ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಸಮಗ್ರತೆ ತರುವುದೊಂದೇ ದಾರಿ

ಸಮಗ್ರ ವೈದ್ಯಕೀಯ ಪದ್ಧತಿ ಸಮಸ್ಯೆ ಪರಿಹಾರಕ್ಕೆ ಪ್ರೊ.ಒ.ವಿ.ನಂದಿಮಠ್‌ ಸಲಹೆ
Last Updated 17 ಏಪ್ರಿಲ್ 2017, 3:31 IST
ಅಕ್ಷರ ಗಾತ್ರ
ದಾವಣಗೆರೆ:  ‘ವೈದ್ಯಕೀಯ ಶಿಕ್ಷಣ ಪಠ್ಯದಲ್ಲಿ ಸಮಗ್ರ ವೈದ್ಯಕೀಯ ಪದ್ಧತಿಯನ್ನು ಸೇರಿಸುವುದೇ ಕಾನೂನು ತೊಡಕು ನಿವಾರಿಸಲು ಸೂಕ್ತ ಮಾರ್ಗ’ ಎಂದು ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಒ.ವಿ. ನಂದಿಮಠ್‌ ಅಭಿಪ್ರಾಯಪಟ್ಟರು. 
 
ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ (ಎನ್‌ಐಎಂಎ) ಏರ್ಪಡಿಸಿದ್ದ ಎನ್‌ಐಎಂಎ 69ನೇ ವಾರ್ಷಿಕೋತ್ಸವ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 
 
‘ಕಾನೂನು ಪ್ರಕಾರ ಆಯುಶ್‌ ವೈದ್ಯರು ಅಲೋಪಥಿ ಔಷಧಗಳನ್ನು ಶಿಫಾರಸು ಮಾಡುವಂತಿಲ್ಲ ಎಂಬ ಗ್ರಹಿಕೆಯಿದೆ. ಆದರೆ, ನ್ಯಾಯಾಲಯಗಳಲ್ಲಿ ನೀಡಿರುವ ತೀರ್ಪುಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಹತ್ತು ವರ್ಷಗಳಿಂದ ಸಮಗ್ರ ಔಷಧಗಳನ್ನು ಶಿಫಾರಸು ಮಾಡುವ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಹೀಗಾಗಿ ನ್ಯಾಯಾಲಯದ ಹೊರಗೆ ಸಮಸ್ಯೆ ಪರಿಹರಿಸಿಕೊಳ್ಳುವತ್ತ ಆಲೋಚಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.
 
‘ಅಲೋಪಥಿಗೆ ಭಾರತೀಯ ವೈದ್ಯಕೀಯ ಮಂಡಳಿ ಇರುವಂತೆ, ಆಯುರ್ವೇದ, ಹೋಮಿಯೋಪಥಿ, ಯುನಾನಿ ಪದ್ಧತಿಗಳಿಗೂ ಸ್ವಾಯತ್ತ ಸಂಸ್ಥೆಗಳಿವೆ. ವೈದ್ಯಕೀಯ ಶಿಕ್ಷಣ ಹೇಗಿರಬೇಕು. ಯಾರು? ಏನು? ಹೇಗೆ? ಓದಬೇಕು ಎಂಬುದನ್ನು ನಿರ್ಧರಿಸಲು ಈ ಸಂಸ್ಥೆಗಳಿಗೇ ಅಧಿಕಾರ ನೀಡಲಾಗಿದೆ. ಈ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ರಚಿಸಿ, ಪಠ್ಯಕ್ರಮ ವಿಸ್ತರಿಸಲು ಪ್ರಯತ್ನಿಸಬಹುದು’ ಎಂದು ತಿಳಿಸಿದರು. 
 
ಅಮೆರಿಕದಲ್ಲಿ ಸಮಗ್ರ ವೈದ್ಯಪದ್ಧತಿ: ಅಮೆರಿಕದಲ್ಲಿ ಸಮಗ್ರ ವೈದ್ಯಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಅಲ್ಲಿನ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ, ಚೀನಾ, ಟಿಬೆಟ್‌ ಮತ್ತು ವಿಯೆಟ್ನಾಂ ವೈದ್ಯಕೀಯ ಪದ್ಧತಿಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.
 
‘ಕಾನೂನಿಗಿಂತ ರೋಗಿ ಗುಣಮುಖನಾಗುವುದು ಮುಖ್ಯ’ ಎಂಬ ಭಾವನೆ ಅಮೆರಿಕದ ವೈದ್ಯರಲ್ಲಿದೆ. ಇಂತಹ ವೈದ್ಯರಿಗೆ ಅಲ್ಲಿ ಯಾರೂ ತೊಂದರೆ ನೀಡಿಲ್ಲ. ಹೀಗಾಗಿ ಕಾನೂನು ತೊಡಕುಗಳ ಬಗ್ಗೆ ಅಲ್ಲಿನ ವೈದ್ಯರು ಗಮನನೀಡುವುದೇ ಇಲ್ಲ ಎಂದು ಹೇಳಿದರು. 
 
ಈಗಿರುವ ಗೊಂದಲಗಳಿಂದ ಅಲೋಪಥಿ ವೈದ್ಯರೂ ಆಯುರ್ವೇದ ಔಷಧಗಳನ್ನು ಶಿಫಾರಸು ಮಾಡುವುದು ಅಪರಾಧವಾಗುತ್ತದೆ. ಮಹಾತ್ಮ ಗಾಂಧೀಜಿ ಅವರೂ ‘ಒಂದೇ ವೈದ್ಯಪದ್ಧತಿಯಿಂದ ಆರೋಗ್ಯ ಸುಧಾರಣೆ ಕಷ್ಟ’ ಎಂದಿದ್ದರು. ಹೀಗಾಗಿ ಸಮಗ್ರ ವೈದ್ಯಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
 
ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಯು.ಸಿದ್ದೇಶ್‌ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು. ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಆರ್‌.ಜಿ. ಬೂಸನೂರು ಮಠ ಅಧ್ಯಕ್ಷತೆ ವಹಿಸಿ ದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬಾ, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು ಅಧ್ಯಕ್ಷ ಡಾ.ಎಂ.ಎನ್‌. ಹಿರೇಮಠ, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಅಧ್ಯಕ್ಷ ಶಶಿ ಕುಮಾರ್, ಡಾ.ಶಿವಾನಂದ ಹಿತ್ತಲ ಮನಿ, ಡಾ.ಎಂ.ಎನ್.ಜ್ಞಾನೇಶ್ವರ್, ಡಾ.ಬಿ.ಎಂ. ಯೋಗೇಂದ್ರ ಕುಮಾರ್, ಎನ್‌ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಉಮೇಶ್‌ ಹಿರೇಮಠ್, ಉಪಾಧ್ಯಕ್ಷೆ ಡಾ.ಎಸ್‌.ಎಸ್‌.ಸುಚಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT