ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಸಿಗದ ಹೆಚ್ಚಿನ ಪರಿಹಾರದ ಪ್ಯಾಕೇಜ್‌

ರಾಂಪುರ ಅಪಘಾತಕ್ಕೆ ಒಂದು ತಿಂಗಳು
Last Updated 17 ಏಪ್ರಿಲ್ 2017, 4:17 IST
ಅಕ್ಷರ ಗಾತ್ರ
ಮೊಳಕಾಲ್ಮುರು: 14 ಜನ ತೀರಿದ್ದರಿಂದ ರಾಜ್ಯದ ಗಮನ ಸೆಳೆದಿದ್ದ ತಾಲ್ಲೂಕಿನ ರಾಂಪುರ ಸರಣಿ ಅಪಘಾತ ನಡೆದು ಇಂದಿಗೆ (ಏ.17) ಒಂದು ತಿಂಗಳಾಯಿತು. ಅಪಘಾತದ ನಂತರ ಪೊಲೀಸ್‌ ಇಲಾಖೆ ಮತ್ತು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಲಯದ ರಾಜಿ ಸಂಧಾನದ ಮೂಲಕ ‘ಮಾದರಿ ಪರಿಹಾರ’ ವಿತರಿಸುವ ಕಾರ್ಯವೂ ನಡೆದಿದೆ. 
 
ಆದರೆ, ಇಂಥ ಅವಘಡಗಳು ಮರುಕಳಿಸದಂತೆ ಸಾರಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಮಂಜೂರು ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ನೀಡಿದ್ದ ಭರವಸೆ ಈಡೇರಿಲ್ಲ ಎಂಬ ಆರೋಪ ಕೇಳಿಬಂದಿದೆ. ಸರಣಿ ಅಪಘಾತದಲ್ಲಿ ಮೃತರಾದವರಲ್ಲಿ 10 ಜನ ಇದೇ ತಾಲ್ಲೂಕಿನವರಾಗಿದ್ದರು. ಮೂವರು ಕೂಡ್ಲಿಗಿ ತಾಲ್ಲೂಕಿನವರಾಗಿದ್ದರೆ, ಒಬ್ಬರು ಶಹಾಪುರದವರು.

ಸಂತ್ರಸ್ತ ಕುಟುಂಬಗಳ ಜನರು ಹಾಗೂ ವಿಮಾ ಕಂಪೆನಿ ಜತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ರಾಜೀ ಸಂಧಾನ ನಡೆಸಿ ದೇಶದಲ್ಲೇ ಅತಿ ಕಡಿಮೆ ಅವಧಿಯಲ್ಲಿ ₹ 1.43 ಕೋಟಿ ಪರಿಹಾರ ಕೊಡಿಸಲು ಮುಂದಾಗಿರುವುದಕ್ಕೆ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. 
 
ಅಪಘಾತ ನಡೆದ ನಂತರ ಶಾಸಕ ಎಸ್‌. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಮುಂಡ್ರಗಿ ನಾಗರಾಜ್‌, ಡಾ. ಯೋಗೇಶ್‌ ಬಾಬು ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ಪರಿಹಾರ ವಿತರಿಸಲು ಹೋದಾಗ, ₹ 3 ಲಕ್ಷ ಅಥವಾ ₹ 5 ಲಕ್ಷಕ್ಕೆ ಹೆಚ್ಚಿಸುವಂತೆ ಕೋರಲಾಗುವುದು ಎಂದು ಭರವಸೆ ನೀಡಿದ್ದರು. ಸಾರಿಗೆ ಸಂಸ್ಥೆಯ ಬಸ್‌ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೀಡಿದ್ದ ಭರವಸೆ ಈಡೇರಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
 
ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೀರೆಡ್ಡಿ ಮಾತನಾಡಿ, ‘ಸಂತ್ರಸ್ತ ಕುಟುಂಬಗಳ ಭೇಟಿ ಮಾಡುವಂತೆ ಸಚಿವ ಆಂಜನೇಯ ಅವರಲ್ಲಿ ಎರಡು ಬಾರಿ ಮನವಿ ಮಾಡಲಾಗಿತ್ತು, ಆದರೆ, ಅವರು ಬಂದಿಲ್ಲ. ಸಾರಿಗೆ ಬಸ್‌ಗಳನ್ನು ಓಡಿಸುವ ಬಗ್ಗೆ ಹಾಗೂ ನಾಗಸಮುದ್ರ ಕ್ರಾಸ್‌ನಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಮತ್ತೊಮ್ಮೆ ಕೋರಲಾಗುವುದು’ ಎಂದರು.
 
‘ಚಿತ್ರದುರ್ಗ ಹಾಗೂ ಬಳ್ಳಾರಿ ಸಾರಿಗೆ ವಿಭಾಗೀಯ ಅಧಿಕಾರಿಗಳು ಸಬೂಬು ಹೇಳುತ್ತಾ ಬಸ್‌ಗಳನ್ನು ಬಿಡುತ್ತಿಲ್ಲ. ಸಚಿವರನ್ನು ಶೀಘ್ರವೇ ಕರೆದುಕೊಂಡು ಬಂದು ವಸ್ತುಸ್ಥಿತಿ ತೋರಿಸಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಮನವಿ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಮುಂಡ್ರಗಿ ನಾಗರಾಜ್‌ ಹೇಳಿದರು.
 
ಕಡಿವಾಣ:  ಅಪಘಾತದ ಬಳಿಕ ರಾಂಪುರ ವ್ಯಾಪ್ತಿಯಲ್ಲಿ ಆಟೊಗಳ ಬೇಕಾಬಿಟ್ಟಿ ಸಂಚಾರಕ್ಕೆ ಕಡಿವಾಣ ಬಿದ್ದಿದೆ. ಸಾರಿಗೆ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 
 
‘ದಾಖಲಾತಿ ಪರೀಕ್ಷಿಸಿ 70 ಆಟೊಗಳಿಗೆ ಸಂಖ್ಯೆ ನೀಡಲಾಗಿದೆ. ಸುಮಾರು 600 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಭೆಗಳನ್ನು ನಡೆಸಿ ಚಾಲಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಹಳ್ಳಿಗಳಿಗೆ ಬಸ್‌ ಓಡಿಸಿದರೆ ಸಮಸ್ಯೆಗೆ ಮುಕ್ತಿ ಸಿಗಲಿದೆ. ದಾಖಲಾತಿ ಇಲ್ಲದ ಹಾಗೂ ಆಂಧ್ರಪ್ರದೇಶದ ಆಟೊಗಳ ಸಂಚಾರ ಸ್ಥಗಿತಗೊಂಡಿದೆ’ ಎಂದು ಪಿಎಸ್‌ಐ ಲೋಕೇಶ್‌ ಹೇಳಿದರು.
 
‘ತಾಲ್ಲೂಕಿನ ತಮ್ಮೇನಹಳ್ಳಿ, ರಾಂಪುರ, ಅಮುಕುಂದಿ ಗ್ರಾಮಗಳ ಹೆದ್ದಾರಿ ವ್ಯಾಪ್ತಿಯಲ್ಲಿ ವಾಹನಗಳ ವೇಗಕ್ಕೆ ಮಿತಿ ನಿಗದಿ ಮಾಡಿ ಆದೇಶಿಸು
ವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಲೋಕೇಶ್‌್್ ತಿಳಿಸಿದರು. 
– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT