ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ

ಬಿಸಿಲಿನ ಧಗೆಗೆ ಬಸ್‌ ಪ್ರಯಾಣಿಕರು ತತ್ತರ l ಕಾದ ಕಾವಲಿಯಂತಾದ ಭೂಮಿ l ನೆರಳಿಗಾಗಿ ಹುಡುಕಾಟ
ಅಕ್ಷರ ಗಾತ್ರ
ದಾವಣಗೆರೆ: ‘ನಗರದಲ್ಲಿ ತಾಪಮಾನ 40ಡಿಗ್ರಿ ಸೆಲ್ಸಿಯಸ್‌ ಆಸುಪಾಸುನಲ್ಲಿದೆ. ಬಿಸಿಲಿನ ಧಗೆಗೆ ಅಕ್ಷರಶಃ ತತ್ತರಿಸಿದ್ದೇವೆ. ಬಸ್‌ ತಂಗುದಾಣವಿಲ್ಲ. ನೆರಳಲ್ಲಿ ನಿಲ್ಲೋಣ ಎಂದರೆ ಮರಗಳಿಲ್ಲ. ಸಿಟಿ ಬಸ್‌ ಬರುವವರಿಗೂ ಬಿಸಿಲಿನಲ್ಲಿಯೇ ನಿಲ್ಲಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನಾದರೂ ಪಾಲಿಕೆಯವರು ಮಾಡಬೇಕಿತ್ತು..... ’
 
–ಇದು ಪಾಲಿಕೆ ಎದುರು ನಗರ ಸಾರಿಗೆ ಬಸ್‌ಗಾಗಿ ಬಿಸಿಲಿನಲ್ಲಿ ಕಾಯುತ್ತ ನಿಂತಿದ್ದ ಬಿ.ಲೋಹಿತ್‌ ಅವರ ಅಳಲು. ನಿತ್ಯ ಸಿಟಿ ಬಸ್‌ಗಳಿಗಾಗಿ ಬಿಸಿಲಿನಲ್ಲಿ ನಿಂತು ಕಾಯುವ  ನೂರಾರು ಜನರ ಸಮಸ್ಯೆ ಇದಾಗಿದೆ.
 
ಐದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರವು ವೇಗವಾಗಿ ಬೆಳೆಯುತ್ತಿದೆ. ಹತ್ತಾರು ನೂತನ ಬಡಾವಣೆಗಳು ನಿರ್ಮಾಣವಾಗಿವೆ. ನಗರದಲ್ಲಿ ಸಂಚರಿಸಲು ಅಲ್ಪ ಮಟ್ಟಿಗಾದರೂ ನಗರ ಸಾರಿಗೆ ಬಸ್‌ಗಳ ಸೌಲಭ್ಯವಿದೆ. ಆದರೆ, ಸಿಟಿ ಬಸ್‌ಗಳು ಸಂಚರಿಸುವ ಬಹುತೇಕ ಮಾರ್ಗಗಳಲ್ಲಿ ಬಸ್‌ ಶೆಲ್ಟರ್‌ಗಳಿಲ್ಲ. ಸಿಟಿ ಬಸ್‌ಗಳಿಗೆ ಕಾಯುವ ಪ್ರಯಾಣಿಕರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅಂಗಡಿ, ಮಳಿಗೆಗಳನ್ನು ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
 
‘ರೈಲ್ವೆ ನಿಲ್ದಾಣದ ಬಳಿ ನಿತ್ಯ ನಾಲ್ಕು ಸಾವಿರಕ್ಕೂ ಅಧಿಕ ಜನರು ಸಿಟಿ ಬಸ್‌ಗಳಿಗಾಗಿ ಕಾಯುತ್ತಾರೆ. ಆದರೆ, ಇಲ್ಲಿ ಬಸ್‌ ತಂಗುದಾಣವಿಲ್ಲ. ಸುಡುವ ಬಿಸಿಲಿನಲ್ಲಿಯೇ ನಿಲ್ಲಬೇಕು. ಕೆಲವೊಮ್ಮೆ ಎಸಿ ಕಚೇರಿ ಆವರಣದ ಮರದ ಕೆಳಗೆ ನಿಲ್ಲುತ್ತಾರೆ. ಬಸ್‌ ಬರುತ್ತಿದ್ದಂತೆ ಓಡಿ ಬರುತ್ತಾರೆ. ಪಾಲಿಕೆ ಅಧಿಕಾರಿಗಳು ತಾತ್ಕಾಲಿಕವಾಗಿಯಾದರೂ ಇಲ್ಲೊಂದು ಬಸ್‌ ಶೆಲ್ಟರ್‌ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಪಾಲಿಕೆ ಎದುರಿನ ಸಿಟಿ ಬಸ್‌ ನಿಲ್ದಾಣದ ಬಳಿಯಿದ್ದ ಆಟೊ ಚಾಲಕ ಅಬ್ದುಲ್‌ ರೆಹಮಾನ್‌ ಒತ್ತಾಯಿಸಿದರು.
 
‘ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಬಿಸಿಗಾಳಿಯೂ ಬೀಸುತ್ತಿದೆ. ತಾಪಮಾನದಿಂದಾಗಿ ಸಿಮೆಂಟ್ ರಸ್ತೆ ಹಾಗೂ ಡಾಂಬರು ರಸ್ತೆಗಳಲ್ಲಿ ನಿಲ್ಲಲು ಆಗುತ್ತಿಲ್ಲ. ಬಸ್‌ ಬರುವವರಿಗೂ ಬಿಸಿಲಿನಲ್ಲಿಯೇ ಕಾಯಬೇಕು.
 
ಖಾಸಗಿ ನಗರ ಸಾರಿಗೆಯ 50ಕ್ಕೂ ಹೆಚ್ಚು ಹಾಗೂ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ 20ಕ್ಕೂ ಹೆಚ್ಚು ಬಸ್‌ಗಳು ನಿತ್ಯವೂ ನಗರದಲ್ಲಿ ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಿಲ್ಲ. ತಾತ್ಕಾಲಿಕ ಚಾವಣಿಯಾದರೂ ಇದ್ದರೆ ಅನುಕೂಲ ವಾಗುತ್ತದೆ’ ಎಂದು ವಿದ್ಯಾನಗರದ ನಿವಾಸಿ ಎ.ಕೆ.ಹಂಪಣ್ಣ ಹೇಳಿದರು.
 
ಬಸ್‌ ಶೆಲ್ಟರ್‌ಗಳೇ ಇಲ್ಲ: ‘ರೈಲ್ವೆ ನಿಲ್ದಾಣದಿಂದ ಅರಳಿಮರ, ವಿದ್ಯಾ ನಗರ, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ, ಎಲ್‌ಐಸಿ ಕಾಲೊನಿ, ಹೊಂಡದ ರಸ್ತೆ, ಬೇತೂರು ರಸ್ತೆ, ದೇವರಾಜ್ ಅರಸ್ ಬಡಾವಣೆ, ವಿನೋಬನಗರ, ಡಿಸಿಎಂ ಲೇಔಟ್‌, ಆವರಗೆರೆ... ಹೀಗೆ ನಮ್ಮ ಬಸ್‌ಗಳು ಸಂಚರಿಸುವ 30ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್‌ ಶೆಲ್ಟರ್‌ಗಳೇ ಇಲ್ಲ.
 
ಬಿಸಿನಲ್ಲಿಯೇ ಪ್ರಯಾಣಿಕರು ನಿಂತಿರು ತ್ತಾರೆ. ಬಸ್‌ ಬಂದ ತಕ್ಷಣ ಎಲ್ಲೋ ಇದ್ದವರು ಓಡಿ ಬಂದು ಬಸ್‌ ಹತ್ತುತ್ತಾರೆ’ ಎನ್ನುವುದು ಹೆಸರು ಹೇಳಲು ಇಚ್ಛಿಸದ ಖಾಸಗಿ ನಗರ ಸಾರಿಗೆ ಬಸ್‌ನ ನಿರ್ವಾಹಕರೊಬ್ಬರ ಅನಿಸಿಕೆ.
 
‘ಇಂಥ ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಲ್ಲುವುದು ಅಸಾಧ್ಯ. ಬಸ್ ಬಂದು ನಿಂತರೂ ಅದರಲ್ಲಿ ಕುಳಿತುಕೊಳ್ಳುವುದು ಆಗುವುದಿಲ್ಲ. ರಣ ಬಿಸಿಲಿಗೆ ಬಸ್‌ಗಳೂ ಕೆಂಡದಂತಾಗಿರುತ್ತವೆ.

ಸಾರಿಗೆ ಸಂಸ್ಥೆ ಯಾಗಲಿ, ರೈಲ್ವೆ ಇಲಾಖೆಯಾಗಲಿ ಸಂಸದ/ಶಾಸಕರ ಅನುದಾನದಲ್ಲಿಯಾ ದರೂ ಬಸ್ ಶೆಲ್ಟರ್‌ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗು ತ್ತದೆ’ ಎಂದು ಎಲ್‌ಐಸಿ ಕಾಲೊನಿ ನಿವಾಸಿ ಡಿ.ಮಲ್ಲಿಕಾರ್ಜುನ ಆಗ್ರಹಿಸಿದರು.
 
‘ನಗರ ಸಾರಿಗೆ ಬಸ್‌ ಅನ್ನು ಹೆಚ್ಚಾಗಿ ಬಡವರು, ವಿದ್ಯಾರ್ಥಿಗಳು ಹತ್ತುತ್ತಾರೆ. ಬಿಸಿಲಿನಲ್ಲಿ ಒಳಗೆ ಕುಳಿತುಕೊಳ್ಳಲು ಆಗುವುದಿಲ್ಲ. ಬಸ್‌ ಶೆಲ್ಟರ್ ನಿರ್ಮಾಣ ಮಾಡಿದರೆ ಬಸ್ ಬರುವವರಾದರೂ ಅದರಲ್ಲಿ ಕೆಲ ಹೊತ್ತು ಕುಳಿತುಕೊಳ್ಳ ಬಹುದು’ ಎಂದು ಬೇತೂರು ರಸ್ತೆಗೆ ತೆರಳಲು ಪಾಲಿಕೆ ಎದುರು ಬಸ್‌ಗಾಗಿ ಕಾಯುತ್ತ ನಿಂತಿದ್ದ ಆರ್‌.ರವಿಕುಮಾರ್‌ ಹೇಳಿದರು.
***
ಶೆಲ್ಟರ್‌ ನಿರ್ಮಾಣ ಅವಶ್ಯ
‘ಸಿಮೆಂಟ್‌ ರಸ್ತೆಗಳ ಕಾಮಗಾರಿಯಿಂದಾಗಿ ಭೂಮಿಯಲ್ಲಿ ಮಳೆ ನೀರು ಇಂಗುವುದಿಲ್ಲ. ಮಣ್ಣಿನ ತೇವಾಂಶ ಕಡಿಮೆ ಯಾಗಿ ಭೂಮಿಯು ಕಾದ ಕಾವಲಿನಿಂತಾಗುತ್ತದೆ. ಜನರು ನಿಲ್ಲಲು ಆಗುವುದಿಲ್ಲ.

ಅಗತ್ಯವಿರುವ ಕಡೆ ಬಸ್‌ ಶೆಲ್ಟರ್‌ಗಳನ್ನು ನಿರ್ಮಾಣ ಮಾಡುವುದು ಪಾಲಿಕೆ ಅಧಿಕಾರಿಗಳ ಕರ್ತವ್ಯ. ಆದರೂ, ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಬಳಸುವುದು ಉತ್ತಮ’ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ ಹೇಳಿದರು.
***
ವ್ಯಾಪಾರಕ್ಕೆ ತೊಂದರೆ...
ನಗರದಲ್ಲಿ ಈ ಹಿಂದೆ ಶೆಲ್ಟರ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ, ವ್ಯಾಪಾರಕ್ಕೆ ತೊಂದರೆ ಆಗುತ್ತದೆ ಎಂದು ಕೆಲ ಖಾಸಗಿ ಅಂಗಡಿ, ಮಳಿಗೆಗಳ ಮಾಲೀಕರು ಅವುಗಳನ್ನು ತೆರವುಗೊಳಿಸಿದರು. ಇನ್ನು ಕೆಲವೆಡೆ ಅಂಗಡಿಗಳ ಮಾಲೀಕರು ತಂಗುದಾಣಗಳ ನಿರ್ಮಾಣಕ್ಕೆ ಅವಕಾಶವೇ ನೀಡಲಿಲ್ಲ.
 
ಆದರೂ, ಹೆಚ್ಚು ಜನರು ಸಂಚರಿಸುವ ಮಾರ್ಗದ ನಿಲ್ದಾಣಗಳಲ್ಲಿ ತಾತ್ಕಾಲಿಕ ಶೆಲ್ಟರ್‌ ನಿರ್ಮಾಣಕ್ಕೆ ಗಮನಹರಿಸಲಾಗುವುದು’ ಎಂದು ಪಾಲಿಕೆ ಮೇಯರ್‌ ಅನಿತಾಬಾಯಿ ಪ್ರತಿಕ್ರಿಯಿಸಿದರು.
***
ತಾತ್ಕಾಲಿಕ ಶೆಲ್ಟರ್‌ ನಿರ್ಮಾಣಕ್ಕೆ ಸೂಚನೆ...
‘ಸ್ಮಾರ್ಟ್‌ ಸಿಟಿ’ ಯೋಜನೆ ಅಡಿಯಲ್ಲಿ ನಗರದೆಲ್ಲೆಡೆ ಹೈಟೆಕ್‌ ಬಸ್‌ ನಿಲ್ದಾಣಗಳನ್ನು ನಿರ್ಮಿಸುವ ಉದ್ದೇಶವಿದೆ. ಈ ಹಿಂದೆ ಸಂಸದರ ಹಾಗೂ ಸ್ಥಳೀಯರ ಶಾಸಕರ ಅನುದಾನದಲ್ಲಿ ಶೆಲ್ಟರ್‌ಗಳ ನಿರ್ಮಾಣ ಮಾಡಲಾಗಿತ್ತು. ಎಲ್ಲವೂ ಹಾಳಾದವು.
 
ಆದರೂ, ಜನರ ಆರೋಗ್ಯದ ದೃಷ್ಟಿಯಿಂದಾಗಿ ಪಾಲಿಕೆ ಎದುರು ತಾತ್ಕಾಲಿಕವಾಗಿ ಶೆಲ್ಟರ್‌ ನಿರ್ಮಾಣಕ್ಕೆ ಸೂಚಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT