ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದನ ಹಿಪ್ಪರಗಾದಲ್ಲಿ ಹಂತಿರಾಶಿ ಸಂಭ್ರಮ

ಕಾಯಕ ಸಂಸ್ಕೃತಿ ಗೌರವಿಸಲು ಸ್ವಾಮೀಜಿ ಸಲಹೆ
Last Updated 17 ಏಪ್ರಿಲ್ 2017, 5:21 IST
ಅಕ್ಷರ ಗಾತ್ರ
ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಶಿವಲಿಂಗೇಶ್ವರ ವಿರಕ್ತ ಮಠಕ್ಕೆ ಭಕ್ತರು ಬೆಳೆದ ಜೋಳದ ತೆನೆಯನ್ನು ಭಕ್ತಿಯಿಂದ ಅರ್ಪಿಸುವುದು ವಿಶೇಷ. ಹೀಗೆ ರೈತರು ಕೊಟ್ಟ ಜೋಳದ ತೆನೆಯನ್ನು ಸಂಗ್ರಹಿಸಿ, ಹಂತಿ ಹೊಡೆದು ರಾಶಿ ಮಾಡುವ ಕಾರ್ಯಕ್ರಮ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
 
ಲಿಂ.ಶಾಂತಲಿಂಗೇಶ್ವರರ ಆರಾಧನೆ ನಿಮಿತ್ತ ಸುತ್ತಲಿನ ಮದಗುಣಕಿ, ದರ್ಗಾ ಶಿರೂರು, ಚಲಗೇರಾ, ನಿಂಗದಳ್ಳಿ, ಮಾದನ ಹಿಪ್ಪರಗಾದ ರೈತರು ಮಠಕ್ಕೆ ಭಕ್ತಿಯಿಂದ ಸಲ್ಲಿಸಿದ ಜೋಳದ ತೆನೆಯನ್ನು ಬೆಳದಿಂಗಳಲ್ಲಿ ಖಳ ಹಾಕಿ (ಸಂಗ್ರಹಿಸಿ) ಮಧ್ಯದಲ್ಲಿ ಮೇಟಿ ನಿಲ್ಲಿಸಲಾಗುತ್ತದೆ. ರೈತರು ತಮ್ಮ ಜೋಡು ಎತ್ತುಗಳ ಮೂಲಕ ರಾತ್ರಿಯಿಡೀ ಜೋಳದ ತೆನೆ ತುಳಿಸಿ ರಾಶಿ ಮಾಡುವ ಸುಗ್ಗಿಗೆ ಹಂತಿಪದಗಳ ಗಾಯನ ಮೆರಗು ನೀಡಿತ್ತು.
 
ರೈತ ಗಾಯಕರಾದ ಪಂಚಯ್ಯ ನಂದಕೋಲ, ಹಣಮಂತ ಪ್ಯಾಟಿ, ಶಂಕರಪ್ಪ ಕೊಳಶೆಟ್ಟಿ, ಸಿದ್ದಪ್ಪ ಹಡಲಗಿ, ಶಿವಶರಣ ಕುಂಬಾರ ಮತ್ತಿತರರು ಹಂತಿ ಪದಗಳು ಹಾಡಿದರು. ಇದಲ್ಲದೆ ಗ್ರಾಮದ ಭಜನೆ ಮತ್ತು ಜಾಗರಣೆ ಕಾರ್ಯಕ್ರಮವು ನಡೆಯಿತು.
 
ಈ ಮೊದಲು ಸುಗ್ಗಿ ಜಾತ್ರೆಗೆ ಚಾಲನೆ ನೀಡಿ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದ ಶರಣರು ಕಾಯಕ ಸಂಸ್ಕೃತಿಗೆ ಮಹತ್ವ ನೀಡಿದ್ದರು. ಸನ್ಮಾರ್ಗದಿಂದ ಮಾಡುವ ಯಾವುದೇ ಕಾಯಕವು ಪರಿಶುದ್ಧವಾದುದು. ಕಾಯಕ ಸಂಸ್ಕೃತಿ, ದುಡಿಯುವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
 
ಧುದನಿಯ ಡಾ.ಗುರುಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಹಂತಿಪದ ಗಾಯನ, ಹಂತಿ ಹೊಡೆಯುವ ರಾಶಿ ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರು ನೀಡಿದ ಜೋಳ ಮತ್ತು ಹಂತಿಯಿಂದ ಮಠಕ್ಕೆ ಒಟ್ಟು 41 ಚೀಲದ ಜೋಳದ ರಾಶಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT