ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ಕಾಮಗಾರಿಗೆ ಚಾಲನೆ

‘ತವರ ಋಣ ತೀರಿಸೋಣ’ ಅಭಿಯಾನ
Last Updated 17 ಏಪ್ರಿಲ್ 2017, 4:53 IST
ಅಕ್ಷರ ಗಾತ್ರ
ಕಲಬುರ್ಗಿ:  ತಾಲ್ಲೂಕಿನ ಗಣಜಲಖೇಡ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ವಿವಿಧ ಸಂಘಟನೆಗಳು ಭಾನುವಾರ ‘ತವರ ಋಣ ತೀರಿಸೋಣ’ ಅಭಿಯಾನ ಆರಂಭಿಸಿದವು.
 
ಅಭಿಯಾನದಲ್ಲಿ ಯೋಜನೆಯ ಮಹತ್ವ, ಅನುದಾನ, ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.ಗ್ರಾಮದಲ್ಲಿ ಮೊದಲ ಹಂತದಲ್ಲಿ 31 ಜನರ ಎನ್‌ಆರ್‌ಎಂ ಸೃಜಿಸಿ ಅಧಿಕೃತವಾಗಿ ಉದ್ಯೋಗ ಖಾತರಿ ಕೆಲಸ ಆರಂಭಿಸಲಾಯಿತು.  
 
ತಾಜಸುಲ್ತಾನಪುರದ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಅಶ್ವಿನಿ ಮದನಕರ್ ಹಾಗೂ ಜಿಲ್ಲಾ ಕಾರ್ಯದರ್ಶಿ ನಂದಾದೇವಿ ಮಂಗೊಂಡಿ ನೇತೃತ್ವದಲ್ಲಿ 12 ಗ್ರಾಮಗಳಲ್ಲಿ ಅಭಿಯಾನ ನಡೆಯಿತು.  ಗಣಜಲಖೇಡ ಗ್ರಾಮದ ಶಿವಲೀಲಾ ಅವರು ಹುಟ್ಟೂರಿನ ಜನರನ್ನು ಸಂಘಟಿಸಿ ಉದ್ಯೋಗ ಖಾತರಿಯ ಅರಿವು ಮೂಡಿಸಿದರು. 
 
ಜನರಿಗೆ ಉದ್ಯೋಗ ಚೀಟಿ ಪಡೆಯಲು ಪೂರಕ ದಾಖಲೆಗಳನ್ನು ಸಂಗ್ರಹಿಸಿ, ಅರ್ಜಿ ಭರ್ತಿ ಮಾಡಿ ಎನ್‌ಆರ್‌ಎಂ ಸೃಜಿಸಲು ಬೇಕಾದ ಎಲ್ಲ ಸಿದ್ಧತೆಗಳ ಮಾಹಿತಿ ಹಾಗೂ ಮನವರಿಕೆ ಮಾಡಲಾಯಿತು. ನಂತರ ಗಣಜಲಖೇಡ ಗ್ರಾಮದ ಗೋಕಟ್ಟಾದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. 
ಕುಮಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಂಧೆ ಮಾತನಾಡಿ, ಕೆಲಸ ಬಯಸುವ ಪ್ರತಿಯೊಬ್ಬರಿಗೂ ಕೆಲಸ ದೊರಕಲಿದೆ. 
 
₹12 ಕೂಲಿ ಹೆಚ್ಚಳವಾಗಿದೆ. ಮಾಡಬೇಕಾದ ಕೆಲಸದ ಅಳತೆಯಲ್ಲಿ ಶೇ 30 ರಿಯಾಯಿತಿ ನೀಡಲಾಗಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. 
 
ಅಶ್ವಿನಿ ಮದನಕರ್ ಮಾತನಾಡಿ, ‘ಬೇಸಿಗೆಯಲ್ಲಿ ಜನರ ಕೈಗೆ ಕೆಲಸವಿಲ್ಲ. ಉದ್ಯೋಗ ಖಾತರಿ ಅಡಿ ನೂರು ದಿನ ಕೆಲಸ ದೊರೆಯಲಿದೆ. ಕೆಲಸ ನಿಮ್ಮೆಲ್ಲರ ಹಕ್ಕು’ ಎಂದರು. 
 
ಜನವಾದಿ ಸಂಘಟನೆಯ ನಂದಾದೇವಿ ಮಂಗೊಂಡಿ ಮಾತನಾಡಿ, ‘ಕಳೆದ ವರ್ಷ ಸಂಘಟನೆ 60 ಗ್ರಾಮಗಳಲ್ಲಿ ಯೋಜನೆಯ ಕಾಮಗಾರಿಗಳ ಜಾರಿಗಾಗಿ ಅಭಿಯಾನ ಮಾಡಿದೆ. 
 
ಇದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆತಿದೆ. ಈ ವರ್ಷವೂ ಗುಳೆ ತಡೆಗೆ ಉದ್ಯೋಗ ಖಾತರಿ ಸಹಕಾರಿ ಆಗಲಿದೆ. ಅಧಿಕಾರಿಗಳು ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.
 
ಸಂಘಟನೆಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ಕಳೆದ ಬಾರಿ ಕುಡಿಯುವ ನೀರು, ಜನರ ಕೈಗೆ ಕೆಲಸಕ್ಕಾಗಿ ಹಾಗೂ ಮಾಡಿದ ಕೆಲಸದ ಕೂಲಿ ಕೊಡಿಸಲು ಸಂಘಟನೆ ಶ್ರಮಿಸಿದೆ. ಈ ವರ್ಷ ಮಹಿಳೆಯರು ‘ತವರ ಋಣ ತೀರಿಸೋಣ’ ಎಂಬ ಅಭಿಯಾನ ಆರಂಭಿಸಿದ್ದಾರೆ’ ಎಂದು ತಿಳಿಸಿದರು. 
 
‘ಉದ್ಯೋಗ ಖಾತರಿ ಜನರ ಹಕ್ಕಿನ ಕಾಯ್ದೆಯಾಗಿದೆ. ಇದನ್ನು ತಪ್ಪಿಸುವ ಕುತಂತ್ರ ಯಾವ ಕಾರಣಕ್ಕೂ ನಡೆಯಬಾರದು. ಜನಪ್ರತಿನಿಧಿಗಳು ಯೋಜನೆಯ ಯಶಸ್ಸಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು. ಅಭಿಯಾನದ ಮುಖಂಡರಾದ ನಿಂಗಪ್ಪ ಮಂಗೊಂಡಿ ಮಾತನಾಡಿದರು. ಶಿವಲೀಲಾ ಪೂಜಾರಿ, ಮಾನಪ್ಪ ಕಟ್ಟಿಮನಿ, ಮಹತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT