ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹400 ಕೋಟಿಗೂ ಹೆಚ್ಚು ವಂಚನೆ: ಆರೋಪ

Last Updated 17 ಏಪ್ರಿಲ್ 2017, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೆಚ್ಚಿನ ದರದ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ ಮೂವರು ಸಹೋದರರು ಇದೀಗ ಹಣ ವಾಪಸು ಮಾಡದೇ ವಂಚಿಸಿ, ಪರಾರಿಯಾಗಿರುವ ಘಟನೆ ಕಲಘಟಗಿಯಲ್ಲಿ ನಡೆದಿದೆ. ಬಡ್ಡಿ ಆಸೆಗೆ ಹಣ ಹೂಡಿದ ಜನರು ಇದೀಗ ಆತಂಕಕ್ಕೀಡಾಗಿದ್ದಾರೆ.ಪಟ್ಟಣದ ಸಹೋದರರಾದ ಹರ್ಷ ಖಾಸನೀಸ ಅಲಿಯಾಸ್‌ ಸತ್ಯಬೋಧ, ಸಂಜೀವ ಖಾಸನೀಸ ಮತ್ತು  ಶ್ರೀಕಾಂತ ಖಾಸನೀಸ ಎಂಬುವವರು ಹರ್ಷ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆ ಸ್ಥಾಪಿಸಿದ್ದರು.

ತಿಂಗಳಿಗೆ ಶೇ 7ರಷ್ಟು ಬಡ್ಡಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ₹400 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ‘2005ನೇ ಸಾಲಿನಿಂದ ವ್ಯವಹಾರ ನಡೆಸುತ್ತಿದ್ದ ಸಹೋದರರು ಹಣ ಹೂಡಿದವರಿಗೆ ಕಾಲ ಕಾಲಕ್ಕೆ ಬಡ್ಡಿಯನ್ನು ನೀಡುತ್ತಿದ್ದರು. ಆದರೆ, ನೋಟು ರದ್ದತಿ ನಂತರ ಬಡ್ಡಿ ನೀಡುವುದನ್ನು ನಿಲ್ಲಿಸಿದರು. ಅಲ್ಲದೆ, ಹೂಡಿಕೆದಾರರ ಸಭೆ ಕರೆದು ಕಾಲಾವಕಾಶ ನೀಡುವಂತೆ ಹರ್ಷ ಖಾಸನೀಸ ಕೋರಿದ್ದರು. ಆದರೆ, ಏ.11ರಿಂದ ಸಂಸ್ಥೆಗೆ ಬೀಗ ಹಾಕಿ ನಾಪತ್ತೆ ಆಗಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು’ ಎಂದು ಲಕ್ಷ್ಮಿಬಾಯಿ ಬಡಿಗೇರ, ವಿಠಲ ವಾಡಕರ, ಸುಬ್ರಹ್ಮಣ್ಯ ಅಣ್ಣೇಕರ ಸೇರಿದಂತೆ ವಂಚನೆಗೆ ಒಳಗಾದ 500ಕ್ಕೂ ಹೆಚ್ಚು ಮಂದಿ ಕಲಘಟಗಿ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹೆಸ್ಕಾಂ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಠೇವಣಿ ಕೊಡಿಸುವವರಿಗೂ ಕಮಿಷನ್‌ ನೀಡುತ್ತಿದ್ದರು ಎನ್ನಲಾಗಿದೆ.ಉತ್ತರ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಕಾರವಾರ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಜನರು ಸಂಸ್ಥೆಯಲ್ಲಿ ಹಣ ಹೂಡಿದ್ದಾರೆ ಎನ್ನಲಾಗಿದೆ.

ಸಚಿವರ ಮೊರೆ: ಪಟ್ಟಣಕ್ಕೆ ಬಂದಿದ್ದ ಸ್ಥಳೀಯ ಶಾಸಕರೂ ಆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಎದುರು ವಂಚನೆಗೆ ಒಳಗಾದ ನೂರಾರು ಜನರು ಜಮಾಯಿಸಿ ತಮಗಾಗಿರುವ ಅನ್ಯಾಯದ ಬಗ್ಗೆ ದೂರು ನೀಡಿದರು.ಶಾಸಕರ ಸಲಹೆ ಮೇರೆಗೆ ದೂರು ನೀಡಿದ್ದಾರೆ. ಈ ಸಲುವಾಗಿ ಶಾಸಕರ ಕಚೇರಿಯಲ್ಲೇ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು. ವೃದ್ಧರು, ಮಹಿಳೆಯರು ಮಕ್ಕಳು ಈ ವೇಳೆ ಇದ್ದರು. ರಾತ್ರಿ 10 ಗಂಟೆ ಆದರೂ ವಂಚನೆಗೆ ಒಳಗಾದವರು ದೂರು ದಾಖಲು ಮಾಡುತ್ತಲೇ ಇದ್ದರು.
‘ಖಾಸನೀಸ ಸಹೋದರರು ಕಾನೂನಾತ್ಮಕವಾಗಿ ಸಂಸ್ಥೆ ನಡೆಸುತ್ತಿದ್ದರೆ ಕೂಡಲೇ ಜನರ ಮುಂದೆ ಬರಬೇಕು. ಅವರಿಗೆ ಸೂಕ್ತ ರಕ್ಷಣೆ ಕೊಡಿಸಲಾಗುವುದು. ಸಾರ್ವಜನಿಕರು ಆತಂಕಕ್ಕೀಡಾಗಬಾರದು’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT