ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕಿ.ಮೀ ಕಾಮಗಾರಿ ವೆಚ್ಚ ₹144 ಕೋಟಿಯಷ್ಟು ಹೆಚ್ಚಳ

Last Updated 16 ಏಪ್ರಿಲ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು:  ನಮ್ಮ ಮೆಟ್ರೊ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದೇ ಇರುವುದರಿಂದ  ಕಾಮಗಾರಿ ವೆಚ್ಚದಲ್ಲೂ ಭಾರಿ ಹೆಚ್ಚಳವಾಗಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌), ಪ್ರತಿ ಕಿಲೋ ಮೀಟರ್‌ ಕಾಮಗಾರಿಗೆ,   ಆರಂಭದಲ್ಲಿ ನಿಗದಿಪಡಿಸಿದ್ದಕ್ಕಿಂತ ₹ 144 ಕೋಟಿಯನ್ನು  ಈಗಾಗಲೇ ಹೆಚ್ಚುವರಿಯಾಗಿ ಖರ್ಚು ಮಾಡಿದೆ.

2006ರಲ್ಲಿ ಮಂಜೂರಾತಿ ಪಡೆದ ವಿಸ್ತೃತ ಯೋಜನಾ ವರದಿಯ ಪ್ರಕಾರ ಮೊದಲ ಹಂತದ ಕಾಮಗಾರಿಗೆ ₹ 6,395 ಕೋಟಿ  ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆಗ ಮಾರ್ಗಗಳ ಒಟ್ಟು ಉದ್ದ 33 ಕಿ.ಮೀ. ಮಾತ್ರ ಇತ್ತು. ಆ ಪ್ರಕಾರ ಪ್ರತಿ ಒಂದು ಕಿ.ಮೀ ಉದ್ದದ ಮಾರ್ಗಕ್ಕೆ ಸರಾಸರಿ ₹ 194 ಕೋಟಿ ವೆಚ್ಚವಾಗುತ್ತಿತ್ತು. ನಂತರ ಮೊದಲ ಹಂತದ ಮಾರ್ಗದ ಉದ್ದವನ್ನು 42.2 ಕಿ.ಮೀ.ಗೆ ಪರಿಷ್ಕರಿಸಲಾಯಿತು.

ಇದುವರೆಗೆ ನಿಗಮವು ಮೊದಲ ಹಂತದ ಯೋಜನೆಗೆ ₹ 14,291 ಕೋಟಿ ಖರ್ಚು ಮಾಡಿದೆ. ಈ ಪ್ರಕಾರ ಪ್ರತಿ ಕಿಲೊ ಮೀಟರ್‌ಗೆ ₹ 338 ಕೋಟಿ ವೆಚ್ಚ ಮಾಡಿದಂತಾಗಿದೆ.

ಬಿಎಂಆರ್‌ಸಿಎಲ್‌ ಇತ್ತೀಚೆಗೆ  ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ ಮಾಹಿತಿ ಪ್ರಕಾರ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವಾಗ ಒಟ್ಟು ₹ 14,405 ಕೋಟಿ ವೆಚ್ಚವಾಗಲಿದೆ. ಅದರ ಪ್ರಕಾರ ಪ್ರತಿ ಕಿ.ಮೀ. ಮಾರ್ಗಕ್ಕೆ ತಗಲುವ ವೆಚ್ಚ ₹ 341 ಕೋಟಿ.

‘ಯೋಜನೆಯ ಎರಡನೇ ಹಂತದ ಕಾಮಗಾರಿಯನ್ನಾದರೂ ಸಕಾಲದಲ್ಲಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನ್ನು ತಡೆಯಬೇಕು’ ಎಂದು ಪ್ರಜಾ ರಾಗ್ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸಂಜೀವ ದ್ಯಾಮಣ್ಣವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಗಮಕ್ಕೆ ತಾಂತ್ರಿಕ ಪರಿಣಿತರನ್ನೇ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು. ಇದರಿಂದ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಸುಲಭವಾಗುತ್ತದೆ’ ಎಂದು  ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT