ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಲ್ಲಿ ಆರ್‌ಸಿಬಿಗೆ ಮತ್ತೊಂದು ಸೋಲು

Last Updated 16 ಏಪ್ರಿಲ್ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗ ಅನಿಸಿರುವ ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಮತ್ತೊಮ್ಮೆ ರಟ್ಟೆ ಅರಳಿಸಿ ಆಡಲು ವಿಫಲರಾದರು. ಹೀಗಾಗಿ ತವರಿನ ತಂಡದ ಗೆಲುವು ಕಣ್ತುಂಬಿಕೊಳ್ಳಲು ಭಾನುವಾರ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಕಾಡಿತು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡ 27ರನ್‌ಗಳಿಂದ ಆತಿಥೇಯರನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ್ದ ಸ್ಟೀವನ್‌ ಸ್ಮಿತ್‌ ಸಾರಥ್ಯದ ಪುಣೆ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 161ರನ್‌ ಗಳಿಸಿತ್ತು. ಈ ಮೊತ್ತ ವಿರಾಟ್‌ ಪಡೆಗೆ ಬೆಟ್ಟದಂತೆ ಕಂಡಿತು.ಆತಿಥೇಯ ತಂಡ 9 ವಿಕೆಟ್‌ಗೆ 134ರನ್‌ ಗಳಿಸಿ ಹೋರಾಟ ಮುಗಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಮೂರು ಪಂದ್ಯ ಸೋತ ಆರ್‌ಸಿಬಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.

ನಡೆಯದ ಮನದೀಪ್‌ ಆಟ: ಗುರಿ ಬೆನ್ನಟ್ಟಿದ ಬೆಂಗಳೂರಿನ ತಂಡಕ್ಕೆ ಆರಂಭಿಕ ಆಘಾತ ಕಾಡಿತು. ನಾಯಕ ವಿರಾಟ್‌ ಕೊಹ್ಲಿ ಜೊತೆ ಇನಿಂಗ್ಸ್‌ ಆರಂಭಿಸಿದ ಮನದೀಪ್‌ ಸಿಂಗ್‌ ಸೊನ್ನೆ ಸುತ್ತಿದರು. ಅವರು ಎರಡನೇ ಓವರ್‌ನಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಗರ್ಜಿಸಿದ್ದ ನಾಯಕ ಕೊಹ್ಲಿ ಅವರನ್ನು ಬೆನ್‌ ಸ್ಟೋಕ್ಸ್‌ ಬೇಗನೆ ಕಟ್ಟಿಹಾಕಿದರು. 19 ಎಸೆತಗಳಲ್ಲಿ 3ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 28ರನ್‌ ಗಳಿಸಿದ್ದ ಕೊಹ್ಲಿ, ಅಜಿಂಕ್ಯ ರಹಾನೆಗೆ ಕ್ಯಾಚ್‌ ನೀಡಿದರು. ಆಗ ತಂಡದ ಖಾತೆಯಲ್ಲಿ 41ರನ್‌ ಮಾತ್ರ ಇದ್ದವು. ಹೀಗಾಗಿ ದಕ್ಷಿಣ ಆಫ್ರಿಕಾದ ‘ಸೂಪರ್‌ ಮ್ಯಾನ್‌’ ಡಿವಿಲಿಯರ್ಸ್‌ (29; 30ಎ, 1ಬೌಂ, 2ಸಿ) ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ತಾವೆದುರಿಸಿದ ಮೊದಲ ಎಸೆತವನ್ನೇ ಬೌಂಡರಿ ಗೆರೆ ದಾಟಿಸಿ ಭರವಸೆ ಮೂಡಿಸಿದ್ದ ‘ಎಬಿಡಿ’, ಜಯದೇವ್‌ ಉನದ್ಕತ್‌ ಹಾಕಿದ ಮೂರನೇ ಓವರ್‌ನ ಕೊನೆಯ ಎಸೆತವನ್ನು ಮಿಡ್‌ವಿಕೆಟ್‌ನತ್ತ ಸಿಕ್ಸರ್‌ಗಟ್ಟಿ ಅಂಗಳದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು. ಈ ಸಂಭ್ರಮ ಬೆಂಗಳೂರಿನ ತಂಡದಲ್ಲಿ ಹೆಚ್ಚು ಕಾಲ ಉಳಿಯಲು ಇಮ್ರಾನ್‌ ತಾಹಿರ್‌ ಅವಕಾಶ ನೀಡಲಿಲ್ಲ. ಇಮ್ರಾನ್‌ ಹಾಕಿದ 11ನೇ ಓವರ್‌ನ ಎರಡನೇ ಎಸೆತದಲ್ಲಿ ಡಿವಿಲಿಯರ್ಸ್‌ ಅವರನ್ನು ದೋನಿ ಸ್ಟಂಪ್‌ ಔಟ್‌ ಮಾಡಿದಾಗ ಆರ್‌ಸಿಬಿ ಪಾಳಯದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.

ಮಧ್ಯಮ ಕ್ರಮಾಂಕದ ವೈಫಲ್ಯ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶೇನ್‌ ವಾಟ್ಸನ್‌ (14; 18ಎ, 1ಬೌಂ) ಮತ್ತು  ಕೇದಾರ್‌ ಜಾಧವ್‌ (18; 22ಎ) ಒತ್ತಡ ಮೀರಿ ನಿಂತು ಆಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. 16ನೇ ಓವರ್‌ನಲ್ಲಿ ವಾಟ್ಸನ್‌, ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದಾಗ ಬೆಂಗಳೂರಿನ ತಂಡದ ಗೆಲುವಿಗೆ 24 ಎಸೆತಗಳಲ್ಲಿ 60ರನ್‌ಗಳು ಬೇಕಿದ್ದವು. ಡೇನಿಯಲ್‌ ಕ್ರಿಸ್ಟಿಯನ್‌ ಹಾಕಿದ 17ನೇ ಓವರ್‌ನಲ್ಲಿ ಸ್ಟುವರ್ಟ್‌ ಬಿನ್ನಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಹಿತ 13ರನ್‌ ಗಳಿಸಿ ಜಯದ ಆಸೆ ಚಿಗುರೊಡೆಯುವಂತೆ ಮಾಡಿದ್ದರು. 18ನೇ ಓವರ್‌ನಲ್ಲಿ ಶಾರ್ದೂಲ್‌ ಠಾಕೂರ್‌, ಪವನ್‌ ನೇಗಿ (11; 7ಎ, 1ಸಿ) ಮತ್ತು ಬಿನ್ನಿ (18; 8ಎ, 2ಬೌಂ, 1ಸಿ) ಅವರನ್ನು ಔಟ್‌ ಮಾಡಿ ಆತಿಥೇಯರ ಗೆಲುವಿನ ಆಸೆ ಚಿವುಟಿ ಹಾಕಿದರು.

ಅರ್ಧಶತಕದ ಆರಂಭ: ಬ್ಯಾಟಿಂಗ್ ಆರಂಭಿಸಿದ ಸೂಪರ್‌ಜೈಂಟ್‌ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ರಾಹುಲ್‌ ತ್ರಿಪಾಠಿ (31; 23ಎ, 3ಬೌಂ, 1ಸಿ) ಅರ್ಧಶತಕದ ಆರಂಭ ನೀಡಿದರು. ಆರ್‌ಸಿಬಿ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 63 ರನ್‌ ಗಳಿಸಿ ಮಿಂಚಿತು.

ಬದ್ರಿ ‘ಮ್ಯಾಜಿಕ್‌’: ಎಂಟನೇ ಓವರ್‌ನಲ್ಲಿ ಕೊಹ್ಲಿ, ಸ್ಪಿನ್ನರ್‌ ಸ್ಯಾಮುಯೆಲ್‌ ಬದ್ರಿಗೆ ಚೆಂಡು ನೀಡಿದ್ದು ಫಲ ನೀಡಿತು. ಮುಂಬೈ ವಿರುದ್ಧ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದ ಬದ್ರಿ ಮತ್ತೊಮ್ಮೆ ಕೈಚಳಕ ತೋರಿದರು. ನಾಲ್ಕನೇ ಎಸೆತದಲ್ಲಿ ಬದ್ರಿ ಹಾಕಿದ ಗೂಗ್ಲಿಗೆ ರಹಾನೆ  ಬೌಲ್ಡ್‌ ಆದರು. ಮರು ಓವರ್‌ನಲ್ಲಿ  ಸ್ಪಿನ್ನರ್ ಪವನ್‌ ನೇಗಿ, ರಾಹುಲ್‌ ತ್ರಿಪಾಠಿ ವಿಕೆಟ್‌ ಉರುಳಿಸಿ ತವರಿನ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು. ತ್ರಿಪಾಠಿ ಬಾರಿಸಿದ ಚೆಂಡನ್ನು ಶಾರ್ಟ್‌ ಕವರ್‌ನಲ್ಲಿದ್ದ ವಿರಾಟ್‌ ಎಡಕ್ಕೆ ಜಿಗಿದು ಹಿಡಿತಕ್ಕೆ ಪಡೆದ ರೀತಿ ಸೊಗಸಾಗಿತ್ತು.

ದೋನಿ –ಸ್ಮಿತ್‌ ಜುಗಲ್‌ಬಂದಿ: ಈ ಹಂತದಲ್ಲಿ ಒಂದಾದ ಪುಣೆ ನಾಯಕ ಸ್ಮಿತ್‌ (27; 24ಎ, 3ಬೌಂ) ಮತ್ತು ಮಹೇಂದ್ರ ಸಿಂಗ್‌ ದೋನಿ ಉತ್ತಮ ಜೊತೆಯಾಟ ಆಡಿದರು. ತಾವೆದುರಿಸಿದ ಆರನೇ ಎಸೆತವನ್ನು ಬೌಂಡರಿಗಟ್ಟಿ ಖಾತೆ ತೆರೆದ ಮಹಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಶೇನ್‌ ವಾಟ್ಸನ್‌ ಇದಕ್ಕೆ ಅವಕಾಶ ನೀಡಲಿಲ್ಲ. 16ನೇ ಓವರ್‌ನಲ್ಲಿ ದೋನಿ ಬಾರಿಸಿದ ಚೆಂಡು ಬ್ಯಾಟಿನ ಕೆಳ ಅಂಚಿಗೆ ತಾಗಿ ವಿಕೆಟ್‌ ಎಗರಿಸಿತು. 25 ಎಸೆತಗಳಲ್ಲಿ 3ಬೌಂಡರಿ ಮತ್ತು ಸಿಕ್ಸರ್‌ ಸಹಿತ 28ರನ್‌ ಕಲೆ ಹಾಕಿದ್ದ ಅವರ ಇನಿಂಗ್ಸ್‌ಗೆ ತೆರೆಬಿತ್ತು. 

9 ಎಸೆತ, 3ರನ್‌ 5 ವಿಕೆಟ್‌!
ದೋನಿ ಔಟಾದ ಬಳಿಕ ಸೂಪರ್‌ಜೈಂಟ್‌ ಕುಸಿತದ ಹಾದಿ ಹಿಡಿಯಿತು. ಈ ತಂಡ 3ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. 17ನೇ ಓವರ್‌ನ ಮೊದಲ ಎಸೆತದಲ್ಲಿ ಸ್ಮಿತ್‌ ಅವರನ್ನು ಬೌಲ್ಡ್‌ ಮಾಡಿದ ವೇಗಿ ಅರವಿಂದ್‌, ಐದನೇ ಎಸೆತದಲ್ಲಿ ಡೇನಿಯಲ್‌ ಕ್ರಿಸ್ಟಿಯನ್‌(1)ಗೂ ಪೆವಿಲಿಯನ್‌ ಹಾದಿ ತೋರಿಸಿದರು.

ಮರು ಓವರ್‌ನಲ್ಲಿ (18) ಆ್ಯಡಮ್‌ ಮಿಲ್ನೆ ಮೋಡಿ ಮಾಡಿದರು, ಅವರು ಮೊದಲ ಎರಡು ಎಸೆತಗಳಲ್ಲಿ ಬೆನ್‌ ಸ್ಟೋಕ್ಸ್‌ (2) ಮತ್ತು ಶಾರ್ದೂಲ್‌ ಠಾಕೂರ್‌ (0) ಅವರನ್ನು ಔಟ್‌ ಮಾಡಿ ಮಿಂಚಿದರು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಆರ್‌ಸಿಬಿ ಧ್ವಜಗಳು ರಾರಾಜಿಸಿದವು.
ಕೊನೆಯಲ್ಲಿ ಮನೋಜ್‌ ತಿವಾರಿ (27; 11ಎ, 3ಬೌಂ, 2 ಸಿ) ಅಬ್ಬರಿಸಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT