ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷ ಕಳೆದರೂ ಹಂಚಿಕೆಯಾಗದ ‘ಆಸರೆ’

ಪ್ರವಾಹ ಪೀಡಿತರಿಗೆ ಸಿಗದ ಸೂರು
Last Updated 17 ಏಪ್ರಿಲ್ 2017, 5:40 IST
ಅಕ್ಷರ ಗಾತ್ರ
ಬೀದರ್: ಪ್ರವಾಹ ಪೀಡಿತರಿಗೆ ಆಸರೆ ಒದಗಿಸಲು ಐದು ವರ್ಷಗಳ ಹಿಂದೆ  ನಗರದ  ಗೋರನಳ್ಳಿಯಲ್ಲಿ ನಿರ್ಮಿಸಿದ 200 ‘ಆಸರೆ’ ಮನೆಗಳು ಈವರೆಗೂ ಹಂಚಿಕೆಯಾಗಿಲ್ಲ. ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ವಿಳಂಬ ಆಗಿರುವ ಕಾರಣ ಕೆಲವರು ಅನಧಿಕೃತವಾಗಿ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.
 
ಹರ್ಷಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಪ್ರವಾಹ ಪೀಡಿತ ಜನರಿಗೆ ಆಸರೆ ಮನೆಗಳನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿದ್ದರು.
 
ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ 2010ರ ಮೇನಲ್ಲಿ ಕಾಮಗಾರಿ ಆರಂಭಿಸಿ 2013ರಲ್ಲಿ ಪೂರ್ಣಗೊಳಿಸಲಾಗಿದೆ. ಯೋಜನೆಗೆ ಒಟ್ಟು  ₹ 2.60 ಕೋಟಿ ಖರ್ಚು ಮಾಡಲಾಗಿದೆ.
 
30X40 ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಿದ ಮನೆಯಲ್ಲಿ ಹೊರ ಕೋಣೆ, ಅಡುಗೆ ಮನೆ, ಸ್ನಾನಗೃಹ, ಶೌಚಾಲಯ ಇವೆ. ನೀರು ಸರಾಗವಾಗಿ ಹರಿದು ಹೋಗಲು ಗಟಾರ ನಿರ್ಮಿಸಲಾಗಿದೆ.

ಆವರಣದಲ್ಲಿ ಮರಗಳನ್ನೂ ಬೆಳೆಸಲಾಗಿದೆ. ಕೆಲ ನಿರ್ಗತಿಕರು ಇಲ್ಲಿ ಬಂದು ಸೇರಿಕೊಂಡಿದ್ದಾರೆ. ಕೆಲ ಮರಿ ಫುಡಾರಿಗಳು ತಮ್ಮ ಹೆಸರು ಬರೆದುಕೊಂಡು ಮನೆಗಳಿಗೆ ಬೀಗ ಹಾಕಿಕೊಂಡಿದ್ದಾರೆ.
 
ಆಸರೆ ಮನೆಗಳ ಸಮೀಪ ಒಂದು ಕೊಳವೆಬಾವಿ ತೋಡಲಾಗಿದೆ. ಆದರೆ ಅಲ್ಲಿಂದ ಓವರ್‌ಹೆಡ್‌ ಟ್ಯಾಂಕ್‌ಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಕಳ್ಳರು ವಿದ್ಯುತ್‌ ಮೀಟರ್‌, ಸ್ವಿಚ್‌ಬೋರ್ಡ್‌ ಹಾಗೂ ಹೋಲ್ಡರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
 
ಹರ್ಷಗುಪ್ತ ಅವರ ನಂತರ ಜಿಲ್ಲಾಧಿಕಾರಿಯಾಗಿ ಬಂದ ಸಮೀರ್‌ ಶುಕ್ಲಾ ಹಾಗೂ ಪಿ.ಸಿ.ಜಾಫರ್‌ ಅವರು ಅತಿವೃಷ್ಟಿಯಿಂದಾಗಿ ಹಾನಿಗೊಳಗಾದವರಿಗೆ ಮನೆಗಳ ಹಂಚಿಕೆ ಮಾಡಲು ಮುಂದಾಗಿದ್ದರು. ನಗರದಿಂದ ತುಸು ದೂರ ಇರುವ ಕಾರಣ ಯಾರೂ ಅಲ್ಲಿಗೆ ಹೋಗಲು ಒಪ್ಪಲಿಲ್ಲ. 
 
ನಂತರ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮನೆ ಕಳೆದುಕೊಂಡವರು, ಅಂಗವಿಕಲರು ಹಾಗೂ ಮಾಜಿ ಸೈನಿಕರು ಸೇರಿ ಒಟ್ಟು 76 ಮಂದಿಗೆ ಮನೆ ಹಂಚಿಕೆ ಮಾಡಲು ನಿರ್ಧರಿಸಲಾಯಿತು.  ಆದರೆ ಯಾರಿಗೂ ಹಂಚಿಕೆಯಾಗಿಲ್ಲ. 
***
‘ಅರ್ಹರಿಗೆ ಮನೆ ನೀಡಿ’
ಗೋರನಳ್ಳಿಯ ಆಸರೆ ಮನೆಯಲ್ಲಿ ಎರಡು ವರ್ಷಗಳ ಹಿಂದೆ ಬಂದು ನೆಲೆಸಿದ್ದೇವೆ. ಇಲ್ಲಿ ಉಳಿದಿರುವ ಕಾರಣ ಮನೆಗಳು ಸುಸ್ಥಿತಿಯಲ್ಲಿವೆ. ಕುಡಿಯುವ ನೀರು ಹಾಗೂ ವಿದ್ಯುತ್‌ ಇಲ್ಲ. ಆದರೂ ಒಂದು ದಿನ ನಮ್ಮ ಹೆಸರಲ್ಲಿ ಮನೆ ಹಂಚಿಕೆಯಾಗಲಿದೆ ಎನ್ನುವ ವಿಶ್ವಾಸದಿಂದ ದಿನ ಕಳೆಯುತ್ತಿದ್ದೇವೆ ಎನ್ನುತ್ತಾರೆ ಮನೆಯಲ್ಲಿ ವಾಸವಾಗಿರುವ ನಾಗಮ್ಮ ಅರ್ಜುನ.
***
ಕಾನೂನು  ಕ್ರಮ
1964ರ ಕರ್ನಾಟಕ ಮುನ್ಸಿಪಲ್‌ ಕಾಯ್ದೆ 262(ಎ) ಪ್ರಕಾರ ನಗರಸಭೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ  ಹಾಗೂ ₹ 5,000 ದಂಡ ವಿಧಿಸಬಹುದಾಗಿದೆ. ಆಸರೆ ಮನೆಯಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನು ತೆರವುಗೊಳಿಸಲಾಗುವುದು. ಸರ್ಕಾರಿ ಕೆಲಸಕ್ಕೆ ತಡೆ ಒಡ್ಡಿದರೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಯೋಜನೆಯ ಮಾಹಿತಿ ಪಡೆದಿದ್ದು,  ಅಕ್ರಮವಾಗಿ ವಾಸ ಮಾಡಿರುವವರನ್ನು ಖಾಲಿ ಮಾಡಿಸುವಂತೆ ಆದೇಶ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT