹಾರ ನೀಡುವಲ್ಲಿ ಚಾಲಕನಿಗೂ ಹೊಣೆಗಾರಿಕೆ ನಿಗದಿಪಡಿಸಲಾಗಿದೆ. ಜೊತೆಗೆ ಕಾಲಮಿತಿಯೊಳಗೆ ಪರಿಹಾರ ವಿತರಣೆ ಮಾಡುವುದೂ ಈ ಮಸೂದೆಯ ಇತರ ವೈಶಿಷ್ಟ್ಯ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಆಡಳಿತದ ಧ್ಯೇಯವಾಕ್ಯವಾಗಿರುವ ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ನೀತಿಯನ್ವಯ, ಆರ್‌ಟಿಒ ಕಚೇರಿಗಳಲ್ಲಿನ ವಿಳಂಬ, ಕಿರುಕುಳ ಮತ್ತು ಭ್ರಷ್ಟತೆಯನ್ನು ಗಮನಾರ್ಹವಾಗಿ ತಗ್ಗಿಸಲು ಈ ಕ್ರಮಗಳು ನೆರವಾಗಲಿವೆ ಎಂಬುದು ಭರವಸೆದಾಯಕ.

ವಾಹನಗಳು ಮತ್ತು ಚಾಲನಾ ಅನುಮತಿ ಪತ್ರಗಳ ರಾಷ್ಟ್ರೀಯ ದತ್ತಾಂಶವು  ರಸ್ತೆ ಮತ್ತು ವಾಹನ ಸುರಕ್ಷತೆ ಹೆಚ್ಚಿಸಲಿದೆ.   ಮಕ್ಕಳು ವಾಹನ ಚಲಾಯಿಸಿ ಅಪಘಾತ ಮಾಡಿದ ಸಂದರ್ಭಗಳಲ್ಲಿ ಪಾಲಕರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ  ಮತ್ತು ಅಪಘಾತ ಸಂತ್ರಸ್ತರ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತವನ್ನು 10 ಪಟ್ಟು ಹೆಚ್ಚಿಸುವ  ಕ್ರಮಗಳು ಸವಾರರ ವೇಗಕ್ಕೆ ಬ್ರೇಕ್  ಹಾಕಲಿವೆ. ಬರಲಿರುವ ಈ ಕಾಯಿದೆಯ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿರುವ ಸಂಚಾರ ನಿಯಂತ್ರಣ ಪೊಲೀಸರು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸುವುದೂ ಅಗತ್ಯ. ಆಗಮಾತ್ರ ರಸ್ತೆ ಅಪಘಾತಗಳ ಚಿತ್ರಣ ಮತ್ತು ಸಂಖ್ಯೆ ಬದಲಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT