ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಭುಗಿಲೆದ್ದ ದೇವಾಲಯ ವಿವಾದ

Last Updated 17 ಏಪ್ರಿಲ್ 2017, 5:25 IST
ಅಕ್ಷರ ಗಾತ್ರ
ಸೇಡಂ: ತಾಲ್ಲೂಕಿನ ಆಡಕಿ ಗ್ರಾಮದಲ್ಲಿ ಕಸ್ತೂರಿ ರಂಗನಾಥ ದೇವಾಲಯಕ್ಕೆ ಸೇರಿದೆ ಎನ್ನಲಾದ ಜಾಗದ ಸಮಸ್ಯೆ ಭಾನುವಾರ ಮತ್ತೆ ಭುಗಿಲೆದ್ದಿದ್ದು, ಪೊಲೀಸರು, ಅಧಿಕಾರಿಗಳು ಮತ್ತು ಜನರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ.
 
ಕಳೆದ ಐದಾರು ತಿಂಗಳ ಹಿಂದೆ ತಾಲ್ಲೂಕು ಆಡಳಿತ ವಿವಾದಿತ ಸ್ಥಳವೆಂದು ಗುರುತಿಸಿ ಅಲ್ಲಿರುವ ವೀರಭದ್ರೇಶ್ವರ ಮೂರ್ತಿ ಹಾಗೂ ಧ್ವಜವನ್ನು ಸುಪರ್ದಿಗೆ ಪಡೆದು, ಕಲಂ 145 ಜಾರಿ ಮಾಡಿತ್ತು. ಗ್ರಾಮದ ಕೆಲ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ನ್ಯಾಯಾಲಕ್ಕೆ ಮೊರೆ ಹೋಗಿದ್ದರು. 
 
‘ಈಚೆಗೆ ಜಿಲ್ಲಾ ನ್ಯಾಯಾಲಯ 145 ಕಲಂ ಜಾರಿ ಮಾಡಿರುವುದು ಸಮಂಜಸವಲ್ಲ, ಅದನ್ನು ರದ್ದು ಮಾಡಿದೆ’ ಎನ್ನುವ ಲಿಖಿತ ಪತ್ರವನ್ನು ಜನರು ತಂದು, ದೇವಾಲಯ ಕಟ್ಟಡ ಕಾಮಗಾರಿಗೆ ಭಾನುವಾರ ಮುಂದಾಗಿದ್ದರು.
 
ದೇವಾಲಯದಲ್ಲಿ ಕೆಲಸ ಮಾಡುತ್ತಿರುವಾಗ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮತ್ತು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಮುಖಂಡರು ನಮ್ಮ ಬಳಿ ಜಿಲ್ಲಾ ನ್ಯಾಯಾಲಯ 145 ಕಲಂ ರದ್ದು ಪಡಿಸಿರುವ ಆದೇಶ ಪತ್ರ ಇದೆ.
 
ಇದನ್ನು ಆಧರಿಸಿ ನಾವು ಕೆಲಸ ಮಾಡುತ್ತಿದ್ದೇವೆ. ನ್ಯಾಯಾಲಯದ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ಆದರೆ ಯಾವುದೇ ಲಿಖಿತ ದೂರು ಇಲ್ಲದಿದ್ದರೆ ಅಧಿಕಾರಿಗಳು ಕಾಮಗಾರಿ ನಿಲ್ಲಿಸುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗುತ್ತಿದೆ ಎಂದು ಮುಖಂಡರು ದೂರಿದರು.
 
ಕೆಲಕಾಲ ಮಾತಿನ ಚಕಮಕಿ ನಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ಮುಖಂಡರ ಸಭೆ ನಡೆಯಿತು. ನ್ಯಾಯಾಲಯ ನಿಷೇಧಾಜ್ಞೆಯನ್ನು ರದ್ದುಪಡಿಸಿರುವುದು ಸ್ವಾಗತಾರ್ಹ.
 
ಆದರೆ ವಿವಾದಿತ ಸ್ಥಳವೆಂದು ಗುರುತಿಸಿದ ಮೇಲೆ ನಾವು ಉನ್ನತ ಅಧಿಕಾರಿಗಳ ಸಲಹೆ ಪಡೆಯುತ್ತೇವೆ. ಸುಮಾರು 15 ದಿನ ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಒಪ್ಪದ ಜನತೆ 10 ದಿನಗಳ ಕಾಲ ನಿಗದಿಪಡಿಸಿದರು. 10 ದಿನಗಳ ವರೆಗೆ ಯಾವುದೇ ಕೆಲಸ ಪ್ರಾರಂಭಿಸಬಾರದು ಎಂದು ತಹಶೀಲ್ದಾರ್ ತಿಳಿಸಿದರು.
 
ಡಿವೈಎಸ್‌ಪಿ ಯು.ಶರಣಪ್ಪ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪೊಲೀಸ್ ಇನ್‌ಸ್ಪೆಕ್ಟರ್ ತಮ್ಮರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT