ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪಾದನೆಗಳ ಪಟ್ಟಿ ಪ್ರಶ್ನಿಸಿ ‘ಸುಪ್ರೀಂ’ಗೆ ಮೇಲ್ಮನವಿ

Last Updated 16 ಏಪ್ರಿಲ್ 2017, 20:03 IST
ಅಕ್ಷರ ಗಾತ್ರ

ನವದೆಹಲಿ: ಆದಾಯದ ಮೂಲ ತಿಳಿಸದೆಯೇ ಸ್ಥಿರಾಸ್ತಿ ಖರೀದಿಸಿದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್‌ನ ಶಿಸ್ತು ಪ್ರಾಧಿಕಾರವು ತಮ್ಮ ವಿರುದ್ಧ ‘ಆಪಾದನೆಗಳ ಪಟ್ಟಿ’ ಹೊರಡಿಸಿರುವುದನ್ನು ಪ್ರಶ್ನಿಸಿ ದಕ್ಷಿಣ ಕನ್ನಡದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ವಿ. ಪ್ರಕಾಶ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳುವುದನ್ನು ರದ್ದುಪಡಿಸಲು ರಾಜ್ಯ ಹೈಕೋರ್ಟ್‌ 2016ರ ನವೆಂಬರ್‌ನಲ್ಲಿ ನಿರಾಕರಿಸಿತ್ತು. ಪ್ರಕಾಶ್ ಅವರು ಇದನ್ನು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಈ ಪ್ರಕರಣವು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಮತ್ತು ಎಸ್. ಅಬ್ದುಲ್ ನಜೀರ್ ಅವರಿದ್ದ ಪೀಠದೆದುರು ಏಪ್ರಿಲ್‌ 13ರಂದು ವಿಚಾರಣೆಗೆ ಬಂದಿತ್ತು. ಆದರೆ ನ್ಯಾಯಮೂರ್ತಿ ನಜೀರ್ ಅವರು ವಿಚಾರಣೆಯಿಂದ ಹಿಂದೆ ಸರಿದರು. ಈಗ ಈ ಅರ್ಜಿಯು ಇನ್ನೊಂದು ಪೀಠದೆದುರು ಏಪ್ರಿಲ್‌ 21ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಆಪಾದನೆಗಳ ಪಟ್ಟಿ (articles of charges) ಹೊರಡಿಸಿರುವುದು 2014ರ ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಚಿಸಿದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಪ್ರಕಾಶ್ ವಾದಿಸಿದ್ದಾರೆ.

ದೂರಿನ ಜೊತೆ ದೃಢೀಕೃತ ಹೇಳಿಕೆ ಇಲ್ಲದಿದ್ದರೆ ಅಧೀನ ನ್ಯಾಯಾಲಯಗಳ (ಜಿಲ್ಲಾ ಹಾಗೂ ಅದಕ್ಕಿಂತ ಕೆಳ ಹಂತದ ನ್ಯಾಯಾಲಯಗಳು) ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ಪರಿಗಣಿಸಬಾರದು ಎಂದು ನಿಯಮ ಹೇಳುತ್ತದೆ.

ಅರ್ಜಿದಾರ ಪ್ರಕಾಶ್ ಅವರು ಅನುಮತಿ ಇಲ್ಲದೆ ಸ್ಥಿರಾಸ್ತಿ ಖರೀದಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಹಣದ ಮೂಲ ಯಾವುದು ಎಂಬುದನ್ನು ಅವರು ತಿಳಿಸಿಲ್ಲ. ಅವರು ಸರ್ಕಾರಿ ವ್ಯವಸ್ಥೆ (ಲೋಕಾಯುಕ್ತ ಸಂಸ್ಥೆಯ ಹೊಸಪೇಟೆ ಡಿವೈಎಸ್‌ಪಿ ಮತ್ತು ಕಾನ್‌ಸ್ಟೆಬಲ್‌ಗಳನ್ನು) ಬಳಸಿ ಕಲ್ಲಿನ 300 ಕಂಬಗಳನ್ನು ಸಾಗಿಸಿದ್ದಾರೆ. ಆ ಮೂಲಕ ಅಕ್ರಮ ಗಣಿಗಾರಿಕೆ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಹೈಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT