ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಂಸ್ಕೃತಿ ಬಿಂಬಿಸಿದ ‘ರಾಮೋತ್ಸವ’

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ l ವಾರದ ಕಾಲ ಶಾಸ್ತ್ರೀಯ ಸಂಗೀತ ಸುಧೆ ಹರಿಸಿದ ಗಾಯಕರು
Last Updated 17 ಏಪ್ರಿಲ್ 2017, 4:09 IST
ಅಕ್ಷರ ಗಾತ್ರ
ಶಿವಮೊಗ್ಗ: ರಾಮನ ಆದರ್ಶ, ಉದಾತ್ತ ಗುಣಗಳ ಪರಿಚಯಿಸುವ ರಾಮೋತ್ಸವ ಈ ಬಾರಿ ನಗರದ ನಾಗರಿಕರಿಗೆ ವಿಶೇಷವಾಗಿ ನಾಡಿನ ಸಂಸ್ಕೃತಿ, ಶಾಸ್ತ್ರೀಯ ಸಂಗೀತದ ಸುಧೆಯನ್ನೂ ಉಣಬಡಿಸಿತು.
 
ವಿನೋಬ ನಗರದ ಡಿವಿಎಸ್ ಶಾಲಾ ಆವರಣದಲ್ಲಿ ಏ. 10ರಿಂದ 16ವರೆಗೆ ನಡೆದ ಕಾರ್ಯಕ್ರಮ ರಾಮ ಭಜನೆಗೆ ಸೀಮಿತವಾಗಿದ್ದ ರಾಮೋತ್ಸವಕ್ಕೆ ಹೊಸ ಆಯಾಮ ನೀಡಿತು.
 
ಹಲವು ದಶಕಗಳಿಂದ ದುರ್ಗಿಗುಡಿಯಲ್ಲಿ ಸೀಮಿತ ಚೌಕಟ್ಟಿನ ಒಳಗೆ ನಡೆಯುತ್ತಿದ್ದ ರಾಮೋತ್ಸವ ಕೆಲ ವರ್ಷಗಳಿಂದ ಸ್ಥಗಿತವಾಗಿತ್ತು. ನಗರದ ಸೌರಭ ಸಂಸ್ಥೆ ಎರಡು ವರ್ಷಗಳ ಹಿಂದೆ ಮತ್ತೆ ಚಾಲನೆ ದೊರೆಯಿತು.  ಈ ವರ್ಷ ವಿಶೇಷವಾಗಿ ವಿನೋಬನಗರದಲ್ಲಿ ಸಪ್ತಾಹವಾಗಿ ಆಚರಿಸಲಾಯಿತು.
 
ಸೌರಭ ಸಂಸ್ಥೆ, ವಿನೋಬನಗರ ರಾಮೋತ್ಸವ ಸಮಿತಿ, ಗುರುಗುಹ ಸಂಗೀತ ಮಹಾವಿದ್ಯಾಲಯ, ಪೂರ್ಣಪ್ರಜ್ಞ ಸೇವಾ ಸಮಿತಿ, ಜಿಲ್ಲಾ ವಿಪ್ರ ನೌಕರರ ಸಂಘ, ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ, ಬ್ರಾಹ್ಮಣ ಅಡುಗೆಯವರ ಸಂಘ ಹಾಗೂ ಇತರೆ ಸಂಘ, ಸಂಸ್ಥೆಗಳ ಸಹಕಾರದಲ್ಲಿ ಪ್ರತಿದಿನ ಸಂಜೆ 6ರಿಂದ 9.30ರವರೆಗೆ ನಡೆದ ರಾಮೋತ್ಸವದಲ್ಲಿ ಸ್ಥಳೀಯ ಕಲಾವಿದರು ಹಾಗೂ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ವಿದ್ವಾಂಸರು, ಸಂಗೀತಗಾರರು ವಿಶೇಷ ಉಪನ್ಯಾಸ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
 
ಏ. 10ರಂದು ರಾಮೋತ್ಸವಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ ಚಾಲನೆ ನೀಡಿದ್ದರು. 
ಅಂದು ಕೇರಳದ ಗಾಯಕಿ ಸಹೋದರಿಯರಾದ ಶರ್ಮಿಳಾ ಮತ್ತು ಶಾಂತಲಾ ನಡೆಸಿಕೊಟ್ಟ ದ್ವಂದ್ವ ಸಂಗೀತ ಕಚೇರಿ ಜನಮನ ಸೂರೆಗೊಂಡಿತ್ತು.
 
11ರಂದು ಶಿವಮೊಗ್ಗ ಕೆ.ಕುಮಾರ ಸ್ವಾಮಿ ಅವರಿಂದ ಸ್ಯಾಕ್ಸೊಫೋನ್, 12ರಂದು ತಾಳವಾದ್ಯ- ‘ಲಯ ಲಾವಣ್ಯ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.13ರಂದು ಮೈಸೂರಿನ ಎಸ್.ಆರ್. ಪ್ರಶಾಂತ್‌ ಅವರ ಹಾಡುಗಾರಿಕೆ, 14ರಂದು ರಾಯಚೂರು ಶೇಷಗಿರಿರಾವ್ ಮತ್ತು ವೃಂದದ ದಾಸರಪದ ಗಾಯನ ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾದವು. 
 
ಇದೇ ವೇದಿಕೆಯಲ್ಲಿ ಬಿಡುಗಡೆಯಾದ ಕೂಡಲಿ ಡಾ.ಜಗ ನ್ನಾಥ ಶಾಸ್ತ್ರಿಗಳು ಬರೆದ ‘ಆಧ್ಯಾತ್ಮ ರಾಮಾಯಣ’ ಕೃತಿ ರಾಮ ಚರಿತೆಯ ಹೊಸ ಆಯಾಮ ಒಳಗೊಂಡಿತ್ತು.
 
15ರಂದು ಕಲಾವಿದರಾದ ಮೈಸೂರಿನ ದೀಪಿಕಾ ಪಾಂಡುರಂಗಿ, ಪಿ.ಎಸ್‌.ಶ್ರೀಧರ್‌, ಶಿವಮೊಗ್ಗದ ಕೃಪಾ ಶ್ರೀಕಾಂತ್, ಮತ್ತೂರು ಮಧು ಮುರಳಿ, ತುಕಾರಾಂ ರಂಗಧೋಳ್‌, ನಿಖಿಲ್ ಎಸ್‌.ಕುಮಾರ್‌, ಭದ್ರಾವತಿಯ ಬಿ.ಜಿ.ವಿಷ್ಣು, ನಡೆಸಿಕೊಟ್ಟ ಭಕ್ತಿಗಾನ ವೈಭವ ಧಾರ್ಮಿಕ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು.
 
ಸಮಾರೋಪದ ದಿನವಾದ ಭಾನುವಾರ ಸಂಜೆ ಟಿ.ಎನ್. ಶೇಷಗೋಪಾಲನ್‌ ಅವರ ಪುತ್ರ ಚೆನ್ನೈನ ಟಿ.ಎನ್.ಎಸ್‌. ಕೃಷ್ಣನ್‌ ಅವರ ಹಾಡುಗಾರಿಕೆ ನಡೆಯಿತು. ಸಿ.ಎನ್‌.ಚಂದ್ರಶೇಖರನ್ ವಯಲಿನ್‌, ತುಮಕೂರು ರವಿಶಂಕರ್‌ ಮೃದಂಗ, ಶ್ರೀಶೈಲನ್‌ ಘಟದ ಸಾಥ್ ನೀಡಿದರು.  ನಿತ್ಯ ಸಾಧಕರನ್ನು ಸನ್ಮಾನಿಸಲಾಯಿತು.  
 
‘ದುರ್ಗಿಗುಡಿಯಲ್ಲಿ ಹಿಂದೆ ತಿಂಗಳ ವರೆಗೆ ರಾಮೋತ್ಸವ ಆಚರಿಸ ಲಾಗುತ್ತಿತ್ತು. ಸೌರಭ ಸಹಯೋಗದಲ್ಲಿ ಮೂರು ವರ್ಷಗಳಿಂದ ರಾಮೋತ್ಸವ ಆಚರಿಸಲಾಗುತ್ತಿದೆ.  
 
ರಾಮನವಮಿ ಕಾರ್ಯ ಕ್ರಮಗಳು ಭಜನೆಗಷ್ಟೆ ಸೀಮಿತಗೊಳ್ಳದೆ, ವಿಭಿನ್ನ ಆಯಾಮಗಳ ಮೂಲಕ ಅನಾವರಣಗೊಂಡಿದೆ. ಧಾರ್ಮಿಕ, ಸಾಂಸ್ಕೃತಿಕ ಆಚರಣೆ ಒತ್ತಡ ಬದುಕಿನ ನಡುವೆ ಜನರ ಮಾನಸಿಕ ನೆಮ್ಮದಿಗೂ ದಾರಿ ಮಾಡಿಕೊಟ್ಟಿದೆ’ ಎಂದು ವಿಶ್ಲೇಷಿ ಸುತ್ತಾರೆ ರಾಮೋತ್ಸವದ ರೂವಾರಿ, ಸೌರಭ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಕೆ.ಬಿ. ಪ್ರಸನ್ನಕುಮಾರ್.
 
‘ರಾಮೋತ್ಸವ ಸಮಿತಿ ಆಯೋಜಿಸಿದ ಈ ಕಾರ್ಯಕ್ರಮ ಜನರ ಮನಸೂರೆಗೊಂಡಿದೆ. ಮುಂದಿನ ವರ್ಷದಿಂದ ನಗರದ ಇತರೆ ಬಡಾವಣೆಗಳಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗುವುದು’ ಎನ್ನುತ್ತಾರೆ ಪಾಲಿಕೆ ನಾಮನಿರ್ದೇಶಿತ  ಸದಸ್ಯ ದೀಪಕ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT