ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಸೂಚನೆ ತೋರದ ಟ್ರಾಫಿಕ್ ಸಿಗ್ನಲ್

Last Updated 17 ಏಪ್ರಿಲ್ 2017, 5:43 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿರೋದು ನಾಲ್ಕು ಟ್ರಾಫಿಕ್‌ ಸಿಗ್ನಲ್‌. ಇದರಲ್ಲಿ ಎರಡು ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಿ ಎರಡು ವರ್ಷ ಗತಿಸಿದೆ. ಇನ್ನುಳಿದ ಎರಡು ಕಾರ್ಯ ನಿರ್ವಹಿಸುತ್ತಿದ್ದರೂ, ಸಮಯ ಸೇರಿದಂತೆ ಸಂಚಾರ ಸೂಚನೆಯನ್ನು ಸಮರ್ಪಕವಾಗಿ ಫಲಕಗಳಲ್ಲಿ ಪ್ರದರ್ಶಿಸಲ್ಲ. ಇದರಿಂದ ಇವು ಇದ್ದರೂ ಉಪಯೋಗವಿಲ್ಲದಂತಾಗಿದೆ...

ಇನ್ನೊಂದು ಹೊರವಲಯದಲ್ಲಿದ್ದರೂ ಬಳಕೆಯಾಗುತ್ತಿಲ್ಲ... ಒಟ್ಟಾರೆ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು, ವಾಹನ ಸಂಚಾರ ಸುಗಮವಾಗಿ ಸಾಗಲು, ಪಾದಚಾರಿಗಳು ರಸ್ತೆ ದಾಟಲು ನಿತ್ಯವೂ ಕಿರಿಕಿರಿ ಅನುಭವಿಸುವುದು ತಪ್ಪದಾಗಿದೆ.

ನಗರದ ನಿವಾಸಿಗಳು, ಪರವೂರಿನಿಂದ ಅನ್ಯ ಕಾರ್ಯ ನಿಮಿತ್ತ ನಗರಕ್ಕೆ ಬಂದವರು ಇಲ್ಲಿನ ಸಂಚಾರ ವ್ಯವಸ್ಥೆಯ ಅವ್ಯವಸ್ಥೆ ಕಂಡು ಪೊಲೀಸರು–ಪಾಲಿಕೆ ಆಡಳಿತಕ್ಕೆ ಹಿಡಿಶಾಪ ಹಾಕದವರಿಲ್ಲ. ಎಲ್ಲರೂ ಮನದಲ್ಲೇ ಗೊಣಗಿಕೊಂಡು ಸಾಗುವ ದೃಶ್ಯಾವಳಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೂ 12 ತಾಸು ನಿರಂತರವಾಗಿ ಗೋಚರಿಸುತ್ತಿದೆ.
ವಿಜಯಪುರ ಮಹಾನಗರಿಯ ಅವ್ಯವಸ್ಥೆಯ ಚಿತ್ರಣ. ಪಾಲಿಕೆ ಆಡಳಿತದ ಕಾರ್ಯವೈಖರಿ.

‘ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿ, ಮಹಾತ್ಮಗಾಂಧಿ ರಸ್ತೆಯ ಬಸವೇಶ್ವರ ವೃತ್ತ, ಗಾಂಧಿವೃತ್ತ ಸೇರಿದಂತೆ ವಾಟರ್ ಟ್ಯಾಂಕ್‌ ಬಳಿ ಟ್ರಾಫಿಕ್‌ ಸಿಗ್ನಲ್‌ಗಳಿವೆ.
ಮಹಾತ್ಮಗಾಂಧಿ ರಸ್ತೆಯ ಎರಡೂ ಸಿಗ್ನಲ್‌ ಮಾಸ್ಟರ್‌ಪ್ಲ್ಯಾನ್‌ನಡಿ ರಸ್ತೆ ಕಾಮಗಾರಿ ಆರಂಭಿಸುತ್ತಿದ್ದಂತೆ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಿದವು.ಎರಡು ವರ್ಷದ ಆಸುಪಾಸಿನಲ್ಲಿ ರಸ್ತೆ ಅಭಿವೃದ್ಧಿಗೊಂಡು, ನಾಲ್ಕೈದು ತಿಂಗಳು ಗತಿಸಿದರೂ ಮಾತ್ರ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಪುನರಾರಂಭಗೊಂಡಿಲ್ಲ.

ಇದರಿಂದ ಈ ಎರಡೂ ವೃತ್ತಗಳಲ್ಲಿ ಕನಿಷ್ಠ 12 ತಾಸು ಸಮಸ್ಯೆ ಎಂಬುದು ಸದಾ ಜೀವಂತವಾಗಿರುತ್ತದೆ. ಪಾದಚಾರಿ ಯಾವಾಗ ರಸ್ತೆ ದಾಟಬೇಕು ಎಂಬುದೇ ತಿಳಿಯದಾಗಿರುತ್ತದೆ. ರಸ್ತೆ ಅಭಿವೃದ್ಧಿಗೊಂಡಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತವೆ. ಈ ಸಂದರ್ಭ ಯಾವ ವಾಹನ ಯಾವ ಕಡೆಯಿಂದ ಎತ್ತ ಸಾಗುತ್ತದೆ ಎಂಬುದೇ ಅರಿವಾಗದೆ ಚಾಲಕರು ತಬ್ಬಿಬ್ಬಾದ ಪ್ರಸಂಗ ನಿತ್ಯ ನೂರೆಂಟು ನಡೆಯುತ್ತವೆ.

 ನಮ್ಮೂರಿನ ಪಾಲಿಕೆ ಹೆಸರಿಗಷ್ಟೇ ಇದೆ. ಇಂಥಹ ತುರ್ತು ಅಗತ್ಯದ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಆಡಳಿತ ಯಂತ್ರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ರಾಜು ಅಂಬಿಗೇರ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಟ್ರಾಫಿಕ್‌ ಸಿಗ್ನಲ್ ಬಂದ್ ಆಗಿ ಎರಡು ವರ್ಷ ಕಳೀತು. ಎಂ.ಜಿ.ರೋಡ್‌, ಎಸ್‌.ಎಸ್‌.ರಸ್ತೆ ಸಂಪರ್ಕ ಕಲ್ಪಿಸುವ ಗಾಂಧಿಚೌಕ್‌ ನಗರದ ಪ್ರಮುಖ ವೃತ್ತ. ಇಲ್ಲಿ ಸಿಗ್ನಲ್‌ ಕಾರ್ಯ ನಿರ್ವಹಿಸದಿರುವುದರಿಂದ ವಾಹನ ನಿಯಂತ್ರಿಸೋದು ದೊಡ್ಡ ಸಮಸ್ಯೆಯಾಗಿದೆ.

ಆಟೊ ಯಾವ ರಸ್ತೆಯಿಂದ ಹೇಗೆ ಬರುತ್ತವೆ ಎಂಬುದೇ ತಿಳಿಯದಾಗಿದೆ. ಆಟೊ ಅಟ್ಟಾದಿಡ್ಡಿ ಚಾಲನೆಗೆ ತಬ್ಬಿಬ್ಬಾಗಿ ಬಿದ್ದವರೇ ಬಹಳಷ್ಟು ಮಂದಿ ಆಗಿದ್ದಾರೆ. ಪಾಲಿಕೆ ಆಡಳಿತ, ಪೊಲೀಸರು ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಸಿಗ್ನಲ್‌ ವ್ಯವಸ್ಥೆ ಪುನರಾರಂಭಿಸಬೇಕು’ ಎಂದು ಗಿರೀಶ ಕುಲಕರ್ಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT