ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಾಮ ನಿವಾರಿಸಿದ ಶಿವನಾರದಮುನಿ ಕ್ಷೇತ್ರದ ‘ಜಲದಾಹ’ ನೀಗಿಸುವನೇ?

ಹರಪ್ಪನಹಳ್ಳಿ ತಾಲ್ಲೂಕಿನ ಚಿಗಟೇರಿ: ಇಂದು ಮೂಲಾ ನಕ್ಷತ್ರದಲ್ಲಿ ರಥೋತ್ಸವ
Last Updated 17 ಏಪ್ರಿಲ್ 2017, 6:02 IST
ಅಕ್ಷರ ಗಾತ್ರ
ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ವೆಂಬ ಪ್ರತೀತಿಯೊಂದಿಗೆ ಸ್ವಾಮಿ, ಮಹರ್ಷಿ ತಪೋನಿಧಿಗಳಿಗೆ ನೆಲೆಕೊಟ್ಟ ಸ್ಥಳ -‘ಚಿನ್ನದ ಚಿಗಟೇರಿ’. ‘ದಂಡಗಂಟೆಯ ನಾರದ’ ಎಂಬ ಖ್ಯಾತಿ ಪಡೆದ ಶಿವನಾರದಮುನಿ ಕ್ಷೇತ್ರದಲ್ಲಿ ನೂತನ ರಥದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
 
ಏಪ್ರಿಲ್ 17ರಂದು ಸಂಜೆ 4.30ಕ್ಕೆ ಮೂಲಾ ನಕ್ಷತ್ರದಲ್ಲಿ ರಥೋತ್ಸವ ಜರುಗಲಿದೆ. ಶ್ರೀಮದುಜ್ಜಯನಿ ಸದ್ಧರ್ಮ ಪೀಠಾಧೀಶರಾದ ಸಿರಿಗೆರೆಯ ತರಳ ಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ರಥದ ಉದ್ಘಾಟನೆ ನೆರವೇರಿಸಲಿದ್ದಾರೆ. 
 
ರಥೋತ್ಸವಕ್ಕೆ ಮೂರ್ನಾಲ್ಕು ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಸೇರುತ್ತಾರೆ. ಮೂಲಾ ನಕ್ಷತ್ರದ ಆ ಘಳಿಗೆಗೆ ಸಾಕ್ಷಿಯಾಗುತ್ತಾರೆ. ರಥೋತ್ಸವ ಮುಗಿಯುತ್ತಿದ್ದಂತೆ ಚದುರುತ್ತಾರೆ. ಇದನ್ನು ನೋಡಿದ ಭಕ್ತರು ‘ನಾರಪ್ಪ ಪವಾಡ ಪುರುಷನೇ ಸರಿ’ ಎಂದು ಅಚ್ಚರಿಪಡುತ್ತಾರೆ. 
 
 
ಹರಪನಹಳ್ಳಿ ತಾಲ್ಲೂಕಿನ ಗ್ರಾಮ ಚಿಗಟೇರಿ. ಹರಪನಹಳ್ಳಿ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿತ್ತು. ಹೊಸ ಜಿಲ್ಲೆ ರಚನೆ ಬಳಿಕ ದಾವಣಗೆರೆ ಜಿಲ್ಲೆಗೆ ಸೇರಿದ ಈ ತಾಲ್ಲೂಕು ಭೌಗೋಳಿಕ ಪರಿಸರದ ಹಿನ್ನೆಲೆಯಲ್ಲಿ ನೋಡಿದರೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿಯೇ ಇದೆ. ಕಾರಣ ಇಷ್ಟೆ, ಬಳ್ಳಾರಿಯ ರಣ ಬಿಸಿಲಿನಿಂದ, ಮುಖಕ್ಕೆ ರಾಚುವ ಬಿಸಿಗಾಳಿ, ಬೆಂಗಾಡಿನ ಅನುಭವ ನೀಡುವ, ನೀರಿಗೆ ಇನ್ನಿಲ್ಲದ ತತ್ವಾರ ಎದುರಿಸುವ ಪರಿಸ್ಥಿತಿಗಳಿಂದ ದೂರವಾಗಿಲ್ಲ. 
 
ಅಂದು ಚಿಗಟೇರಿ ಗ್ರಾಮದ ಕ್ಷಾಮ ನಿವಾರಣೆಗೆ ಬಂದು ನೆಲೆನಿಂತ ನಾರದಮುನಿಯಿಂದ ಕ್ಷೇತ್ರ ಅಷ್ಟೊ ಇಷ್ಟೊ ಸಮೃದ್ಧವಾಗಿತ್ತು. ಪ್ರಸ್ತುತ ಬರದ ಪರಿಣಾಮ ಊರ ಮುಂದಿನ ಗೋಕಟ್ಟೆ (ಹೊಂಡ), ಬಾವಿಗಳು ಬರಿದಾಗಿವೆ. ಹಳ್ಳ-–ಕೊಳ್ಳಗಳು ಬಣಗುಡುತ್ತಿವೆ. ದೇವಸ್ಥಾನದ ಮುಂದಿನ ಆಳವಾದ ಬಾವಿ ಸೇರಿದಂತೆ ಜಮೀನುಗಳಲ್ಲಿ ಪಾಳುಬಿದ್ದಿರುವ ಬಾವಿಗಳು ವಸ್ತುಸ್ಥಿತಿಯನ್ನು ತೆರೆದಿಡುತ್ತವೆ.
 
ಇಂಥ ನಾರಪ್ಪನ ಕ್ಷೇತ್ರಕ್ಕೆ ಭಕ್ತರು ದೇವರ ಕೃಪೆ ಎಂಬ ‘ತಂಗಾಳಿ’ ಅರಸಿ ಬರುತ್ತಾರೆ. ಬೆಳಿಗ್ಗೆ ದೇವರ ದರ್ಶನ ಪಡೆದು, ಮಣ್ಣಿನ ಮಡಕೆಯಲ್ಲಿ ಮಾಡಿದ ಅಕ್ಕಿ ಹುಗ್ಗಿಯ ಎಡೆ ನೈವೇದ್ಯ ಸಲ್ಲಿಸಿ, ಪ್ರಸಾದ ಸೇವಿಸುತ್ತಾರೆ.

ಮಧ್ಯಾಹ್ನ ಅಲ್ಲಿ ಇಲ್ಲಿ ಗಿಡ-ಮರ, ವಾಹನಗಳ ಕೆಳಗೆ ತುಸು ನೆರಳಲ್ಲಿ ಕುಳಿತು ವಿಶ್ರಮಿಸುತ್ತಾರೆ. ಸಂಜೆ ಮೂಲಾ ನಕ್ಷತ್ರದಲ್ಲಿ ರಥವೇರಲು ಪಲ್ಲಕ್ಕಿಯಲ್ಲಿ ಬರುವ ವಿಷ್ಣುವಿನ ಉತ್ಸವ ಮೂರ್ತಿಗೆ ಹಾಗೂ ರಥಕ್ಕೆ ನಾರಿನ ಪಾಚಿ (ಕತ್ತಾಳೆ ನಾರು), ಬಾಳೆಹಣ್ಣು ಎಸೆದು ಹರಕೆ, ಭಕ್ತಿ ಸಮರ್ಪಿಸುತ್ತಾರೆ.
 
‘ಶಿವನಾರದಮುನಿ ಗೋವಿಂದಾ ಗೋವಿಂದ...’ ಎಂದು ಜಪಿಸುತ್ತಾ ಭಕ್ತರು ಉತ್ಸಾಹದಿಂದ ರಥವನ್ನು ಎಳೆಯುತ್ತಾರೆ. ಮೂಲಾ ನಕ್ಷತ್ರದಲ್ಲೇ ರಥೋತ್ಸವ ನಡೆಯುವುದು ಈ ಕ್ಷೇತ್ರದ ವಿಶೇಷ.
 
ಪೂಜೆಯ ಕಾಲ ಘಟ್ಟ: ದೇವಸ್ಥಾನದಲ್ಲಿ ಬೆಳಿಗ್ಗೆ ಬಾಲಕ, ಮಧ್ಯಾಹ್ನ ಯುವಕ, ಸಂಜೆ ವೇಳೆಗೆ ಹಣ್ಣು ಹಣ್ಣು ಮುದುಕ.... ಹೀಗೆ ಬದುಕಿನ ಕಾಲ ಘಟ್ಟದೊಂದಿಗಿನ ಪೂಜೆಗೆ ಒಳಗಾಗುತ್ತಾರೆ ನಾರದಮುನಿ. ಆದರೆ, ರಥವನ್ನೇರುವುದು ವಿಷ್ಣುವಿನ ಉತ್ಸವಮೂರ್ತಿ.
 
ಎಡೆ ಸಮರ್ಪಣೆ: ಎಡೆಯನ್ನು ಮಣ್ಣಿನ ಮಡಕೆಯಲ್ಲಿಯೇ ತಯಾರಿಸಿ ನೈವೇದ್ಯ ಮಾಡುವುದು ಇಲ್ಲಿನ ವಿಶೇಷ. ಎಡೆ ತಯಾರಿಸಲು ಹೊಸ ಮಡಕೆ ಖರೀದಿಸಿ ತರಲಾಗುತ್ತದೆ. ಅಕ್ಕಿ, ಬಾಳೆಹಣ್ಣು, ಬೆಲ್ಲ, ಹಾಲು, ತುಪ್ಪದಿಂದ ತಯಾರಿಸಿದ ‘ಅಕ್ಕಿಹುಗ್ಗಿ’ ಮಾತ್ರ ನಾರದಮುನಿಗೆ ನೈವೇದ್ಯ ಮಾಡಲಾಗುತ್ತದೆ.
ಮನೆಯಲ್ಲಿ ಮಡಿಯಿಂದ ಎಡೆಯನ್ನು ತಯಾರಿಸಲಾಗುತ್ತದೆ.
 
ಸುಡುವ ಗಡಿಗೆಯನ್ನೇ ಮಡಿಬಟ್ಟೆಯಲ್ಲಿ ಹೆಗಲ ಮೇಲೆ ಹೊತ್ತು ದಂಡಗಂಟೆ ಹಿಡಿದು ಬಾರಿಸುತ್ತಾ ‘ದಾಸಪ್ಪ’ಗಳ ನೇತೃತ್ವದಲ್ಲಿ ದೇವಸ್ಥಾನ ಪ್ರದಕ್ಷಿಣೆ ಮಾಡಿ, ಗರ್ಭಗುಡಿಯ ಬಾಗಿಲಲ್ಲಿ ಇರಿಸಿ ನೈವೇದ್ಯ ಮಾಡಲಾಗುತ್ತದೆ. ಬಳಿಕ ಪ್ರಸಾದವನ್ನು ಅವರವರ ಬೆಡಗಿನ ಮನೆಗಳ ಬಳಿ ಹಂಚಲಾಗುತ್ತದೆ.
60ಕ್ಕೂ ಹೆಚ್ಚಿನ ಬೆಡಗಿನವರು ಪ್ರತ್ಯೇಕವಾಗಿ ಎಡೆ ಸೇವೆ ಸಲ್ಲಿಸುತ್ತಾರೆ. ಒಂದು ಬೆಡಗಿನವರ ಅಕ್ಕಿಯನ್ನು ಮತ್ತೊಂದು ಬೆಡಗಿನವರ ಎಡೆಯಲ್ಲಿ ಸೇರಿಸುವುದಿಲ್ಲ. ಆದರೆ, ಪ್ರಸಾದವನ್ನು ಬೇರೆ ಬೆಡಗಿನವರೂ ಪಡೆದು ಸೇವಿಸುತ್ತಾರೆ.
 
ನಾರಿನ ಮಹಿಮೆ: ಎಲ್ಲಾ ಕಡೆ ರಥೋತ್ಸವಗಳಲ್ಲಿ ಉತ್ತತ್ತಿ, ಬೆಲ್ಲ, ಹಣ್ಣು ಎಸೆದು ಭಕ್ತಿ ಸಮರ್ಪಿಸುತ್ತಾರೆ. ಆದರೆ, ಈ ಕ್ಷೇತ್ರದ ಪದ್ಧತಿ ಭಿನ್ನ. ರಥವೇರುವ ಉತ್ಸವಮೂರ್ತಿ ಇರಿಸಿದ ಪಲ್ಲಕ್ಕಿ, ರಥಕ್ಕೆ ಭಕ್ತರು ನಾರು ಪಾಚಿ (ಕತ್ತಾಳೆ ನಾರು) ಕಟ್ಟುಗಳನ್ನು ಸಮರ್ಪಿಸಿ ಹರಕೆ ತೀರಿಸುತ್ತಾರೆ.
 
ರಥೋತ್ಸವ ವೇಳೆ ನಾರು ಸರ್ಪಿಸಿದರೆ ಭಕ್ತನ ಮೈಮೇಲಿನ ‘ನಾರುಹುಣ್ಣು’ (ಚರ್ಮದ ಮೇಲಿನ ಗಂಟು) ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಈ ಆಚರಣೆ ರೂಢಿಯಲ್ಲಿ ಬಂದಿದೆ. ರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗದವರು ಬೇರೆಯ ವರಿಗೆ ಹಣ ನೀಡಿ ಅದರಲ್ಲಿ ನಾರು ಖರೀದಿಸಿ ಸಮರ್ಪಿಸಿ ಹರಕೆ ತೀರಿಸು ವಂತೆ ಕೇಳಿಕೊಳ್ಳುವ ಪರಿಪಾಠವೂ ಇದೆ.
 
ಓಕುಳಿ ಉತ್ಸಾಹ: ರಥೋತ್ಸವವಾದ ಮರು ದಿನ ಸಂಜೆ ಓಕುಳಿ ನಡೆಯುತ್ತದೆ. ಅಲ್ಲಿಗೆ ಬರುವ ಪಲ್ಲಕ್ಕಿಗೆ ಭಕ್ತರು ನಾರನ್ನು ಸಮರ್ಪಿಸುತ್ತಾರೆ. ನಾರಿನ ಪಾಚಿ ಬಳಸಿ ಬಿಗಿಯಾಗಿ ಕಟ್ಟಿದ್ದ ಓಕುಳಿ ಕಾಯಿ ಕೀಳಲು ಯುವಕರು ಇನ್ನಿಲ್ಲದ ಸಾಹಸ ಪಡುತ್ತಾರೆ. ಒಬ್ಬರ ಮೇಲೊಬ್ಬರು ಮುಗಿಬಿದ್ದು ಕಾಯಿ ಕೀಳುವ ಪೈಪೋಟಿ ನೋಡುವುದೇ ಚಂದ.
 
ವಿವಾಹ: ರಥೋತ್ಸವ ಆದ ಮೂರನೇ ದಿನ ಸಂಜೆ ವಿಷ್ಣು ಹಾಗೂ ಸಾವಕ್ಕನಿಗೆ ವಿವಾಹ ನೆರವೇರುತ್ತದೆ. ಸಾವಕ್ಕನ ದೇವಸ್ಥಾನ ಸಮೀಪದಲ್ಲೇ ಇದೆ. 
ಹೆಣ್ಣಿನ (ಸಾವಕ್ಕ) ಕಡೆ ‘ತಂಡಸ್ಲರ’ ಬೆಡಗು, ವರನ (ವಿಷ್ಣು) ಪರ ಮಿಕ್ಕೆಲ್ಲಾ ಬೆಡಗಿನವರಿದ್ದು, ಶಾಸ್ತ್ರ ಕಾರ್ಯಗಳನ್ನು ನೆರವೇರಿಸುತ್ತಾರೆ. ಈ ಬಾರಿ ರಥೋತ್ಸವದ ದಿನವೇ ಸಾವಕ್ಕನ ನೂತನ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನಿಗದಿಯಾಗಿದೆ.
***
8ನೇ ಶತಮಾನದ ದೇವಸ್ಥಾನ
ಎಂಟನೇ ಶತಮಾನದಲ್ಲಿ ಉತ್ತರ ಭಾರತದಿಂದ ಬಂದು ಮಧ್ಯ ಕರ್ನಾಟಕದಲ್ಲಿ ನೆಲೆನಿಂತು, ತಪಗೈದ ‘ಭೈರೇಶ’ ತನ್ನ ತಪಶಕ್ತಿಯಿಂದ ಭಕ್ತನ ಮೈಮೇಲಿನ ‘ನಾರುಹುಣ್ಣು’(ಚರ್ಮದ ಮೇಲಿನ ಗಂಟು) ನಿವಾರಣೆ ಮಾಡಿದರು. ಅಂದಿನಿಂದ ನಾರನ್ಮುನಿ, ಶಿವನಾರದಮುನಿ ಎಂದು ಪ್ರಚಲಿತರಾದರು.

ನಂತರ ಹುಲ್ಲೂರಿನಿಂದ ಚಿಗಟೇರಿ ಗ್ರಾಮದ ಕ್ಷಾಮ ನಿವಾರಣೆಗೆ ಬಂದು ನೆಲೆಸಿದರು. ಅಲ್ಲಿ ನಾಡಗೌಡರು ದೇವಸ್ಥಾನ ನಿರ್ಮಿಸಿದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
****
ಚಿಗಟೇರಿ ನಾರದಮುನಿಸ್ವಾಮಿ ನೂತನ ರಥ ಸಿದ್ಧ

ರಥಕ್ಕೆ ನಾಲ್ಕು ಗಾಳಿಗಳಿರುವುದು ಸಾಮಾನ್ಯ. ಆದರೆ, ಇಲ್ಲಿನ ರಥಕ್ಕೆ ಆರು ಗಾಲಿಗಳಿರುವುದು ವಿಶೇಷ. ನೂತನ ರಥವನ್ನು ಎಂಟೂವರೆ ಅಡಿ ಎತ್ತರದ ಗಾಲಿಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ರಥದ ಗಡ್ಡೆಯು 22 ಅಡಿ ಉದ್ದ, 22 ಅಡಿ ಅಗಲ, 22 ಅಡಿ ಎತ್ತರವಿದ್ದು, ಕಳಸವನ್ನು ಒಳಗೊಂಡು ಅಡಿಯಿಂದ ಮುಡಿಯವರೆಗೆ ಒಟ್ಟು 59 ಅಡಿ ಎತ್ತರವಿದೆ.

ಚನ್ನಗಿರಿ ತಾಲ್ಲೂಕಿನ ಗೊಪ್ಪೆನಹಳ್ಳಿಯ ಚಂದ್ರಾಚಾರಿ ಅವರ ಪುತ್ರರಾದ ವೀರಾಚಾರಿ, ಜಗನ್ನಾಥಾಚಾರಿ ಸೇರಿದಂತೆ 12 ಕುಶಲಕರ್ಮಿಗಳು ಸತತ ಎರಡು ವರ್ಷಗಳ ಕಾಲ ಕೆಲಸ ಮಾಡಿ ರಥವನ್ನು ನಿರ್ಮಿಸಿದ್ದಾರೆ.

ಆರೂವರೆ ಟನ್ ತೂಕದ ಗಟ್ಟಿಮುಟ್ಟಾದ ಕಬ್ಬಿಣದ ಅಚ್ಚನ್ನು ಹೊಸಪೇಟೆಯ ಉಕ್ಕಿನ ಕಾರ್ಖಾನೆ ಯಲ್ಲಿ ಸಿದ್ಧಪಡಿಸಿ ಅಳವಡಿಸಲಾಗಿದೆ. ಗಾಲಿಗಳನ್ನು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಅವುಗಳಿಗೂ ಕಬ್ಬಿಣದ ಹಳಿಗಳನ್ನು ಕಟ್ಟಲಾಗಿದೆ. ತೇಗ, ಹೊನ್ನೆ ಕಟ್ಟಿಗೆಯನ್ನು ಬಳಸಿ ರಥದ ಗಡ್ಡೆಯನ್ನು ನಿರ್ಮಿಸಲಾಗಿದೆ.

ಬ್ರೇಕ್, ಸ್ಟೇರಿಂಗ್ ವ್ಯವಸ್ಥೆ: ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರು ಉತ್ಸಾಹದಲ್ಲಿ ರಥವನ್ನು ಜೋರಾಗಿ ಎಳೆಯುವುದು ಸಾಮಾನ್ಯ. ಈ ವೇಳೆ ಅದನ್ನು ನಿಯಂತ್ರಿಸಲು, ಅಪಾಯಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲು ರಥಕ್ಕೆ ‘ಬ್ರೇಕ್ ಸಿಸ್ಟಂ’(ವೇಗ ನಿಯಂತ್ರಕ ವ್ಯವಸ್ಥೆ) ಹಾಗೂ ‘ಸ್ಟೇರಿಂಗ್’ ಅಳವಡಿಸಲಾಗಿದೆ.  

ಭಕ್ತರ ಸಹಕಾರ: ‘ನೂತನ ರಥಕ್ಕೆ ಸುಮಾರು ₹ 2 ಕೋಟಿ ವೆಚ್ಚ ಮಾಡ ಲಾಗಿದೆ. ಗಟ್ಟಿಮುಟ್ಟಾದ ಕಬ್ಬಿಣದ ಅಚ್ಚು ಹಾಕಿ ನಿರ್ಮಿಸಲಾಗಿದೆ. ನೂತನ ರಥವು ಕೆತ್ತನೆಯಲ್ಲಿ ಕಲಾತ್ಮಕವಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಥ ಉದ್ಘಾಟಿಸಲಿದ್ದಾರೆ.

ಇದೇ ವೇಳೆ ಚಿಗಟೇರಿ ವೃತ್ತದ ಲ್ಲಿರುವ ಮಹಾಧ್ವಾರದ ಉದ್ಘಾಟನೆಯೂ ನೆರವೇರಲಿದೆ. ಭಕ್ತರು ಉದಾರವಾಗಿ ದೇಣಿಗೆ ನೀಡಿದ್ದಾರೆ. ಭಕ್ತರ ಸಹ ಕಾರದಿಂದ ಕೈಗೂಡಿದೆ’ ಎಂದು ಶಿವನಾರದ ಮುನಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಣಬೇರು ರಾಜಣ್ಣ ಮಾಹಿತಿ ನೀಡಿದರು.
***

ರಥೋತ್ಸವ: ಏ. 17ರ ಸೋಮವಾರ, ಸಮಯ: ಸಂಜೆ 4.30ಕ್ಕೆ ಮೂಲಾ ನಕ್ಷತ್ರದಲ್ಲಿ ನೂತನ ರಥ ಉದ್ಘಾಟನೆ: ರಥವೇರುವ ಮೂಲಕ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಶಿವನಾರದಮುನಿ ಮಹಾದ್ವಾರ ಉದ್ಘಾಟನೆ: ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ನೂತನ ಬ್ರಹ್ಮರಥ ಕಳಸಾರೋಹಣದ ಉದ್ಘಾಟನೆ: ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ

ಸಭಾ ಕಾರ್ಯಕ್ರಮ: ಮಧಾಹ್ನ 12.30ರಿಂದ
ನೇತೃತ್ವ:
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಅಧ್ಯಕ್ಷತೆ: ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್‌ ಉಪಾಧ್ಯಕ್ಷ ಕೆ.ಚನ್ನಬಸವನಗೌಡ್ರು ಸಾಸ್ವೆಹಳ್ಳಿ ಸಾವಕ್ಕನ ನೂತನ ದೇವಸ್ಥಾನಕ್ಕೆ ಶಂಕುಸ್ಥಾಪನೆ ಶಾಸಕ ಶಾಮನೂರು ಶಿವಶಂಕರಪ್ಪ.

ಸಭಾ ಕಾರ್ಯಕ್ರಮ ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ನಾರದಮುನಿ ಇತಿಹಾಸ: ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್‌ ಅಧ್ಯಕ್ಷ ಅಣಬೇರು ರಾಜಣ್ಣ.

ಸ್ಥಳ: ದೇವಸ್ಥಾನ ಮುಂದಿನ ಆವರಣ, ಚಿಗಟೇರಿ

***


ಅಂದು ನಿವಾರಣೆಯಾಗಿದ್ದ ಕ್ಷಾಮ
ಭೈರೇಶರು ಶಿವನಾರದ ಮುನಿಯಾಗಿ ಚಿಗಟೇರಿ ಗ್ರಾಮದ ಕ್ಷಾಮ ನೀಗಿದ್ದರು, ಪವಾಡ ಗೈದಿದ್ದರು ಎಂಬುದು ಇತಿಹಾಸ. ಅಂದು ಕ್ಷಾಮದಿಂದ ಕಂಗಾಲಾಗಿದ್ದ ಜನರ ಬಾಳಿಗೆ ಬೆಳಕಾಗಿ ಬಂದಿದ್ದ ನಾರದ ಮುನಿಗೆ, ಇಂದು ನಾಡಿನೆಲ್ಲೆಡೆ ಲಕ್ಷಾಂತರ ಭಕ್ತರಿದ್ದಾರೆ.

ಚಿಗಟೇರಿ ಕ್ಷೇತ್ರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ನೀರಿನದ್ದೇ ಬವಣೆ. ನೀರಾವರಿಯ ಮಾತು ದೂರವೇ ಆಯಿತು, ಕುಡಿಯುವ ನೀರಿಗೂ ತತ್ವಾರ. ಇಷ್ಟೇ ಅಲ್ಲ ಇಡೀ ಹರಪನಹಳ್ಳಿ ತಾಲ್ಲೂಕೇ ಬೆಂಗಾಡಿನಂತಿದೆ. ಅಕ್ಕ ಪಕ್ಕದ ತಾಲ್ಲೂಕುಗಳು ಇದರಿಂದ ಹೊರತಾಗಿಲ್ಲ.

ಅಂದು ಕ್ಷಾಮ ನಿವಾರಣೆಗಾಗಿ ಇಲ್ಲಿಗೆ ಬಂದು ನೆಲೆಸಿದ ನಾರದಮುನಿಯು, ಇಂದಿನ ಭಕ್ತರ ಮೂಲಕ ಇಡೀ ಕ್ಷೇತ್ರದ ಸುಭೀಕ್ಷೆಗೆ ನೀರೊದಗಿಸುವ ಯೋಜನೆಯನ್ನು ಕೈಗೂಡಿಸಲಿ. ಬರದ ಬೇಗೆಯಲ್ಲಿರುವ ಜನರ ಜಲ ದಾಹವನ್ನು ನೀಗಿಸಲಿ...

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT